ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಯವಲ್ಲ, ಸುಳ್ಳುಮೇವ ಜಯತೆ’

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‌ಚಿಕ್ಕಮಗಳೂರು: ‘ಹದಿನಾಲ್ಕು ವರ್ಷದ ವಿದ್ಯಾರ್ಥಿಗೆ ಧರ್ಮವೆಂದರೆ ಸತ್ಯಮೇವ ಜಯತೇ ಎಂದು ಗೊತ್ತಿದೆ. ಆದರೆ,  ಸುಳ್ಳಿನ ಮೇಲೆ ಸುಳ್ಳು ಹೇಳುವ ನಮ್ಮ ಪ್ರಧಾನಿಗೆ ಧರ್ಮದ ಅರ್ಥ ಗೊತ್ತಿಲ್ಲ. ಅವರದು ಸುಳ್ಳುಮೇವ ಜಯತೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

ಕಾಫಿ ನಾಡಿನ ಕ್ರೀಡಾಂಗಣದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಬುಧವಾರ ಮಾತನಾಡಿದ ಅವರು, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

‘ನಾನು ಶೃಂಗೇರಿ ಮಠದ ಪಾಠಶಾಲೆಯ ಮಕ್ಕಳನ್ನು ಭೇಟಿ ಮಾಡಿದ ವೇಳೆ ಧರ್ಮ, ಅಧ್ಯಾತ್ಮ ಬಗ್ಗೆ ನಿಮಗೇನು ಗೊತ್ತು? ಧರ್ಮದ ತಳಪಾಯ ಏನು? ಎಂದು ಕೇಳಿದೆ. ಧರ್ಮದ ನಿಜವಾದ ಅರ್ಥ ಆ ಸಣ್ಣ ಮಕ್ಕಳಿಗೂ ಗೊತ್ತಿದೆ. ಆದರೆ, ಮೋದಿ ಮಾತ್ರ ಹೋದಲ್ಲೆಲ್ಲಾ ಸುಳ್ಳು ಹೇಳುತ್ತಿದ್ದಾರೆ’ ಎಂದು ಜರಿದರು.

ಚಿಕ್ಕಮಗಳೂರಿಗೆ ಬಂದಾಗ ಹಳೇ ನೆನಪಾಗುತ್ತಿದೆ ಎಂದು ಮಾತು ಆರಂಭಿಸಿದ ರಾಹುಲ್,  ‘ನನ್ನ ಅಜ್ಜಿ ಇಂದಿರಾ ಗಾಂಧಿಯವರಿಗೆ ಅತೀ ಕ್ಲಿಷ್ಟಕರ ‍ಪರಿಸ್ಥಿತಿಯಲ್ಲಿ ನೀವು ಬೆಂಬಲ ಕೊಟ್ಟಿದ್ದೀರಿ. ಅವರನ್ನು ರಾಜಕೀಯವಾಗಿ ದಮನ ಮಾಡುತ್ತಿದ್ದ ಸಂದರ್ಭದಲ್ಲಿ ಐತಿಹಾಸಿಕವಾಗಿ ಗೆಲ್ಲಿಸಿದ್ದಕ್ಕೆ ನಾನು ಅಭಾರಿ’ ಎಂದಾಗ ಜನಸ್ತೋಮ ಹರ್ಷೋದ್ಘಾರ ಮಾಡಿತು.

‘ನಮ್ಮ ಕುಟುಂಬಕ್ಕೂ ನಿಮಗೂ ಅವಿನಾಭಾವ ಸಂಬಂಧವಿದೆ. ನನ್ನ ಯೋಚನೆಗಳು, ಬದ್ಧತೆ ಇಂದಿರಾ ರೀತಿಯೇ ಇದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ಒಡೆಯುತ್ತಿವೆ. ಅದನ್ನು ತಡೆಯಲು ನೀವು ನಮಗೆ ಶಕ್ತಿ ತುಂಬಬೇಕು. ಶಕ್ತಿ ಕೊಟ್ಟರೆ ದೇಶ ಜೋಡಿಸುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಪ್ರಧಾನಿಯಾದವರಿಗೆ ಹೃದಯದಲ್ಲಿ ಕರುಣೆ ಇರಬೇಕು ಅಗ ಮಾತ್ರ ದೇಶ ಮುನ್ನಡೆಸಲು ಸಾಧ್ಯ. ಗೌರವ, ಪ್ರೀತಿಯೂ ಇರಬೇಕು. ‌ಅದು ಮೋದಿ ಬಳಿ ಇಲ್ಲ’ ಎಂದು ಚುಚ್ಚಿದರು.

‘ನಾನು ಅನೇಕ ಕಡೆ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಕಾಂಗ್ರೆಸ್ ಪರ ವಾತಾವರಣ ಇದೆ. ಮೋದಿ ಮುಂದಿನ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ’ ಎಂದು ರಾಹುಲ್ ಭವಿಷ್ಯ ನುಡಿದರು. ಪಕ್ಷದ ನಾಯಕರೆಲ್ಲ ಒಗ್ಗಟ್ಟಿನಿಂದ ಇದ್ದಾರೆ. ಕಾರ್ಯಕರ್ತರೂ ಒಂದಾಗಿ ಕೆಲಸ ಮಾಡಬೇಕು. ಪಕ್ಷಕ್ಕೆ ಬಲ ತುಂಬಬೇಕು ಎಂದು ಅವರು ಮನವಿ ಮಾಡಿದರು.
 

ಅಟಲ್ ಬಣ್ಣಿಸಿದ ರಾಹುಲ್!

‘ನಾನು ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ. ಅವರ ಮಾತುಗಳನ್ನು ಆಲಿಸಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಭಾಷಣವನ್ನೂ ಕೇಳಿದ್ದೇನೆ’ ಎಂದು ರಾಹುಲ್ ಗಾಂಧಿ ಹೇಳಿದರು.

‘ನಾನು ಪ್ರಧಾನಿಯಾಗುವ ಮೊದಲು ಈ ದೇಶದಲ್ಲಿ ಏನೂ ಆಗಿಲ್ಲ ಎಂಬ ಮಾತನ್ನು ಅಟಲ್ ಎಂದೂ ಹೇಳಿಲ್ಲ. ಆದರೆ, ಮೋದಿ ಪ್ರಧಾನಿಯಾಗಿ ನಾಲ್ಕು ವರ್ಷ ಆಗಿದೆ. ಅವರು ಎಲ್ಲವೂ ತಮ್ಮಿಂದ ಆಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನನ್ನ ಕುಟುಂಬವನ್ನು ಹೀಗಳೆಯುತ್ತಾರೆ’ ಎಂದು ರಾಹುಲ್ ಕಿಡಿಕಾರಿದರು.

ಸೈಕಲ್ ಕೊಟ್ಟಿದ್ದು ಕಾಂಗ್ರೆಸ್!

ಕರ್ನಾಟಕ ಸರ್ಕಾರದ ಸಾಧನೆಗಳನ್ನು ವಿವರಿಸಿದ ರಾಹುಲ್. ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡಿದ್ದೇವೆ ಎಂದರು.

ರಾಹುಲ್ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದ ಬಿ.ಎಲ್. ಶಂಕರ್, ಸೈಕಲ್ ಎಂದು ಹೇಳದೆ ಲ್ಯಾಪ್ ಟಾಪ್ ಎಂದರು. ಆದರೆ, ಶಂಕರ್ ಕಡೆ ನೋಡಿದ ರಾಹುಲ್, ಸೈಕಲ್, ಸೈಕಲ್ ಎಂದು ಉಸಿರಿದರು!
ಅಗ ಶಂಕರ್, ಲ್ಯಾಪ್ ಟಾಪ್, ಸೈಕಲ್ ಎಂದು ಮತ್ತೊಮ್ಮೆ ಹೇಳಿದರು. (ಆದರೆ, ಉಚಿತ ಸೈಕಲ್ ವಿತರಣೆ ಯೋಜನೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಆರಂಭಿಸಿದ್ದು)

ದೋಕ್ಲಾಂನಲ್ಲಿ ರಸ್ತೆ, ಹೆಲಿಪ್ಯಾಡ್, ಸುರಂಗ ನಿರ್ಮಿಸುತ್ತಿರುವ ಚೀನಾದ ದುಸ್ಸಾಹಸದ ಬಗ್ಗೆ ದೇಶದ ಜನರಿಗೆ ಗೊತ್ತಿದೆ. ಆದರೆ, ಪ್ರಧಾನಿ ಮಾತನಾಡುತ್ತಿಲ್ಲ
–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT