ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಧನ ಸಂಗ್ರಹ ನಿಲ್ಲಿಸಲಾಗದು

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಗಣಿಬಾಧಿತ ಪ್ರದೇಶಗಳ ಪುನರುಜ್ಜೀವನದ ಹೆಸರಿನಲ್ಲಿ ಗಣಿ ಮಾಲೀಕರಿಂದ ಶೇ 10ರಷ್ಟು ರಾಯಧನ ಸಂಗ್ರಹಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು’ ಎಂದು ಕೋರಿ ಜಿಲ್ಲಾ ಖನಿಜ ಪ್ರತಿಷ್ಠಾನ ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ದಕ್ಷಿಣ ವಿಭಾಗದ ಮನವಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಳ್ಳಿ ಹಾಕಿದೆ.

ಕರ್ನಾಟಕದಲ್ಲಿ ಗಣಿ ಮಾಲೀಕರಿಂದ ಇದುವರೆಗೆ ರಾಯಧನದ ರೂಪದಲ್ಲಿ ಸಂಗ್ರಹಿಸಲಾದ ಮೊತ್ತ ₹ 11,000 ಕೋಟಿ. ಆದರೆ, ಗಣಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದು ದೂರಿ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್‌ ಗೋಗೊಯ್‌, ಅಭಯ ಮನೋಹರ್‌ ಸಪ್ರೆ, ನವೀನ್‌ ಸಿನ್ಹಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ, ‘ಈ ವಿಚಾರ ನಮಗೆ ಬಿಟ್ಟದ್ದು. ರಾಯಧನದ ಸಂಗ್ರಹವನ್ನು ನಿಲ್ಲಿಸಲು ಇದು ಸಕಾಲವಲ್ಲ’ ಎಂದು ಅಭಿಪ್ರಾಯಪಟ್ಟಿತು.

‘ರಾಯಧನ ಸಂಗ್ರಹ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬಹುದೇ’ ಎಂಬ ಕುರಿತು ಪರಿಶೀಲಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಕಳೆದ ಸೋಮವಾರ ಸಲ್ಲಿಸಿರುವ ವರದಿಯು, ‘ರಾಯಧನ ಸಂಗ್ರಹ ನಿಲ್ಲಿಸುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯ ನೀಡಿದೆ ಎಂದು ಹಿರಿಯ ವಕೀಲ ಶ್ಯಾಂ ದಿವಾನ್‌ ತಿಳಿಸಿದರು.

ಗಣಿಬಾಧಿತ ಪ್ರದೇಶದಲ್ಲಿ ಸಮಗ್ರ ಪರಿಸರ ಯೋಜನೆ ಕೈಗೆತ್ತಿಕೊಳ್ಳಲು ಭಾರಿ ಪ್ರಮಾಣದ ಹಣದ ಅಗತ್ಯವಿದ್ದು, ಎಷ್ಟು ಪ್ರಮಾಣದ ಹಣ ಬೇಕಾಗಬಹುದು ಎಂಬ ಕುರಿತ ಲೆಕ್ಕಾಚಾರ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಯು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕುರಿತ ದೂರದೃಷ್ಟಿ ಒಳಗೊಂಡಿದ್ದು, ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶ ಹೊಂದಿದ್ದಾಗಿ ಸಿಇಸಿ ತಿಳಿಸಿದೆ ಎಂದು ಅವರು ಹೇಳಿದರು.

ಯೋಜನೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ (ಕೆಎಂಇಆರ್‌ಸಿ)ವು ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ರಚಿಸಿದ್ದು, ರೈಲು ಮಾರ್ಗ ಮತ್ತು ಕನ್ವೇಯರ್‌ ಬೆಲ್ಟ್‌ ಅಳವಡಿಕೆಯತ್ತ ಗಮನ ಹರಿಸಿದೆ. ಎಸ್‌ಪಿವಿಯು ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ ಕರಡು ವರದಿ ಸಲ್ಲಿಸಲಿದೆ ಎಂದು ಒಕ್ಕೂಟದ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ಚಿದಂಬರಂ ವಿವರಿಸಿದರು.

ಮುಂದಿನ ಒಂದು ವರ್ಷದೊಳಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವ ಸಾಧ್ಯತೆಗಳಿಲ್ಲ. 10 ವರ್ಷಗಳ ಈ ಯೋಜನೆ ಆರಂಭವಾಗುವ ಹೊತ್ತಿಗೆ ₹ 80,000ದಿಂದ ₹ 90,000 ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

‘ಈ ರೀತಿಯ ವಿವರಣೆ ನೀಡುವ ಮೂಲಕ ನಿಮ್ಮ ಉದ್ದೇಶ ಈಡೇರಿಸಿಕೊಳ್ಳಲು ಮುಂದಾಗಬೇಡಿ’ ಎಂದು ತಿಳಿಸಿ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠವು, ಆರು ತಿಂಗಳೊಳಗೆ ಯೋಜನೆಗೆ ತಗಲುವ ಸಂಪೂರ್ಣ ವೆಚ್ಚದ ವಿವರ ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಕೆಎಂಇಆರ್‌ಸಿ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT