ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಗೌಡರ ಮಾರ್ಗದರ್ಶನದಿಂದ ಶಾಸಕನಾದೆ

Last Updated 22 ಮಾರ್ಚ್ 2018, 12:35 IST
ಅಕ್ಷರ ಗಾತ್ರ

ಶಕ್ತಿನಗರ: ‘ನಾನು ಶಾಸಕನಾಗಿ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಕನಸೂ ಸಹ ಕಂಡಿಲ್ಲ. ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ ಅವರ ಮಾರ್ಗದರ್ಶನದಲ್ಲಿ ರಾಜಕೀಯದಲ್ಲಿ ಬೆಳೆದು ಶಾಸಕ ಆಗುವುದಕ್ಕೆ ಸಾಧ್ಯವಾಯಿತು’ ಎಂದು ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್‌ ಮೊದಲಿನ ದಿನಗಳನ್ನು ನೆನಪಿಸಿಕೊಂಡರು.

‘ರಾಜಕಾರಣದಲ್ಲಿ ಬೆಳೆಯಬೇಕು ಎನ್ನುವ ಆಸಕ್ತಿ ಇತ್ತು. ಇದೇ ಕಾರಣದಿಂದ ಶಿಕ್ಷಕ ವೃತ್ತಿಗೆ 2011ರಲ್ಲಿ ರಾಜಿನಾಮೆ ನೀಡಿದೆ. ಸಚಿವರಾಗಿದ್ದ ಶಿವನಗೌಡ ನಾಯಕ ಅವರ ಆಪ್ತ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದೆ. ಅವರ ಮಾರ್ಗದರ್ಶನದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ. ಸಭೆ–ಸಮಾರಂಭ, ಹೋರಾಟಗಳಲ್ಲಿ ಯಾವ ರೀತಿಯಾಗಿ ಮಾತನಾಡಬೇಕು ಎಂಬುದನ್ನು ಅವರಿಂದಲೇ ಕಲಿತುಕೊಂಡೆ’ ಎಂದು ರಾಜಕೀಯ ಗುರಿವಿಗೆ ಕೃತಜ್ಞತೆ ಸಲ್ಲಿಸಿದರು.

ರಾಯಚೂರು ಗ್ರಾಮೀಣ ಪರಿಶಿಷ್ಟ ಪಂಗಡದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದೆ. ಅದಕ್ಕೂ ಮೊದಲು, ಶಿವನಗೌಡ ಅವರ ಜೊತೆ ಚರ್ಚಿಸಿದೆ. ಗ್ರಾಮೀಣ ಕ್ಷೇತ್ರದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತು, ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸಲಹೆ ಸೂಚನೆಗಳನ್ನು ನೀಡಿದರು.

ಅವರ ಮಾರ್ಗದರ್ಶನದಂತೆ ಪ್ರಥಮ ಬಾರಿಗೆ ಯಾಪಲದಿನ್ನಿ ಗ್ರಾಮದಿಂದ ಹೋರಾಟ ಆರಂಭಿಸಿ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದೆ. ಅಲ್ಲಿಂದ ಕ್ಷೇತ್ರದ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು, ವೃದ್ಧಾಪ್ಯ ವೇತನ, ಸೂರು ಇಲ್ಲದವರಿಗೆ ಆಶ್ರಯ ಮನೆಗಳನ್ನು ಕಲ್ಪಿಸುವಂತೆ ಸೇರಿದಂತೆ ವಿವಿಧ ಜನಪರ ಸಮಸ್ಯೆಗಳ ಬಗ್ಗೆ ಧರಣಿ, ಹೋರಾಟಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆ ಯುವ ಕೆಲಸವನ್ನು ಶಾಸಕನಾಗುವ ಪೂರ್ವ ದಲ್ಲಿಯೆ ಮಾಡಿದ್ದೇನೆ ಎಂದರು.

‘ಶಿವನಗೌಡ ನಾಯಕ ಅವರು ಸಚಿವರಾಗಿದ್ದಾಗ ಹಲವು ಬಾರಿ ವಿಧಾನಸಭೆಗೆ ಹೋಗಿದ್ದೇನೆ. ಅಲ್ಲಿ ನಡೆಯುವ ಅಧಿವೇಶನದ ಕಾರ್ಯ ಕಲಾಪಗಳಲ್ಲಿ ಪ್ರಶ್ನೆ ಹೇಗೆ ಕೇಳುತ್ತಾರೆ ಎಂಬುದನ್ನು ಪ್ರತ್ಯೇಕ್ಷ ಅನುಭವ ಇತ್ತು. ಆದ್ದರಿಂದ ಶಾಸಕನಾದ ಮೇಲೆ ಪ್ರತಿ ಅಧಿವೇಶನದಲ್ಲಿ 10 ಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ’ ಎಂದು ಹೇಳಿದರು.

ಮತದಾರರ ಮನೆ ಮನೆಗೆ ಭೇಟಿ ನೀಡಿ ನನ್ನನ್ನು ಗೆಲ್ಲಿಸಿದರೆ ಹಳ್ಳಿಗಳ ರಸ್ತೆ ದುರಸ್ತಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ನಿರಂತರ ವಿದ್ಯುತ್ ಒದಗಿಸುವ ಬಗ್ಗೆ ಭರವಸೆ ನೀಡಿದೆ. ನನ್ನ ನಂಬಿ ಗೆಲ್ಲಿಸಿದರು. ಮತದಾರರಿಗೆ ಕೊಟ್ಟ ಮಾತಿನಂತೆ ಶಾಸಕನಾದ ಮೇಲೆ ಪ್ರಥಮ ಬಾರಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಯಾಪಲದಿನ್ನಿ, ಯರಗೇರಾದಲ್ಲಿರುವ 33 ಕೆವಿ ವಿದ್ಯುತ್ ಪರಿವರ್ತಕ ಗಳನ್ನು 110 ಕೆವಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಂತೆ ಕೋರಿದೆ. ಈಗಾಗಲೇ ಆ ಎರಡು ವಿದ್ಯುತ್ ಕೇಂದ್ರದ ಕಚೇರಿಗಳಲ್ಲಿ 110 ಕೆವಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ ಎಂದರು.

ಶಕ್ತಿನಗರ ಸ್ಲಂ ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕು. ರಾಯಚೂರು ತಾಲ್ಲೂಕುನಲ್ಲಿ 24X7 ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಸೇರಿದಂತೆ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಕುರಿತು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ರಾಜ್ಯದ ಜ್ವಲಂತ ಸಮಸ್ಯೆಗೆ ಕುಡಿಯುವ ನೀರಿನ ಪರಿಹಾರ ಕಂಡು ಕೊಳ್ಳಲು ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರು ಎಂದು ಹೇಳಿದರು.
**
ಬಿ.ಇಡಿ ಪದವೀಧರ
ಇವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ವನದುರ್ಗದವರು. ವನದುರ್ಗ ಗ್ರಾಮದಲ್ಲಿ ಪ್ರಾಥಮಿಕ, ಸಿಂದಗಿಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯುಸಿ ವಿಜ್ಞಾನ ನಂತರ ಬಿಎ– ಬಿ.ಇಡಿ ಓದಿದ್ದಾರೆ.

ತಾಯಿ ಗೌರಮ್ಮ ಅವರು ವನದುರ್ಗ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ತಂದೆ ಸಿದ್ದಯ್ಯ ಹವಾಲ್ದಾರ್‌ ಅವರು ಶಹಾಪುರ ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT