ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿಗೆ ಉಚಿತ ವೈಫೈ ಸೌಲಭ್ಯ: ಖಂಡ್ರೆ

ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮ, ರುಚಿಕರ ಉಪಾಹಾರ
Last Updated 22 ಮಾರ್ಚ್ 2018, 8:28 IST
ಅಕ್ಷರ ಗಾತ್ರ

ಭಾಲ್ಕಿ: ವಿದ್ಯಾರ್ಥಿ, ಯುವಜನರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಕೈಗೊಳ್ಳಲು ಸಹಕರಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ನುಡಿದರು.

ಪಟ್ಟಣದಲ್ಲಿ ಬುಧವಾರ ಜಿಲ್ಲಾಡಳಿತ, ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಮಲತ್ಯಾಜ್ಯ ನಿರ್ವಹಣಾ ಘಟಕ ಅಡಿಗಲ್ಲು ಸಮಾರಂಭ, ಉಚಿತ ವೈ-ಫೈ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ವಿಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನದಮಟ್ಟ, ಕೌಶಲ ಹೆಚ್ಚಿಸಲು ಆಧುನಿಕ ಸೌಲಭ್ಯ ಒದಗಿಸುವುದು ಅತ್ಯಗತ್ಯ. ಕೇವಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದರೆ ಸಾಲದು ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವುದು ಅಗತ್ಯ’ ಎಂದು ಹೇಳಿದರು.

‘ಪಟ್ಟಣದ ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ರೈಲ್ವೆ ನಿಲ್ದಾಣ ಸೇರಿದಂತೆ 13 ಕಡೆಗಳಲ್ಲಿ ಹಾಟ್‌ಸ್ಪಾಟ್ ಕೇಂದ್ರಗಳನ್ನು ತೆರೆಯಲಾಗುವುದು. ಏಕಕಾಲಕ್ಕೆ 2000 ವಿದ್ಯಾರ್ಥಿಗಳು 10 ಎಂಬಿಪಿಎಸ್ ಸ್ಪೀಡ್‌ನ ಇಂಟರ್‌ನೆಟ್‌ ಸೌಲಭ್ಯ ಪಡೆಯಬಹುದು. ಇದಕ್ಕೆ ₹ 1.25 ಕೋಟಿ ಖರ್ಚಾಗಿದೆ. 1 ವರ್ಷದವರೆಗೆ ಉಚಿತ ವೈ-ಫೈ ಸೇವೆ ನೀಡಲಾಗುವುದು’ ಎಂದರು.

‘ರಾಜ್ಯ ಸರ್ಕಾರದ ಪ್ರಮುಖ ಉದ್ದೇಶ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವುದಾಗಿದ್ದು, ಬಡವರಿಗೆ ಅತಿ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ವಿತರಿಸಲಾಗುತ್ತಿದೆ. ಪ್ರತಿನಿತ್ಯ ನಾನಾ ಕೆಲಸ ನಿಮಿತ್ತ ನಗರಕ್ಕೆ ಬರುವ ಕೂಲಿ ಕಾರ್ಮಿಕರು, ಬಡವರು ಕಡಿಮೆ ದರದಲ್ಲಿ ಸ್ವಾಭಿಮಾನದಿಂದ ಹಸಿವು ನೀಗಿಸಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ’ ಎಂದರು.

‘1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 173 ತಾಲ್ಲೂಕುಗಳಲ್ಲಿ ಕ್ಯಾಂಟೀನ್ ಆರಂಭಿಸಿಲಾಗಿದೆ. ಚುನಾವಣೆಗೂ ಮುನ್ನವೇ ಔರಾದ್, ಹುಮನಾಬಾದ್, ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಕ್ಯಾಂಟೀನ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

‘₹ 4 ಕೋಟಿ ವೆಚ್ಚದಲ್ಲಿ ಆಧುನಿಕ ಪದ್ಧತಿಯ ಮಲತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ. ಸಚಿವನಾದ ಮೇಲೆ ಪುರಸಭೆಗೆ ₹ 105 ಕೋಟಿ ಅನುದಾನ ನೀಡಿದ್ದೇನೆ. ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ₹ 140 ಕೋಟಿ ಒದಗಿಸಲಾಗಿದೆ. ಕಾಂಗ್ರೆಸ್‌ನಿಂದ ಮಾತ್ರ ಅಚ್ಛೇ ದಿನ್ ಬರಲು ಸಾಧ್ಯ. ಭಾಲ್ಕಿ ಪಟ್ಟಣದಲ್ಲಿ ಎಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಮುಂಬರುವ ದಿನಗಳಲ್ಲಿ ಹಳ್ಳಿ ಜನರು ಇಲ್ಲಿಯೇ ವಾಸ ಮಾಡಲು ಬಯಸುತ್ತಾರೆ. ಮುಂದಿನ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಡಿಡಿ ಸೊಸೈಟಿಯ ಸಂಧ್ಯಾ ಹರಿಜನ ಅವರು ಮಲತ್ಯಾಜ್ಯ ನಿರ್ವಹಣ ಘಟದ ಕಾರ್ಯ ವಿಧಾನ ಕುರಿತು ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮಂಗಳವಾರ ನಿಧನರಾದ ಎಪಿಎಂಸಿ ಅಧ್ಯಕ್ಷ ಗೋವಿಂದರಾವ್‌ ಪಾಟೀಲ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನಾಚರಣೆ ಮಾಡಲಾಯಿತು.

ಪುರಸಭೆ ಅಧ್ಯಕ್ಷ ವಿಶಾಲ ಪೂರಿ, ಉಪಾಧ್ಯಕ್ಷೆ ಅನಿತಾ ಪಂಡರಿ, ಪ್ರಮುಖರಾದ ಮಡಿವಾಳಪ್ಪ ಮಂಗಲಗಿ, ಹಣಮಂತರಾವ್ ಚವ್ಹಾಣ, ವಿಶ್ವನಾಥ ಮೋರೆ, ವಿಲಾಸ ಮೋರೆ, ಪ್ರಕಾಶ ಭಾವಿಕಟ್ಟಿ, ದತ್ತು ಮೂಲಗೆ, ಶಶಿಧರ ಕೋಸಂಬೆ, ಮಹಾದೇವ ಸ್ವಾಮಿ, ಮಾಣಿಕಪ್ಪ ರೇಷ್ಮೆ, ಬುದ್ಧಾನಂದ, ಬಸವರಾಜ್ ಜಾಬಶೆಟ್ಟಿ, ಜಮೀಲ್ ಅಹ್ಮದ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಇದ್ದರು. ಸ್ವಾಮಿದಾಸ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT