ಶಿರಸಿ ಜೀವಜಲ ಕಾರ್ಯಪಡೆಯ ಸಾಧನೆ: ಸಾರ್ವಜನಿಕರು, ಜಲತಜ್ಞರ ಶ್ಲಾಘನೆ

ಜನರ ನಡುವೆ ಜಲಾಂದೋಲನ

ಜಲ ಸಂರಕ್ಷಣೆಯ ಪಣತೊಟ್ಟು, ಹೇವಿಳಂಬಿ ಸಂವತ್ಸರದ ಮೊದಲನೇ ದಿನ ಶಿರಸಿಯ ಸಾರ್ವಜನಿಕರು ಹುಟ್ಟುಹಾಕಿದ ಶಿರಸಿ ಜೀವಜಲ ಕಾರ್ಯಪಡೆ ಒಂದು ವಸಂತ ಪೂರೈಸಿದೆ. ಜನರ ಮಧ್ಯೆ ಜಲಾಂದೋಲನವನ್ನು ತರುವಲ್ಲಿ ಕಾರ್ಯಪಡೆ ಯಶಸ್ಸು ಕಂಡಿದೆ.

ಶಿರಸಿಯ ಆನೆಹೊಂಡದಲ್ಲಿ ನಡೆದ ಕಿರುಚಿತ್ರದ ಚಿತ್ರೀಕರಣ

ಶಿರಸಿ: ಜಲ ಸಂರಕ್ಷಣೆಯ ಪಣತೊಟ್ಟು, ಹೇವಿಳಂಬಿ ಸಂವತ್ಸರದ ಮೊದಲನೇ ದಿನ ಶಿರಸಿಯ ಸಾರ್ವಜನಿಕರು ಹುಟ್ಟುಹಾಕಿದ ಶಿರಸಿ ಜೀವಜಲ ಕಾರ್ಯಪಡೆ ಒಂದು ವಸಂತ ಪೂರೈಸಿದೆ. ಜನರ ಮಧ್ಯೆ ಜಲಾಂದೋಲನವನ್ನು ತರುವಲ್ಲಿ ಕಾರ್ಯಪಡೆ ಯಶಸ್ಸು ಕಂಡಿದೆ.

ಸರ್ಕಾರದ ನೆರವನ್ನು ಮರೆತು ಜನರ ಸಹಭಾಗಿತ್ವದಲ್ಲಿ ಕೆರೆ ಕಾಯಕಲ್ಪ ನಡೆಸುವ ಉದ್ದೇಶದಿಂದ, ಕಳೆದ ವರ್ಷ ಯುಗಾದಿಯ ದಿನ ಕೆಲಸ ಪ್ರಾರಂಭಿಸಿದ ಕಾರ್ಯಪಡೆ, ಇಲ್ಲಿಯವರೆಗೆ ಆನೆಹೊಂಡ, ರಾಯರಕೆರೆ, ಶಂಕರಹೊಂಡ ಕೆರೆಗಳ ಹೂಳೆತ್ತಿ, ಅಭಿವೃದ್ಧಿಪಡಿಸಿದೆ. ಇದರಿಂದ ಪ್ರೇರಿತರಾದ ಜನರು ಹಳದೋಟ ಕೆರೆ, ಬಶೆಟ್ಟಿ ಕೆರೆಗಳ ಜಲಕ್ಕೆ ಚೈತನ್ಯ ತುಂಬಿದ್ದಾರೆ. ಬೆಳ್ಳಕ್ಕಿ ಕೆರೆ, ಸುಪ್ರಸನ್ನ ನಗರ, ಎಕ್ಕಂಬಿ ಕೆರೆಗಳು ಅಭಿವೃದ್ಧಿಯ ಪಥದಲ್ಲಿವೆ. ಕಾರ್ಯಪಡೆದ ಸದಸ್ಯ, ಉದ್ಯಮಿ ಶ್ರೀಕಾಂತ ಹೆಗಡೆ ಉಸ್ತುವಾರಿಯಲ್ಲಿ, ಸರ್ಕಾರಿ ಕಟ್ಟಡ ಸೇರಿದಂತೆ 12ಕ್ಕೂ ಹೆಚ್ಚು ಕಡೆಗಳಲ್ಲಿ ಮಳೆನೀರು ಇಂಗಿಸುವ ಮಾದರಿಗಳ ಅಳವಡಿಕೆಯಾಗಿದೆ.

’ಜಲ ಸಾಕ್ಷರತೆಯೆಡೆಗಿನ ಪಯಣದಲ್ಲಿ ಕಾರ್ಯಪಡೆ ಬಹುದೂರ ಕ್ರಮಿಸಿದೆ. ಕೆರೆ ಪುನಶ್ಚೇತನ ಕಾರ್ಯವು ಹೂಳೆತ್ತುವ, ಹೂಳಿನ ಪ್ರಮಾಣ ಅರಿಯುವ, ವೆಚ್ಚವನ್ನು ಅಂದಾಜಿಸುವ, ಮಣ್ಣಿನ ಗುಣ ತಿಳಿಯುವ, ನೀರಿನ ಸೆಲೆ ಅಳೆಯುವ ಜ್ಞಾನ ಬೆಳೆಸಿದೆ. ಕೆರೆ ಹೂಳೆತ್ತುವುದೆಂದರೆ ಮೂರುಕಾಲು ಅಡಿ ಮಾತ್ರ ಎಂಬ ಸರ್ಕಾರಿ ನಿಯಮವನ್ನು ಕಾರ್ಯಪಡೆಯ ಕಾಯಕ ಬದಲಾಯಿಸಿದೆ. ಹೂಳೆತ್ತಿರುವ ಎಲ್ಲ ಕೆರೆಗಳನ್ನು ಆಳಗೊಳಿಸಿ, ಜಲ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಿದೆ. ಸಾರ್ವಜನಿಕರ ನೆರವಿನಲ್ಲಿ ಹೂಳೆತ್ತಿರುವ ಎಲ್ಲ ಕೆರೆಗಳು ವರತೆ ಇರುವ ನಿಶ್ಚಿತ ಜಲ ನಿಧಿಗಳು. ಇವನ್ನು ಆಳಗೊಳಿಸಿದ್ದರಿಂದ, ಮೇಲ್ಮೈ ನೀರಿನ ಮಟ್ಟ ಉಳಿದುಕೊಳ್ಳುವ ಜೊತೆಗೆ, ಅಂತರ್ಜಲ ಮಟ್ಟ ಹೆಚ್ಚುತ್ತದೆ’ ಎನ್ನುತ್ತಾರೆ ಜಲತಜ್ಞ ಶಿವಾನಂದ ಕಳವೆ.

’ಈ ಹಿಂದೆ ನಾವು ಶಿರಸಿಯಲ್ಲಿ ಕೊಳವೆ ಬಾವಿ, ಟ್ಯಾಂಕರ್, ಪೈಪ್‌ಗಳಲ್ಲಿ ನೀರನ್ನು ನೋಡುತ್ತಿದ್ದೆವು. ನೀರಿನ ಮೂಲ ಹುಡುಕಿಕೊಂಡು 10 ಕಿ.ಮೀ ದೂರದ ಕೆಂಗ್ರೆ ಹೊಳೆ, 18 ಕಿ.ಮೀ ದೂರದ ಅಘನಾಶಿನಿ ನದಿಗೆ ಹೋಗುತ್ತಿದ್ದೆವು. ಈಗ ಜಲಮೂಲ ನೋಡಲು ಜನರು ಕೆರೆಗಳಿಗೆ ಹೋಗಲು ಆರಂಭಿಸಿದ್ದಾರೆ. ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರ ಅವಿರತ ಶ್ರಮದಿಂದ ಹೊಸರೂಪ ಪಡೆದಿರುವ ಶಂಕರಹೊಂಡ ಪ್ರವಾಸಿ ತಾಣದಂತಾಗಿದೆ. ಜನರು ಕೆರೆಗಳ ಸ್ವಚ್ಛತೆ, ನೀರಿನ ಮಟ್ಟದ ಬಗ್ಗೆ ಮಾತುಕತೆ ನಡೆಸುವಷ್ಟರ ಮಟ್ಟಿಗೆ ಜಲ ಪ್ರಜ್ಞೆ ಬೆಳೆದಿದೆ. ನಿರ್ಲಕ್ಷ್ಯಕ್ಕೊಳಗಾಗಿರುವ ಒಂದು ಕೆರೆ ಸಹ ನಗರದಲ್ಲಿ ಉಳಿದಿಲ್ಲ. ನೀರಿನ ಬಗ್ಗೆ ಅವಲೋಕನ ಇಡೀ ನಗರದಲ್ಲಿ ನಡೆಯುತ್ತಿದೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಅವರ ಅನುಭವ ಹಂಚಿಕೊಂಡರು.

‘ನೀರಿನ ಕೆಲಸಕ್ಕಾಗಿ ದೇಣಿಗೆ ನೀಡಿದವರು ಹಣ ಪೋಲಾಯಿತೆಂದು ಬೇಸರಿಸಿಕೊಳ್ಳುತ್ತಿಲ್ಲ, ಬದಲಾಗಿ ದೇವರಿಕೆ ಕಾಣಿಕೆ ಹಾಕಿದ ಸಮಾಧಾನ ಕಾಣುತ್ತಿದ್ದಾರೆ. ದುಡ್ಡಿದ್ದವರು ಸಾಕಷ್ಟು ಜನರಿದ್ದರೂ, ಜನಸಾಮಾನ್ಯರ ಬದುಕಿಗೆ ಬೇಕಾಗಿದ್ದ ಜೀವಜಲಕ್ಕೆ ದುಡಿಯುವವರು ಇಲ್ಲ ಎಂಬ ಕೊರಗು ಇತ್ತು. ಆದರೆ, ಜಲಸಾಕ್ಷರತೆಯ ಪಯಣದಲ್ಲಿ ಈಗ ಉದ್ಯಮಿಗಳು, ವೈದ್ಯರು, ರಿಕ್ಷಾ ಚಾಲಕರು, ಕಿರಾಣಿ ಅಂಗಡಿಯವರು, ಮಹಿಳೆಯರು, ಸಂಘ ಸಂಸ್ಥೆಗಳು ಸೇರಿಕೊಂಡರು. ಇದೇ ಕಾರ್ಯಪಡೆಗೆ ಸಿಕ್ಕಿರುವ ದೊಡ್ಡ ಯಶಸ್ಸು’ ಎಂದು ಅವರು ಅಭಿಪ್ರಾಯಪಟ್ಟರು.

ಕಿರುಚಿತ್ರ ನಿರ್ಮಾಣ
‘ಅಘನಾಶಿನಿ’ ಸಾಕ್ಷ್ಯಚಿತ್ರ ನಿರ್ಮಿಸಿ, ರಾಜ್ಯದ ಗಮನಸೆಳೆದಿರುವ ಎಂಜಿನಿಯರ್ ಅಶ್ವಿನಿಕುಮಾರ್ ಭಟ್ಟ ಹಾಗೂ ಛಾಯಾಚಿತ್ರಕಾರ ಸುನಿಲ್ ತಟ್ಟೀಸರ ಸೇರಿ ಜೀವಜಲ ಕಾರ್ಯಪಡೆಯ ಸಾಧನೆಯ ಹಿನ್ನೋಟ ತೆರೆದಿರುವ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂರ್ನಾಲ್ಕು ದಿನಗಳಿಂದ ಆನೆಹೊಂಡ, ಶಂಕರಹೊಂಡ, ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದೆ.
**
ನೀರಿನ ಕೆಲಸ ಮುಗಿಯಿತು ಎಂಬುದಿಲ್ಲ, ಅದು ನಿರಂತರ. ಆದರೆ ಒಂದು ವರ್ಷದಲ್ಲಿ ಕ್ರಮಿಸಿದ ದಾರಿ, ನೀರಿಗಾಗಿ ಮಾಡಿದ ಕೆಲಸ ಮನಸ್ಸಿಗೆ ತೃಪ್ತಿ ನೀಡಿದೆ.
ಶ್ರೀನಿವಾಸ ಹೆಬ್ಬಾರ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ

Comments
ಈ ವಿಭಾಗದಿಂದ ಇನ್ನಷ್ಟು
ನನ್ನ ಪರಿಚಯ ಹೊಸದಾಗಿ ಬೇಕಿಲ್ಲ

ಕಾರವಾರ
ನನ್ನ ಪರಿಚಯ ಹೊಸದಾಗಿ ಬೇಕಿಲ್ಲ

26 Apr, 2018
ತಲೆನೋವು ತಂದಿಟ್ಟ ಬ್ಯಾರಿಕೇಡ್ ಕೊರತೆ!

ಕುಮಟಾ
ತಲೆನೋವು ತಂದಿಟ್ಟ ಬ್ಯಾರಿಕೇಡ್ ಕೊರತೆ!

26 Apr, 2018

ಭಟ್ಕಳ
ಭದ್ರತಾ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಏ.26ರಂದು ಸಂಜೆ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಸಂಜೆ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಪಟ್ಟಣದ ಹನೀಫಾಬಾದ್...

26 Apr, 2018
ರಂಜಿಸಿದ ಡಾ.ರಾಜ್ ಗೀತೆಗಳ ರಸ ಸಂಜೆ

ಕಾರವಾರ
ರಂಜಿಸಿದ ಡಾ.ರಾಜ್ ಗೀತೆಗಳ ರಸ ಸಂಜೆ

26 Apr, 2018

ಯಲ್ಲಾಪುರ
ಉತ್ತರ-,ದಕ್ಷಿಣ ಬೆಸೆದ ವೈವಾಹಿಕ ಸಂಬಂಧ

ಉತ್ತರ ಭಾಗದ ಬಲರಾಮಪುರದ ಕನ್ಯೆ ಮತ್ತು ದಕ್ಷಿಣದ ವರ ಸೇರಿ ಇಡೀ ಭಾರತವನ್ನೇ ವೈವಾಹಿಕದ ಸಂಬಂಧದ ಮೂಲಕ ಗಾಢವಾಗಿ ಬೆಸೆದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ...

26 Apr, 2018