ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲಿಕೆಗೆ ವಿದಾಯ ಹೇಳಿಸಿದ ಜನರ ನೋವು

ಬಸವರಾಜ ರಾಯರಡ್ಡಿ ಅವರ ರಾಜಕೀಯ ಪಯಣದ ಮೈಲಿಗಲ್ಲುಗಳು
Last Updated 22 ಮಾರ್ಚ್ 2018, 11:48 IST
ಅಕ್ಷರ ಗಾತ್ರ

ಯಲಬುರ್ಗಾ: 1985ರ ವಿಧಾನಸಭಾ ಚುನಾವಣಾ ಸಮಯ. ರಾಮಕೃಷ್ಣ ಹೆಗಡೆ ಜನತಾ ಪಕ್ಷ (ನೇಗಿಲ ಹೊತ್ತ ರೈತನ ಚಿಹ್ನೆ)ಯಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಉತ್ಸುಕರಾಗಿದ್ದರು. ಆದರೆ, ಖ್ಯಾತ ವಕೀಲ ರಾಮ್‌ ಜೇಠ್ಮಲಾನಿ ಅವರು ಹೆಗಡೆ ಅವರಿಗೆ ಹೇಳಿ ನನಗೆ ಟಿಕೆಟ್‌ ಕೊಡಿಸಿದರು. ಕಾಂಗ್ರೆಸ್‌ನ ಸುಭಾಷಚಂದ್ರ ಪಾಟೀಲ ವಿರುದ್ಧ 5 ಸಾವಿರ ಮತಗಳಿಂದ ಗೆದ್ದೆ.

ಹಳ್ಳಿಗಾಡಿನಿಂದ ವಿಧಾನಸಭೆ ಪ್ರವೇಶಕ್ಕೆ ಕಾರಣವಾದ ಸಂಗತಿಯನ್ನು ನೆನಪಿಸಿಕೊಂಡು ನಸುನಕ್ಕರು ಉನ್ನತ ಶಿಕ್ಷಣ ಸಚಿವ ಬಸವರಾಜ ಬಸವಲಿಂಗಪ್ಪ ರಾಯರಡ್ಡಿ.

ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಜನರೊಂದಿಗೆ ಹೊಂದಿದ್ದ ಒಡನಾಟವನ್ನು ಅರಿತಿದ್ದ ಜೇಠ್ಮಲಾನಿ ಟಿಕೆಟ್‌ಗಾಗಿ ಶಿಫಾರಸು ಮಾಡಿದ್ದರು. ತೀವ್ರ ಪೈಪೋಟಿಯ ನಡುವೆ ಗೆದ್ದು ವಿಧಾನಸೌಧ ಮೆಟ್ಟಿಲು ಹತ್ತಿದಾಗ ಅವರಿಗೆ 27 ವರ್ಷ.

‘1983ರಲ್ಲಿ ಕ್ರಾಂತಿರಂಗ ಮತ್ತು ಜನತಾ ಪಕ್ಷ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸುತ್ತಿದ್ದವು. ಕುಟುಂಬ ಸದಸ್ಯರ ವಿರೋಧದ ನಡುವೆಯೇ ಆ ಗುಂಪು ಸೇರಿದೆ. ಜನತಾ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದೆ’ ಎಂದು ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

ಕಾನೂನು ಪದವಿ ಮುಗಿಸಿದ್ದ ಯುವಕನ ಕಂಗಳಲ್ಲಿ ವಕೀಲಿಕೆಯ ಕನಸುಗಳಿದ್ದವು. ಆದರೆ, ಬಸ್ಸುಗಳ ಬಾರದ ಊರು, ರಸ್ತೆ ಇಲ್ಲದ ದಾರಿಗಳು, ಹಸನಾಗದ ಜನರ ಬದುಕು ಆ ಯುವಕನ ಮನಸ್ಸಿನಲ್ಲಿ ಕಾಡುತ್ತಿದ್ದವು. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟವನಿಗೆ ಕಂಡಿದ್ದು ರಾಜಕಾರಣ. ಸಮಸ್ಯೆಗಳನ್ನೇ ಹೊದ್ದು ಮಲಗಿದ್ದ ಊರಿನ ವ್ಯಕ್ತಿಯೊಬ್ಬ ನಾಡಿನ ‘ಪ್ರಬುದ್ಧ ರಾಜಕಾರಣಿ’ಯಾಗಿ ರೂಪುಗೊಳ್ಳುತ್ತಾರೆ ಎಂದು ಆ ಗ್ರಾಮ (ತಳಕಲ್)ದ ಯಾರೊಬ್ಬರೂ ಊಹಿಸಿರಲಿಲ್ಲ.

'1981ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದೆ. ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಪ್ರಾರಂಭಿಸಬೇಕು ಎಂದುಕೊಂಡಿದ್ದೆ. ಈ ಕನಸು ನನಸಾಗಲಿಲ್ಲ. ಜೇಠ್ಮಲಾನಿ ಬಳಿ ಸಹಾಯಕರಾಗಿ ಸೇರುವ ಹೊತ್ತಿಗೆ ಸಮಾಜ ಸೇವೆ, ರಾಜಕೀಯ ರಂಗ ಸೆಳೆಯಿತು' ಎಂದು ರಾಯರಡ್ಡಿ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಯಲಬುರ್ಗಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ 25 ದಿನಗಳಲ್ಲೇ ಲಿಂಗರಾಜ ದೇಸಾಯಿ ನಿಧನಾರಾದರು. ಉಪ ಚುನಾವಣೆಯಲ್ಲಿ ಶಂಕರರಾವ್ ದೇಶಪಾಂಡೆ ಪರ ರಾಯರಡ್ಡಿ ದುಡಿದರು. ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ಕ್ಷೇತ್ರದಲ್ಲಿನ ಪ್ರಭಾವ ವೃದ್ಧಿಸಿತು.

‘ಸೋಲಿನಿಂದ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಹಳ್ಳಿಗಳಿಗೆ ಪ್ರವಾಸ ಕೈಗೊಂಡೆ. ಯಾವ ಹಳ್ಳಿಗೆ ಏನೇನು ಅಗತ್ಯಗಳಿವೆ ಎಂಬುದರ ಪಟ್ಟಿ ಮಾಡಿದೆ. ಜನರ ಒಡನಾಟ ಗಟ್ಟಿ ರಾಜಕೀಯ ನೆಲೆ ಒದಗಿಸಿತು. ನೀರು, ಶಾಲೆ, ವಿದ್ಯುತ್, ಉತ್ತಮ ರಸ್ತೆಗಳು ಇಲ್ಲದ ಊರುಗಳ ಚಿತ್ರಣ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂಥ ಹಿಂದುಳಿದ ತಾಲ್ಲೂಕಿಗೆ ಏಳು ಪ್ರೌಢಶಾಲೆ, ಒಂದು ಪದವಿ ಪೂರ್ವ ಕಾಲೇಜು ಮಂಜೂರಾದಾಗ ಜನ ತೋರಿದ ಪ್ರೀತಿ ಹಸಿರಾಗಿದೆ’ ಎಂದು ಭಾವುಕರಾದರು ರಾಯರಡ್ಡಿ.

ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದಾಗ ಜನ ಅವರನ್ನು ಮೆರವಣಿಗೆ ಮಾಡಿದ್ದರು. ಹಳ್ಳಿಗಳಿಗೆ ತೆರಳಿ ಜನರನ್ನು ಹತ್ತಿರ ಕರೆದು ಆತ್ಮೀಯವಾಗಿ ಮಾತನಾಡುವುದು ಅವರ ರೂಢಿ. ಆತ್ಮಸ್ಥೈರ್ಯ ತುಂಬಿ ಗ್ರಾಮದ ಸಮಸ್ಯೆಗಳನ್ನು ಆಲಿಸುತ್ತಾರೆ.

’ಆಗ ಬಹುತೇಕ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ವಿದ್ಯಾರ್ಥಿಗಳು ಬೇರೆ ಊರಿಗೆ ಹೋಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಆಗ ಹಳ್ಳಿಗಳಲ್ಲಿ ‘ಶಾಖಾಶಾಲೆ’ಗಳನ್ನು ಆರಂಭಿಸಲಾಯಿತು. ದೇವಸ್ಥಾನದಲ್ಲಿ ಪಾಠ ಮಾಡುವ ವ್ಯವಸ್ಥೆ ಜಾರಿಗೆ ತಂದೆ. ಅಕ್ಕಪಕ್ಕದ ಶಾಲೆಯ ಶಿಕ್ಷಕರು ವಾರಕ್ಕೊಮ್ಮೆ ಪಾಠ ಮಾಡುತ್ತಿದ್ದರು. ಇಂಥ ಪ್ರಯತ್ನಗಳು ಜನರಲ್ಲಿ ಅವರ ಬಗ್ಗೆ ಗೌರವ ಭಾವನೆ ಮೂಡಿಸಿದವು. 1986ರಲ್ಲಿ ರಾಜ್ಯಕ್ಕೆ ಮಂಜೂರಾಗಿದ್ದ 5 ನವೋದಯ ಶಾಲೆಗಳು ಹಳೆಮೈಸೂರು ಭಾಗದ ಪಾಲಾಗಿದ್ದವು. ಇದನ್ನು ಗಮನಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಪಿ.ವಿ.ನರಸಿಂಹರಾವ್ ಅವರ ಮೇಲೆ ಒತ್ತಡ ತಂದು ಕುಕನೂರಿಗೆ ನವೋದಯ ಶಾಲೆ ದಕ್ಕುವಂತೆ ಮಾಡಿದೆ’ ಎನ್ನುವ ಅವರ ಮಾತಿನಲ್ಲಿ ಶೈಕ್ಷಣಿಕ ವಾತಾವರಣ ಬದಲಾಯಿಸಿದ ಹೆಮ್ಮೆ ಇದೆ.

ಲೋಕಸಭೆ ಚುನಾವಣೆಯೂ ಸೇರಿ ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದಾರೆ. 2008ರ ಚುನಾವಣೆ ಹೊರತುಪಡಿಸಿ 9 ಬಾರಿ ಅಧಿಕ ಮತ ಪಡೆದು ಜಯಗಳಿಸಿದ್ದಾರೆ. 5 ಬಾರಿ ಶಾಸಕರಾಗಿ, ಒಂದು ಅವಧಿಗೆ ಸಂಸದರಾಗಿದ್ದರು. ವಸತಿ ಖಾತೆ ನಿಭಾಯಿಸಿದ್ದರು. ಈಗ ಉನ್ನತ ಶಿಕ್ಷಣ ಸಚಿವರು. 1992ರಲ್ಲಿ ಹಿರೇಮ್ಯಾಗೇರಿ ಗ್ರಾಮಕ್ಕೆ ಪ್ರೌಢಶಾಲೆ ಮಜೂರು ಆಯಿತು. ನಂತರದ ಚುನಾವಣೆಯಲ್ಲಿ ಗ್ರಾಮಸ್ಥರು ಹಣ ಕೊಟ್ಟು ಚುನಾವಣೆಯ ಖರ್ಚಿಗೆ ನೆರವಾದರು.

‘ಹಣ, ಮದ್ಯಕ್ಕಾಗಿ ಜನ ಕೈ ಚಾಚುವುದಿಲ್ಲ. ರಾಜಕಾರಣಿಗಳು ಜನರಿಗೆ ವಾಮಮಾರ್ಗ ತೋರಿಸುತ್ತಿದ್ದಾರೆ. ಹಣ, ಜಾತಿಯ ಲೆಕ್ಕಚಾರದ ಸ್ಥಿತಿ ಬದಲಾಗಬೇಕು. ಸಾಮಾನ್ಯ ವ್ಯಕ್ತಿಯೊಬ್ಬ ಗೆಲ್ಲುವ ವಾತಾವರಣ ನಿರ್ಮಾಣ ಸೃಷ್ಟಿಯಾಗಬೇಕು’ ಎಂಬುದು ಅವರ ಕಳಕಳಿ.

‘ರಾಜಕಾರಣ ಗಡಿಬಿಡಿಯಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಆಗಿಲ್ಲ. ಬೇಸತ್ತು ರಾಜಕೀಯ ನಿವೃತ್ತಿ ಪಡೆಯುವ ಮನಸ್ಸು ಮಾಡಿದ್ದುಂಟು. 40 ವರ್ಷಗಳ ರಾಜಕೀಯ ಜೀವನದಲ್ಲಿ ವೈಯಕ್ತಿಕ ಬದುಕು ಹಾಳಾಗಿದೆ’ ಎಂಬ ವಿಷಾದವೂ ಅವರಲ್ಲಿದೆ.
**
ರಾಯರಡ್ಡಿ ರಾಜಕೀಯ ಹೆಜ್ಜೆಗಳು

ವರ್ಷ         ಪಕ್ಷ               ಫಲಿತಾಂಶ
1985 (ಜನತಾ ಪಕ್ಷ) ಗೆಲುವು
1989 (ಜನತಾದಳ) ಗೆಲುವು
1994   (ಜನತಾದಳ) ಗೆಲುವು
1996   (ಜನತಾದಳ) ಗೆಲುವು(ಸಂಸದ)
2004   (ಕಾಂಗ್ರೆಸ್) ಗೆಲುವು
2013   (ಕಾಂಗ್ರೆಸ್) ಗೆಲುವು
2008   (ಕಾಂಗ್ರೆಸ್) ಸೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT