ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲೂ ನೀರು ಸಂಗ್ರಹ ಕಾಯಕ

ಬೇಸಿಗೆಯಲ್ಲೂ ಬತ್ತದ ಕೆರೆಗಳು, ನೀಗಿದ ಪ್ರಯೋಗಶೀಲ ರೈತರ ಸಮಸ್ಯೆ
Last Updated 22 ಮಾರ್ಚ್ 2018, 11:23 IST
ಅಕ್ಷರ ಗಾತ್ರ

ಮಡಿಕೇರಿ/ ಗೋಣಿಕೊಪ್ಪಲು: ಕೊಡಗು ಪ್ರಕೃತಿ ಮಡಿಲು. ಹಿಂದೆಲ್ಲಾ 300ರಿಂದ 350 ಇಂಚಿನಷ್ಟು ಮಳೆ ಸುರಿಯುತ್ತಿತ್ತು. ಬೇಸಿಗೆಯಲ್ಲೂ ನೀರಿನ ಕೊರತೆ ಕಾಣಿಸುತ್ತಿರಲಿಲ್ಲ. 50 ಅಡಿಗೆ ಅಂತರ್ಜಲ ಲಭಿಸುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ. ಬೇಸಿಗೆ ಆರಂಭದಲ್ಲೇ ಕಾವೇರಿ ಸೊರಗಿ ನಿಲ್ಲುತ್ತಾಳೆ. ಅಲ್ಲದೇ ನೀರಿಗೆ ಹಾಹಾಕಾರ ಆರಂಭಗೊಳ್ಳುತ್ತದೆ.

ಇಂತಹ ಸಮಸ್ಯೆ ಹೋಗಲಾಡಿಸಲು ಕೆಲವರು ಪ್ರಯೋಗಕ್ಕೆ ಇಳಿದಿದ್ದಾರೆ. ತಮ್ಮ ಜಮೀನಿನಲ್ಲೇ ಕೆರೆ ತೋಡಿಸಿ, ಮಳೆ ನೀರು ಸಂಗ್ರಹಕ್ಕೆ ಇಳಿದಿದ್ದಾರೆ. ಇದರಿಂದ ಬೆಳೆಗಳು ಬೇಸಿಗೆಯಲ್ಲೂ ನಳನಳಿಸುತ್ತಿವೆ. ಅಂತಹ ಪ್ರಯೋಗ ಶೀಲ ಬೆಳೆಗಾರರ ಮಾಡಿರುವ ಕಾಯಕ ಇಲ್ಲಿದೆ...

ಕೋಣನಕಟ್ಟೆ ಬಳಿಯ ಸುಳುಗೋಡು ಅಜ್ಜಿಕಟ್ಟೀರ ಸೂರಜ್ ಅವರು ತಮ್ಮ ಮನೆಯ ಮೇಲ್ಚಾವಣಿಯಿಂದ ಬೀಳುವ ಮಳೆ ನೀರನ್ನು ಪೈಪ್ ಮೂಲಕ ನೇರವಾಗಿ ತೆರೆದ ಬಾವಿಗೆ ಬೀಳುವಂತೆ ಮಾಡಿದ್ದಾರೆ. ಮೊದಲ ಮಳೆಯ ನೀರನ್ನು ಹೊರಗೆ ಬಿಡುತ್ತಾರೆ. ಅದರಲ್ಲಿ ಕಸಕಡ್ಡಿ ತುಂಬಿ ಬಾವಿ ನೀರು ಮಲಿನವಾಗುತ್ತದೆ ಎಂಬ ಕಾರಣಕ್ಕೆ ಮೊದಲ ಮಳೆಯ ನೀರನ್ನು ಹೊರಗೆ ಬಿಡುತ್ತಾರೆ. ಬಳಿಕ ನಿರಂತರವಾಗಿ ಬೀಳುವ ಮಳೆ ನೀರನ್ನು ಬಾವಿಗೆ ಬಿಡುತ್ತಾರೆ.

ಜತೆಗೆ, ಕೊಳವೆ ಬಾವಿಯ ಸುತ್ತ ಹೊಂಡ ತೆಗೆದು ಅದಕ್ಕೆ ಮರಳು ಜಲ್ಲಿ ಕಲ್ಲು ತುಂಬಿಸಿದ್ದಾರೆ. ತೋಟದಿಂದ ಬರುವ ಕಾಲುವೆ ನೀರಿನ್ನು ಈ ಹೊಂಡಕ್ಕೆ ತುಂಬಿಸುತ್ತಾರೆ. ಇದರ ನೀರು ಪಕ್ಕದ ಕೊಳವೆ ಬಾವಿಗೆ ಬರುತ್ತಿದೆ. ಇದರಿಂದ ಕೊಳವೆ ಬಾವಿ ಮತ್ತು ತೆರೆದ ಬಾವಿಯಲ್ಲಿ ಸದಾ ನೀರಿದ್ದು ಅವರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದೆ.
ಹೀಗೆಯೇ ತಮ್ಮ ತೊಟದ ಕೆರೆಗೆ ಮಳೆ ತೋಡು ನೀರನ್ನು ಸಂಗ್ರಹಿಸಿ ತುಂಬಿಸುತ್ತಾರೆ. ಕೆರೆಯಲ್ಲಿಯೂ ನೀರು ತುಂಬಿದಂತಿರುತ್ತದೆ.

ನಿಟ್ಟೂರು ಬಳಿಯ ಜಾಗಲೆ ಅಳಮೇಂಗಡ ಬೋಸ್ ಮಂದಣ್ಣ ಕೂಡ ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆ ತೋಡುಗಳ ನೀರನ್ನು ಸಂಗ್ರಹಿಸಿ ತಮ್ಮ ತೋಟದ ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಅವರ ಕೆರೆಗಳು ಬೇಸಿಗೆಯಲ್ಲಿಯೂ ತುಂಬಿ ತುಳುಕುತ್ತಿವೆ. ಇವರಿಗೆ ನೀರಿನ ಸಮಸ್ಯೆ ಕಾಡುತ್ತಿಲ್ಲ. ಬೇಸಿಗೆಯಲ್ಲೂ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಾರೆ.

ಕಿರುಗೂರಿನ ಚೆಪ್ಪಡೀರ ಸುಜು ಕರುಂಬಯ್ಯ ಅವರು ಕೂಡ ಮಳೆ ಗಾಲದಲ್ಲಿ ನೀರು ಸಂಗ್ರಹಿಸಿಕೊಂಡು ಉತ್ತಮ ಭತ್ತ ಬೆಳೆಯುತ್ತಿದ್ದಾರೆ. ನಲ್ಲೂರಿನ ಪ್ರಗತಿ ಪರ ಕೃಷಿಕ ತಿಮ್ಮಯ್ಯ ಅವರೂ ತೊರೆ ತೋಡುಗಳ ನೀರು ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
**
ಕೈಹಿಡಿದ ಅರಣ್ಯ ಇಲಾಖೆ ಪ್ರಯೋಗ

ನೀರು ಅಮೂಲ್ಯ ಎಂಬುದು ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಜನರಿಗೂ ಮನವರಿಕೆಯಾಗಿದೆ. ಹಲವು ಬೆಳೆಗಾರರು ಜಲ ಉಳಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಅತ್ತ ನಾಗರಹೊಳೆ ಅರಣ್ಯದಲ್ಲಿಯೂ ಅರಣ್ಯಾಧಿಕಾರಿಗಳು ಮಳೆಗಾಲದಲ್ಲಿ ಹರಿಯು ಹಳ್ಳಕೊಳ್ಳಗಳ ನೀರನ್ನು ಕೆರೆಗೆ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದರಿಂದ ವನ್ಯಜೀವಿಗಳೀಗೆ ಬೇಸಿಗೆಯಲ್ಲಿ ಸಹಕಾರಿಯಾಗಿದೆ. ಈ ಬಾರಿ ಅರಣ್ಯದ ಹೆಚ್ಚಿನ ಕೆರೆಗಳಲ್ಲಿ ನೀರಿದೆ. 2016ರಲ್ಲಿ ಎರಗಿದ ಬರಗಾಲದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ವನ್ಯ ಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಕಾಡದಂತೆ ನೋಡಿಕೊಂಡಿದೆ.
**
ಇಲ್ಲಿವೆ ಎಂದೂ ಬತ್ತದ ಕಲ್ಯಾಣಿಗಳು...

ನಾಪೋಕ್ಲು: ನಾಪೋಕ್ಲುವಿನಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ ದೇವಾಲಯಗಳ ಬಳಿ ಆಕರ್ಷಕ ಕೆರೆಗಳಿವೆ. ಸಮೀಪದ ಹಳೆ ತಾಲ್ಲೂಕಿನ ನಾಡು ಭಗವತಿ ದೇವಾಲಯ, ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯಗಳ ಬಳಿ ಇರುವ ಕೆರೆಗಳಲ್ಲಿ ಜಲಸಂರಕ್ಷಣೆಯ ಮಹತ್ವದ ಪಾಠ ಹೇಳುತ್ತಿವೆ.

ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಕೆರೆಗಳಿಂದ ಹತ್ತಿರದಲ್ಲಿ ಜನವಾಸ್ತವ್ಯ ಕಲ್ಪಿಸಿಕೊಂಡವರು ನೀರಿನ ವಿಷಯದಲ್ಲಿ ನೋವು ಕಂಡಿಲ್ಲ. ಈ ಕೆರೆಗಳಿಂದ ಭೂಒಡಲಲ್ಲಿ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಮಳೆ ಕೊರತೆಯ ಬೇಸಿಗೆಗಳಲ್ಲೂ ಸುತ್ತಲಿನ ಬಾವಿಗಳು ಬತ್ತದೇ ಸದಾ ನೀರು ತುಂಬಿಕೊಂಡಿರುತ್ತವೆ.

ದೇವಾಲಯಗಳ ಬಳಿಯಿರುವ ಕೆರೆಗಳನ್ನು ಹೊರತುಪಡಿಸಿ, ಗ್ರಾಮಸ್ಥರ ನಿರ್ಲಕ್ಷ್ಯದಿಂದ ಊರುಗಳಲ್ಲಿ ಇದ್ದ ಹಳೆಯ ಸಾರ್ವಜನಿಕ ಹೂಳು ತುಂಬಿ ಮುಚ್ಚಿಹೋಗಿವೆ.

ಇತ್ತೀಚೆಗೆ ಆಹಾರ ಬೆಳೆಗಳನ್ನು ಮೂಲೆಗೆ ಸರಿಸಿ ವಾಣಿಜ್ಯ ಬೆಳೆಗಳತ್ತ ರೈತರ ಮನಸ್ಸು ತಿರುಗಿದಾಗಲೇ ರೈತರ ಸ್ವಂತ ಜಮೀನಿನ ಕೆರೆಗಳಿಗೆ ಮಹತ್ವ ಬಂದಿರುವುದನ್ನು ಕಾಣಬಹುದು. ಕಾಫಿಯ ಕೃಷಿಗೆ ಅನಿವಾರ್ಯ ಎನಿಸಿದ ಹೂವಿನ ಮಳೆಗಾಗಿ ಬಹುತೇಕ ಬೆಳೆಗಾರರು ತಮ್ಮ ಜಮೀನಿನಲ್ಲಿನ ಕೆರೆಗಳನ್ನು ಅವಲಂಬಿಸಿದ್ದಾರೆ. ಆದರೆ, ನೀರಾವರಿ ವಿಧಾನಗಳಿಗೆ ಆಧುನಿಕತೆ ಸ್ಪರ್ಶ ನೀಡಿದ ಮೋಟಾರು ಪಂಪ್‌ ಹಾಗೂ ಸ್ಪಿಂಕ್ಲರ್‌ಗಳ ಬಳಕೆಯಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತುತ್ತಿವೆ.

ಕೆರೆ ನೀರನ್ನು ಬಳಸಿಕೊಳ್ಳುವಲ್ಲಿ ಬೆಳೆಗಾರರಿಗಿರುವ ಧಾವಂತ ಮಳೆನೀರಿನ ಸಂರಕ್ಷಣೆಯಲ್ಲಿಲ್ಲ. ಹಿರಿಯರು ಕೆರೆಗಳ ಸಂರಕ್ಷಣೆಗೆ ನೀಡಿದ ಮಹತ್ವವನ್ನು ಯುವಜನತೆಗೆ ತಿಳಿಯಪಡಿಸುವ ಕೆಲಸವಾಗಬೇಕಿದೆ. ಕೆರೆ ಕಾಯಕಲ್ಪದ ಪಾಠವನ್ನು ಬೋಧಿಸಬೇಕಾದುದು ವಿಶ್ವ ಜಲದಿನದ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯವಾದುದಾಗಿದೆ ಎಂಬುದು ಪ್ರಜ್ಞಾವಂತರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT