ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಪ್ರವಾಸ ಮೊಟಕು

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಯಾವುದೇ ವಿವಾದ ಆಗದಂತೆ ತಡೆಯುವ ಉದ್ದೇಶದಿಂದ ಕ್ರೀಡಾ ಸಚಿವಾಲಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಅಥ್ಲೀಟ್‌ಗಳೊಂದಿಗೆ ಕುಟುಂಬಸ್ಥರು ಪ್ರಯಾಣ ಮಾಡುವಂತಿಲ್ಲ. ಅಧಿಕಾರಿಗಳ ಮೋಜು ಪ್ರವಾಸಕ್ಕೆ ಕಡಿವಾಣ ಹಾಕಲಿದೆ. ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಗೋಲ್ಡ್‌ ಕೋಸ್ಟ್‌ಗೆ ತೆರಳುವ 222 ಅಥ್ಲೀಟ್‌ಗಳು, 106 ಅಧಿಕಾರಿಗಳು, 57 ಕೋಚ್‌ಗಳು, 19 ಮ್ಯಾನೇಜರ್‌ಗಳು ಹಾಗೂ 41 ಇತರೆ ಅಧಿಕಾರಿಗಳ ಪಟ್ಟಿಯನ್ನು ಸಚಿವಾಲಯಕ್ಕೆ ಕಳಿಸಿದೆ.

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅಥ್ಲೆಟಿಕ್ಸ್ ತಂಡಕ್ಕೆ ಇನ್ನೂ ಹಸಿರು ನಿಶಾನೆ ನೀಡಿಲ್ಲ. 41 ಇತರೆ ಅಧಿಕಾರಿಗಳ ಪಟ್ಟಿಯನ್ನು
ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.

‘ಕ್ರೀಡಾ ಗ್ರಾಮದಲ್ಲಿ ಇರದ ಅಧಿಕಾರಿಗಳಿಗೆ ಸರ್ಕಾರದ ದುಡ್ಡಿನಲ್ಲಿ ಪ್ರವಾಸ ಮಾಡುವುದನ್ನು ಸಚಿವಾಲಯ ತಡೆಯುವ ಉದ್ದೇಶ ಹೊಂದಿದೆ. ಆಟಗಾರರ ಮೇಲೆ ಗಮನ ಕೇಂದ್ರೀಕರಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಳಿಕ ಪಟ್ಟಿಯನ್ನು ಅಂತಿಮಗೊಳಿಸಲಿದೆ’ ಎಂದು ಸಚಿವಾಲಯ ಮೂಲದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘41 ಇತರೆ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಹಿಂದಿನ ಕೂಟಗಳಲ್ಲಿ ಅಧಿಕಾರಿಗಳು ಮೋಜು ಪ್ರವಾಸ ಮಾಡಿದ್ದ ಬಗ್ಗೆ ಬಹಳಷ್ಟು ದೂರುಗಳು ಬಂದಿದ್ದವು. ಈ ಸಲ  ಆ ರೀತಿ ಆಗುವುದಿಲ್ಲ. ಅಗತ್ಯ ಇರುವಷ್ಟು ಸಿಬ್ಬಂದಿಯನ್ನು ಮಾತ್ರ ಕಳಿಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಎಷ್ಟೇ ಜನಪ್ರಿಯ ಅಥ್ಲೀಟ್ ಆಗಿದ್ದರೂ ಅವರು ತಮ್ಮ ದುಡ್ಡಿನಲ್ಲಿಯೇ ಕುಟುಂಬದವರನ್ನು ಕರೆದುಕೊಂಡು ಹೋಗಬೇಕು. ಇದರ ಅರ್ಥ ಅಥ್ಲೀಟ್‌ಗಳಿಗೆ ಬೆಂಬಲ ನೀಡುತ್ತಿಲ್ಲ ಎಂದಲ್ಲ. 10 ಹೆಚ್ಚುವರಿ ಕೋಚ್‌ಗಳನ್ನು ಕಳಿಸಿದರೆ ತಂಡಕ್ಕೆ ಲಾಭವಾಗುತ್ತದೆ. ಆ ಬಗ್ಗೆ ಚಿಂತನೆ ನಡೆದಿದೆ’ ಎಂದು ಅವರು ಹೇಳಿದ್ದಾರೆ.

ಬಡತನ ನೀಗುವ ನಿರೀಕ್ಷೆ: ಭಾರತದ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್ ಸ್ಪರ್ಧಿ ರಾಕೇಶ್ ಪಾತ್ರಾ ಅವರು ಕಾಮನ್‌ವೆಲ್ತ್ ಕೂಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಜೊತೆಗೆ ಆರ್ಥಿಕವಾಗಿ ಬಲಾಢ್ಯರಾಗುವ ಉದ್ದೇಶದಿಂದ ಪದಕ ಗೆಲ್ಲುವ ಹೆಬ್ಬಯಕೆ ಹೊಂದಿದ್ದಾರೆ.

ಭಾರತ ಒಲಿಂಪಿಕ್‌ ಸಂಸ್ಥೆ ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್‌ ಕಾಮನ್‌ವೆಲ್ತ್‌ ಕೂಟಕ್ಕಾಗಿ ಪ್ರಕಟಿಸಿದ್ದ ಭಾರತ ತಂಡದಲ್ಲಿ ರಾಕೇಶ್ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಈ ಕುರಿತು ಅವರು ದೆಹಲಿ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಅವರಿಗೆ ಅವಕಾಶ ನೀಡಲಾಗಿತ್ತು. ರಾಕೇಶ್‌ ತಂದೆ ದಯಾನಿಧಿ ಪಾತ್ರಾ ಅವರು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ.

‘ಅಪ್ಪನ ಸಂಬಳ ತೀರಾ ಕಡಿಮೆ. ಅದರಲ್ಲಿ ಹೆಚ್ಚಿನ ಭಾಗ ನನಗಾಗಿ ಖರ್ಚು ಮಾಡಿದ್ದಾರೆ. ಎಷ್ಟೋ ದಿನ ಊಟ ಮಾಡದೇ ಹಸಿದ ಹೊಟ್ಟೆಯಲ್ಲಿ ಮಲಗುತ್ತಿದ್ದರು. ಆ ನೋವನ್ನು ನಾನು ಇಂದಿಗೂ ಮರೆತಿಲ್ಲ’ ಎಂದು ರಾಕೇಶ್‌ ಹೇಳಿದ್ದಾರೆ.

ಸೀಮಾ ಪೂನಿಯಾ ಭರವಸೆ: ಡಿಸ್ಕಸ್ ಥ್ರೋ ಸ್ಪರ್ಧಿ ಸೀಮಾ ಪೂನಿಯಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಇತ್ತೀಚೆಗೆ ಅವರು ಫೆಡರೇಷನ್‌ ಕಪ್‌ನಲ್ಲಿ ಚಿನ್ನ ಗೆದ್ದ ಬಳಿಕ ಉದ್ದೀಪನಾ ಮದ್ದು ತಡೆ ಘಟಕದಿಂದ ಪರೀಕ್ಷೆಗೆ ಒಳಗಾಗಿದ್ದರು. ಅಧಿಕಾರಿಗಳು ತಡವಾಗಿ ತಲುಪಿದ್ದರಿಂದ ಪಾಣಿಪತ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು.

2006ರಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ 34 ವರ್ಷದ ಹರಿಯಾಣದ ಅಥ್ಲೀಟ್‌ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ. ಕಾಮನ್‌ವೆಲ್ತ್ ಕೂಟದಲ್ಲಿ ಅವರಿಗೆ ಇದು ಅಂತಿಮ ಸ್ಪರ್ಧೆ ಎನಿಸಿದೆ.

ಜಿಮ್ನಾಸ್ಟಿಕ್ಸ್ ಸ್ಪರ್ಧಿ ರಾಕೇಶ್ ಪಾತ್ರ ಅವರಿಗೆ ಬಡತನ ನೀಗುವ ನಿರೀಕ್ಷೆ

ಸೀಮಾ ಪೂನಿಯಾಗೆ ಇದು ಅಂತಿಮ ಕಾಮನ್‌ವೆಲ್ತ್ ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT