ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.  ವಿಪರ್ಯಾಸವೆಂದರೆ ಬಸವ, ಅಲ್ಲಮ, ಅಕ್ಕ ಮುಂತಾದ ಶರಣರು ತಮ್ಮ ವಚನಗಳಲ್ಲಿ ಧಾರಾಳವಾಗಿ ವೀರಶೈವ ಎಂಬ ಪದವನ್ನು ಬಳಸಿದ್ದಾರೆ. ಬಸವಣ್ಣ ಅಥವಾ ಅಲ್ಲಮ ತಮ್ಮ ವಚನಗಳಲ್ಲಿ ಒಂದು ಕಡೆಯಾದರೂ ಲಿಂಗಾಯತ  ಪದವನ್ನು ಬಳಸಿದಂತೆ ಕಾಣಿಸುವುದಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ (ಅದು ಯಾವ ಹಂತದ್ದೇ ಇರಲಿ, ಯಾವುದೇ ರೂಪದ್ದಿರಲಿ) ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕಾಗಿದೆ. ಆದರೆ  ವಚನಗಳು ಯಾವುದೇ ಧರ್ಮಕ್ಕೆ ಸೂಕ್ತ ತಳಹದಿಯಾದೀತೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಏಕೆಂದರೆ ವಚನಗಳಲ್ಲಿ ವೈರುಧ್ಯಕರ ಎನಿಸುವ ಅಂಶಗಳು ಹೇರಳವಾಗಿವೆ. ವಚನಗಳನ್ನೇ ಪ್ರಮಾಣ ಗ್ರಂಥವೆಂದು ನಂಬಿ ದೇವರಿದ್ದಾನೆ ಎಂದು ವಾದಿಸಲೂ ಸಾಧ್ಯವಿದೆ. ಹಾಗೆಯೇ ದೇವರಿಲ್ಲ ಎಂದೂ ವಾದಿಸಬಹುದು. ಉದಾಹರಣೆಗೆ ಲಿಂಗವನ್ನು ಕುರಿತು ಅಲ್ಲಮಪ್ರಭು ‘ನಾ ಬೇಡಿದುದು ನಿನ್ನ ಮುಖದಲ್ಲಿಲ್ಲ’ ಎಂದಿದ್ದಾನೆ; ‘ಪೃಥ್ವಿಗೆ ಹುಟ್ಟಿದ ಶಿಲೆ, ಕಲ್ಲುಕುಟ್ಟಿಗನ ಕೈಲಿ ಮೂರ್ತಿಯಾಗಿ ಮಂತ್ರಕ್ಕೆ ಲಿಂಗವಾಯಿತ್ತು, ಇಂತೀ ಮೂವರಿಗೆ ಹುಟ್ಟಿದ ಮಗನನೇನೆಂಬೆ ಗುಹೇಶ್ವರ’ ಎಂದು ಪ್ರಶ್ನಿಸಿದ್ದಾನೆ. ಅದೇ ಅಲ್ಲಮಪ್ರಭು ಮತ್ತೊಂದೆಡೆ ‘ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ. ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ. ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು. ಅಷ್ಟವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು. ನಿತ್ಯ ನೇಮಂಗಳ ಮಾಡುವಡೆ; ನಿನಗೆ ಅನಂತನಾಮಂಗಳಾದವು...’ ಎಂದು ಸ್ತುತಿಸುತ್ತಾನೆ.

ಈ ವೈರುಧ್ಯ, ಭಾರತದ ಎಲ್ಲ ಅನುಭಾವಿ ಕವಿಗಳ ವಿಶಿಷ್ಟ ಗುಣ. ಅನುಭಾವಿಗಳು ತಾವು ಒಲಿದಂತೆ ಹಾಡಿರುವ ಈ ವಚನಗಳನ್ನು ಹಿಡಿದು ಒಂದು ಅಸಂದಿಗ್ಧವಾದ ಸಿದ್ಧಾಂತ ಮಾಡಲಾದೀತೇ ಎಂಬುದು ಸದ್ಯದ ಪ್ರಶ್ನೆ.
ಬೈಬಲ್, ಕುರಾನ್, ಗೀತೋಪನಿಷತ್ತು ಮುಂತಾದ ಧರ್ಮಗ್ರಂಥಗಳ ಹಾಗೆಯೇ ವಚನಗಳು ಸಹ ಉನ್ನತ ಮಟ್ಟದ ಕಾವ್ಯಕೃತಿಗಳಾಗಿವೆ ಮತ್ತು ಎಲ್ಲ ಶ್ರೇಷ್ಠ ಕಾವ್ಯಗಳೂ ಅರ್ಥಸಂದಿಗ್ಧದಿಂದ ಕೂಡಿರುತ್ತವೆ. ಅಂದರೆ ಒಂದು ಸಾಲಿಗೆ ‘ಇದಮಿತ್ಥಂ’ ಎಂಬಂತೆ ಒಂದೇ ಅರ್ಥವೆಂದು ತೀರ್ಮಾನಿಸಲು ಬರುವುದಿಲ್ಲ.

ಒಂದು ಕಾವ್ಯಕೃತಿಯಲ್ಲಿ ನಮಗೆ ಅನುಕೂಲಕರವಾದ ಅಂಶಗಳನ್ನಷ್ಟೇ ಹೆಕ್ಕಿ ತೆಗೆದು ಉಳಿದುದನ್ನು ನಿರ್ಲಕ್ಷ್ಯ ಮಾಡದ ಹೊರತು ಅದನ್ನು ಧರ್ಮಗ್ರಂಥವನ್ನಾಗಿಸಲು ಬರುವುದಿಲ್ಲ. ಆದ್ದರಿಂದಲೇ ಒಂದೇ ಗೀತೆಗೆ ಶಂಕರ, ರಾಮಾನುಜ, ಮಧ್ವ, ವಲ್ಲಭ, ತಿಲಕ್, ಗಾಂಧಿ ಮುಂತಾದವರು ಬಗೆಬಗೆಯ ವ್ಯಾಖ್ಯಾನ ನೀಡಲು ಸಾಧ್ಯವಾದುದು. ಇಸ್ಲಾಂ, ಕ್ರಿಶ್ಚಿಯಾನಿಟಿಗಳಲ್ಲಿ ಹಲವು ಪಂಗಡಗಳು ಹುಟ್ಟುಪಡೆಯಲೂ ಧರ್ಮಗ್ರಂಥಗಳ ಈ ಅರ್ಥಸಂದಿಗ್ಧ ಗುಣವೇ ಕಾರಣ. ಕಾವ್ಯದ ಈ ಸಂಕೀರ್ಣ ಸ್ವರೂಪವನ್ನು ಕುರಿತೇ ಯೇಸುಕ್ರಿಸ್ತ ‘ನನ್ನ ಪರಮಪಿತನ ಮಹಲಿಗೆ ಹಲವು ಅಂತಸ್ತುಗಳಿವೆ’ ಎಂದು ರೂಪಕಾತ್ಮಕವಾಗಿ ನುಡಿದದ್ದು.

ಕಾವ್ಯದ ಈ ಅರ್ಥಬಾಹುಳ್ಯ ಕಾವ್ಯಾಭ್ಯಾಸಿಗಳ ಮಟ್ಟಿಗೆ ಒಂದು ವಿಶೇಷ ಗುಣವೇ ಸರಿ. ಆದರೆ ಧರ್ಮಾನುಯಾಯಿಗಳ ದೃಷ್ಟಿಯಲ್ಲಿ ಧರ್ಮಗ್ರಂಥಕ್ಕೆ ಅರ್ಥಬಾಹುಳ್ಯಕ್ಕಿಂತ ಖಚಿತಾರ್ಥ ಮುಖ್ಯ. ಅವರು ಧರ್ಮಗ್ರಂಥದಲ್ಲಿ ವಿಧಿನಿಷೇಧಗಳನ್ನು, ಕಟ್ಟಲೆ ನಿಯಮಗಳನ್ನು ಬೆದಕುತ್ತಾರೆ. ಆದ್ದರಿಂದಲೇ ಎಲ್ಲ ಧರ್ಮಾನುಯಾಯಿಗಳೂ ತಮ್ಮ ತಮ್ಮ ಧರ್ಮಗ್ರಂಥಗಳಿಂದ ತಮಗೆ ಬೇಕಾದ ಸಾಲುಗಳನ್ನು ಹೆಕ್ಕಿ ತೆಗೆದು ಅಗತ್ಯವಿರುವ ಖಚಿತತೆಯನ್ನು ರೂಪಿಸಿಕೊಳ್ಳುತ್ತಾರೆ.

ಉದಾಹರಣೆಗೆ, ‘ಬಡವರೇ ಧನ್ಯರು’ ಎಂದು ಘೋಷಿಸಿದವನ ಅನುಯಾಯಿಗಳು ಪಶ್ಚಿಮದಲ್ಲಿ ಹಣದ ಹುಚ್ಚು ಹಿಡಿಸಿಕೊಂಡರು. ಶಾಂತಿ, ಸಹಬಾಳ್ವೆ ಬೋಧಿಸಿದವನ ಅನುಚರರು ಇಡೀ ಜಗತ್ತೇ ತಮ್ಮ ಪಾಲಿನ ರಣಾಂಗಣವೆಂದು ಭಾವಿಸಿದರು. ‘ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ಶುನಿಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನಃ’ (ಜ್ಞಾನಿಯಾದವನಿಗೆ ಬ್ರಾಹ್ಮಣ, ಹಸು, ಆನೆ, ನಾಯಿ, ಶ್ವಪಚ ಮುಂತಾದವುಗಳ ನಡುವೆ ತರತಮಭಾವ ಕಾಣಿಸುವುದಿಲ್ಲ) ಎಂಬ ಗೀತೆಯ ಸಾಲುಗಳನ್ನು ಹಾಡಿದ ಹಿಂದೂಧರ್ಮದ ಅನುಯಾಯಿಗಳೇ ತಮ್ಮ ಸಮಾಜದಲ್ಲಿ ಎಲ್ಲ ತರಹದ ಭೇದಭಾವ, ತಾರತಮ್ಯಗಳನ್ನು ಹುಟ್ಟುಹಾಕಿದರು. ತಿಲೋದಕ ನೀಡಿ ತಮ್ಮ ಜನ್ಮ-ಜಾತಿಗಳಿಗೆ ಶ್ರಾದ್ಧಕರ್ಮ ಮಾಡಿಕೊಳ್ಳುವ ಸನ್ಯಾಸಿಗಳೇ ಇಲ್ಲಿನ ಪ್ರತಿಯೊಂದು ಜಾತಿ-ಉಪಜಾತಿಗಳ ಕಾವಲುಗಾರರಾಗಿ ನಿಂತಿರುವುದು ವಿಪರ್ಯಾಸ. ಇನ್ನು ನಮ್ಮ ಮುಸ್ಲಿಂ ಲೇಖಕಿಯರು ಇಸ್ಲಾಂನ ಅಮಾನವೀಯ ಕಟ್ಟಲೆ, ಕುರುಡು ಕಟ್ಟಪ್ಪಣೆಗಳತ್ತ ಇಡೀ ಜಗತ್ತೇ ಕಣ್ತೆರೆದು ನೋಡುವಂತೆ ಮಾಡಿದ್ದಾರೆ.

ಒಂದು ವೇಳೆ ಲಿಂಗಾಯತ ಸಂಪ್ರದಾಯ ಒಂದು ಸ್ವತಂತ್ರ ಧರ್ಮವಾದರೆ ಶರಣರ ಸೂಳ್ನುಡಿಗಳಿಗೆ ಈ ಅನುಯಾಯಿಗಳಿಂದ ಇನ್ನಾವ ಗತಿ ಒದಗುತ್ತದೋ ಎಂದು ಕಾವ್ಯಾಭ್ಯಾಸಿಗಳಿಗೆ ಆತಂಕವಾಗುತ್ತಿದೆ. ಏಕೆಂದರೆ ಹಾಗೊಂದು ವೇಳೆ ಅದಕ್ಕೆ ಸ್ವತಂತ್ರಧರ್ಮದ ಸ್ಥಾನಮಾನ ಲಭಿಸಿದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳೇ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಆಗ, ಬಸವಾದಿ ಶರಣರ ವಚನಗಳನ್ನು ಪ್ರತಿಭಾಪೂರ್ಣವಾಗಿ ಸಂಪಾದಿಸಿರುವ ಮತ್ತು ವ್ಯಾಖ್ಯಾನಿಸಿರುವ ಶಿ.ಶಿ. ಬಸವನಾಳ, ಸಂ.ಶಿ. ಭೂಸನೂರಮಠ, ಎಲ್. ಬಸವರಾಜು, ಆರ್.ಸಿ. ಹಿರೇಮಠ ಮುಂತಾದ ವಿದ್ವಾಂಸರ ಆವೃತ್ತಿಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಪ್ರತಿಷ್ಠಿತ ಧಾರ್ಮಿಕ ಶಕ್ತಿಗಳು ಸೃಷ್ಟಿಸಿ, ವ್ಯಾಖ್ಯಾನಿಸಿ ಅನುಮೋದಿಸುವ ಆವೃತ್ತಿಗಳನ್ನಷ್ಟೇ ಪರಿಗಣಿಸಬೇಕಾದ ಸಂದರ್ಭ ಒದಗಿಬಂದೀತು.

ಬಸವಣ್ಣನ ಚಳವಳಿ ಕರ್ನಾಟಕದ ಉತ್ತರ ಭಾಗದಲ್ಲಿ ನಡೆದಿದ್ದರೆ ಅವನ ಚಾರಿತ್ರ್ಯ ಯಳಂದೂರು (ಬಸವಣ್ಣನ ಜೀವನ ಚರಿತ್ರೆ ಬರೆದ ಷಡಕ್ಷರದೇವನ ಸ್ಥಳ), ಗೂಳೂರು (ಶೂನ್ಯಸಂಪಾದನಾಕಾರರಾದ ಸಿದ್ಧವೀರಣ್ಣೊಡೆಯರ ಊರು) ಮುಂತಾದ ಕರ್ನಾಟಕದ ದಕ್ಷಿಣ ತುದಿಯಲ್ಲಿ ಬೆಳಗಿತು. ಹೀಗೆ ಸಮಸ್ತ ಕನ್ನಡಿಗರ ಪಾಲಿಗೆ ಸ್ವಂತದ್ದಾಗಿದ್ದ ವಚನ ಸಾಹಿತ್ಯ ಮುಂದೆ ಒಂದು ನಿರ್ದಿಷ್ಟ ಗುಂಪಿನ ನಂಬಿಕೆಯ ಗ್ರಂಥವಾಗಿ ಸೀಮಿತಗೊಂಡೀತು.

ಲಿಂಗಾಯತವಲ್ಲದ ಇತರ ಧರ್ಮಗಳು ‘ಪಠ್ಯಪುಸ್ತಕದಲ್ಲಿ ಧಾರ್ಮಿಕ ವಿಷಯಗಳನ್ನು ಬೋಧಿಸುವಂತಿಲ್ಲ’ ಎಂದು ತಾಕೀತು ಮಾಡಿದರೆ ವಿದ್ಯಾರ್ಥಿಗಳು ಶಾಶ್ವತವಾಗಿ ವಚನ ಸಾಹಿತ್ಯದಿಂದ ವಂಚಿತರಾಗುವ ಅಪಾಯ ಎದುರಾಗಬಹುದು.

ಹಿಂದೆ ಬಸವಾದಿ ಪ್ರಮಥರು ಪ್ರಭುತ್ವವನ್ನು ನಿರ್ಲಕ್ಷಿಸಿ ಸಮಾಜದಲ್ಲಿ ಸಾಮರಸ್ಯ, ಸಮಾನತೆ ತರಲು ಹೊಸದೊಂದು ಧರ್ಮದ ಉದಯಕ್ಕೆ ಕಾರಣರಾದರು. ಆದರೆ ಆ ಹೊಸಧರ್ಮ ಬಸವನೊಂದಿಗೇ ಲಯವಾಗಿ ಹೋಯಿತು. ಹಾಗೆಂದು ತುರುಗಾಹಿ ರಾಮಣ್ಣ ತನ್ನ ಒಂದು ವಚನದಲ್ಲಿ ‘ಬಂದಿತ್ತು ದಿನ: ಬಸವಣ್ಣ ಕಲ್ಲಿಗೆ, ಚೆನ್ನಬಸವಣ್ಣ ಉಳುವೆಯಲ್ಲಿಗೆ, ಪ್ರಭು ಅಕ್ಕ ಕದಳಿದ್ವಾರಕ್ಕೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷ್ಯಕ್ಕೆ...’ ಎಂದು ಹಾಡಿದ್ದಾನೆ. ಇಂದು ಬಸವಾದಿ ಪ್ರಮಥರಿಲ್ಲ. ಆ ಧರ್ಮವನ್ನು ಪುನರುಜ್ಜೀವಿಸಬೇಕೆಂದರೆ ಬಸವಣ್ಣನ ಚಳವಳಿ ಹುಟ್ಟುಪಡೆದ ಸನ್ನಿವೇಶ ಇಲ್ಲಿ ಮತ್ತೆ ಮರುಕಳಿಸಬೇಕಾಗಿದೆ. ಅಂದರೆ ಅದು ಜನಸಮುದಾಯದ, ಎಲ್ಲ ವರ್ಗದ ಶೋಷಿತರ ಒಡಲೊಳಗಿನಿಂದಲೇ ಮೂಡಿಬರಬೇಕಾಗಿದೆ. ಪ್ರಭುತ್ವದಿಂದ ಅಂಕಿತ ಹಾಕಿಸಿಕೊಂಡು ಹೊಸಧರ್ಮವನ್ನು ಘೋಷಿಸಿಕೊಳ್ಳಲಾಗದು. ಹಾಗೊಂದು ವೇಳೆ ಘೋಷಿಸಿಕೊಂಡರೂ ಅದು ಬಸವಾದಿ ಪ್ರಮಥರ ಮುಂದುವರಿದ ಪರಂಪರೆ ಎನಿಸಿಕೊಳ್ಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT