ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸ್‌ರೇ ತೆಗೆಯಲು ₹200 ಲಂಚ’

ಸಾಮಾನ್ಯ ಸಭೆಯಲ್ಲಿ ಸ್ವತಃ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯಿಂದ ಆರೋಪ
Last Updated 22 ಮಾರ್ಚ್ 2018, 6:57 IST
ಅಕ್ಷರ ಗಾತ್ರ

ಜಮಖಂಡಿ: ‘ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆಯಲು ₹200 ಕೇಳುತ್ತಾರೆ’ ಎಂದು ಸ್ವತಃ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗವ್ವ ಕುರಣಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಜಿ.ಎಸ್‌. ಗಲಗಲಿ ಅವರು ಇಲಾಖೆಯ ಪ್ರಗತಿ ವರದಿ ಸಾದರ ಪಡಿಸಿದಾಗ ಈ ಆರೋಪ ಮಾಡಿದರು.

‘ತಾಯಿ ಕಾರ್ಡ್‌ ಸಿದ್ಧಪಡಿಸಿ ಕೊಡಲು ತಾಲ್ಲೂಕಿನ ಚಿಕ್ಕಲಕಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ವೊಬ್ಬರು ₹500 ಕೇಳುತ್ತಾರೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಸವಿತಾ ಕಲ್ಯಾಣಿ ಇದೇ ವೇಳೆ ದೂರಿದರು.

‘ನಗರದ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ನೇತ್ರತಜ್ಞೆ ಡಾ.ಸುನಿತಾ ಅವರು ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಧರೆಪ್ಪ ಗುಗ್ಗರಿ ಆರೋಪಿಸಿದರು.

ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಬಣ್ಣದ ಮಾತನಾಡಿ, ‘ಡಾ.ಸುನಿತಾ ಅವರು ಆಸ್ಪತ್ರೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಬಗ್ಗೆ ದೂರುಗಳು ಬಂದಿವೆ. ದೂರುಗಳ ಕುರಿತು ಶಿಸ್ತುಕ್ರಮ ಜರುಗಿಸಲು ಮೇಲಧಿಕಾರಿಗೆ ವರದಿ ಸಲ್ಲಿಸುತ್ತೇನೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ತಿಂಗಳಿನಲ್ಲಿ ಒಂದಾದರೂ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಬೇಕು. ಅದರಿಂದ ಬಡವರಿಗೆ ಅನುಕೂಲ ಆಗುತ್ತದೆ. ದೂರದ ಊರುಗಳಿಗೆ ಹೋಗಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ದುಬಾರಿ ಎನಿಸುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಾನಂದ ಪಾಟೀಲ ಒತ್ತಾಯಿಸಿದರು.

ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಬಣ್ಣದ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಒಬ್ಬರೇ ಲ್ಯಾಪ್ರೊಸ್ಕೋಪಿ ತಜ್ಞರು ಇದ್ದಾರೆ. ಖಾಸಗಿ ವೈದ್ಯರು ಕೂಡ ಸರ್ಕಾರಿ ಆಸ್ಪತ್ರೆಗೆ ಬಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಒಪ್ಪುತ್ತಿಲ್ಲ. ವೈದ್ಯರಿಗೆ ಆ ಕುರಿತು ತರಬೇತಿ ಕೊಡಿಸಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಪ್ರಥಮ ಮಾನ್ಯತೆ ನೀಡಲು ಅನವಶ್ಯಕ ವಿಳಂಬ ಮಾಡಲಾಗುತ್ತಿದೆ. ಮೂಲಸೌಕರ್ಯ ಇರುವ ಶಾಲೆಗಳಿಗೆ ಮಾನ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪುಂಡಲೀಕ ಪಾಲಬಾವಿ ಒತ್ತಾಯಿಸಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ. ಬಸರಿಗಿಡದ ವೇದಿಕೆಯಲ್ಲಿದ್ದರು.
**

ಕಳಪೆ ಕಾಮಗಾರಿ: ಸದಸ್ಯರ ಆಕ್ರೋಶ
‘ತಾಲ್ಲೂಕಿನ ಸಾವಳಗಿ ಗ್ರಾಮದಿಂದ ಅಥಣಿ ತಾಲ್ಲೂಕಿನ ಹಾಲಳ್ಳಿ ಗ್ರಾಮದ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಬಹಳ ಕಳಪೆ ಗುಣಮಟ್ಟದ್ದಾಗಿದೆ. ಇದನ್ನು ಪ್ರಶ್ನಿಸಿದರೆ ಸಂಬಂಧಪಟ್ಟ ಎಂಜಿನಿಯರ್‌ ಸಮರ್ಪಕವಾಗಿ ಉತ್ತರಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಸದಸ್ಯ ಬಸವರಾಜ ಮಾಳಿ ಆಕ್ರೋಶ ಹೊರಹಾಕಿದರು.

‘ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿ ಐದು ವರ್ಷ ಗತಿಸಿವೆ. ಆದರೆ, ಇಲ್ಲಿಯವರೆಗೆ ಅಲ್ಲಿ ಶೌಚಾಲಯದ ಸೆಪ್ಟಿಕ್‌ ಟ್ಯಾಂಕ್‌ ನಿರ್ಮಿಸಿಲ್ಲ’ ಎಂದು ಸದಸ್ಯ ಭೀಮಪ್ಪ ಹಾದಿಮನಿ ದೂರಿದರು.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯರು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT