ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಂ ಮತ ಒಡೆಯಲು ಭೂಸನೂರ ಯತ್ನ’

ಯುವಕರು, ಮಹಿಳೆಯರು ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಎಸ್‌ಪಿ ಮುಖಂಡ ದಸ್ತಗೀರ ಆರೋಪ
Last Updated 22 ಮಾರ್ಚ್ 2018, 13:20 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕು ಜೆಡಿಎಸ್ ಬುಧವಾರ ನಗರದ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ತಾಂಬಾ, ಬಮ್ಮನಹಳ್ಳಿ, ಆಲಮೇಲ, ಕೊಕಟನೂರ, ಮೋರಟಗಿ, ತಿಳಗೂಳ, ಕೆರೂಟಗಿ, ಕೆರೂಟಗಿ ಎಲ್.ಟಿ ಗ್ರಾಮಗಳ ಸಾವಿರಾರು ಯುವಕರು, ನೂರಾರು ಮಹಿಳೆಯರು ಕಾಂಗ್ರೆಸ್–ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ಈ ಭಾಗದ ಪ್ರಬಲ ಸಮುದಾಯದ ರಾಜಕಾರಣಿ ಗುರನಗೌಡ ಪಾಟೀಲ ನಾಗಾಂವಿ, ತಮ್ಮನಗೌಡ ಪಾಟೀಲ, ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ ಅವರು ಯುವಕರು–ಮಹಿಳೆಯರಿಗೆ ಪಕ್ಷದ ಧ್ವಜ ಕೊಟ್ಟು, ಕೊರಳಿಗೆ ಜೆಡಿಎಸ್ ಶಲ್ಯ ಹಾಕುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ‘ಸಿಂದಗಿ ಮತಕ್ಷೇತ್ರದಲ್ಲಿ ಪರಿವರ್ತನೆಯ ಗಾಳಿ ಬೀಸಿದೆ. ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೊರೆದು ಜೆಡಿಎಸ್ ನತ್ತ ಭಾರಿ ಒಲವು ತೋರಿಸುತ್ತಿದ್ದಾರೆ. ಒಟ್ಟಾರೆ ಈ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎಂ.ಸಿ.ಮನಗೂಳಿ ಪರ ಅಲೆ ಕಂಡು ಬರುತ್ತಿದೆ’ ಎಂದರು.

‘10 ವರ್ಷಗಳ ಕಾಲ ಶಾಸಕ ರಮೇಶ ಭೂಸನೂರ ಮಾಡಿರುವುದು ಶೂನ್ಯ ಅಭಿವೃದ್ಧಿ. ಕೋಮುಗಲಭೆಗೆ ಪ್ರಚೋದನೆ ಕೊಡುವ ಮೂಲಕ ಮುಸ್ಲಿಂ ಮತಗಳನ್ನು ಒಡೆಯುವ ಕುತಂತ್ರ ನೀತಿ ಅನುಸರಿಸಿ ಮನಗೂಳಿ ಮೇಲೆ ಸುಳ್ಳು ಆರೋಪ ಹೊರಿಸುವ ಹುನ್ನಾರ ನಡೆಸಿದ್ದಾರೆ’ ಎಂದು ಭೂಸನೂರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಟಿಪ್ಪು ಸುಲ್ತಾನ್‌ ಅಭಿಮಾನಗಳ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ನೂರ್‌ ಅಹ್ಮದ್‌ ಅತ್ತಾರ್ ಮಾತನಾಡಿ, ‘ಬಿಜೆಪಿ ಮುಸ್ಲಿಂ ವಿರೋಧಿ ಎಂಬುದು ಮುಸ್ಲಿಮರಿಗೆ ಗೊತ್ತಿರಲಿ. ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದಲ್ಲಿ ಭಾಗವಹಿಸದ ಶಾಸಕ ಭೂಸನೂರ ಮಾಜಿ ಸಚಿವ ಮನಗೂಳಿ ವಿರುದ್ಧ ಸುಳ್ಳು ಆರೋಪ ಹೊರಿಸಲು ಯತ್ನಿಸಿದರು. ಆದರೆ, ಅವರ ವಿರುದ್ಧ ಪ್ರತಿಭಟನೆ ನಡೆಲು ಪ್ರಚೋದನೆ ಕೊಟ್ಟಿರುವುದು ನಾಚಿಕೆಗೇಡು’ ಎಂದರು.

‘ಈ ಸಲ ಅವರ ತಂತ್ರ–ಕುತಂತ್ರ ಫಲಿಸುವುದಿಲ್ಲ. ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ. ಶಾಸಕ ಭೂಸನೂರ ರಾತ್ರಿ ನನ್ನ ಮನೆಗೆ ಬಂದು ಬಿಜೆಪಿಗೆ ಬೆಂಬಲಿಸಿದರೆ ಎಂಬ ಆಮಿಷ ತೋರಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ರಾಜಕೀಯ ಕಡು ವೈರಿಗಳಾಗಿದ್ದ ನಾನು ಮತ್ತು ನನ್ನ ಮಾವ ಗುರನಗೌಡ ಒಂದಾಗಿದ್ದು, ಮನಗೂಳಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದೇವೆ’ ಎಂದು ನಾಗಾಂವಿ ಗ್ರಾಮದ ಗಣ್ಯರಾದ ತಮ್ಮನಗೌಡ ಪಾಟೀಲ ಘೋಷಿಸಿದರು.

ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಶೈಲಜಾ ಸ್ಥಾವರಮಠ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈಗಾಗಲೇ ಸೀರೆ–ಬಾಂಡೆ ಸಾಮಾನು ಹಂಚುತ್ತಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಯುವ ಧುರೀಣ ಅಶೋಕ ಮನಗೂಳಿ ಮಾತನಾಡಿ, ‘ಮತಕ್ಷೇತ್ರದ 108 ಗ್ರಾಮಗಳಿಗೆ 2–3 ಬಾರಿ ಭೇಟಿ ನೀಡಿ ಎಲ್ಲರ ಜೊತೆ ಸಮಾಲೋಚನೆ ನಡೆಸಲಾಗಿದೆ. ಮುಸ್ಲಿಂ ಮತದಾರರು ಜೆಡಿಎಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನು ಸಹಿಸದ ಶಾಸಕ ಭೂಸನೂರ ಮುಸ್ಲಿಂ ಮತ ವಿಭಜನೆಗೆ ಕುತಂತ್ರ ನಡೆಸುತ್ತಿರುವುದು ಖಂಡನೀಯ’ ಎಂದರು.

ಡಾ.ರಾಜಶೇಖರ ಸಂಗಮ, ಪರಶುರಾಮ ಕಾಂಬಳೆ ಮಾತನಾಡಿ, ‘ಶಾಸಕ ಭೂಸನೂರ ನನಗೆ ಸಿಂದಗಿ ನಗರದ ಮತ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಈ ಸಲ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಗಿರೀಶಗೌಡ ಪಾಟೀಲ ಯರಗಲ್, ಬಿ.ಕೆ, ರಮೇಶ ಹೆಬ್ಬಾಳ ಚಿಕ್ಕಸಿಂದಗಿ, ವಿಜುಗೌಡ ಪಾಟೀಲ ಕನ್ನೊಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಾಂತಗೌಡ ಪಾಟೀಲ ಮಲಘಾಣ ಇದ್ದರು. ಸಲೀಂ ಜುಮನಾಳ, ಷಣ್ಮುಖಯ್ಯ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT