ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಸೆಲೆಗೆ ಬೇಕು ಉಳಿಸುವ ಕಲೆ

ಉತ್ತಮ ಸ್ಥಿತಿಯಲ್ಲಿ ಜಿಲ್ಲೆಯ ಜಲಮೂಲಗಳು, ನೀರಿನ ಬಳಕೆಗೆ ಇರಲಿ ಮಿತಿ
Last Updated 22 ಮಾರ್ಚ್ 2018, 11:52 IST
ಅಕ್ಷರ ಗಾತ್ರ

ಕೊಪ್ಪಳ: ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ನಗರದ ಸುತ್ತಮುತ್ತಲಿನ ಜಲಮೂಲಗಳು ಭರ್ತಿಯಾಗಿವೆ. ಜೀವ ಸಂಕುಲಗಳು ಮರುಜೀವ ಪಡೆದಿದೆ.

- ಇದಕ್ಕೆಲ್ಲ ಕಾರಣ ಸಾಧಾರಣ ಮಳೆಗೇ ಅಲ್ಲಲ್ಲಿ ಸಂಗ್ರಹವಾದ ಜೀವಜಲ. ಹಸಿರು ಬಣ್ಣಕ್ಕೆ ತಿರುಗಿದ ಗಿಡಮರಗಳು. ಪ್ರಕೃತಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ ಎಂಬ ಮಾತಿಗೆ ತಕ್ಕಂತೆ ಪ್ರತ್ಯಕ್ಷ ಪ್ರಯೋಗಾಲಯ ಜಿಲ್ಲೆಯಲ್ಲಿ ರೂಪುಗೊಂಡಿದೆ.

ಎರಡನೇ ಬೆಳೆಗೆ ಅಣೆಕಟ್ಟೆಯಿಂದ ನೀರು ಬಿಡುತ್ತಿಲ್ಲ ಎಂದು ಕೂಗುಹಾಕಿ ಪ್ರತಿಭಟನೆ ನಡೆಸುತ್ತಿರುವ ರೈತರು ಒಂದೆಡೆ. ಬೆಳೆ ರಕ್ಷಣೆಗೆ ಟ್ಯಾಂಕರ್‌ ಮೂಲಕ ನೀರು ತಂದು ಹಾಯಿಸುತ್ತಿರುವ ಕಾರಟಗಿ ಭಾಗದ ರೈತರು ಇನ್ನೊಂದೆಡೆ. ನೀರಿದ್ದೂ ಬಳಸಲಾಗದ ಪರಿಸ್ಥಿತಿ ತುಂಗಭದ್ರಾ ದಂಡೆಯಲ್ಲಿರುವ ರೈತರದ್ದು. ಹೀಗೆ ಒಂದಕ್ಕೊಂದು ವೈರುಧ್ಯಮಯ ವಾತಾವರಣ ಇಲ್ಲಿದೆ.

ಸುಧಾರಿಸಿದ ಪರಿಸ್ಥಿತಿ: ನೀರಿನ ಸ್ಥಿತಿಗತಿ ಕಳೆದ ಬಾರಿಗೆ ಹೋಲಿಸಿದರೆ ಸದ್ಯ ಉತ್ತಮವಾಗಿಯೇ ಇದೆ. ಇದಕ್ಕೆ ಕಾರಣ ಒಣ ಪ್ರದೇಶದಲ್ಲಿ ರಚಿಸಲಾದ ಕೃಷಿ ಹೊಂಡಗಳು ಜಮೀನುಗಳಿಗೆ ಜೀವ ಸೆಲೆ ಒದಗಿಸಿವೆ. ಕೊಳವೆ ಬಾವಿಗಳು ಬತ್ತಿಲ್ಲ. ಒಂದೂವರೆ ವರ್ಷದ ಹಿಂದೆ ಉದ್ಘಾಟನೆಗೊಂಡ ಕೋಳೂರು ಬ್ರಿಡ್ಜ್‌ ಕಂ ಬ್ಯಾರೇಜ್‌ನಲ್ಲಿ ಯಥೇಚ್ಛ ನೀರು ತುಂಬಿದೆ. ನೂರಾರು ಪಂಪ್‌ಸೆಟ್‌ ಗಳ ಮೂಲಕ ಕಬ್ಬು, ಭತ್ತಕ್ಕೆ ನೀರು ಹರಿಯುತ್ತಿದೆ. ಮಳೆ ಮಲ್ಲೇಶ್ವರ ಬೆಟ್ಟದ ಬಳಿ ತೊಡಲಾದ ಪುಟ್ಟ ಹೊಂಡಕ್ಕೆ ಬೆಟ್ಟದ ನೀರು ಬಂದು ಸಂಗ್ರಹವಾಗಿ ಜೀವ ಸೆಲೆ ವೃದ್ಧಿಸಿದೆ. ತುಂಗಭದ್ರಾ ನದಿಯಿಂದ ಗವಿಮಠ ಕೆರೆಗೆ ನೀರು ಹರಿದು ಬಂದಿದೆ. ಇದರಿಂದ ಮಠದ ಸೌಂದರ್ಯ ವೃದ್ಧಿಯಾಗಿದೆ. ಜತೆಗೆ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳು, ಜಿಲ್ಲಾ ಆಸ್ಪತ್ರೆಗೆ ಇದೇ ಪ್ರದೇಶದಿಂದ ನೀರು ಹರಿಯುತ್ತಿದೆ.

ಕನಕಗಿರಿ ಭಾಗದಲ್ಲಿ ಕೆರೆ ತುಂಬಿಸುವ ಯೋಜನೆಯ ಫಲವಾಗಿ ಕೆರೆಗಳಲ್ಲಿ ನೀರು ತುಂಬಿ ಹತ್ತಾರು ಹಳ್ಳಿಗಳಲ್ಲಿ ಜೀವ ಸೆಲೆ ಉಕ್ಕಿದೆ. ಈ ಯೋಜನೆ ಭಾಗಶಃ ಯಶಸ್ವಿಯಾಗಿದೆ.

ಗಿಣಿಗೇರಿ, ಬಸಾಪುರ ಸಮೀಪ ಪುಟ್ಟ ಚೆಕ್‌ ಡ್ಯಾಂ ಪ್ರದೇಶಗಳಲ್ಲಿ ಸಾಕಷ್ಟು ನೀರು ನಿಂತಿದೆ. ಬೆಳ್ಳಕ್ಕಿ ಹಿಂಡು ಗೂಡುಕಟ್ಟಿ ಪುಟ್ಟ ಪಕ್ಷಿಧಾಮವೇ ಅಲ್ಲಿ ರೂಪುಗೊಂಡಿದೆ.

ನಟ ಯಶ್‌ ಅವರ ಯಶೋಮಾರ್ಗ ಫೌಂಡೇಷನ್‌ ಮೂಲಕ ಅಭಿವೃದ್ಧಿ ಮಾಡಲಾದ ತಲ್ಲೂರು ಕೆರೆಯಲ್ಲಿ ಈಗ ಉತ್ತಮ ಪ್ರಮಾಣದ ನೀರು ಇದೆ.

ಮಲಿನತೆಗೆ ಬೇಕು ಕಡಿವಾಣ: ಎಲ್ಲ ಕೆರೆಕಟ್ಟೆಗಳೇನೋ ತುಂಬಿವೆ ನಿಜ. ಆದರೆ, ಈ ನೀರ ದಂಡೆಗಳಲ್ಲೇ ಬಯಲುಶೌಚ ನಿತ್ಯದ ಸಾಮಾನ್ಯ ನೋಟವಾಗಿಬಿಟ್ಟಿದೆ.

ಇದೇ ನೀರನ್ನು ಕುಡಿಯಲು ಬಳಸುವ ಅನಿವಾರ್ಯತೆಯೂ ಹಲವು ಗ್ರಾಮಗಳಲ್ಲಿದೆ.

ಯಲಬುರ್ಗಾ ತಾಲ್ಲೂಕು ಬನ್ನಿಕೊಪ್ಪ, ಕವಲೂರು ಗ್ರಾಮಗಳಲ್ಲಿ ಕೆರೆ ನೀರಿಗೆ ಕಾವಲುಗಾರರು ಇದ್ದಾರೆ. ಎಲ್ಲ ಕಡೆಯೂ ಇಂಥ ವ್ಯವಸ್ಥೆ ಬೇಕು ಅಥವಾ ಜಾಗೃತಿ ಮೂಡಿಸಬೇಕು ಎಂದು ಹೇಳಿತ್ತಾರೆ ನೀರಿನ ಬಗ್ಗೆ ಕಾಳಜಿಯುಳ್ಳವರು.
**
ನೀರಿಲ್ಲದ ಬರದ ನಾಡು ಎಂದು ಕೈಕಟ್ಟಿ ಕೂರುವುದಲ್ಲ. ಇರುವ ನೀರನ್ನು ಎಚ್ಚರಿಕೆಯಿಂದ ಬಳಸಿದರೆ ಎಂಥ ಬೇಸಿಗೆಯನ್ನಾದರೂ ನಿಭಾಯಿಸಬಹುದು.
– ದೇವರಾಜ, ಬಾನಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT