ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕಾಯುವವರು...

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅಂತರ್ಜಲ ಉಳಿಸಿ, ಮಳೆ ನೀರು ಸಂಗ್ರಹಿಸಿ ಎಂಬ ಸಂದೇಶ ನೀಡುವ ಜೊತೆಗೆ ನೀರಕಾಯಕದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ನಗರದಲ್ಲಿವೆ. ವಿಶ್ವ ಜಲದಿನದ ನೆಪದಲ್ಲಿ ಅಂತಹ ಕೆಲವು ಸಂಸ್ಥೆಗಳನ್ನು ಪರಿಚಯಿಸಿಕೊಳ್ಳೋಣ ಬನ್ನಿ.

ಆರ್ಟ್ ಆಫ್ ಲಿವಿಂಗ್‌: ರಾಷ್ಟ್ರಮಟ್ಟದಲ್ಲಿ ಜಲ ಸಂರಕ್ಷಣೆಯ ಮೇಲೆ ಕೆಲಸ ಮಾಡುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ ಐದು ವರ್ಷಗಳಿಂದಲೂ ನದಿ ಪುನಶ್ಚೇತನದಲ್ಲಿ ತೊಡಗಿಸಿಕೊಂಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಜಲ ಸಂರಕ್ಷಣೆಯ ಮಹತ್ವ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ.

ಈ ಸಂಸ್ಥೆ ಮೊದಲು ನೀರಿನ ಸಂರಕ್ಷಣೆ ಸಂಬಂಧಿ ಯೋಜನೆ ರೂಪಿಸುತ್ತದೆ. ಈ ಯೋಜನೆಗೆ ಬೇಕಾದ ತಂತ್ರಜ್ಞರ ತಂಡ ಸಂಸ್ಥೆಯಲ್ಲಿದೆ. ನೀರನ್ನು ಎಲ್ಲಿ ತಡೆಹಿಡಿಯಬೇಕು, ಎಲ್ಲಿ ಮತ್ತು ಹೇಗೆ ಮರುಪೂರಣ ಮಾಡಬೇಕು ಎಂಬೆಲ್ಲ ವಿವರಗಳನ್ನು ರೂಪಿಸಿದ ಮೇಲೆ ತಾಂತ್ರಿಕ ವರದಿ ಸಿದ್ಧಪಡಿಸಿ ಅದರಂತೆ ಕೆಲಸ ಮಾಡುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 275 ಹಳ್ಳಿಗಳನ್ನು ಸೇರಿಸಿಕೊಂಡು ‘ಕುಮುದ್ವತಿ ಜಲಾನಯನ’ ಎಂಬ ಯೋಜನೆ ಪ್ರಗತಿಯಲ್ಲಿದೆ. ಆ ಮೂಲಕ ಆ ಹಳ್ಳಿಗಳಲ್ಲಿ ಇರುವ ಕೆರೆಗಳ ಅಕ್ಕಪಕ್ಕ ಮರಗಳನ್ನು ಬೆಳೆಸುವುದು, ಹಳ್ಳಗಳಲ್ಲಿ ಮಳೆನೀರು ಸಂಗ್ರಹಿಸುವುದು, ಇಂಗುಗುಂಡಿ ನಿರ್ಮಾಣ ಮಾಡುವುದು, ಬೋರ್‌ವೆಲ್‌ಗಳಿಗೆ ರೀಜಾರ್ಜ್ ಮಾಡುವುದು ಈ ಯೋಜನೆಯ ಭಾಗ. ಈ ಮೂಲಕ ಜಲಸಂರಕ್ಷಣೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.

ಈ ಯೋಜನೆಗೆ ಎಚ್‌ಎಎಲ್ ಸಹಭಾಗಿತ್ವವಿದ್ದು ಕಂಪೆನಿಯ ಲಾಭಾಂಶದ ಶೇ ಒಂದರಷ್ಟನ್ನು ಅದು ನದಿ ಪುನಶ್ಚೇತನ ಯೋಜನೆಗೆ ಮೀಸಲಿಟ್ಟಿದೆ. ಹಳ್ಳಿಗಳಿಗೆ ತೆರಳಿ ರೈತರಿಗೆ ತರಬೇತಿ ನೀಡುವ ಮೂಲಕ ಅವರಲ್ಲಿ ನೀರಿನ ಸದ್ಬಳಕೆ ಮಾಡುವ ವಿಧಾನವನ್ನು ಕಲಿಸುವ ಕೆಲಸವನ್ನು ಸಂಸ್ಥೆ ನಿರ್ವಹಿಸುತ್ತಿದೆ.

ರೈನ್ ವಾಟರ್ ಬೋರ್ಡ್‌: ಈ ಸಂಸ್ಥೆ ದಕ್ಷಿಣ ಭಾರತದಾದ್ಯಂತ ಮಳೆನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದರ ಮುಖ್ಯ ಉದ್ದೇಶ ತೆರೆದ ಬಾವಿಗಳಿಗೆ ನೀರನ್ನು ಇಂಗಿಸುವುದು, ಕೊಳವೆ ಬಾವಿಗಳ ಗುಂಡಿಗಳನ್ನು ನಿರ್ಮಿಸುವುದು, ದೊಡ್ಡ ಟ್ಯಾಂಕ್‌ಗಳನ್ನು ಕಟ್ಟಿಸುವುದು (3ಲಕ್ಷ ಲೀಟರ್ ನೀರಿನ ಸಾಮರ್ಥ್ಯ), ಶಾಲೆಗಳಲ್ಲಿ ಮಳೆನೀರು ಕೊಯ್ಲು ಮಾಡುವ ವಿಧಾನದ ತರಬೇತಿ ನೀಡುವುದು.

ಒಟ್ಟಾರೆಯಾಗಿ ರಾಜ್ಯದೆಲ್ಲೆಡೆ 23,000 ಶಾಲೆಗಳಲ್ಲಿ ಮಳೆಕೊಯ್ಲಿನ ಪ್ರಯೋಗ ಯಶಸ್ವಿಯಾಗುವಂತೆ ಮಾಡಿದ ಕೀರ್ತಿ ಈ ಸಂಸ್ಥೆಯದ್ದು. ಇದರ ಸ್ಥಾಪಕರು ಎನ್‌. ಜೆ. ದೇವರಾಜರೆಡ್ಡಿ. ಇವರು ಸುಮಾರು 20ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಮರುಜೀವ ನೀಡಿದ ಹೆಗ್ಗಳಿಕೆ ರೆಡ್ಡಿ ಅವರದು. ಮೊದಲ ಬಾರಿ ಇವರ ಪ್ರಯೋಗ ಯಶಸ್ವಿಯಾಗಿದ್ದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ. 2001ರಲ್ಲಿ ಆ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲಿ ನೀರಿನ ಸಮಸ್ಯೆ ಸಂಪೂರ್ಣ ನೀಗುವಂತೆ ಮಾಡಿ, ಯಶಸ್ಸು ಗಳಿಸಿದ್ದರು. ಅಲ್ಲಿಂದ ಅವರ ಯಶಸ್ಸಿನ ಯಾತ್ರೆ ಆರಂಭವಾಗಿತ್ತು.  ಇದರಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ನಗರದಲ್ಲಿ 500ಕ್ಕೂ ಹೆಚ್ಚು ಮನೆಗಳಲ್ಲಿ ಮಳೆನೀರಿನ ಕೊಯ್ಲು ಮಾಡಿಕೊಂಡು ನೀರಿನ ಸಮಸ್ಯೆ ಇಲ್ಲದೆ ಬದುಕುವಂತೆ ಮಾಡಿದ ಖ್ಯಾತಿ ಸಂಸ್ಥೆಯದ್ದು.

ಇಷ್ಟೇ ಅಲ್ಲದೇ ನೀರಿನ ಮಿತ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮನೆಯಲ್ಲಿ ಪ್ರತಿಯೊಂದಕ್ಕೂ ಕಾವೇರಿ ನೀರನ್ನೇ ಬಳಸಬಾರದು, ಅಡುಗೆ, ಕುಡಿಯಲು, ಸ್ನಾನ ಹೊರತುಪಡಿಸಿದರೆ ಉಳಿದ ಎಲ್ಲಾ ಕೆಲಸಗಳಿಗೂ ಬಳಸಿದ ನೀರನ್ನೇ ಮರುಬಳಕೆ ಮಾಡಲು ಸಾಧ್ಯ ಎನ್ನುವುದನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸಿದ್ದಾರೆ ಸಂಸ್ಥೆಯ ಸದಸ್ಯರು. ಜಿಕೆವಿಕೆಯಲ್ಲಿ ಕೊಳವೆ ಬಾವಿ ಜಲ ಮರುಪೂರ್ಣದ ಮಾದರಿ ಘಟಕವನ್ನು ಸ್ಥಾಪಿಸಿದ್ದಾರೆ.

ಶಾಲೆಗಳಲ್ಲಿ ಮಾದರಿಗಳನ್ನು ರೂಪಿಸಿ ಪಠ್ಯದಲ್ಲಿ ಇಲ್ಲದೇ ಇರುವ ಜಲಸಂರಕ್ಷಣೆಯ ವಿಷಯವನ್ನು ಸ್ವಯಂಸೇವಕರು ಕಲಿಸುತ್ತಾರೆ. ಜಲಸಾಕ್ಷರತೆ ಬೇಕು, ಪಠ್ಯಪುಸ್ತಕದಲ್ಲಿ ಜಲಪಠ್ಯವನ್ನು ತರಬೇಕು ಇದರಿಂದ ಜಲಸಂರಕ್ಷಣೆ ಸಾಧ್ಯ ಎನ್ನುವ ಮಾತನ್ನು ಅವರು ಹೇಳುತ್ತಾರೆ.

ಬಯೋಮ್ ಸಂಸ್ಥೆ (ರೈನ್ ವಾಟರ್ ಕ್ಲಬ್‌): ಆರಂಭವಾಗಿದ್ದು 1991ರಲ್ಲಿ. ಸಂಸ್ಥೆಯ ಸ್ಥಾಪಕರು ಎಸ್‌. ವಿಶ್ವನಾಥ್‌. ದಕ್ಷಿಣ ಭಾರತದಲ್ಲಿ ಆ ಸಮಯದಲ್ಲಿ ಕಂಡುಬಂದ ನೀರಿನ ಸಮಸ್ಯೆಯೇ ಈ ಸಂಸ್ಥೆಯ ಹುಟ್ಟಿಗೂ ಕಾರಣವಾಗಿತ್ತು. ಬಯೋಮ್ ಸಂಸ್ಥೆಯೇ ‘ರೈನ್ ವಾಟರ್ ಕ್ಲಬ್’ ಮಾಡಿಕೊಂಡು ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ಸುಮಾರು ಹತ್ತು ಮಂದಿ ಸ್ವಯಂ ಸೇವಕರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಳೆನೀರು ಸಂಗ್ರಹಣೆಯ ವ್ಯವಸ್ಥೆ, ಮಣ್ಣು ಒಡ್ಡರು ಜನಾಂಗದವರಿಗೆ ಸಹಾಯ ಮಾಡಿ ಅವರೊಂದಿಗೆ ಕೈ ಜೋಡಿಸುವುದು. ರೀಜಾರ್ಜ್ ಮೂಲಕ ಬಾವಿಗಳಿಗೆ ಮರುಹುಟ್ಟು ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ತೆರೆದ ಬಾವಿ ಸಂಸ್ಕೃತಿಯನ್ನು ಮರಳಿ ತರುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

ಸಂಸ್ಥೆಯ ಸ್ಥಾಪಕರು ಹೇಳುವ ಪ್ರಕಾರ ನಗರದಲ್ಲಿ ಸುಮಾರು 10,000 ಬಾವಿಗಳಿವೆ. ಕಬ್ಬನ್ ಪಾರ್ಕ್ ಒಂದರಲ್ಲೇ 7 ಬಾವಿಗಳಿವೆ. ಇವರು ಮಣ್ಣು ಒಡ್ಡರು ಹಾಗೂ ಇಂಡಿಯಾ ಕೇರ್ಸ್ ಸಂಸ್ಥೆಯ ಸಹಯೋಗದೊಂದಿಗೆ ಕಬ್ಬನ್ ಪಾರ್ಕ್‌ನಲ್ಲಿರುವ ಬಾವಿಗಳಿಗೆ ಮರುಜೀವ ನೀಡುವ ಕೆಲಸವನ್ನು ಮಾಡಿದೆ. ಮಳೆನೀರು ಕೊಯ್ಲಿಗೆ ವಿನ್ಯಾಸವನ್ನು ರೂಪಿಸುವ ಕೆಲಸವೂ ಸಂಸ್ಥೆಯ ಒಂದು ಭಾಗ.

ಇದರ ಸದಸ್ಯರು ನೇರವಾಗಿ ಜನರನ್ನು ಸಂಪರ್ಕಿಸುವುದಿಲ್ಲ. ಬದಲಿಗೆ ಮಣ್ಣು ಒಡ್ಡರು ಜನಾಂಗದವರೇ ಬಾವಿಗಳನ್ನು ಹುಡುಕಿಕೊಂಡು ಹೋಗಿ ಜನರಲ್ಲಿ ಬಾವಿಯ ಮಹತ್ವಗಳನ್ನು ತಿಳಿಸುತ್ತಾರೆ. ಆಮೇಲೆ ಮಳೆನೀರು ಕೊಯ್ಲಿನ ಬಗ್ಗೆಯೂ ತಿಳಿ ಹೇಳುತ್ತಾರೆ. ಅವರಿಗೆ ಬೇಕಾದ ತಂತ್ರಜ್ಞಾನದ ಸಹಾಯವನ್ನು ಸಂಸ್ಥೆ ಮಾಡುತ್ತಿದೆ. ಈ ಮೂಲಕ ಮಣ್ಣು ಒಡ್ಡರಿಗೆ ಕೆಲಸ ನೀಡುವ ಕಾರ್ಯವನ್ನು ಮಾಡುತ್ತಿದೆ.


ದೇವರಾಜ್ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT