ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಮಾಹಿತಿ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಿ

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೃಹತ್ ದತ್ತಾಂಶ ವಿಶ್ಲೇಷಣೆ ಅಥವಾ ‘ಬಿಗ್ ಡೇಟಾ ಅನಲಿಸಿಸ್’ ಎಂಬ ಪರಿಕಲ್ಪನೆ ನಿಜವಾದ ದಿನದಿಂದಲೂ ಅದನ್ನು ಒಂದಲ್ಲಾ ಒಂದು ಬಗೆಯಲ್ಲಿ ಮತದಾರರ ಒಲವನ್ನು ನಿರ್ದೇಶಿಸಲು ಬಳಸುವುದಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಅದನ್ನು ಹೇಗೆ ಬಳಸಲಾಯಿತು ಎಂಬುದು ಈಗ ಬಯಲಾಗಿದೆ. ಕೋಟ್ಯಂತರ ಮಂದಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ಅವರ ರಾಜಕೀಯ ನಿಲುವನ್ನು ನಿರ್ದೇಶಿಸುವ ಪ್ರಯತ್ನವೊಂದು ಕೇಂಬ್ರಿಜ್ ಅನಲಿಟಿಕಾದಿಂದ ನಡೆದಿರುವುದು ಬಹುತೇಕ ಸಾಬೀತಾಗಿದೆ. ಹಾಗೆಯೇ ತನ್ನ ಬಳಕೆದಾರರ ವೈಯಕ್ತಿಕ ವಿವರಗಳು ಸೋರಿಕೆಯಾಗಿರುವುದನ್ನು ಫೇಸ್‌ಬುಕ್ ಕೂಡಾ ಒಪ್ಪಿಕೊಂಡಿದೆ. ಇದೆಲ್ಲವೂ ನಡೆದಿರುವುದು ಅಮೆರಿಕದಲ್ಲಿಯಾದರೂ ಅದರ ಮತ್ತೊಂದು ಮುಖ ಅನಾವರಣಗೊಂಡಿರುವುದು ಭಾರತದಲ್ಲಿ. ಅಮೆರಿಕದ ಮತದಾರರ ಒಲವನ್ನು ನಿರ್ದೇಶಿಸಿದ ಕಂಪನಿಯ ಸೇವೆಯನ್ನು ಭಾರತದಲ್ಲಿ ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂಬುದು ವಿವಾದದ ಕೇಂದ್ರಬಿಂದು. ಭಾರತದಲ್ಲಿ ಕೇಂಬ್ರಿಜ್ ಅನಲಿಟಿಕಾದ ಪಾಲುದಾರ ಸಂಸ್ಥೆಯಾಗಿರುವ ಒವ್ಲೆನೊ ಬಿಸಿನೆಸ್
ಇಂಟೆಲಿಜೆನ್ಸ್‌ನ ಗ್ರಾಹಕರ ಪಟ್ಟಿಯಲ್ಲಿ ಕಾಂಗ್ರೆಸ್ ಮಾತ್ರ ಇಲ್ಲ. ಬಿಜೆಪಿ ಮತ್ತು ಜೆಡಿಯುಗಳೆರಡೂ ಈ ಸಂಸ್ಥೆಯ ಗ್ರಾಹಕರೇ. ಸಂಸ್ಥೆಯ ಮುಖ್ಯಸ್ಥರೇ ಜನತಾದಳ (ಯು)ಗೆ ಸೇರಿದ ರಾಜಕಾರಣಿಯೊಬ್ಬರ ಮಗ. ಎಲ್ಲರ ಮನೆಯ ದೋಸೆಯೂ ತೂತೇ ಎಂಬುದು ಈ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗುತ್ತಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಫೇಸ್‌ಬುಕ್‌ನ ಸಂಸ್ಥಾಪಕ ಝುಕರ್‌ಬರ್ಗ್ ಅವರನ್ನೇ ಭಾರತಕ್ಕೆ ಕರೆಯಿಸಿ ವಿಚಾರಣೆ ನಡೆಸುವ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ ಕೂಡಾ ಬಿಜೆಪಿ ಮತ್ತು ಕೇಂಬ್ರಿಜ್ ಅನಲಿಟಿಕಾಕ್ಕೆ ಇರುವ ಸಂಬಂಧವನ್ನು ಸಾಬೀತು ಮಾಡುವ ದಾಖಲೆಗಳ ಬಿಡುಗಡೆಯ ಗಡಿಬಿಡಿಯಲ್ಲಿದೆ.

ಈ ವಿವಾದವನ್ನು ಕೇವಲ ರಾಜಕಾರಣಿಗಳ ವಾಗ್ಯುದ್ಧದ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸ ಬೇಕಾದ ಅಗತ್ಯವಿದೆ. ಬೃಹತ್ ದತ್ತಾಂಶ ವಿಶ್ಲೇಷಣೆ ಎಂಬುದು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಒಲವನ್ನು ನಿರ್ದೇಶಿಸುವುದಕ್ಕೆ ಮಾತ್ರ
ಸೀಮಿತವಾಗಿರುವ ವಿಚಾರವೇನೂ ಅಲ್ಲ. ಕಳೆದ ಒಂದು ದಶಕದ ಅವಧಿಯಲ್ಲಿ ಆನ್‌ಲೈನ್ ಜಾಹೀರಾತು ತಂತ್ರಜ್ಞಾನದ ಅಭಿವೃದ್ಧಿ ನಡೆದಿರುವುದೇ ಬೃಹತ್ ದತ್ತಾಂಶ ವಿಶ್ಲೇಷಣೆಯನ್ನು ಆಧರಿಸಿ. ಕಾನೂನಿನ ಜೊತೆಗೆ ಮಾಹಿತಿ ತಂತ್ರಜ್ಞಾನ ಖಾತೆಯನ್ನೂ ನಿರ್ವಹಿಸುತ್ತಿರುವ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಈ ವಿಚಾರಗಳು ತಿಳಿಯದೇ ಇರುವುದೇನೂ ಅಲ್ಲ. ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಭಾರತದಲ್ಲಿ ವೈಯಕ್ತಿಕ ಮಾಹಿತಿಯ ಸಂರಕ್ಷಣೆಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ಅದರಲ್ಲೂ ‘ಆಧಾರ್’ ಯೋಜನೆಯ ಅನುಷ್ಠಾನ ಆರಂಭವಾದ ನಂತರ ಈ ಕುರಿತಂತೆ ನಡೆದಿರುವ ಚರ್ಚೆಗಳಲ್ಲಿ ಬಹುಮುಖ್ಯವಾಗಿ ಇದ್ದದ್ದೇ ವೈಯಕ್ತಿಕ ಮಾಹಿತಿಯ ಸಂರಕ್ಷಣೆಯ ವಿಚಾರ. ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಈ ವಿಚಾರವನ್ನು ಬಹುಮುಖ್ಯವಾಗಿ ಚರ್ಚಿಸುತ್ತಿದ್ದ, ಆಧಾರ್‌ನ ಅಪಾಯಗಳ ಬಗ್ಗೆ ಮಾತನಾಡುತ್ತಿದ್ದ ಎನ್‌ಡಿಎ ತಾನು ಅಧಿಕಾರಕ್ಕೆ ಏರಿದ ತಕ್ಷಣ ಯುಪಿಎಯ ಭಾಷೆಯಲ್ಲಿಯೇ ಮಾತನಾಡತೊಡಗಿತು.

‘ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ’ ಇನ್ನೂ ದೂಳು ಹಿಡಿಯುತ್ತಾ ಬಿದ್ದಿರುವುದರಲ್ಲಿ ಈಗಿನ ಆಡಳಿತಾರೂಢರ ಪಾಲೂ ದೊಡ್ಡದೇ. ಆಧಾರ್‌ನ ಕುರಿತ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ‘ವೈಯಕ್ತಿಕ ಮಾಹಿತಿಯ ಗೋಪ್ಯತೆ ಎಂಬುದೊಂದು ಮೂಲಭೂತ ಹಕ್ಕಲ್ಲ’ ಎಂದು ವಾದಿಸಿದ್ದು ಎನ್‌ಡಿಎ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟಿರ್ ಜನರಲ್ ಎಂಬ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.


ಜನಸಾಮಾನ್ಯರ ವೈಯಕ್ತಿಕ ಮಾಹಿತಿಯ ರಕ್ಷಣೆಯ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ, ಅದೊಂದು ಅಷ್ಟೇನೂ ಮುಖ್ಯವಲ್ಲದ ವಿಚಾರ ಎಂದು ಸುಪ್ರೀಂ ಕೋರ್ಟ್‌ಗೆ ಹೇಳುವ ಸರ್ಕಾರದ ಮಂತ್ರಿಯೊಬ್ಬರು ‘ಮತದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡರೆ ಸುಮ್ಮನಿರುವುದಿಲ್ಲ’ ಎಂದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಈಗ ಸರ್ಕಾರ ಬದ್ಧತೆಯನ್ನು ತೋರಿಸಬೇಕಾಗಿರುವುದು ಶೈತ್ಯಾಗಾರದಲ್ಲಿರುವ ವೈಯಕ್ತಿಕ ಮಾಹಿತಿ ಭದ್ರತೆ ಕಾಯ್ದೆಯನ್ನು ಹೊರತೆಗೆದು ಅದಕ್ಕೆ ಜೀವ ಕೊಡುವ ಮೂಲಕವೇ ಹೊರತು ಪೊಳ್ಳು ಭಾಷಣಗಳ ಮೂಲಕವಲ್ಲ. ಈ ತನಕದ ಸೋರಿಕೆಗಳ ಬಗ್ಗೆ ಚರ್ಚಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಜನರ ವೈಯಕ್ತಿಕ ಮಾಹಿತಿಗಳಿಗೊಂದು ಪಾವಿತ್ರ್ಯವಿದೆ ಎಂಬುದನ್ನು ಖಾತರಿಪಡಿಸುವ ಕಾಯ್ದೆಯನ್ನು ಮೊದಲು ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT