ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪ್ರಮಾಣಪತ್ರಕ್ಕೆ ಪರದಾಟ; ಅಳಲು

ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕಾರ
Last Updated 28 ಜುಲೈ 2018, 15:35 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಾತಿ ಪ್ರಮಾಣ ಪತ್ರ ಪಡೆಯಲು ಇಂದಿಗೂ ಅಲೆದಾಟ ತಪ್ಪಿಲ್ಲ. ಈ ಬಗ್ಗೆ ತ್ವರಿತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಮುಸ್ಲಿಂ, ಜೈನ್, ಸಿಖ್ ಸಮುದಾಯದ ಪ್ರತಿನಿಧಿಗಳು ಮನವಿ ಮಾಡಿದರು.

ಹಳೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಶನಿವಾರ ಏರ್ಪಡಿಸಿದ್ದ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ತಮ್ಮ ಅಳಲು ತೋಡಿಕೊಂಡರು.

ಪ್ರೀತಂ ಮೆಹ್ತಾ ಮಾತನಾಡಿ, ‘20 ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಜಾತಿ ಕಾಲಂನಲ್ಲಿ ಜೈನ್ ಎಂದು ನಮೂದಿಸಿದ್ದರು. ಆದರೆ, ಈಗ ಜೈನ್ ದಿಗಂಬರ ಪಂಗಡದವರಿಗೆ ಮಾತ್ರ ಜಾತಿ ಪ್ರಮಾಣಪತ್ರ ಸಿಗುತ್ತಿದೆ. ಶ್ವೇತಾಂಬರ ಪಂಗಡಕ್ಕೆ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ವ್ಯಕ್ತಿಯೊಬ್ಬರು, ‘ಜೈನ್ ಸಮುದಾಯದಲ್ಲಿ ಬಹಳಷ್ಟು ಉಪ ಜಾತಿಗಳಿವೆ. ಆದರೆ ಅವುಗಳಿಗೆ ಪ್ರಮಾಣಪತ್ರ ನೀಡುತ್ತಿಲ್ಲ’ ಎಂದು ದೂರಿದರು.

ನೇಮಿನಾಥ ಜೈನ್ ಮಾತನಾಡಿ, ‘ಜೂನ್ ಸಮುದಾಯದವರಿಗೆ ಸರ್ಕಾರದ ಯೋಜನೆಗಳ ಲಾಭ ಸಿಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಲು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಕಡ್ಡಾಯಗೊಳಿಸಿದ್ದಾರೆ. ರೈತರು ಸಾಮಾನ್ಯವಾಗಿ ಶಿಕ್ಷಣ ಪಡೆದಿರುವುದಿಲ್ಲ, ಹೀಗಿರುವಾಗ ಅಂಕಪಟ್ಟಿ ಸಲ್ಲಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಾಸೀರ್ ಅಹಮ್ಮದ್, ‘ದಿಂಗಬರ ಮತ್ತು ಶ್ವೇತಾಂಬರ ಎರಡೂ ಪಂಗಡಗಳಿಗೆ ಜಾತಿ ಪ್ರಮಾಣ ವಿತರಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಸ್ಲಿಂ ಮತ್ತು ಸಿಖ್ ಸಮುದಾಯದ ಪ್ರತಿನಿಧಿಗಳು ಮಾತನಾಡಿ, ‘ನಮಗೂ ಕೂಡ ಸರಿಯಾದ ಸಮಯಕ್ಕೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಮುಸ್ಲಿಂನಲ್ಲಿ 29 ಒಳಪಂಗಡಗಳಿವೆ, ಆದರೆ ಕೆಲವು ಪಂಗಡಿಗಳಿಗೆ ಮಾತ್ರ ಪ್ರವರ್ಗ–1ರಡಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

ಸಿಖ್ ಸಮುದಾಯದ ವ್ಯಕ್ತಿಯೊಬ್ಬರು ಮಾತನಾಡಿ, ‘ನಮಗೆ ಇದುವರೆಗೂ ಯಾವುದೇ ಸೌಲಭ್ಯ ದೊರಕಿಲ್ಲ. ನಾವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದೇವೆ. ದೇಶದ ಎಲ್ಲಾ ಸಮುದಾಯದವರಿಗೂ ಸಮಾನ ಹಕ್ಕು ಸಿಗುವಂತಾಗಬೇಕು. ಕಲಬುರ್ಗಿಯಲ್ಲಿ ಗುರುದ್ವಾರ ನಿರ್ಮಿಸಲು ಎರಡು ಎಕರೆ ಸರ್ಕಾರಿ ಜಾಗ ಮಂಜೂರು ಮಾಡಬೇಕು ಮತ್ತು ಸಮುದಾಯ ಭವನ ನಿರ್ಮಿಸಿಕೊಡಬೇಕು’ ಎಂದು ಹೇಳಿದರು.

ಶಾಸಕಿ ಕನ್ನೀಜ್ ಫಾತಿಮಾ, ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಸದಸ್ಯರಾದ ಡಾ.ಆರ್.ಅಬ್ದುಲ್ ಹಮೀದ್, ರಫೀಕ್ ಭಂಡಾರಿ, ಮಹಮೂದ್ ಪಟೇಲ್, ಆದಿಲ್ ಸುಲೇಮಾನ್, ಕೆ.ಮಹೇಂದ್ರ ಜೈನ್, ಬಲಜೀತ್ ಸಿಂಗ್, ಡಾ.ಮೆಟಿಲ್ಲಾ ಡಿಸೋಜಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೆಹಬೂಬ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT