ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಹಳಿ ಮಾರ್ಗಕ್ಕೆ ₹492.87 ಕೋಟಿ ಬಿಡುಗಡೆ

ನನೆಗುದಿಗೆ ಬಿದ್ದಿದ್ದ ಕಂಟೋನ್ಮೆಂಟ್-–ವೈಟ್‌ಫೀಲ್ಡ್ ನಡುವಿನ ರೈಲ್ವೆ ಯೋಜನೆ
Last Updated 21 ಮಾರ್ಚ್ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಂಟೋನ್ಮೆಂಟ್-ವೈಟ್‌ಫೀಲ್ಡ್ ನಡುವಿನ ನಾಲ್ಕು ಹಳಿಗಳ ರೈಲ್ವೆ ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆ ಬುಧವಾರ ₹492.87 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ನಗರದ ಉಪನಗರ ರೈಲು ಯೋಜನೆಗೆ ಮತ್ತೆರಡು ಹೆಚ್ಚುವರಿ ಮಾರ್ಗಗಳು ಸೇರ್ಪಡೆಯಾಗಲಿವೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ವೈಟ್‌ಫೀಲ್ಡ್‌ ವಿಭಾಗದವರೆಗೆ ನಾಲ್ಕು ಹಳಿಗಳ ಮಾರ್ಗ ನಿರ್ಮಿಸುವ ಪ್ರಸ್ತಾ‍ಪಕ್ಕೆ 1997-98ರಲ್ಲಿ ಮಂಜೂರಾತಿ ಸಿಕ್ಕಿತ್ತು. ರೈಲ್ವೆ ಮಾರ್ಗ ನಿರ್ಮಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ವೈಟ್‌ಫೀಲ್ಡ್‌ ನಡುವೆ ಅಗತ್ಯ ಭೂಮಿ ಲಭ್ಯವಿರದ ಮತ್ತು ಯೋಜನಾ ವೆಚ್ಚ ಹೆಚ್ಚಲಿದೆ ಎನ್ನುವ ಕಾರಣಕ್ಕೆ ಯೋಜನೆ ನನೆಗುದಿಗೆ ಬಿದ್ದಿತ್ತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ವೈಟ್‌ಫೀಲ್ಡ್‌ ನಡುವಿನ ನಾಲ್ಕು ಹಳಿ ಮಾರ್ಗ ನಿರ್ಮಾಣ ಕಾರ್ಯಸಾಧುವಲ್ಲ ಎನ್ನುವ ಕಾರಣಕ್ಕೆ ಯೋಜನೆ ಕೈಬಿಟ್ಟು, ಬೆಂಗಳೂರು ಮೆಟ್ರೊ ಮಾರ್ಗದ ವಿಸ್ತರಣೆ ಜತೆಗೆ ಕೆ.ಆರ್‌.ಪುರ ಮತ್ತು ವೈಟ್‌ಫೀಲ್ಡ್‌
ನಿಲ್ದಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ನಗರಾಭಿವೃದ್ಧಿ ಸಚಿವಾಲಯ ಇತ್ತೀಚೆಗೆ ಶಿಫಾರಸು ಮಾಡಿ ಪ್ರಸ್ತಾವ ಸಲ್ಲಿಸಿತ್ತು.

‘ಭೂಮಿಯ ಲಭ್ಯತೆ ನೋಡಿಕೊಂಡು ಕಂಟೋನ್ಮೆಂಟ್- ವೈಟ್‌ಫೀಲ್ಡ್‌ ವಿಭಾಗಕ್ಕೆ ನಾಲ್ಕು ಹಳಿ ಮಾರ್ಗದ ಯೋಜನೆ ಸೀಮಿತಗೊಳಿಸಿ, ಅಧಿಕಾರಿ
ಗಳು ಪ್ರಸ್ತಾಪ ಮಾರ್ಪಾಡು ಮಾಡಿದರು. ಈಗ ಅಸ್ತಿತ್ವದಲ್ಲಿರುವ ಎರಡು ಹಳಿಗಳ ಎರಡೂ ಬದಿಯಲ್ಲಿ ಒಂದೊಂದು ಹಳಿ ನಿರ್ಮಿಸಲಾಗುವುದು. ಯೋಜನೆ ತಕ್ಷಣವೇ ಕೈಗೆತ್ತಿಕೊಳ್ಳಲಾಗುವುದು. ಎರಡು ಅಥವಾ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದು ಪೂರ್ಣಗೊಂಡರೆ ವೈಟ್‌ಫೀಲ್ಡ್‌ ಪ್ರದೇಶದ ಐ.ಟಿ ವಲಯದ ಉದ್ಯೋಗಿಗಳಿಗೆ ಮತ್ತು ನಗರದ ಸ್ಥಳೀಯ ನಾಗರಿಕರಿಗೆ ವರವಾಗಲಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೈಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಆರಂಭಿಸುವಂತೆ ಪ್ರಯಾಣಿಕರು ಮತ್ತು ರೈಲ್ವೆ ಹೋರಾಟ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದರು. ಈ ಮಾರ್ಗದಲ್ಲಿ ಪ್ರತಿ ದಿನ ಪ್ರತಿ ದಿಕ್ಕಿನಿಂದ ಸುಮಾರು 30 ರೈಲು ಚಲಿಸುತ್ತಿವೆ. ಆದರೂ ದಟ್ಟಣೆ ಅವಧಿಯಲ್ಲಿ ಜನರು ತೊಂದರೆ ಅನುಭವಿಸುವುದು ನಿಂತಿಲ್ಲ. ಹಳೆ ಮದ್ರಾಸ್ ರಸ್ತೆ ಮತ್ತು ವೈಟ್‌ಫೀಲ್ಡ್‌ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದ
ರಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಾಗರಿಕರನ್ನು ನಲುಗುವಂತೆ ಮಾಡಿದೆ.

ಉಪ ನಗರ ರೈಲು ಸಂಪರ್ಕ ವಿಸ್ತರಣೆಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ₹12,000 ಕೋಟಿ ಯೋಜನೆಗೆ ಅನುಮೋದನೆ ನೀಡಿರುವುದು ಮತ್ತು ಈಗ ನಾಲ್ಕು ಹಳಿ ಮಾರ್ಗಕ್ಕೆ ಹಣ ಬಿಡುಗಡೆ ಮಾಡಿರುವುದು ನಗರದ ನಾಗರಿಕರ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT