ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪ್ರಯಾಣಿಕರಿಗೆ ಶುದ್ಧ ನೀರಿನ ಭಾಗ್ಯ

ವರ್ಷದ ಹಿಂದೆಯೇ ಕಾರ್ಯಾರಂಭ: ಜನರಿಂದ ಉತ್ತಮ ಪ್ರತಿಕ್ರಿಯೆ
Last Updated 22 ಮಾರ್ಚ್ 2018, 10:51 IST
ಅಕ್ಷರ ಗಾತ್ರ

ಕಲಬುರ್ಗಿ: ಬೇಸಿಗೆ ಬಂದಿದೆ. ಎಲ್ಲೆಡೆ ನೀರಿನ ದಾಹ ಹೆಚ್ಚಾಗಿದೆ. ಶುದ್ಧ ನೀರು ಲಭಿಸುವುದೇ ಕಷ್ಟವಾಗಿದೆ. ಆದರೆ, ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಪ್ರಯಾಣಿಕರಿಗೆ ಕಡಿಮೆ ದರಕ್ಕೆ ಶುದ್ಧ ನೀರನ್ನು ನೀಡುತ್ತಿದೆ.

ಇಲ್ಲಿನ ರೈಲು ನಿಲ್ದಾಣದಲ್ಲಿ ವರ್ಷದ ಹಿಂದೆಯೇ ಇಂಥ ಘಟಕಗಳು ಕಾರ್ಯಾರಂಭ ಮಾಡಿವೆ. ಪ್ರಯಾಣಿಕರು ಈ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ₹5ಕ್ಕೆ ಒಂದು ಲೀಟರ್ ಶುದ್ಧ ನೀರು ಪಡೆಯುವ ವ್ಯವಸ್ಥೆ ಇದು. ಕಲಬುರ್ಗಿಯ ರೈಲು ನಿಲ್ದಾಣದಲ್ಲಿ ಇಂಥ ಐದು ಘಟಕಗಳು ಸೇವೆ ಒದಗಿಸುತ್ತಿವೆ.

ರೈಲ್ವೆ ಇಲಾಖೆಯ ಆಹಾರ ಮತ್ತು ಪ್ರವಾಸೋದ್ಯಮ ವಿಭಾಗ(ಐಆರ್‌ಸಿಟಿಸಿ) ವಿಭಾಗ ಹೈದರಾಬಾದ್‌ನ ವಾಟರ್‌ ಹೆಲ್ತ್‌ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಘಟಕಗಳನ್ನು ಸ್ಥಾಪನೆ ಮಾಡಿದೆ. ಕಲಬುರ್ಗಿಯಲ್ಲಿ ಐದು, ವಾಡಿಯಲ್ಲಿ ನಾಲ್ಕು ಹಾಗೂ ಯಾದಗಿರಿಯ ರೈಲು ನಿಲ್ದಾಣಗಳಲ್ಲಿ ಎರಡು ಇಂತಹ ಘಟಕಗಳು ಆರಂಭವಾಗಿವೆ. ನಗರದ ರೈಲು ನಿಲ್ದಾಣದ ಪ್ರತಿ ಫ್ಲಾಟ್‌ ಫಾರಂನಲ್ಲಿ ಎರಡು ಘಟಕಗಳಿವೆ. ಪ್ರತಿ ಘಟಕಕ್ಕೂ ಒಬ್ಬರನ್ನು ನೇಮಿಸಲಾಗಿದೆ.

ನೀರನ್ನು ಆರ್.ಒ(ರಿವರ್ಸ್‌ ಆಸ್ಮೋಸಿಸ್) ವಿಧಾನದಿಂದ ಶುದ್ಧೀಕರಿಸಲಾಗುತ್ತಿದೆ. ಒಂದು ಬಾರಿಗೆ ಕನಿಷ್ಠ 300 ಮಿಲಿ ಲೀಟರ್‌ನಿಂದ ಗರಿಷ್ಠ 5 ಲೀಟರ್ ವರೆಗೆ ನೀರು ಪಡೆಯಬಹುದು. ನೀರು ಸಂಗ್ರಹಿಸುವ ಬಾಟಲಿಗೆ ಪ್ರತ್ಯೇಕ ದರವಿದೆ.

ಈ ಘಟಕಗಳಿಗೆ ರೈಲ್ವೆ ಇಲಾಖೆಯು ನೀರು ಹಾಗೂ ವಿದ್ಯುತ್‌ ಸಂಪರ್ಕ ಒದಗಿಸಿದೆ. ಘಟಕಗಳ ನಿರ್ವಹಣೆ ವಾಟರ್‌ ಹೆಲ್ತ್‌ ಸಂಸ್ಥೆ ಮಾಡಲಿದ್ದು, 24ಗಂಟೆಯೂ ಪ್ರಯಾಣಿಕರಿಗೆ ಶುದ್ಧ ನೀರು ಲಭ್ಯ.

‘ತಿರುಪತಿ, ಶಿರಡಿ ಹಾಗೂ ಹೈದರಾಬಾದ್‌ ರೈಲು ನಿಲ್ದಾಣದಲ್ಲಿ ನಮ್ಮ ಸಂಸ್ಥೆಯಿಂದ ಸ್ಥಾಪನೆ ಮಾಡಿದ ಘಟಕಗಳು ಜನಪ್ರಿಯವಾಗಿವೆ. ಕಲಬುರ್ಗಿಯಲ್ಲೂ ಜನರಿಂದ ಉತ್ತಮ ಸ್ಪಂದನೆ ದೊರೆಯಲಿದೆ’ ಎಂದು ವಾಟರ್ ಹೆಲ್ತ್ ಸಂಸ್ಥೆಯ ಪ್ರತಿನಿಧಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲು ನಿಲ್ದಾಣಗಳಲ್ಲಿ ಬ್ರ್ಯಾಂಡ್‌ ರಹಿತ ನೀರಿನ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಲೆಯೂ ಹೆಚ್ಚು. ನೀರಿನ ಹೆಸರಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಲಾಗುತ್ತಿದೆ. ಈಗ ಶುದ್ಧ ನೀರಿನ ಘಟಕ ಸ್ಥಾಪನೆ ಆಗಿರುವುದು ಸಂತಸ ತಂದಿದೆ’ ಎಂದು ಹಲವು ಪ್ರಯಾಣಿಕರು ತಿಳಿಸಿದರು.

ಸ್ವಯಂಚಾಲಿತ ವ್ಯವಸ್ಥೆ: ಈ ಘಟಕಗಳು ಸ್ವಯಂ ಚಾಲಿತವಾಗಿವೆ. ಗ್ರಾಹಕರು ನಾಣ್ಯ ಹಾಕಿ ನೀರು ತುಂಬಿಸಿಕೊಳ್ಳಬಹುದು. ಪ್ರಸ್ತುತ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮುಂದೆ ಗ್ರಾಹಕರೇ ನಾಣ್ಯಗಳನ್ನು ಹಾಕಿ ನೀರು ತುಂಬಿಸಿಕೊಳ್ಳುವ ವ್ಯವಸ್ಥೆ ಬರಲಿದೆ.

‘ಸ್ವಯಂಚಾಲಿತ ಟಿಕೆಟ್‌ ವಿತರಣಾ ಯಂತ್ರ(ಎಟಿವಿಯಂ) ಮಾದರಿಯಲ್ಲೇ ಸ್ವಯಂ ಚಾಲಿತ ನೀರು ವಿತರಣಾ ಯಂತ್ರ(ವಿವಿಎಂ)ಗಳು ಕಾರ್ಯ ನಿರ್ವಹಿಸಲಿದೆ’ ಎಂದು ವಾಟರ್‌ ಹೆಲ್ತ್ ತಿಳಿಸಿದೆ.
**
ನೀರಿನ ಘಟಕ ಸ್ಥಾಪನೆಗೆ ‘ವಾಟರ್ ಹೆಲ್ತ್’ ಟೆಂಡರ್ ಪಡೆದುಕೊಂಡಿದೆ. ಕಲಬುರ್ಗಿಯಲ್ಲಿ 5 ಘಟಕ ಸ್ಥಾಪನೆಯಾಗಿವೆ. ನೀರು, ವಿದ್ಯುತ್‌ ಬಿಲ್‌ ರೈಲ್ವೆ ಇಲಾಖೆಗೆ ಪಾವತಿ ಮಾಡುತ್ತಿದೆ
– ಅಜಯ್, ವಲಯ ಮುಖ್ಯಸ್ಥ, ವಾಟರ್‌ ಹೆಲ್ತ್‌ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT