ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಸಿ ಮೇಲೆ ಸಂಪ್

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಪ್ಪತ್ತ್ಮೂರು ವರ್ಷಗಳ ಹಿಂದೆ ನಿರ್ಮಿಸಿದ ಆ ಮನೆಗೆ ಕಾವೇರಿ ನೀರಿನ ಸಂಪರ್ಕ ಪಡೆದಿಲ್ಲ. ಕೊಳವೆಬಾವಿಯನ್ನೂ ಕೊರೆಸಿಲ್ಲ. ಆದರೂ ಮನೆಯ ಸದಸ್ಯರಿಗೆ ನೀರಿನ ಕೊರತೆ ಕಾಡಿಲ್ಲ. ಈಗಲೂ ಅಲ್ಲಿ ನೀರು ಸಮೃದ್ಧವಾಗಿದೆ! ವಿಜಯನಗರದ ಬಸವೇಶ್ವರ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿರುವ ‘ಸೌರಭ’ ಮನೆಯ ಚಿತ್ರಣವಿದು.

ಮನೆಯ ಆವರಣದೊಳಗೆ ಹೋಗುತ್ತಿದ್ದಂತೆ ಆಹ್ಲಾದಕರ ವಾತಾವರಣದ ಅನುಭವವಾಗುತ್ತದೆ. ಕಾಯಿಗಳ ಗೊಂಚಲುಗಳನ್ನು ಹೊತ್ತು ನಿಂತಿರುವ ನುಗ್ಗೆ ಮರ, ಕಬ್ಬಿಣದ ಮೆಟ್ಟಿಲಿನೊಂದಿಗೆ ಗಾಢ ಸಂಬಂಧ ಇರುವಂತೆ ಬಳ್ಳಿಗಳಿಂದ ಬೆಸೆದುಕೊಂಡಿರುವ ಅಮೃತಬಳ್ಳಿ, ತೆಂಗಿನ ಚಿಪ್ಪುಗಳಲ್ಲಿ ವಿರಾಜಮಾನವಾಗಿ ನೇತಾಡುತ್ತಿರುವ ವಿವಿಧ ಬಗೆಯ ಅಲಂಕಾರಿಕ ಗಿಡಗಳು ನಮಗೆ ಸ್ವಾಗತ ಕೋರುತ್ತವೆ.

ಮನೆಯ ಸದಸ್ಯರಿಗೆ ಹಾಗೂ ಗಿಡ–ಮರಗಳಿಗೆ ನೀರು ಪೂರೈಕೆ ಸಾಧ್ಯವಾಗಿದೆ ಎಂದರೆ ಅದಕ್ಕೆ ಮೂಲದ್ರವ್ಯ ಮಳೆನೀರು.

ಹೌದು, ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮನೆಯ ಮಾಲೀಕ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ (ಕೆಎಸ್‌ಸಿಎಸ್‌ಟಿ) ಹಿರಿಯ ವಿಜ್ಞಾನಿ ಎ.ಆರ್‌.ಶಿವಕುಮಾರ್‌ ಮಳೆನೀರು ಸಂಗ್ರಹ ವಿಧಾನವನ್ನು ಅಳವಡಿಸಿಕೊಂಡಿದ್ದರು. ಎರಡು ದಶಕಗಳಿಂದ ಮಳೆನೀರನ್ನೇ ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಾ ಬಂದಿದ್ದಾರೆ.

ಜೀವನ ಪರ್ಯಂತ ಮಳೆನೀರನ್ನೇ ಆಶ್ರಯಿಸುವಂತಹ ದೃಢ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಶಿವಕುಮಾರ್‌ ವಿವರಿಸುವುದು ಹೀಗೆ– ‘ನಗರದಲ್ಲಿರುವ ಯಾವುದೇ 40X60 ಚದರ ಅಡಿ ಜಾಗದಲ್ಲಿ ಪ್ರತಿ ವರ್ಷ ಸರಾಸರಿ 2.25 ಲಕ್ಷ ಲೀಟರ್‌ ಮಳೆನೀರು ಬೀಳುತ್ತದೆ. 30X40 ಅಡಿ ಜಾಗದಲ್ಲಿ 1.15 ಲಕ್ಷ ಲೀಟರ್‌ ಮಳೆನೀರು ಬೀಳುತ್ತದೆ. ನಮ್ಮ ಕುಟುಂಬಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿದೆ. ನಮಗೆ ದಿನಕ್ಕೆ ಸರಾಸರಿ 400–500 ಲೀಟರ್‌ ನೀರು ಬೇಕು. ವರ್ಷಕ್ಕೆ 1.50 ಲಕ್ಷದಿಂದ 1.80 ಲಕ್ಷ ಲೀಟರ್‌ ಅಗತ್ಯವಿತ್ತು. ಆದರೆ, ಇದಕ್ಕಿಂತ ಹೆಚ್ಚಿನ ನೀರು ನಮ್ಮ ನಿವೇಶನದಲ್ಲೇ ಸಿಗುತ್ತದೆ. ಕಾವೇರಿ ನೀರನ್ನು ಏಕೆ ಅವಲಂಬಿಸಬೇಕು. ಅಲ್ಲದೆ, ಮಳೆನೀರು ಅತ್ಯಂತ ಶುದ್ಧ ನೀರು. ಅದನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮಳೆನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿದೆ.’

‘ನೂರು ವರ್ಷಗಳಲ್ಲಿ ಬಿದ್ದ ಮಳೆಯ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯಿಂದ ಪಡೆದೆ. ಅದನ್ನು ಪರಿಶೀಲಿಸಿದಾಗ ವರ್ಷದಲ್ಲಿ 60– 70 ದಿನಗಳವರೆಗೆ ಮಳೆಯಾಗಿರುವುದು ಕಂಡುಬಂತು. ಅಲ್ಲದೆ, ವರ್ಷವೊಂದರಲ್ಲಿ ಬಿದ್ದ ಭಾರಿ ಮಳೆಗಳ ನಡುವೆ 90–100 ದಿನಗಳ ಅಂತರ ಇತ್ತು. ನಮಗೆ ಮೂರು ತಿಂಗಳಿಗೆ 40 ಸಾವಿರ ಲೀಟರ್‌ ನೀರಿನ ಅಗತ್ಯ ಇತ್ತು. 5,000 ಲೀಟರ್‌ ನೀರು ಹೆಚ್ಚುವರಿಯಾಗಿ ಇರಲಿ ಎಂಬ ಉದ್ದೇಶದಿಂದ ಒಟ್ಟು 45 ಸಾವಿರ ಲೀಟರ್‌ ಸಾಮರ್ಥ್ಯದ ಸಂಪ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ.’

‘1994ರಲ್ಲಿ ಮನೆ ಕಟ್ಟಿಸುವ ಮುನ್ನ ದೈನಂದಿನ ಅಗತ್ಯಗಳೇನು ಎಂಬುದನ್ನು ಪಟ್ಟಿ ಮಾಡಿದ್ದೆ. ನೀರು, ಗಾಳಿ ವ್ಯವಸ್ಥೆ ಇರುವಂತೆ ಮನೆಯನ್ನು ವಿನ್ಯಾಸ ಮಾಡುವಂತೆ ವಾಸ್ತುಶಿಲ್ಪಿಗಳಿಗೆ ತಿಳಿಸಿದ್ದೆ. ಅದರಂತೆ ಮನೆಯನ್ನು ವಿನ್ಯಾಸ ಮಾಡಿದ್ದರು.

ಮನೆಯ ಮುಖ್ಯದ್ವಾರದ ಬಳಿ ಎಲ್‌ ಆಕಾರದಲ್ಲಿ ಏಳು ಅಡಿ ಆಳದ 25 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಸಂಪ್‌, ಕಾರು ನಿಲ್ಲಿಸುವ ಜಾಗದ ಕೆಳಗೆ 10 ಸಾವಿರ ಲೀಟರ್‌, ಮೊದಲ ಮಹಡಿ ಹಾಗೂ ತಾರಸಿ ಮೇಲೆ ತಲಾ 5,000 ಲೀಟರ್‌ ಸಾಮರ್ಥ್ಯದ ಸಂಪ್‌ಗಳನ್ನು ನಿರ್ಮಿಸಲಾಯಿತು’ ಎಂದು ವಿವರಿಸುತ್ತಾರೆ.

ಪಾಪ್‌ಅಪ್‌ ಫಿಲ್ಟರ್‌ ಉಪಕರಣ: ತಾವು ಆವಿಷ್ಕರಿಸಿರುವ ಪಾಪ್‌ಅಪ್‌ ಫಿಲ್ಟರ್‌ ಉಪಕರಣದ ಬಗ್ಗೆ ಶಿವಕುಮಾರ್‌ ವಿವರಿಸುವುದು ಹೀಗೆ...
‘1990ರ ದಶಕದ ವೇಳೆಗೆ ಮಳೆನೀರು ಸಂಗ್ರಹ ವಿಧಾನದ ಬಗ್ಗೆ ಜನರಿಗೆ ಸಾಕಷ್ಟು ತಿಳಿವಳಿಕೆ ಇರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳೂ ನಡೆದಿರಲಿಲ್ಲ. ಇದರ ಬಗ್ಗೆ ಸಂಶೋಧನೆ ನಡೆಸುವ ಉದ್ದೇಶದಿಂದ ಕೆಎಸ್‌ಸಿಎಸ್‌ಟಿಯಲ್ಲಿ ಪ್ರತ್ಯೇಕ ಕೋಶವನ್ನು ತೆರೆಯಲಾಯಿತು. ಹೊಸ ಆವಿಷ್ಕಾರಕ್ಕೆ ಮುನ್ನುಡಿ ಬರೆಯಲಾಯಿತು. ಆಗ ಮಳೆನೀರನ್ನು ಶುದ್ಧೀಕರಿಸಲು ಬಳಸುತ್ತಿದ್ದ ಉಪಕರಣಗಳೂ ಅಷ್ಟೇನೂ ಚೆನ್ನಾಗಿರಲಿಲ್ಲ. ಅದರಲ್ಲಿ ಸೇರಿಕೊಂಡ ಮಣ್ಣು, ಕಡ್ಡಿ, ಕಸ ತೆರವುಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪಾಪ್‌ಅಪ್‌ ಫಿಲ್ಟರ್‌ ಎಂಬ ಉಪಕರಣವನ್ನು ಕಂಡುಹಿಡಿದೆ. ಇದರಲ್ಲಿ ಸಂಗ್ರಹಗೊಂಡ ಕಸವನ್ನು ಸುಲಭವಾಗಿ ತೆಗೆಯಬಹುದು. ಹೆಚ್ಚಾದ ಮಳೆನೀರು ಹೊರಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಈ ಉಪಕರಣಕ್ಕೆ ಪೇಟೆಂಟ್‌ ಸಿಕ್ಕಿತ್ತು. ಇದರ ತಂತ್ರಜ್ಞಾನವನ್ನು ಕೆಎಸ್‌ಸಿಎಸ್‌ಟಿ ಮುಖಾಂತರ ಗುಜರಾತ್‌ನ ರಾಜ್‌ ಯೂನಿಟೆಕ್‌ ಕಂಪೆನಿಗೆ 5 ವರ್ಷಗಳ ಅವಧಿಗೆ ನೀಡಲಾಗಿತ್ತು’.

ಎಲ್ಲೆಲ್ಲಿ ಪಾಪ್‌ಅಪ್‌ ಫಿಲ್ಟರ್‌ ಅಳವಡಿಕೆ?
ಪಾಪ್‌ಅಪ್‌ ಫಿಲ್ಟರ್‌ಗಳು ಈಗ ಹೆಚ್ಚು ಜನಪ್ರಿಯವಾಗಿದ್ದು, ಇವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿದ 700 ಉದ್ಯಾನಗಳು, ವಿಧಾನಸೌಧ, ಹೈಕೋರ್ಟ್‌, ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ, ಜಯದೇವ ಹೃದ್ರೋಗಗಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಜಿಕೆವಿಕೆ, ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ವಿಲ್ಸನ್‌ ಗಾರ್ಡನ್‌ನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಅಳವಡಿಸಲಾಗಿದೆ.

ಉತ್ತರಪ್ರದೇಶ, ಮೇಘಾಲಯ ಹಾಗೂ ಸಿಕ್ಕಿಂ ರಾಜ್ಯಗಳ ಸರ್ಕಾರಗಳಿಗೆ ಇದರ ಬಗ್ಗೆ ಶಿವಕುಮಾರ್‌ ಪ್ರಾತ್ಯಕ್ಷಿಕೆ ನೀಡಿದ್ದಾರೆ.

ವಾಷಿಂಗ್‌ ಮಷಿನ್‌ ನೀರು ಬಳಕೆ
ವಾಷಿಂಗ್‌ ಮಷಿನ್‌ಗೆ ಬಳಸುವ ನೀರನ್ನೂ ಶಿವಕುಮಾರ್‌ ವ್ಯರ್ಥ ಮಾಡುವುದಿಲ್ಲ. ಈ ನೀರನ್ನು ಶೌಚಾಲಯದ ಫ್ಲಶಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಮಷಿನ್‌ನಿಂದ ಹೊರ ಬಂದ ನೀರನ್ನು ಟೆರೇಸ್‌ ಮೇಲೆ ಇಟ್ಟಿರುವ ಎರಡು ಡ್ರಮ್‌ಗಳಿಗೆ ಪಂಪ್‌ ಮಾಡಲಾಗುತ್ತದೆ. ಈ ಡ್ರಮ್‌ಗಳಲ್ಲಿ ಜೊಂಡು ಹುಲ್ಲನ್ನು ಹಾಕಲಾಗಿದೆ. ಇವು ನೀರಿನಲ್ಲಿರುವ ಕಲ್ಮಶಗಳನ್ನು ತಿನ್ನುತ್ತವೆ. ಜತೆಗೆ ಈ ನೀರಿಗೆ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ನೀರಿನ ವಾಸನೆಯನ್ನು ಹೋಗಲಾಡಿಸಲು ಝಿಗ್‌ಝಾಗ್‌ ಮಾದರಿಯಲ್ಲಿ ಅರ್ಧ ಕತ್ತರಿಸಿದ ಪೈಪ್‌ಗಳನ್ನು ಹಾಕಿದ್ದಾರೆ. ಡ್ರಮ್‌ಗಳಿಂದ ಹೊರ ಬಂದ ನೀರು ತೆರೆದ ಪೈಪ್‌ಗಳಲ್ಲಿ ಹರಿಯುತ್ತವೆ. ಇದರಿಂದ ಭಾಗಶಃ ವಾಸನೆ ಹೋಗುತ್ತದೆ.

‘ವಾಷಿಂಗ್‌ ಮಷಿನ್‌ನ ನೀರನ್ನು ನೇರವಾಗಿ ಶೌಚಾಲಯದ ಫ್ಲಶಿಂಗ್‌ಗೆ ಬಳಸಿದ್ದೆ. ಇದರಿಂದ ಮನೆಯಲ್ಲಾ ಕೆಟ್ಟ ವಾಸನೆ ಬೀರಲಾರಂಭಿಸಿತು. ನೀರಿನ ವಾಸನೆ ಹಾಗೂ ಅದರಲ್ಲಿರುವ ಕಲ್ಮಶವನ್ನು ಹೋಗಲಾಡಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿದೆ’ ಎನ್ನುತ್ತಾರೆ ಶಿವಕುಮಾರ್‌.

*
ಕಾವೇರಿ ನೀರಿನ ಸಂಪರ್ಕ ಪಡೆಯದೇ ಇರುವುದರಿಂದ ನೀರಿನ ಬಿಲ್‌ ಕಟ್ಟುವ ಪ್ರಮೇಯವೇ ಬಂದಿಲ್ಲ. ಮಳೆನೀರನ್ನು ಸಂಗ್ರಹಿಸಿ, ಅದನ್ನು ಬಳಸಲು ಎಲ್ಲರೂ ಮುಂದಾಗಬೇಕು.
–ಸುಮಾ, ಶಿವಕುಮಾರ್‌ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT