ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕ್ಕೆ ಜಯ ಸಿಗಲಿ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಣ, ಅಧಿಕಾರ, ದರ್ಪ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಕೆಲವರಲ್ಲಿ ಅಂತರ್ಗತವಾಗಿದೆ ಎಂಬುದು ಸತ್ಯವಾದ ಮಾತು.

ಈ ಮೂರೂ ಒಂದೊಂದು ರೀತಿಯ ಪ್ರಭಾವ ಹೊಂದಿವೆ. ಆದರೆ ಮೂರೂ ಒಂದು ಕಡೆ ಸೇರಿದರಂತೂ ಪರಿಣಾಮ ಊಹಿಸಲು ಅಸಾಧ್ಯ. ಅದಕ್ಕೆ ಒಳ್ಳೆಯ ಉದಾಹರಣೆ ಎಂದರೆ ವಿಧಾನಸಭೆ ಸಚಿವಾಲಯದ ನೇಮಕಗಳಲ್ಲಿ ಆಗಿರುವ ಅವ್ಯವಹಾರ ಹಾಗೂ ಸ್ವಜನಪಕ್ಷಪಾತ.

1974 ಅಥವಾ 1976 ಇರಬೇಕು. ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಲಂಚಾವತಾರ ತಾಂಡವ ನೃತ್ಯ ಮಾಡಿತ್ತು. ಆಗ ಕೆಲವರು ಕೋರ್ಟ್ ಮೆಟ್ಟಿಲು ಏರಿದರು. ವಿಚಾರಣೆ ನಡೆಯಿತು. ಆದರೆ ಹಣ ಕೊಟ್ಟು ಕೆಲಸ ಪಡೆದವರಿಗೆ ಹಣ ವಾಪಸ್ ಬರಲಿಲ್ಲ. ‘ನಾನೇನು ಮಾಡಲಿ, ಕೆಲಸ ಕೊಡಿಸಿದ್ದೆನಲ್ಲ’ ಎಂದು ಕೈತೊಳೆದುಕೊಂಡರು. ಪಾಪ ಹಣ ಕೊಟ್ಟ ಅಭ್ಯರ್ಥಿಗಳು ಏನೂ ಮಾಡಲಾಗಲಿಲ್ಲ. ‘ಇಂಗು ತಿಂದ ಮಂಗ’ನಂತಾದರು.

ಈಗಲೂ ಇಂತಹ ಅಚಾತುರ್ಯಗಳು ಆಗಿವೆ. ಆದರೆ ಯಾರಿಗೂ ಪ್ರಶ್ನಿಸುವ ಧೈರ್ಯವಿಲ್ಲ. ಪ್ರಶ್ನಿಸಿದರೆ ‘ವಿದ್ವತ್’ಗೆ ಆದ ರೀತಿ ತಮಗೂ ಆಗಬಹುದೆಂಬ ಭಯದಿಂದ ಸುಮ್ಮನಿದ್ದಾರೆ. ಅದಕ್ಕೆ ಪೂರಕವಾಗಿ ಬಂದಿರುವ ಉತ್ತರ ಗಮನಿಸಿ– ’ಯಾರಿಗಾದರೂ ಅನ್ಯಾಯವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಿ’.

ನಮ್ಮ ನ್ಯಾಯಾಲಯಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಗಮನಿಸಿದರೆ ‘ಸತ್ಯಕ್ಕೆ ಜಯ’ ಎಂಬುವುದು ಖಚಿತ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಎಂದು ನ್ಯಾಯಾಲಯಗಳೇ ಮೊಕದ್ದಮೆ ದಾಖಲೆ ಮಾಡಿಕೊಂಡರೆ ಉತ್ತಮ. ಟಿ.ವಿ.ಗಳು ದಾಖಲೆಗಳ ಸಮೇತ, ಕೆಲವು ಬಾರಿ ವಿಡಿಯೊಗಳ ಮೂಲಕ ಪ್ರಸಾರ ಮಾಡುತ್ತಿವೆ. ಈ ವಿಷಯದಲ್ಲಿ ನ್ಯಾಯಾಲಯಗಳು ಒಂದು ಹೆಜ್ಜೆ ಮುಂದೆ ಇಟ್ಟರೆ ‘ರಾಮರಾಜ್ಯ’ ಆಗುವುದರಲ್ಲಿ ಸಂದೇಹವಿಲ್ಲ. ‘ದುಷ್ಟ ಸಂಹಾರ, ಶಿಷ್ಟ ರಕ್ಷಣೆ‘ ಆಗುವುದು. ‘ಸಂಭವಾಮಿ ಯುಗೇ ಯುಗೇ’ ಎಂದು ಕೃಷ್ಣ ಹೇಳಿದ್ದಾನೆ. ಆದರೆ ಏಕೋ ಬರುತ್ತಿಲ್ಲ. ಏಕೆಂದರೆ ’ಅಹಂ ಬ್ರಹ್ಮಾಸ್ಮಿ’ ಎಂಬಂತೆ ಎಲ್ಲರಲ್ಲೂ ಭಗವಂತ ನೆಲೆಸಿದ್ದಾನೆ. ಆದರೆ ಆ ಭಗವಂತ ಎಚ್ಚೆತ್ತರೆ ಸಾಕು. ಒಂದು ರೀತಿ ಆ ಕಾಣದ ಭಗವಂತ ಯಾರು ಅಂದರೆ ‘ನ್ಯಾಯದೇವತೆ’ ಅಂದರೆ ‘ನ್ಯಾಯಾಲಯ’ ಅಲ್ಲವೇ? ಯಾವ ಪಕ್ಷ, ಯಾವ ಜಾತಿ, ಯಾವ ಧರ್ಮ ಎಂಬುವುದು ನ್ಯಾಯಾಲಯಕ್ಕೆ ಇಲ್ಲ.

-ಎ.ಪಿ. ರಂಗನಾಥ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT