ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ, ನಟನೆ ಮತ್ತು ಮಾನಸಾ

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತಲೆಯ ಮೇಲೊಂದು ಕಿರೀಟ. ಮೈ ಮೇಲೆ ಮಣಭಾರದ ಸೀರೆ. ಮೂಗಿನ ಮೇಲೆ ಅಗಲವಾದ ನತ್ತು. ಮೈತುಂಬಾ ಆಭರಣ. ಕೈಯಲ್ಲೊಂದು ತ್ರಿಶೂಲ. ದೈವತ್ವವೇ ಮೈದುಂಬಿಕೊಂಡಂತೆ ಕಾಣುವ ಈ ದೇವತೆ ‘ಮಹಾದೇವಿ’ ಧಾರಾವಾಹಿಯ ದೇವಿ.

ಈ ದೇವಿಯ ನಿಜನಾಮಧೇಯ ಮಾನಸಾ ಮಹೇಶ್ ಜೋಶಿ. ಬಾಲ್ಯದಿಂದಲೂ ಅವರು ಕಲಾ ಆರಾಧಕಿ. ಭರತನಾಟ್ಯ, ಕಥಕ್ ಕಲಿಯುವ ಮೂಲಕ ತಮ್ಮ ಕಲಾ ಪಯಣಕ್ಕೆ ಆರಂಭದ ನಿಶಾನೆ ತೋರಿದವರು.

ವಿದ್ಯುನ್ಮಾನ ಮಾಧ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಬಣ್ಣದ ಲೋಕ. ಹಿನ್ನೆಲೆ ಅರಿಯದೆ, ತರಬೇತಿ ಇಲ್ಲದೇ ಯಾವುದೇ ಕ್ಷೇತ್ರಕ್ಕೂ ಕಾಲಿರಿಸಬಾರದು ಎಂಬ ಭಾವನೆ ಮನಸ್ಸಿನಲ್ಲಿತ್ತು. ನಟನೆಗೆ ಅಡಿಯಿಡಲು ಒಂದಷ್ಟು ಸಿದ್ಧತೆ ಬೇಕೆನಿಸಿದಾಗ ಅವರು ಸಾಗಿದ್ದು ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯತ್ತ. ಅಲ್ಲಿ ಪೂರ್ಣ ತರಬೇತಿ ಪಡೆದು ಬೆಂಗಳೂರಿಗೆ ಬಂದ ಮೇಲೆ ಕೆಲಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಾಟಕಗಳಲ್ಲಿ ನಟಿಸುತ್ತಿರುವಾಗಲೇ ಹಿರಿತೆರೆಯ ಬಾಗಿಲು ಅವರಿಗಾಗಿ ತೆರೆದುಕೊಂಡಿತ್ತು. ಚೊಚ್ಚಲ ಚಿತ್ರ ಸಿಂಪಲ್ ಸುನಿ ನಿರ್ದೇಶನದ ‘ಬಹುಪರಾಕ್‌’. ಮುಂದೆ ‘ಲಾಸ್ಟ್‌ಬಸ್‌’, ‘ದೇವರನಾಡಲ್ಲಿ’, ‘ಯಶೋಗಾಥೆ’, ‘ಕಿರಗೂರಿನ ಗಯ್ಯಾಳಿಗಳು’ ಹೀಗೆ ಸಾಗಿತ್ತು ಅವರ ಸಿನಿಮಾ ಯಾತ್ರೆ. ‘ಹಜ್‌’ ಹಾಗೂ ‘ಕೌದಿ’ ಸಿನಿಮಾಕ್ಕೂ ಬಣ್ಣ ಹಚ್ಚಿದ್ದರು ಈ ಸುಂದರಿ.

ನೃತ್ಯ, ನಟನೆ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರದಲ್ಲೂ ತಮ್ಮ ಹೆಜ್ಜೆಗುರುತು ಮೂಡಿಸಿದ್ದ ಅವರನ್ನು ಹೆಚ್ಚು ಸೆಳೆದದ್ದು ನೃತ್ಯ. ನೃತ್ಯದ ಮೇಲೆ ಒಲವು ಹೆಚ್ಚಿದಂತೆ ಕ್ರೀಡೆಯಿಂದ ದೂರ ಸರಿದು ಪೂರ್ಣ ಪ್ರಮಾಣದಲ್ಲಿ ನೃತ್ಯಗಾರ್ತಿಯಾದರು. ಕಥಕ್ ನೃತ್ಯಗಾತಿ ಆಗಿರುವ ಅವರು ಆಗಾಗ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ‘ಮಹಾದೇವಿ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂದಿತ್ತು. ಸಿನಿಮಾದಿಂದ ಧಾರಾವಾಹಿಯತ್ತ ಮನಸ್ಸು ಹೊರಳಿದಾಗ ಅನೇಕರು ಅವರ ಆತ್ಮವಿಶ್ವಾಸ ಕುಗ್ಗಿಸುವ ಮಾತನಾಡಿದರೆ ಇನ್ನು ಕೆಲವರು ‘ದೇವಿ ಪಾತ್ರ ಎಲ್ಲರಿಗೂ ಸಿಗುವುದಿಲ್ಲ. ನೀನು ಆ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಕಾಣುತ್ತೀಯ... ಒಪ್ಪಿಕೋ’ ಎಂದು ಧೈರ್ಯ ತುಂಬಿದ್ದರು. ಮೊದಲ ಆರು ತಿಂಗಳು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣದಿಂದಾಗಿ ಮಹಾದೇವಿಯಲ್ಲಿ ನಟಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ಅವರು, ಕೊನೆಗೂ ಈ ಪಾತ್ರವನ್ನು ಸವಾಲಿನಂತೆ ಸ್ವೀಕರಿಸಿ ಒಪ್ಪಿಕೊಂಡಿದ್ದರು.

ರಂಗಭೂಮಿ ಬಗ್ಗೆ ತುಂಬು ಅಭಿಮಾನದಿಂದ ಮಾತನಾಡುವ ಮಾನಸಾ ಈಗಲೂ ಅವಕಾಶ ಸಿಕ್ಕರೆ ನಟಿಸುವ ಹಂಬಲ ತೋರುತ್ತಾರೆ. ‘ನೃತ್ಯ, ನಾಟಕ, ನಟನೆ ಎಲ್ಲವನ್ನೂ ಒಟ್ಟಿಗೆ ನಿರ್ವಹಿಸಲು ಸಾಧ್ಯವಿಲ್ಲ. ಒಟ್ಟಿಗೇ ಮಾಡಿದರೆ ಸಫಲತೆ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ, ನಟನೆಯ ಮೇಲೆ ಗಮನ ಹರಿಸಿದ್ದೇನೆ’ ಎನ್ನುತ್ತಾರೆ.

ನೃತ್ಯಗಾರ್ತಿಯ ಜೀವನ ಆಧರಿಸಿದ ಕಥೆ ಇರುವ ಚಿತ್ರದಲ್ಲಿ ನಟಿಸುವ ಹಂಬಲ ಹೊಂದಿರುವ ಅವರು ಪರದೆ ಮೇಲೆ ಕಾಣುವ ಬಣ್ಣದ ಲೋಕದ ಹಿಂದೆ ಸಾಕಷ್ಟು ಪರಿಶ್ರಮವಿದೆ. ಪರದೆ ಹಿಂದಿನ ಕಷ್ಟದ ಬಗ್ಗೆ ಜನರಿಗೆ ಅರಿವಿರುವುದಿಲ್ಲ. ನಟಿಸುವುದು ತಾನೇ? ಯಾರು ಬೇಕಾದರೂ ನಟಿಸಬಹುದು ಎಂದು ಅನೇಕರು ಉಡಾಫೆಯ ಮಾತನಾಡುತ್ತಾರೆ.ಆದರೆ, ರಂಗಿನ ಲೋಕದಲ್ಲಿ ಸಾಕಷ್ಟು ಶ್ರಮವಹಿಸಿದರಷ್ಟೇ ಯಶಸ್ಸು ಕಾಣಲು ಸಾಧ್ಯ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಸಿನಿಮಾ, ಕಿರುತೆರೆ ಬಗ್ಗೆ ಖುಷಿಯಿಂದ ಮಾತನಾಡುವ ಅವರು, ‘ನನಗೆ ಇಲ್ಲಿ ಸಿಗುವ ಆತ್ಮತೃಪ್ತಿ ತುಂಬಾ ಇಷ್ಟವಾಗುತ್ತದೆ. ಈ ಕ್ಷೇತ್ರದಲ್ಲಿ ನಾವು ನಿರ್ವಹಿಸುವ ಭಿನ್ನ ಪಾತ್ರಗಳನ್ನು ಬೇರೆ ಯಾವ ಕ್ಷೇತ್ರದಲ್ಲೂ ನಿರ್ವಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

ಇಲ್ಲಿ ನಾವು ಬೇಕಾದಾಗ ಡಾಕ್ಟರ್, ಲಾಯರ್, ಐ.ಪಿ.ಎಸ್. ಅಧಿಕಾರಿ ಹೀಗೆ ಏನು ಬೇಕಾದರೂ ಆಗಬಹುದು. ನಮ್ಮನ್ನು ನಾವು ಪ್ರಯೋಗಶೀಲತೆಗೆ ಒಗ್ಗಿಕೊಳ್ಳಲು ಇಲ್ಲಿ ಅವಕಾಶಗಳು ಹೆಚ್ಚಿವೆ. ಕನಸು ನನಸು ಮಾಡಿಕೊಳ್ಳಲು ಸಾಧ್ಯ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT