ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಕೆರೆಗೆ ಕಾಯಕಲ್ಪ: ಪ್ರಸಾದ ಅಬ್ಬಯ್ಯ

₹ 10 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ: ವಾಣಿಜ್ಯ ನಗರಕ್ಕೆ ಮತ್ತೊಂದು ಗರಿ
Last Updated 22 ಮಾರ್ಚ್ 2018, 9:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಐತಿಹಾಸಿಕ ಕೆಂಪ ಕೆರೆಯನ್ನು ₹ 10 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಕೆರೆಯ ಆವರಣದಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

14 ಎಕರೆ 24 ಗುಂಟೆ ವಿಸ್ತೀರ್ಣವಿರುವ ಈ ಕೆರೆಯನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯು ಈಗಾಗಲೇ ₹ 5 ಕೋಟಿ ಮಂಜೂರು ಮಾಡಿದೆ. ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ₹ 1 ಕೊಟಿ ಕೊಟ್ಟಿದೆ. ಉಳಿದ ಅನುದಾನವನ್ನು ಪ್ರವಾಸೋದ್ಯಮ ಇಲಾಖೆ ನೀಡಲಿದೆ ಎಂದು ಅವರು ಹೇಳಿದರು.

ಕೆರೆಯ ಆವರಣದಲ್ಲಿ ಬಯಲು ರಂಗಮಂದಿರ, ಆಸನದ ವ್ಯವಸ್ಥೆ, ಗೋಪುರ, ಕಾರಂಜಿ, ವೀಕ್ಷಣಾ ಕಟ್ಟೆ, ಚಿಣ್ಣರ ರೈಲು, ಉದ್ಯಾನ, ಶೌಚಾಲಯ, ಕ್ಯಾಂಟೀನ್‌ ಹಾಗೂ ಕೆರೆಯ ಸುತ್ತ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದರು.

ನಗರದ ಕೊಳಚೆ ನೀರು ಕೆರೆಗೆ ಬಂದು ಸೇರುತ್ತಿದ್ದು, ಇದರ ತಡೆಗೆ ಗಟಾರ ನಿರ್ಮಾಣ ಮತ್ತು ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುವುದು. ಕೆರೆಯಲ್ಲಿರುವ ಹೂಳನ್ನು ತೆಗೆದು, ಸ್ವಚ್ಛಗೊಳಿಸಲಾಗುವುದು. ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಇಲ್ಲಿಗೆ ಬರುವುದರಿಂದ ಕೆರೆಯಂಗಳವನ್ನು ಪಕ್ಷಿಧಾಮವನ್ನಾಗಿ ರೂಪಿಸಲು ಬಗೆ ಬಗೆಯ ಹಣ್ಣಿನ ಸಸಿಗಳನ್ನು ಬೆಳೆಸಲಾಗುವುದು. ಈಗಾಗಲೇ ₹ 50 ಲಕ್ಷ ವೆಚ್ಚದಲ್ಲಿ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಲಾಗಿದೆ ಎಂದರು.

ಮುಂದಿನ ಒಂದು ವರ್ಷದೊಳಗೆ ಗುಣಮಟ್ಟದ ಕಾಮಗಾರಿ ಕೈಗೊಂಡು, ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಪೂರ್ವ ವಿಧಾನಸಭಾ ಕ್ಷೇತ್ರದ ಗೌಸಿಯಾ ಟೌನ್‌ನಲ್ಲಿ ಈಗಾಗಲೇ ₹ 1.60 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಉದ್ಯಾನ ನಿರ್ಮಿಸಿ, ಸಾರ್ವಜನಿಕ ಬಳಕೆಗೆ ನೀಡಲಾಗಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ದಶರಥ ವಾಲಿ ಮಾತನಾಡಿ, ಸುತ್ತ–ಮುತ್ತಲಿನ ಜನರು ಮೊದಲು ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. 15 ವರ್ಷಗಳ ಈಚೆಗೆ ಸುಭಾಸ ನಗರದ ಕೊಳಚೆ ನೀರು ಇಲ್ಲಿಗೆ ಹರಿದುಬಂದು ಸೇರುತ್ತಿರುವುದರಿಂದ ಯಾರೂ ಬಳಸುತ್ತಿಲ್ಲ. ಕೊಳಚೆ ನೀರು ಕೆರೆಗೆ ಸೇರದಂತೆ ಯುಜಿಡಿ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ ಚಿಂತಗಿಂಜಲ, ಕಿಮ್ಸ್‌ ಆಡಳಿತ ಮಂಡಳಿ ಸದಸ್ಯ ಪರ್ವೇಜ್‌ ಕೊಣ್ಣೂರು, ನಿರಂಜನ ಹಿರೇಮಠ, ಬಸವರಾಜ ಮೆಣಸಗಿ. ಗುತ್ತಿಗೆದಾರ ಎನ್‌.ಎಸ್‌. ರಾಜು, ಆರ್ಕಿಟೆಕ್ಟ್‌ ಅಮ್ಮಿನಬಾವಿ ಮತ್ತು ಹೆಗಡೆ ಇದ್ದರು.
**
ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಸೌಲಭ್ಯ ಇರುವ ಉದ್ಯಾನ, ಪ್ರವಾಸಿ ತಾಣ ಇರಲಿಲ್ಲ. ಕೆಂಪಕೆರೆ ಅಭಿವೃದ್ಧಿಯಿಂದ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
– ಪ್ರಸಾದ ಅಬ್ಬಯ್ಯ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT