ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವವಾದಿಗಳಿಗೆ ನೋವು...

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಂಡ ಜಾತ್ಯತೀತ ಪತ್ರಿಕೆಗಳಲ್ಲಿ ‘ಪ್ರಜಾವಾಣಿ’ ತನ್ನ ಸ್ಥಾನವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಪತ್ರಿಕೆಯ ಪ್ರತೀ ವರದಿ ಹಾಗೂ ವಾಚಕರವಾಣಿಯು ಜನಸಾಮಾನ್ಯರ ಭಾವದ ಪ್ರತಿಬಿಂಬವೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಪತ್ರಿಕೆ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಟ್ಟುಕೊಟ್ಟು ಉಸಿರಾಡಿಲ್ಲ.

ಇಂಥ ಪತ್ರಿಕೆಯ ಬುಧವಾರದ ಸಂಪಾದಕೀಯ (ಮಾ.21) ಓದಿ ನನ್ನಂಥ ಮನಸ್ಥಿತಿ ಉಳ್ಳವರು ದಿಗ್ಭ್ರಮೆಗೊಂಡಿದ್ದೇವೆ‌. ಲಿಂಗಾಯತ ಧರ್ಮ ಹಾಗೂ ಅದರ ಸಂವಿಧಾನ ನಿಜಕ್ಕೂ ವೀರಶೈವಕ್ಕಿಂತ ತುಂಬಾ ವಿಭಿನ್ನ. ವಿಶ್ವವೇ ಮೆಚ್ಚುವಂಥ ಸಾಂಸ್ಕೃತಿಕ ಪರಂಪರೆ. ಐತಿಹಾಸಿಕ ದಾಖಲೆಗಳು ಈ ಧರ್ಮಕ್ಕೆ ಇವೆ. ವಚನಪ್ರಜ್ಞೆ ತೀವ್ರಗತಿಯಲ್ಲಿ ಎಲ್ಲರಿಗೂ ಮುಟ್ಟುತ್ತಿರುವ ಪರಿಣಾಮದಿಂದ ಕರ್ನಾಟಕದ ತುಂಬೆಲ್ಲ ಸಮಾವೇಶಗಳಾದವು. ಲಿಂಗಾಯತ ಧರ್ಮಕ್ಕೆ ಸರ್ಕಾರದ ಮಾನ್ಯತೆ ಬೇಕೆಂದು ಚಳವಳಿಗಳು ನಡೆದವು.

ಯಾವುದೇ ಚಳವಳಿ, ಸತ್ಯಾಗ್ರಹ ನಡೆದಾಗ ಆಳುವ ಸರ್ಕಾರ ಅದಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಹೋರಾಟಕ್ಕೆ ಕಿವಿಗೊಟ್ಟು ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು. ಇದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಸಮಿತಿಯು ಸಮರ್ಪಕ ದಾಖಲೆಗಳನ್ನು ಸಂಗ್ರಹಿಸಿ, ಅಳೆದು ತೂಗಿ ಅಧ್ಯಯನ ಮಾಡಿ, 150 ಪುಟಗಳ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ. ಇದು ಕಾಗಕ್ಕ ಗುಬ್ಬಕ್ಕನ ವರದಿಯಲ್ಲ. ಈ ಸಮಿತಿಯಲ್ಲಿರುವವರು ಎಲ್ಲರಿಗೂ ಗೊತ್ತಿರುವಂತೆ ಪ್ರಕಾಂಡ ವಾಗ್ಮಿಗಳು, ಚಿಂತಕರು, ಜನಪರ ಧೋರಣೆ ಉಳ್ಳವರು. ಸತ್ಯದ ಪರವಾಗಿ ನಿಂತು ನಿಷ್ಪಕ್ಷಪಾತವಾಗಿ ಮಾತನಾಡುವವರು. ಜೀವಪರವಾದ ಧೋರಣೆ ಉಳ್ಳವರು.


ಇಂಥ ವರದಿಯನ್ನು ಸರ್ಕಾರ ನಿರ್ಲಕ್ಷಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಏಕೆಂದರೆ ಲಿಂಗಾಯತ ಧರ್ಮ ಉಡಿಯ ಕೆಂಡವಾಗಿ ಎಲ್ಲರನ್ನೂ ಸುಡುತ್ತಿತ್ತು. ಹೀಗಾಗಿ ಅದರ ಸಾಧಕ–ಬಾಧಕ ಕುರಿತು ಸಚಿವ ಸಂಪುಟ ಚರ್ಚಿಸಿ ತೀರ್ಮಾನಿಸಿದ್ದನ್ನು ’ತರಾತುರಿಯ ನಿರ್ಧಾರ’ ಎಂದಿರುವ ವಿರೋಧಿಗಳ ಮಾತನ್ನು ಪರಿಗಣಿಸಿ  ‘ಪ್ರಜಾವಾಣಿ’ ಪತ್ರಿಕೆ ಬರೆಯುವ ಅವಶ್ಯಕತೆ ಇರಲಿಲ್ಲ.


ಯಾವುದೇ ಪಕ್ಷವಾದರೂ ಸಹಜವಾಗಿ ತನ್ನ ರಾಜಕೀಯ ಲಾಭವನ್ನು ನೋಡಿಕೊಳ್ಳುತ್ತದೆ. ಆದರೆ ಸಿದ್ದರಾಮಯ್ಯ ಇಲ್ಲಿ ತಮ್ಮ ಪಕ್ಷಕ್ಕೆ ಸಿಗುವ ರಾಜಕೀಯ ಲಾಭಕ್ಕಿಂತ ಸತ್ಯದ ಪರವಾದ ಧ್ವನಿಯನ್ನು, ಹೋರಾಟವನ್ನು ಬೆಂಬಲಿಸಿದ್ದಾರೆ. ಜನಸಾಮಾನ್ಯನ ಧ್ವನಿಗೆ ಯಾವ ಸರ್ಕಾರ ಬೆಲೆ ಕೊಡುತ್ತದೆಯೋ ಆ ಸರ್ಕಾರ ಜೀವಂತ ಸರ್ಕಾರವಾಗಿರುತ್ತದೆ. ‘ಹೆಗ್ಗಣ ಒಳಗಿಟ್ಟು ಮೇಲೆ ಸಾರಣೆ ಮಾಡುವ’ ಅವಕಾಶಗಳು ಸರ್ಕಾರಕ್ಕೆ ಇದ್ದರೂ ಅದನ್ನು ಇಲ್ಲಿ ಮಾಡಲಿಲ್ಲ. ಅದು ತನ್ನ ಜವಾಬ್ದಾರಿಯನ್ನು ಇಲ್ಲಿ ನಿಭಾಯಿಸಿದೆ.


ಧರ್ಮ ಮಾನ್ಯತೆ ಸಿಕ್ಕ ತಕ್ಷಣವೇ ಒಮ್ಮಿಂದೊಮ್ಮೆ ಬದಲಾವಣೆ ಆಗುತ್ತದೆ ಎಂದು ನಿರೀಕ್ಷಿಸುವುದೇ ತಪ್ಪು. ಧರ್ಮದ ಆಚರಣೆಗಳು ತತ್‌ಕ್ಷಣ ಬದಲಾಗಲು ಅದೇನು ಜಾದೂಗಾರರ ಆಟ ಅಲ್ಲ. ಅದು ಕಾಲಕ್ರಮೇಣ ಬದಲಾಗುವ ಪ್ರಕ್ರಿಯೆ. ಇದು ‘ಪ್ರಜಾವಾಣಿ’ಯಂತಹ ಪತ್ರಿಕೆಗೆ ಗೊತ್ತಿಲ್ಲದಿರುವುದೇನಿಲ್ಲ. ಹಾಗೆಯೇ ಬುಧವಾರವೇ ಪ್ರಕಟವಾದ ಪ್ರಕಾಶ ಶೆಟ್ಟಿ ಅವರ ವ್ಯಂಗ್ಯಚಿತ್ರವೂ ಬಸವವಾದಿಗಳಿಗೆ ನೋವು ತಂದಿದೆ.

-ವಿಶ್ವಾರಾಧ್ಯ ಸತ್ಯಂಪೇಟೆ
ರಾಜ್ಯ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT