ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಮಾಪನ ಕೇಂದ್ರಕ್ಕೆ ಚಾಲನೆ

Last Updated 22 ಮಾರ್ಚ್ 2018, 8:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಗರೀಕರಣ, ಕೈಗಾರೀಕರಣ, ವಾಹನಗಳ ದಟ್ಟಣೆ, ಆಧುನೀಕರಣದ ಭರಾಟೆಯಲ್ಲಿ ಗಾಳಿ ಅಶುದ್ಧಗೊಳ್ಳುತ್ತಿದೆ. ಹೆಚ್ಚಾಗುತ್ತಿರುವ ವಾಯುಮಾಲಿನ್ಯದ ಮಟ್ಟವನ್ನು ನಿಖರವಾಗಿ ತಿಳಿಯಲು ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ನಿರಂತರ ಪರಿವೇಷ್ಟಕ ವಾಯು ಮಾಪನ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ‘ನಿರಂತರ ಪರಿವೇಷ್ಟಕ ವಾಯು ಮಾಪನ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರೋಗ್ಯಕರ ಬದುಕಿಗೆ ಶುದ್ಧ ಗಾಳಿ ಬಹಳ ಮುಖ್ಯ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ನಗರದಲ್ಲಿ ಮೊದಲ ಬಾರಿಗೆ ನಿರಂತರ ಪರಿವೇಷ್ಟಕ ವಾಯು ಮಾಪನ ಕೇಂದ್ರವನ್ನು ₹ 1.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ನಗರದ 5 ಕಿ.ಮೀ ವ್ಯಾಪ್ತಿಯ ಧೂಳಿನ ಕಣಗಳು, ಗಂಧಕದ ಆಕ್ಸೈಡ್, ಸಾರಜನಕದ ಡೈಆಕ್ಸೈಡ್, ಆಮೋನಿಯ, ಕಾರ್ಬನ್ ಮೊನಾಕ್ಸೈಡ್, ಓಜೋನ್, ಗಾಳಿಯ ವೇಗ, ದಿಕ್ಕು, ಒತ್ತಡ ವಾತಾವರಣದ ತೇವಾಂಶ, ಉಷ್ಣತೆಯನ್ನು ನಿರಂತರವಾಗಿ ಮಾಪನ ಮಾಡಬಹುದಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 1.70 ಲಕ್ಷ ವಾಹನಗಳಿವೆ. ಶಬ್ದದ ಜತೆಗೆ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. ನಗರೀಕರಣ, ಜನಸಂಖ್ಯೆ ಹೆಚ್ಚಾದಂತೆ ಮಾಲಿನ್ಯ ಸಹ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟಲು ಸರ್ಕಾರ ಎಷ್ಟೇ ಕಾನೂನುಗಳನ್ನು ರೂಪಿಸಿದರೂ ಜನರ ಸಹಕಾರ ಮುಖ್ಯ. ಪ್ರತಿಯೊಬ್ಬರು ಹಬ್ಬ ಹರಿದಿನಗಳಲ್ಲಿ ಪಟಾಕಿ ಹೊಡೆಯುವುದನ್ನು ಕಡಿಮೆ ಮಾಡಬೇಕು. ಪಿಓಪಿ ಗಣೇಶ ಮೂರ್ತಿಗಳನ್ನು ಬಳಸುವ ಬದಲು ನೈರ್ಸಗಿಕ ಗಣೇಶ ಮೂರ್ತಿಗಳನ್ನು ಬಳಸಬೇಕು’ ಎಂದು ತಿಳಿಸಿದರು.

ಶಾಸಕ ಡಾ.ಕೆ.ಸುಧಾಕರ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಿ.ವಿ.ರಂಗರಾವ್, ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಜಿಲ್ಲಾ ಪರಿಸರ ಅಧಿಕಾರಿ ಎಸ್.ಮಧುಸೂಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT