ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನಿಕೆರೆಯಿಂದಲೇ ಉತ್ತರ ಹುಡುಕೋಣ

ಕೆರೆಗಳು ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿ; ಹಾಗಾದರೆ ಕೆರೆಗಳು ತುಂಬಲು ಏನು ಮಾಡಬೇಕು?
Last Updated 22 ಮಾರ್ಚ್ 2018, 13:00 IST
ಅಕ್ಷರ ಗಾತ್ರ

ತುಮಕೂರು: ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ... ಎರಡು–ಮೂರು ದಶಕಗಳ ಹಿಂದೆ ಮೂವತ್ತು–ನಲವತ್ತು ಅಡಿಗಳಿಗೆ ನೀರು ಸಿಗುತ್ತಿದ್ದ ಜಿಲ್ಲೆಯಲ್ಲಿ ಅಂತರ್ಜಲ 1200ರಿಂದ1500 ಅಡಿಗೆ ಹೋಗಿದೆ. ದಿನೇ ದಿನೇ ಗಂಭೀರವಾಗುತ್ತಿರುವ ನೀರಿನ ಸಮಸ್ಯೆಗೆ ಉತ್ತರವನ್ನು ಎಲ್ಲಿಂದ ಹುಡುಕೋಣ?

‘ತಲಪರಿಗೆ, ಸಾಲು ಕೆರೆಗಳ ಮೂಲಕ ನೀರಿನ ಸಾಕ್ಷರತೆಯನ್ನು ಮನಗಂಡಿದ್ದ ಜಿಲ್ಲೆಯಲ್ಲಿ ಈಗ ನೀರಿನ ಕುರಿತು ಅಜ್ಞಾನ ಹೆಚ್ಚುತ್ತಿದೆ.
ಮಳೆ ನೀರು ಸಂಗ್ರಹ ಇಂದಿಗೂ ಪ್ರಾಮುಖ್ಯತೆಯನ್ನೇ ಪಡೆದಿಲ್ಲ’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ನಿವೃತ್ತ ಎಂಜಿನಿಯರ್‌ ರಾಮಚಂದ್ರಯ್ಯ.

ಜಿಲ್ಲೆಯಲ್ಲಿ  1457 ಕೆರೆಗಳಿವೆ (ಗೋಕಟ್ಟೆ, ಕಲ್ಯಾಣಿ, ಗುಂಡುಗಟ್ಟೆ ಹೊರತುಪಡಿಸಿ). ಇವುಗಳ ನೀರಿನ ಸಾಮರ್ಥ್ಯ 23.52 ಟಿಎಂಸಿ ಅಡಿ. ಜಿಲ್ಲೆಯ ವಾರ್ಷಿಕ ಮಳೆಯ ವಾಡಿಕೆ ಪ್ರಮಾಣ ಸರಿ ಸುಮಾರು 70 ಸೆಂಟಿ ಮೀಟರ್‌ (697. 3 ಮಿಲಿ ಮೀಟರ್‌).

ಜಿಲ್ಲೆಯ ಭೌಗೋಳಿಕ ವ್ಯಾಪ್ತಿ ಲೆಕ್ಕಕ್ಕೆ ತೆಗೆದುಕೊಂಡರೆ ಮಳೆಯಿಂದಲೇ ಸುಮಾರು 80 ಟಿಎಂಸಿ ಅಡಿ ನೀರು ಸಿಗುತ್ತಿದೆ. ಈ ನೀರಿನಲ್ಲೆ ಜಿಲ್ಲೆಯ ಎಲ್ಲ ಕೆರೆಗಳು ತುಂಬಿ ಕೋಡಿ ಬೀಳಬೇಕಿತ್ತು? ಆದರೆ ಒಂದು ದಶಕದಿಂದೀಚೆಗೆ ಸರಿಯಾಗಿ ಕೆರೆಗಳೇ ತುಂಬುತ್ತಿಲ್ಲ ಏಕೆ?

ಕಾವೇರಿ, ಕೃಷ್ಣಾ, ಪೆನ್ನಾರ ನೀರಾವರಿ ಕೊಳ್ಳದಲ್ಲಿ ಜಿಲ್ಲೆಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಮೂರು ನೀರಾವರಿ ಕೊಳ್ಳಗಳು ಹರಿದರೂ ನೀರಿಗೆ ಮಾತ್ರ ಬರ ತಪ್ಪಿಲ್ಲ. ಪೆನ್ನಾರ್‌ ಕೊಳ್ಳದಲ್ಲಿ ಉತ್ತರ ಪಿನಾಕಿನಿ ನದಿಯ ಉಪ ನದಿಗಳಾಗಿ ಜಯಮಂಗಲಿ, ಕುಮುದ್ವತಿ ನದಿಗಳಿವೆ. ಕಾವೇರಿಕೊಳ್ಳದಲ್ಲಿ ಶಿಂಷಾ, ನಾಗಿನಿ ನದಿಗಳಿವೆ. ಕೃಷ್ಣಾಕೊಳ್ಳದಲ್ಲಿ (ಭದ್ರಾ ಕೆಳದಂಡೆ) ವೇದಾವತಿ ಮತ್ತು ಸುವರ್ಣಮುಖಿ ನದಿಗಳಿವೆ.

ವಾಡಿಕೆಗಿಂತ ಹೆಚ್ಚುಪಟ್ಟು ಮಳೆ ಬೀಳುತ್ತಿದ್ದರೂ ಕೆರೆಗಳು ತುಂಬದೇ ಇರಲು ಮುಖ್ಯವಾಗಿ ಎರಡು ಕಾರಣಗಳಿವೆ ಎನ್ನುತ್ತಾರೆ ತಜ್ಞರು. ಒಂದು; ಜೋರು ಮಳೆಯಾಗದ ಕಾರಣ ನೀರು ಭೂಮಿಯಲ್ಲಿ ಹರಿದು ಕೆರೆ ಸೇರುತ್ತಿಲ್ಲ. ಎರಡು; ಕೆರೆಯ ಜಲಾನ
ಯನ, ರಾಜಕಾಲುವೆಗಳ ಒತ್ತುವರಿ ಹಾಗೂ ಅಕ್ರಮ ಮರಳು ಗಣಿಗಾರಿಕೆ.

’ಒಂದೇ ದಿನ 8ರಿಂದ 10 ಸೆಂಟಿ ಮೀಟರ್‌ ಮಳೆಯಾದರೆ ಕೆರೆಗಳಿಗೆ ನೀರು ಹರಿದುಬರುತ್ತದೆ. ಆದರೆ ಆ ರೀತಿ ಆಗುತ್ತಿಲ್ಲ. ಕೆರೆಗಳು ತುಂಬುತ್ತಿಲ್ಲ. ಆದರೆ ಕಡಿಮೆ ಮಳೆಯಾದರೂ ಕೆರೆ ತುಂಬಬೇಕಾದರೆ ಕೆರೆಗೆ ನೀರು ಬರುವ ಎಲ್ಲ ಮಾರ್ಗ
ಗಳನ್ನು ಸ್ವಚ್ಛವಾಗಿಡಬೇಕು ಹಾಗೂ ತೆರೆದಿಡಬೇಕು’ ಎಂದು ರಾಮಚಂದ್ರಯ್ಯ ಅಭಿಪ್ರಾಯಪಡುತ್ತಾರೆ.

ಕೆರೆಗಳಿಗೆ ಹೂಳು ತುಂಬಿರುವುದು ನೀರಿನ ಸಮಸ್ಯೆಗೆ ಕಾರಣವಾಗಿಲ್ಲ; ಬದಲಿಗೆ ಕೆರೆಗಳು ತುಂಬದಿರುವುದೇ ಅಂತರ್ಜಲ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಬಹಳಷ್ಟು ರೈತರು.

’ತುಮಕೂರು ಅಮಾನಿಕೆರೆ ಸಹ ಹಲವು ವರ್ಷಗಳಿಂದ ತುಂಬಿರಲಿಲ್ಲ. ಹೇಮಾವತಿ ನೀರು ಬಿಟ್ಟು ಕೆರೆ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಕಳೆದ ವರ್ಷ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ಐದು ರಾಜಕಾಲುವೆಗಳ ಪೈಕಿ ಎರಡರ ಒತ್ತುವರಿ ತೆರವುಗೊಳಿಸಲಾಯಿತು. ಪರಿಣಾಮ, ಒಂದೇ ದಿನ ಅರ್ಧ ಕೆರೆಯಷ್ಟು ನೀರು ಸಂಗ್ರಹವಾಯಿತು. ಇಷ್ಟೇ ಮಳೆಯಾದರೂ ನಗರದಲ್ಲೇ ಇರುವ ಗಾರೆನರಸಯ್ಯನ ಕಟ್ಟೆ ಕೆರೆಗೆ ನೀರು ಬರಲಿಲ್ಲ,  ಗೂಳೂರು ಕೆರೆಗೂ ನೀರ ಬರಲಿಲ್ಲ ಏಕೆ’ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಅಮಾನಿಕೆರೆಗೆ ಬಂದ ನೀರು ನಗರದ ಸುತ್ತ ಇರುವ ಹದಿನಾಲ್ಕು ಕೆರೆಗಳಿಗೂ ಬರಲಿಲ್ಲ. ಇದರಿಂದ ಕಲಿಯಬೇಕಾದ  ಪಾಠ ಸ್ಪಷ್ಟವಾಗಿದೆ. ರಾಜಕಾಲುವೆ, ಜಲ ಮಾರ್ಗಗಳ ಒತ್ತುವರಿಯೇ ಜಿಲ್ಲೆಯಲ್ಲಿ ಕೆರೆಗಳು ತುಂಬದಿರಲು ಕಾರಣ. ಇವುಗಳ  ಒತ್ತುವರಿ ತೆರವುಗೊಳಿಸಿದರೆ ಕೆರೆಗಳು ತುಂಬಲಿವೆ ಎಂಬ ಉತ್ತರ ಅಮಾನಿಕೆರೆಯಲ್ಲಿ ಸಿಕ್ಕಿದೆ. ಅಮಾನಿಕೆರೆಯಲ್ಲೆ ಜಿಲ್ಲೆಯ ನೀರಿನ ಸಮಸ್ಯೆಗೆ ಉತ್ತರ ಅಡಗಿದೆ.
**
ಮಳೆ ಹೆಚ್ಚು ಬಂದರೂ ಕೆರೆಗಳು ತುಂಬಲಿಲ್ಲ?
ಕಳೆದ ಮೂರು ವರ್ಷಗಳ ಮಳೆ ಪ್ರಮಾಣ ತೆಗೆದುಕೊಂಡರೆ ಅಚ್ಚರಿ ಎದ್ದು ಕಾಣುತ್ತದೆ. 2016ರಲ್ಲಿ ಜಿಲ್ಲೆಯ ವಾಡಿಕೆ  ಪ್ರಮಾಣಕ್ಕಿಂತ ಶೇ26ರಷ್ಟು ಮಳೆ ಕಡಿಮೆಯಾಗಿತ್ತು. ಅಂದರೆ 697 ಮಿಲಿ ಮೀಟರ್‌ ಬದಲಿಗೆ ಕೇವಲ 515 ಮಿಲಿ ಮೀಟರ್‌ ಮಳೆಯಾಗಿತ್ತು. ಆದರೆ 2015ನೇ ರಲ್ಲಿ 995 ಮಿಲಿ ಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 43ರಷ್ಟು ಹೆಚ್ಚುವರಿ. ಆದರೂ ಆ ವರ್ಷವೂ ಜಿಲ್ಲೆ ಬರಗಾಲವನ್ನು ಎದುರಿಸಬೇಕಾಯಿತು. ಕೆರೆಗಳು ಖಾಲಿಯೇ ಇದ್ದವು.

ಕಳೆದ ವರ್ಷ ಸಹ (2017) ಬರಗಾಲ ಕಾಡಿತು. ಆದರೆ ಮಳೆ ವಾಡಿಕೆಗಿಂತ ಶೇ 21ರಷ್ಟು (787 ಮಿಲಿ ಮೀಟರ್‌) ಹೆಚ್ಚು ಬಿದ್ದಿತ್ತು. ಆದರೂ ಜಿಲ್ಲೆಯಲ್ಲಿ ಕೆರೆಗಳು ತುಂಬಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT