ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಯುಕ್ತ ಗ್ರಾಮಕ್ಕೆ ತಡೋಳಾ ಶ್ರೀಗಳ ಪಣ

ಸದ್ದಿಲ್ಲದೇ ಸಾಗಿರುವ ಜಲ ಸಂರಕ್ಷಣೆ ಕಾರ್ಯ, ಗ್ರಾಮಗಳಲ್ಲಿ ಡಜಾಗೃತಿ ಅಭಿಯಾನ
Last Updated 22 ಮಾರ್ಚ್ 2018, 8:17 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣ ತಾಲ್ಲೂಕಿನ ತಡೋಳಾ ಹಾಗೂ ಭಾಲ್ಕಿ ತಾಲ್ಲೂಕಿನ ಡೊಣಗಾಪುರದಲ್ಲಿ ಜಲ ಸಂರಕ್ಷಣೆಯ ಕಾರ್ಯ ಸದ್ದಿಲ್ಲದೇ ಸಾಗಿದೆ. ತಡೋಳಾದ ರಾಜೇಶ್ವರ ಶಿವಾಚಾರ್ಯರು ಧರ್ಮ ಕಾರ್ಯದ ಜತೆಗೆ ಮಣ್ಣಲ್ಲಿ ಹೊನ್ನು ಬೆಳೆಯಲು ಬೇಕಿರುವ ಜೀವ ಜಲದ ಸಂರಕ್ಷಣೆಯಲ್ಲೂ ತೊಡಗಿದ್ದಾರೆ.

ಡೊಣಗಾಪುರ, ಏಳು ಸಾವಿರ ಜನಸಂಖ್ಯೆ ಇರುವ ಚಿಕ್ಕ ಊರು. ಬರಡು ಭೂಮಿಯಿಂದ ಸುತ್ತುವರಿದ ಈ ಗ್ರಾಮದ ಬಳಿ ಚಿಕ್ಕದೊಂದು ಹಳ್ಳ ಇದ್ದರೂ ಮಳೆಗಾಲದಲ್ಲಿ ಮಾತ್ರ ನೀರು ಕಾಣಿಸಿಕೊಳ್ಳುತ್ತಿತ್ತು. ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬರ ಇತ್ತು. ಬಾವಿ, ಕೊಳವೆಬಾವಿಗಳೂ ಬತ್ತಿ ಹೋಗಿದ್ದವು. ಸರ್ಕಾರ ಚೆಕ್‌ ಡ್ಯಾಂ ನಿರ್ಮಿಸಿದರೂ ಅದರಲ್ಲಿ ನೀರು ನಿಲ್ಲುತ್ತಿರಲಿಲ್ಲ.

ರೈತರು ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶ್ರೀಗಳು ಚೆಕ್‌ಡ್ಯಾಂಗಳ ಹೂಳು ತೆಗೆಸಿ ಅದರ ಆಳ ಹೆಚ್ಚಿಸಿದರು. ರೈತರ ನೆರವಿನಿಂದ ಹಳ್ಳವನ್ನು ವಿಸ್ತರಣೆ ಮಾಡಿದರು. ಗ್ರಾಮದ ಪರಿಸರದಲ್ಲಿ ಅಲ್ಲಲ್ಲಿ ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಿ ರೈತರಿಗೂ ತಿಳಿವಳಿಕೆ ನೀಡಿದರು. ಕಳೆದ ವರ್ಷ ಚೆನ್ನಾಗಿ ಮಳೆ ಸುರಿದಿದೆ. ಈಗ ಚೆಕ್‌ಡ್ಯಾಂಗಳಲ್ಲಿ ನೀರಿದೆ. ಕೊಳವೆಬಾವಿಗಳಲ್ಲೂ ನೀರಿನ ಕೊರತೆಯಾಗಿಲ್ಲ. ವರ್ಷದಲ್ಲಿ ಒಂದು ಬೆಳೆ ಬೆಳೆಯುತ್ತಿದ್ದ ರೈತರು ಇದೀಗ ಎರಡು ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ.

‘ಪ್ರಸ್ತುತ ದೇಶಕ್ಕೆ ಜಲ ರಕ್ಷಣೆ ಬೇಕಿದೆ. ಸರ್ಕಾರದಿಂದ ಚೆಕ್‌ಡ್ಯಾಂ ನಿರ್ಮಿಸಿದ ಮೇಲೆ ನೀರಿನ ಸಮಸ್ಯೆ ನಿವಾರಣೆ ಆಯಿತು ಎಂದು ಭಾವಿಸಬಾರದು. ಹಳ್ಳಕೊಳ್ಳದ ತಟದಲ್ಲಿರುವ ರೈತರು ಹಳ್ಳದಲ್ಲಿನ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು. ಹೊಲಗಳಲ್ಲಿ ಬದು, ಇಂಗುಗುಂಡಿಗಳನ್ನು ನಿರ್ಮಾಣ ಮಾಡಬೇಕು. ಹೀಗೆ ಮಾಡಿದರೆ ಕೊಳವೆಬಾವಿಗಳಲ್ಲಿ ವರ್ಷಪೂರ್ತಿ ನೀರು ಇರುತ್ತದೆ’ ಎಂದು ತಡೋಳಾ ಶ್ರೀಗಳು ಹೇಳುತ್ತಾರೆ.

‘2020ರ ವರೆಗೆ ಜಲಯುಕ್ತ ಗ್ರಾಮಗಳನ್ನು ನಿರ್ಮಾಣ ಮಾಡಬೇಕು. ಜಲ ರಕ್ಷಣೆ ಮಾಡದಿದ್ದರೆ 2025–2030ರ ವೇಳೆಗೆ ಹನಿ ನೀರಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಶ್ವ ಸಂಸ್ಥೆ 2000ರಲ್ಲೇ ಹೇಳಿದೆ. ಅಕಾಲಿಕವಾಗಿ ಬೀಳುವ ಮಳೆಯಿಂದಲೇ ನೀರು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಹಾಗೂ ಭೂಮಿಯಲ್ಲಿ ಇಂಗಿಸಬೇಕು. ನೀರಿಗಾಗಿ ಅಲೆಯುವುದನ್ನು ತಪ್ಪಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.

‘ಒಂದು ಘನ ಅಡಿಯಲ್ಲಿ 27 ಲೀಟರ್‌ ನೀರು ಸಂಗ್ರಹವಾಗುತ್ತದೆ. ಒಂದು ಲೀಟರ್‌ ನೀರು 540 ರಿಂದ 600 ಗ್ರಾಂ ಭಾರ ಇರುತ್ತದೆ. ನೀರು ಹೆಚ್ಚು ಸಂಗ್ರಹಿಸಿದಷ್ಟು ಭಾರದಿಂದ ಭೂಮಿಯೊಳಗೆ ಇಂಗುತ್ತದೆ. ಪದರುಗಲ್ಲಿನ ಮೂಲಕ ಒಳ ಹರಿವು ಪಡೆಯುತ್ತದೆ. ಕೃಷಿ ಇಲಾಖೆಯ ಮೂಲಕ 7 ರಿಂದ 8 ಅಡಿ ಆಳ ಕೃಷಿ ಹೊಂಡ ನಿರ್ಮಿಸಲಾಗುತ್ತಿದೆ. 20 ಅಡಿ ಆಳದ ವರೆಗೂ ಹೊಂಡ ನಿರ್ಮಿಸಲು ಅವಕಾಶ ಕೊಡಬೇಕು. ಪಕ್ಕದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಇದರಿಂದ ನೀರು ಸಹಜವಾಗಿ ಶುದ್ಧೀಕರಣ ಆಗುತ್ತದೆ. ಭೂಮಿಯೊಳಗೂ ಇಂಗುತ್ತದೆ’ ಎಂದು ವಿವರಿಸುತ್ತಾರೆ.

‘ಎಲ್ಲ ಜೀವಗಳಿಗೂ ನೀರು ಬೇಕು. ಅದಕ್ಕಾಗಿಯೇ ಅದು ಜೀವ ಜಲ. ಆರ್ಥಿಕ ಸಬಲತೆ ಹಾಗೂ ಸ್ವಾವಲಂಬನೆಗೂ ದಾರಿ ಮಾಡಿಕೊಡುತ್ತದೆ. ಜಲ ಸಂರಕ್ಷಣೆ ಮಾಡಿದರೆ ಮಳೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಇರುವುದಿಲ್ಲ. ಪ್ರಾಯೋಗಿಕವಾಗಿ ಮಾತನಾಡಿದರೆ ಕೃಷಿಕರು ಅನುಭವ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ತಡೋಳಾದಲ್ಲಿ ಮೊದಲ ಪ್ರಯೋಗ ಮಾಡಿದ್ದೇವೆ. ಅದಕ್ಕೆ ಯಶ ದೊರೆತಿದೆ’ ಎನ್ನುತ್ತಾರೆ.

‘ತಡೋಳಾದಲ್ಲಿ ಆರು ಚೆಕ್‌ಡ್ಯಾಂಗಳಿವೆ. ಅವುಗಳಲ್ಲಿನ ಹೂಳು ತೆಗೆದು ಜೀವ ತುಂಬಿದ್ದೇವೆ. ಜಮೀನನ್ನು ಸಮತಟ್ಟುಗೊಳಿಸಿ ಬದುಗಳನ್ನು ನಿರ್ಮಿಸಿದ್ದೇವೆ. ಒಂದು ಎಕರೆಯಲ್ಲಿ ಒಂದು ಲಕ್ಷ ಲೀಟರ್‌ ನೀರು ಸಂಗ್ರಹಿಸಿದ್ದೇವು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಹಜವಾಗಿಯೇ ಕೊಳವೆಬಾವಿಗಳಿಂದ ನೀರು ಹೊರಗೆ ಬರುತ್ತಿದೆ. 40 ಕೊಳವೆಬಾವಿಗಳಲ್ಲಿ ಈಗಲೂ ಸಾಕಷ್ಟು ನೀರು ಇದೆ. ಬರ ಬಂದರೂ ಕಷ್ಟ ಎದುರಾಗದು’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

‘ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ನನಗೆ ಎಂಟು ಭಾಷೆಗಳು ಬರುತ್ತವೆ. ಭಕ್ತರ ಮನೆಗೆ ತೆರಳಿದರೆ ಕನಿಷ್ಠ ₹ 2,000 ಕಾಣಿಕೆ ದೊರೆಯುತ್ತದೆ. ಇದರಲ್ಲೇ ತೊಡಗಿಸಿಕೊಂಡರೆ ನನ್ನ ಪಾಂಡಿತ್ಯವನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡಿಕೊಂಡಂತೆ ಆಗಲಿದೆ. ಡೊಣಗಾಪುರದಲ್ಲಿ 8 ಕಿ.ಮೀ ಹಳ್ಳ ಹರಿದಿದೆ. ಜಲ ಬ್ಯಾಂಕ್‌ ನಿರ್ಮಿಸಿದರೆ ಅದಕ್ಕೆ ಪ್ರತಿಯಾಗಿ ನಿರೀಕ್ಷೆಗೂ ಮೀರಿ ಆದಾಯ ಪಡೆಯಬಹುದು’ ಎಂದು ವಿವರಿಸುತ್ತಾರೆ.

ಚೆಕ್‌ಡ್ಯಾಂ ಹಾಗೂ ಕೃಷಿ ಹೊಂಡ ನಿರ್ಮಿಸಿದ ನಂತರ ಹೊಲಗಳಲ್ಲಿ ದಾಳಿಂಬೆ ಬೆಳೆಸಿದೆ. ಇಂದು ಯುರೋಪ ರಾಷ್ಟ್ರಗಳಿಗೆ ರಫ್ತು ಆಗುತ್ತಿವೆ. ಸುಪರ್‌–18 ಎನ್ನುವ ಬ್ರಾಂಡ್‌ ಪರಿಚಯಿಸಿ ಯುರೋಪ ಮಾರುಕಟ್ಟೆಯಲ್ಲಿ ದೇಶದ ದಾಳಿಂಬೆ ಗಮನ ಸೆಳೆಯುವಂತೆ ಮಾಡಿದ್ದೇನೆ’ ಎಂದು ಜಲರಕ್ಷಣೆಯ ಹಿಂದಿರುವ ಆರ್ಥಿಕ ಸ್ವಾವಲಂಬನೆಯ ಗುಟ್ಟು ಬಯಲು ಮಾಡಿದರು.

‘ಜಲ ಸಂಗ್ರಹಕ್ಕೆ ಸಂಘ ಸಂಸ್ಥೆಗಳು ಸಹಕಾರ ಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ಕಾರ್ಯವನ್ನು ಕೈಗೊಳ್ಳಬಹುದು.
ಸಶಕ್ತ ಕೃಷಿ, ಪಶು ಸಂಪತ್ತು ವೃದ್ಧಿಯಲ್ಲಿ ಜೀವ ಜಲ ಮಹತ್ವದ ಪಾತ್ರ ವಹಿಸುತ್ತದೆ. ಆಹಾರ ಭದ್ರತೆಗಿಂತಲೂ ದೇಶದ ಜನತೆಗೆ ಆರೋಗ್ಯ ಭದ್ರವಾಗಿರುವ ಆಹಾರ ಬೇಕು. ಇದೆಲ್ಲಕ್ಕೂ ಜಲವೇ ಮೂಲ ಎನ್ನುವುದನ್ನು ಅರ್ಥಮಾಡಿಕೊಂಡರೆ ಗಾಂಧೀಜಿಯವರ ಗ್ರಾಮ ಭಾರತದ ಕನಸು ನನಸಾಗಲಿದೆ’ ಎಂದು ಹೇಳುತ್ತಾರೆ.

‘ಜಲ ಜಾಗೃತಿಗಾಗಿಯೇ ವಿಶ್ವಭಾರತಿ ಟ್ರಸ್ಟ್‌ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಟ್ರಸ್ಟ್‌ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗುವುದು. ಈ ಕೆಲಸದಲ್ಲಿ ರೈತರು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲಾಗುವುದು’ ಎನ್ನುತ್ತಾರೆ ತಡೋಳಾ ಶ್ರೀಗಳು.

ತಡೋಳಾದ ರಾಜೇಶ್ವರ ಶಿವಾಚಾರ್ಯರ ಮೊಬೈಲ್‌ ಸಂಖ್ಯೆ 94482 22639, 81058 76919
ಇ–ಮೇಲ್‌: ವಿಶ್ವ ಶಾಂತಿ ಟ್ರಸ್ಟ್ vishwashanti298@gmail.com.
**
ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕಿದೆ. ಎಲ್ಲರೂ ಜಲ ಸಂರಕ್ಷಣೆ ಮಾಡಬೇಕು.
– ರಾಜೇಶ್ವರ ಶಿವಾಚಾರ್ಯರು, ತಡೋಳಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT