ಮೊದಲ ಬಾರಿಗೆ ಶಾಸಕನಾದಾಗ ನಾನೇ ಅತ್ಯಂತ ಕಿರಿಯ ಶಾಸಕ ಎಂದ ಉಮೇಶ್ ಕತ್ತಿ

26ನೇ ವಯಸ್ಸಿನಲ್ಲೇ ಶಾಸಕನಾದೆ...

ಮೊದಲ ಬಾರಿಗೆ ಶಾಸಕನಾದ ನೆನಪನ್ನು ಹುಕ್ಕೇರಿ ಕ್ಷೇತ್ರದ ಹಾಲಿ ಶಾಸಕ ಉಮೇಶ್‌ ಕತ್ತಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಉಮೇಶ್‌ ಕತ್ತಿ

ಬೆಳಗಾವಿ: ‘ನನಗೇನು ಹೆಚ್ಚಿನ ಜವಾಬ್ದಾರಿ ಇರಲಿಲ್ಲ. 21 ವರ್ಷದವನಿದ್ದಾಗ ಮದುವೆಯಾದೆ. ಜೀವನವನ್ನು ಎಂಜಾಯ್‌ ಮಾಡುತ್ತಿದ್ದೆ. ಶಾಸಕ
ನಾಗುತ್ತೇನೆ ಎಂದು ಕನಸನ್ನೂ ಕಂಡಿರಲಿಲ್ಲ. ಆಸೆಯೂ ಇರಲಿಲ್ಲ. ಅನಿವಾರ್ಯವಾಗಿ ಈ ಕ್ಷೇತ್ರಕ್ಕೆ ಬಂದೆ. 26ನೇ ವಯಸ್ಸಿನಲ್ಲೇ ವಿಧಾನಸಭೆ ಪ್ರವೇಶಿಸಿದೆ’.

ಮೊದಲ ಬಾರಿಗೆ ಶಾಸಕನಾದ ನೆನಪನ್ನು ಹುಕ್ಕೇರಿ ಕ್ಷೇತ್ರದ ಹಾಲಿ ಶಾಸಕ ಉಮೇಶ್‌ ಕತ್ತಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.

‘ಆಗ ನಾನೇ ಅತ್ಯಂತ ಕಿರಿಯ ಶಾಸಕನಾಗಿದ್ದೆ. ಜನಪ್ರತಿನಿಧಿಗೆ ಏನೇನು ಅಧಿಕಾರ ಇರುತ್ತದೆ ಎನ್ನುವುದೂ ಗೊತ್ತಿರಲಿಲ್ಲ. ತಂದೆಯ ಅಕಾಲಿಕ ನಿಧನದಿಂದಾಗಿ ಚುನವಣಾ ಕಣಕ್ಕೆ ಇಳಿಯಬೇಕಾಯಿತು. ಜನಮಾನಸದಲ್ಲಿ ಅವರು ಒಳ್ಳೆಯ ಹೆಸರು ಮಾಡಿದ್ದರು. ಅದರ ನೆರವಿನಿಂದ ಗೆಲುವು ಸಿಕ್ಕಿತು’ ಎಂದು ನೆನೆದರು.

‘1985ರಲ್ಲಿ ಮೊದಲ ಬಾರಿಗೆ ಶಾಸಕನಾದೆ. ಆಗ ಜನತಾ ಪಕ್ಷದಿಂದ ಗೆದ್ದಿದ್ದೆ. ‘ನೇಗಿಲು ಹೊತ್ತ ರೈತ’ ಆ ಪಕ್ಷದ ಚಿಹ್ನೆಯಾಗಿತ್ತು. ಆಗಿನದ್ದು ಒಳ್ಳೆಯ ಅನುಭವ. ಕಾರು, ಜೀಪಿನಲ್ಲಿ ಬೆಂಬಲಿಗರು ಹಾಗೂ ಕಾರ್ಯ
ಕರ್ತರೊಂದಿಗೆ ಹಳ್ಳಿಗಳಿಗೆ ಹೋಗಿ ಮತ ಕೇಳುತ್ತಿದ್ದೆವು. ಊರಿನ ದೇವಸ್ಥಾನದಲ್ಲಿ ಅಥವಾ ಶಾಲೆಗಳ ಬಳಿ ಮುಖಂಡರೊಂದಿಗೆ ಚರ್ಚಿಸುತ್ತಿದ್ದೆವು. ಒಂದು ಊರಿಗೆ ಒಮ್ಮೆ ಹೋದರೆ ಸಾಕಾಗುತ್ತಿತ್ತು. ಪದೇ ಪದೇ ಹೋಗಬೇಕಾದ ಅಗತ್ಯ ಇರುತ್ತಿರಲಿಲ್ಲ’ ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ಅಭಿವೃದ್ಧಿ ಕಾರ್ಯ ಕೇಳುತ್ತಿದ್ದರು: ‘ಆಗ ಜನರು ಹಣ ನಿರೀಕ್ಷೆ ಮಾಡುತ್ತಿರಲಿಲ್ಲ. ನನಗೂ ಆ ವಿಚಾರಗಳು ಇರುತ್ತಿರಲಿಲ್ಲ. ಶಾಲೆಗೆ ಕೊಠಡಿ ಹಾಗೂ ಕಾಂಪೌಂಡ್‌, ಬಸ್‌ ನಿಲ್ದಾಣ ನಿರ್ಮಿಸಿಕೊಡಿ ಎಂದು ಕೇಳುತ್ತಿದ್ದರು. ಆಗೆಲ್ಲಾ ರಸ್ತೆಗಳು ಇಷ್ಟೊಂದು ಸುಧಾರಿಸಿರಲಿಲ್ಲ. ಹೀಗಾಗಿ, ರಸ್ತೆ ಅಭಿವೃದ್ಧಿಪಡಿಸಿಕೊಡಿ ಎಂದು ಕೋರುತ್ತಿದ್ದರು. ಪ್ರೀತಿಯಿಂದ ಚಹಾ, ಮಂಡಕ್ಕಿ ಕೊಡಿಸುತ್ತಿದ್ದೆವು’ಎಂದು ತಿಳಿಸಿದರು.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅಡ್ಡ ಮಳೆ ಆಗುತ್ತಿತ್ತು. ಮಳೆಯ ನಡುವೆಯೂ ಪ್ರಚಾರ ಮಾಡಿದ್ದೆ. ಮಾಜಿ ಶಾಸಕ ಹೊನ್ನಪ್ಪಣ್ಣ ನೂಲಿ ಸಾಕಷ್ಟು ಮಾರ್ಗದರ್ಶನ ನೀಡುತ್ತಿದ್ದರು’ ಎಂದರು.

‘ಅಂದು ಇದ್ದ ವ್ಯವಸ್ಥೆ ಸಂತೋಷ ನೀಡುತ್ತಿತ್ತು. ಅಂದಿನ ಹಾಗೂ ಇಂದಿನ ಚುನಾವಣೆಗೆ ಬಹಳಷ್ಟು ವ್ಯತ್ಯಾಸಗಳಿವೆ. ಮತಪತ್ರ ಬಳಸಲಾಗುತ್ತಿತ್ತು. ಹಿರಿಯರೇ ಅವರವರ ಗ್ರಾಮದ ಜನರನ್ನು ಮತಗಟ್ಟೆಗಳಿಗೆ ಕರೆತರುವ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಶೇ 70ಕ್ಕಿಂತಲೂ ಹೆಚ್ಚಿನ ಮತದಾನ ಆಗುತ್ತಿತ್ತು. ನಮ್ಮಿಂದಲೇ ಸರ್ಕಾರ ಎನ್ನುವ ಭಾವನೆ ಜನರಲ್ಲಿತ್ತು ಒಳ್ಳೆಯವರು, ಸ್ಪಂದಿಸುವವರು ಶಾಸಕರಾಗಬೇಕು ಎಂದು ಬಯಸುತ್ತಿದ್ದರು. ಅಭಿವೃದ್ಧಿ ಕೆಲಸ ಮಾಡದಿರುವವರನ್ನು ಪ್ರಶ್ನೆ ಮಾಡುವ ಧೈರ್ಯವೂ ಇತ್ತು’ ಎಂದರು.

ವಿಧಾನಸೌಧವನ್ನೇ ನೋಡಿರಲಿಲ್ಲ!: ‘ಶಾಸಕನಾಗುವುದಕ್ಕೆ ಮುಂಚೆ ವಿಧಾನಸೌಧವನ್ನಾಗಲೀ, ಅಧಿವೇಶನವನ್ನಾಗಲೀ ನೋಡಿರಲಿಲ್ಲ! ತಹಶೀಲ್ದಾರ್‌, ಸಿಪಿಐ, ಪಿಎಸ್‌ಐ ಹುದ್ದೆಗಳಲ್ಲಿ ಯಾವುದು ಹೆಚ್ಚು ಎನ್ನುವುದೂ ಗೊತ್ತಿರಲಿಲ್ಲ. ದಾಡಿ, ಮೀಸೆ ಜೋರಾಗಿ ಬಿಟ್ಟುಕೊಂಡು ವಿಧಾನಸೌಧಕ್ಕೆ ಹೋಗಿದ್ದೆ. ಹುಡುಗನಂತೆ ಇದ್ದ ನನ್ನನ್ನು ಅಲ್ಲಿನ ಸಿಬ್ಬಂದಿ ತಡೆದಿದ್ದರು. ಶಾಸಕನೆಂದು ಖಚಿತವಾದ ನಂತರ ಪ್ರವೇಶ ನೀಡಿದ್ದರು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತಿದ್ದೆ. ಜನರ ಬೇಡಿಕೆಯಂತೆ ಹಲವು ಶಾಲೆಗಳಿಗೆ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದೆ. ಶಿಕ್ಷಕರ ನೇಮಕ ಮಾಡಿಸಿದ್ದೆ. ಅಷ್ಟೇನೂ ಬಜೆಟ್‌ ಇರುತ್ತಿರಲಿಲ್ಲ. ಇದರಿಂದಾಗಿ ಹೆಚ್ಚಿನ ಕೆಲಸ ಮಾಡಿಸಲು ಆಗುತ್ತಿರಲಿಲ್ಲ. ಇದು ಜನರಿಗೂ ಗೊತ್ತಿತ್ತು. ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಜನರು ಶಾಸಕ ಸ್ಥಾನಕ್ಕೆ ಗೌರವ ಕೊಡುತ್ತಿದ್ದರು. ನಾನೂ ಜನರನ್ನು ಆತ್ಮೀಯತೆಯಿಂದ ಕಾಣುತ್ತಿದ್ದೆ. ಹಿರಿಯರಾದ ಚಂದ್ರಶೇಖರ ಮಾಮನಿ, ವಿ.ಎಸ್‌. ಕೌಜಲಗಿ, ಆರ್‌.ಎಸ್‌. ಪಾಟೀಲ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಮುಂದೆ ಸಿಗರೇಟು ಸೇದಲು, ತಂಬಾಕು ಹಾಕಲು ಧೈರ್ಯ ಬರುತ್ತಿರಲಿಲ್ಲ. ಅಷ್ಟು ಗೌರವ ಕೊಡುತ್ತಿದ್ದೆ’ ಎಂದು ಸ್ಮರಿಸಿದರು.
**
ರಾಜಕೀಯದ ಹಾದಿ...
1985ರಲ್ಲಿ ಹಿರಿಯ ಸಹಕಾರಿ ಧುರೀಣರಾಗಿದ್ದ ತಂದೆ ವಿಶ್ವನಾಥ ಮಲ್ಲಪ್ಪ ಕತ್ತಿ ಅವರ ಅಕಾಲಿಕ ನಿಧನದ ನಂತರ ತೆರವಾದ ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದಿಂದ ಚುನಾಯಿತರಾಗುವ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದವರು. ದಿ.ಜೆ.ಎಚ್. ಪಟೇಲ ಅವರ ಮಂತ್ರಿ ಮಂಡಲದಲ್ಲಿ ಸಕ್ಕರೆ ಸಚಿವರಾಗಿದ್ದರು.

2008ರಲ್ಲಿ 13ನೇ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹುಕ್ಕೇರಿ ಮತಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಐದನೇ ಬಾರಿ ಶಾಸಕರಾಗಿ ಪುನರಾಯ್ಕೆಯಾದರು. ಎರಡು ತಿಂಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿಸಿ ಭಾರತೀಯ ಜನತಾ ಪಕ್ಷ ಸೇರಿದರು. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ತೋಟಗಾರಿಕೆ ಸಚಿವರಾದರು. 2013ರ ಚುನಾವಣೆಯಲ್ಲಿ ಗೆದ್ದು 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 8ನೇ ಬಾರಿಯೂ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜನತಾ ಪಕ್ಷ, ಜೆಡಿಯು, ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ... ಹೀಗೆ ಹಲವು ಪಕ್ಷಗಳನ್ನು ನೋಡಿದವರು. ಸದ್ಯ ಬಿಜೆಪಿಯಲ್ಲಿದ್ದಾರೆ.

‘ಏಳು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. 10 ವರ್ಷ ಮಂತ್ರಿಯಾಗಿದ್ದೆ. ಈ ಬಾರಿಯೂ ಹುಕ್ಕೇರಿ ಕ್ಷೇತ್ರದಲ್ಲಿಯೇ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಇನ್ನೂ 10 ವರ್ಷ ಶಾಸಕನಾಗಿರುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
**
ಆಗಿನ ಶಾಸಕರಿಗಿದ್ದ ನೆಮ್ಮದಿ ಈಗಿನವರಿಗೆ ಇಲ್ಲ. ಜನ–ಜನಪ್ರತಿನಿಧಿಗಳ ಹೊಂದಾಣಿಕೆಯಲ್ಲಿ ಎಲ್ಲವೂ ನಡೆಯುತ್ತಿದೆ. ಆಗಿನದು ಸುವರ್ಣಯುಗ. ಈಗಿನದು ಕಲಿಯುಗ.
– ಉಮೇಶ್‌ ಕತ್ತಿ, ಶಾಸಕರು, ಹುಕ್ಕೇರಿ ಕ್ಷೇತ್ರ

Comments
ಈ ವಿಭಾಗದಿಂದ ಇನ್ನಷ್ಟು
ಬಿಜೆಪಿಯವರಿಗೆ ಅಭಿವೃದ್ಧಿ ಗೊತ್ತಿಲ್ಲ

ಬೆಳಗಾವಿ
ಬಿಜೆಪಿಯವರಿಗೆ ಅಭಿವೃದ್ಧಿ ಗೊತ್ತಿಲ್ಲ

26 Apr, 2018
‘ಭಾಗ್ಯ’ಗಳು ಕೈಹಿಡಿವ ವಿಶ್ವಾಸ

ಬೆಳಗಾವಿ
‘ಭಾಗ್ಯ’ಗಳು ಕೈಹಿಡಿವ ವಿಶ್ವಾಸ

26 Apr, 2018
ಶಿವಬೋಧರಂಗರ ಪಲ್ಲಕ್ಕಿ ಉತ್ಸವ

ಮೂಡಲಗಿ
ಶಿವಬೋಧರಂಗರ ಪಲ್ಲಕ್ಕಿ ಉತ್ಸವ

26 Apr, 2018
ಮತದಾರರಿಗೆ ಮಮತೆಯ ಕರೆಯೋಲೆ!

ಬೆಳಗಾವಿ
ಮತದಾರರಿಗೆ ಮಮತೆಯ ಕರೆಯೋಲೆ!

26 Apr, 2018

ಬೆಳಗಾವಿ
252 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಬೆಳಗಾವಿ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ 27 ಜನರ ನಾಮಪತ್ರಗಳು ಬುಧವಾರ ತಿರಸ್ಕೃತಗೊಂಡಿವೆ. 252...

26 Apr, 2018