ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ–ಪ್ರವೃತ್ತಿ: ಜೀವನದ ಎರಡು ಕಣ್ಣು

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶಾಂತಿಯೇ ಭಗವಂತನ ಸನ್ನಿಧಿ; ಅದನ್ನು ಪಡೆಯಲು ಸಿದ್ಧತೆ ಬೇಕು; ಆ ಸಿದ್ಧತೆಯ ದಾರಿಗಳು ಎರಡು; ಅವೇ ಪ್ರವೃತ್ತಿಧರ್ಮ ಮತ್ತು ನಿವೃತ್ತಿಧರ್ಮ – ಎಂದಿದ್ದಾರೆ, ಡಿವಿಜಿ. ಅವರ ಮಾತುಗಳನ್ನೇ ನೋಡೋಣ:

‘ಮನುಷ್ಯನು ಪರಮಾತ್ಮನ ಸನ್ನಿಧಿಯನ್ನು ಸೇರಲು ಅರ್ಹನಾಗುವುದಕ್ಕೆ ಬಹುಕಾಲದ ಮತ್ತು ಬಹುವಿಧದ ಸಂಸ್ಕಾರವಾಗಬೇಕು. ಈ ಸಂಸ್ಕಾರವೇ ಧರ್ಮ. ಈ ಸಂಸ್ಕಾರವು ಎರಡು ವಿಧವಾದದ್ದು. ಒಂದು ಪ್ರವೃತ್ತಿ, ಎಂದರೆ ಲೋಕಾನುಭವದಲ್ಲಿ ಭಾಗವಹಿಸುವುದರ ಮೂಲಕ ಆಗುವ ಮನಶ್ಶೋಧನೆ. ಮನೆ, ಮಳಿಗೆ, ಸ್ವಜನ, ಸ್ವರಾಷ್ಟ್ರ ಮುಂತಾದ ಮಮತಾಕ್ಷೇತ್ರಗಳಲ್ಲಿ ಮನುಷ್ಯನು ಲೋಕಹಿತಕ್ಕಾಗಿ ಸ್ವಕರ್ತವ್ಯವನ್ನು ನಡೆಸುತ್ತ ಆ ಕ್ರಮದಲ್ಲಿ ಅವನು ಬಗೆಬಗೆಯ ಸಂಕಟಗಳಿಗೂ ಪರೀಕ್ಷೆಗಳಿಗೂ ಸಿಕ್ಕುತ್ತಾನೆ. ಅದರಿಂದ ಅವನ ಮನಸ್ಸಿನ ಕಶ್ಮಲಗಳು ಕರಗಿ, ಅವನ ಮಮತೆಯ ಕ್ಷೇತ್ರಗಳು ವಿಸ್ತಾರಪಡುತ್ತವೆ. ಹಾಗೆ ಸ್ವಾರ್ಥವು ಸವೆಯುತ್ತದೆ. ಇದು ಪ್ರವೃತ್ತಿಧರ್ಮ.

‘ಇನ್ನೊಂದು ನಿವೃತ್ತಿಧರ್ಮ. ಅದು ವಿರಕ್ತಿಯ ರೂಪದ್ದು. ಭಗವಂತನ ಧ್ಯಾನ, ಪೂಜೆ, ತಪಸ್ಸು. ತತ್ವ ಚಿಂತನೆ ಮೊದಲಾದ ಆತ್ಮಾರ್ಪಣೆಯ ರೂಪವಾದದ್ದು. ಲೋಕಹಿತಕಾರ್ಯವೂ ಇದರಲ್ಲಿ ಸೇರಿರುತ್ತದೆ. ಇದು ಜೀವಕ್ಕೆ ನಿರಪೇಕ್ಷೆಯ ಭಾವವನ್ನೂ ಭಗವದೇಕನಿಷ್ಠೆಯನ್ನೂ ತರುತ್ತದೆ.’

ಪ್ರವೃತ್ತಿಧರ್ಮ ಮತ್ತು ನಿವೃತ್ತಿಧರ್ಮ– ಇವೆರಡು ಭಾರತೀಯ ದರ್ಶನಪರಂಪರೆಯಲ್ಲಿ ತುಂಬ ಮಹತ್ವದ ವಿವರಗಳು. ಭಾರತೀಯ ಆಧ್ಯಾತ್ಮಿಕತೆ ಪರಂಪರೆಯ ವಿಶೇಷತೆ ಯನ್ನು ಈ ಪರಿಕಲ್ಪನೆಗಳು ಎತ್ತಿಹಿಡಿದಿವೆ. ಆಚಾರ್ಯ ಶಂಕರರು ಭಗವದ್ಗೀತೆಗೆ ಬರೆದಿರುವ ಭಾಷ್ಯದ ಪೀಠಿಕಾಭಾಗದಲ್ಲಿಯೇ ಈ ಎರಡು ತತ್ತ್ವಗಳನ್ನು ತಂದಿದ್ದಾರೆ. ಧರ್ಮದ ಕೆಲಸ ಇಬ್ಬಗೆಯ ಸ್ವರೂಪದ್ದು; ಒಂದು ಪ್ರವೃತ್ತಿಧರ್ಮ, ಇನ್ನೊಂದು ನಿವೃತ್ತಿಧರ್ಮ ಎಂದಿದ್ದಾರೆ. ವೇದ–ಉಪನಿಷತ್ತುಗಳಲ್ಲಿಯೇ ಇದರ ಬಗ್ಗೆ ಜಿಜ್ಞಾಸೆ ನಡೆದಿರು ವುದನ್ನು ನೋಡಬಹುದು. ಇಷ್ಟು ಗಹನವಾದ ವಿಷಯವನ್ನು ಡಿವಿಜಿಯವರು ತುಂಬ ಸರಸವಾಗಿಯೂ ಸುಂದರವಾಗಿಯೂ ನಿರೂಪಿಸಿದ್ದಾರೆ.

ಮಮತೆ, ಎಂದರೆ ‘ನಾನು’, ‘ನನ್ನದು’ ಎಂಬ ಅಭಿಮಾನ. ಇದನ್ನು ನಾವು ಬಿಡುವುದು ಅಷ್ಟು ಸುಲಭವಲ್ಲ; ಮಾತ್ರವಲ್ಲ, ಪರಂಪರೆಯು ಬಿಡಬೇಕೆಂದೂ ಹೇಳುತ್ತಿಲ್ಲ. ನಾನು ನನ್ನದು – ಎನ್ನುವುದನ್ನು ಹೇಗೆ ವಿಸ್ತಾರ ಮಾಡಿಕೊಳ್ಳಬಹುದು ಎಂಬ ಜಾಣ್ಮೆಯನ್ನು ಪರಂರೆಯೇ ಕಲಿಸುತ್ತದೆ ಕೂಡ. ಪ್ರವೃತ್ತಿಧರ್ಮ ಎಂದರೆ ಜೀವನದ ಎಲ್ಲ ಚಟುವಟಿಕೆಗಳಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು; ಆದರೆ ಈ ಚಟುವಟಿಕೆಗಳಲ್ಲಿ ‘ನಾನು’ ಎನ್ನುವುದು ಸದಾ ಎಚ್ಚರವಾಗಿಯೇ ಇರುತ್ತದೆ. ಹೀಗಿದ್ದರೂ ಕೂಡ ಈ ‘ನಾನು’ ಎನ್ನುವುದು ವಿಸ್ತಾರವಾಗುತ್ತಹೋಗುತ್ತದೆ. ಮೊದಲಿಗೆ ’ನಾನು’ ಎಂದರೆ ‘ನನ್ನ ದೇಹ’ ಮಾತ್ರವೇ; ಅದು ಕಾಲಕ್ರಮದಲ್ಲಿ ‘ನನ್ನ ಕುಟುಂಬ’, ‘ನನ್ನ ಊರು’, ‘ನನ್ನ ರಾಜ್ಯ’, ‘ನನ್ನ ದೇಶ’ – ಹೀಗೆ ಹಬ್ಬುತ್ತಹೋಗುತ್ತದೆ. ಹೀಗೆ ‘ನಾನು’ ಎನ್ನುವುದಕ್ಕೆ ಒದಗುವ ವಿಸ್ತಾರವೇ ‘ಆತ್ಮಾನುಭವ’.

ಇನ್ನು ‘ನಿವೃತ್ತಿಧರ್ಮ.’ ಚಟುವಟಿಕೆಯ ಜೀವನ ವಿಧಾನ ದಿಂದ ವಿಮುಖವಾಗುವುದೇ ಇದರ ಪ್ರಧಾನ ಲಕ್ಷಣ. ಈ ದಾರಿಯಲ್ಲಿ ‘ನಾನು’, ‘ನನ್ನದು’ ಎನ್ನುವುದು ನಮ್ಮ ಮನಸ್ಸಿನಿಂದ ಹಿಂದಕ್ಕೆ ಸರಿದಿರುತ್ತದೆ. ಇದನ್ನೇ ‘ವಿರಕ್ತಿ’ ಎನ್ನುವುದು. ಈ ನೆಲೆಯಲ್ಲಿ ಮಾಡುವ ಎಲ್ಲ ಕೆಲಸಗಳ ಫಲಾಫಲಗಳಿಗೆ ‘ನಾನು’ ಹೊಣೆಗಾರನಾಗಿರದು. ಇಡಿಯ ಸೃಷ್ಟಿಯ ಮಹಾವ್ಯವಸ್ಥೆಯಲ್ಲಿ ‘ನಾನು’ ಒಂದು ಕಣ; ಇದರ ಅಸ್ತಿತ್ವವಾದರೂ ಅದರ ಪೂರ್ಣತೆಯಲ್ಲಿ ಇದೆಯೇ ಹೊರತು, ಕಣದ ಪ್ರತ್ಯೇಕತೆಯಲ್ಲಿ ಅಲ್ಲ ಎಂಬ ಭಾವ ಸದಾ ಎಚ್ಚರವಾಗಿರುತ್ತದೆ. ಇಂಥ ಮಾನಸಿಕತೆಯಲ್ಲಿ ಮಾಡುವ ಎಲ್ಲ ಕೆಲಸಗಳು ಕೂಡ ಪರಮಾತ್ಮನಿಗೆ ಸಲ್ಲಿಸುವ ಪೂಜೆಯೇ ಎನಿಸಿಕೊಳ್ಳುತ್ತದೆ.

ಪ್ರವೃತ್ತಿ–ನಿವೃತ್ತಿಗಳು ಎರಡು ಬೇರೆ ಬೇರೆಯಾಗಿ ಕಂಡರೂ ಕೂಡ, ಅದು ಧರ್ಮದ ಪ್ರಕಟೀಕರಣವೇ ಆಗಿರುವುದರಿಂದ, ಇವೆರಡೂ ಪರಮಾತ್ಮದೃಷ್ಟಿಯನ್ನು ಒದಗಿಸುತ್ತವೆ ಎನ್ನುತ್ತಾರೆ, ಡಿವಿಜಿ:

‘ನಿವೃತ್ತಿ ಪ್ರವೃತ್ತಿ ರೂಪವಾದ ಧರ್ಮದ ಅಭ್ಯಾಸದಿಂದ ಜೀವಿಯ ದೇಹಾಭಿಮಾನ ಕಡಿಮೆಯಾಗಿ ಪರಮಾತ್ಮದೃಷ್ಟಿ ಬಲಪಡುತ್ತದೆ. ಹಾಗೆ ಭಗವತ್ಸ್ವರೂಪದ ಸ್ವಾನುಭವ ವಾಗುತ್ತದೆ. ಇದೇ ಅಧ್ಯಾತ್ಮವಿದ್ಯೆಯ ಶಿಖರ. ಶಿಖರ ಸೇರಿದಾತನಿಗೆ ಜಗಜ್ಜೀವನಪ್ರದೇಶವೆಲ್ಲ ವಿಶದವಾಗಿ ಕಾಣ ಬರುತ್ತದೆ. ಅವನು ಜೀವನದ ಅರ್ಥವನ್ನು ಪೂರ್ತಿಯಾಗಿ ಕಂಡುಕೊಳ್ಳುತ್ತಾನೆ. ಅವನು ಎಲ್ಲ ತೊಡಕುಗಳನ್ನೂ ಬಿಡಿಸಿ ಕೊಳ್ಳಲು ಸಮರ್ಥನಾಗುತ್ತಾನೆ. ಆಗ ಅವನು ಎಲ್ಲರಿಗೂ ಸ್ನೇಹಿತನು, ಎಲ್ಲೆಲ್ಲಿಯೂ ನಿಶ್ಚಿಂತನು. ಇದು ಅಧ್ಯಾತ್ಮವಿದ್ಯೆಯ ಪರಮಪ್ರಯೋಜನ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT