ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ತಂಡದಿಂದ ಕೈಬಿಡುವ ಸಾಧ್ಯತೆ

ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
Last Updated 22 ಮಾರ್ಚ್ 2018, 20:04 IST
ಅಕ್ಷರ ಗಾತ್ರ

ನವದೆಹಲಿ: ಸೌಮ್ಯಜಿತ್ ಘೋಷ್ ಅವರ ವಿರದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಕಾರಣ ಅವರನ್ನು ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಅಮಾನತುಗೊಳಿಸುವ ಸಾಧ್ಯತೆ ಇದೆ. ಜೊತೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ತಂಡದಿಂದ ಕೈಬಿಡುವ ಬಗ್ಗೆ ಚಿಂತನೆ ನಡೆಸಿದೆ.

ಪಶ್ವಿಮ ಬಂಗಾಳದ ಬಾರಾಸಾತ್‌ ಮಹಿಳಾ ಪೊಲೀಸ್ ಠಾಣೆಯಲ್ಲಿ 18 ವರ್ಷದ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

‘ಅತ್ಯಾಚಾರ, ಪಿತೂರಿ, ಹಾಗೂ ಯುವತಿಗೆ ತಿಳಿಸದೆ ಮೋಸದಿಂದ ಗರ್ಭಪಾತ ಮಾಡಿ ಸಿರುವುದಾಗಿ ದೂರು ನೀಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿ ದ್ದಾರೆ.

ಸೌಮ್ಯಜಿತ್ ಘೋಷ್‌ ಜರ್ಮನಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

‘ರಾಷ್ಟ್ರೀಯ ತಂಡದಿಂದ ಅವರನ್ನು ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಟಿಟಿಎಫ್‌ಐ ಕಾರ್ಯದರ್ಶಿ ಎಮ್‌.ಪಿ ಸಿಂಗ್ ಹೇಳಿದ್ದಾರೆ.

‘ಘೋಷ್ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ತಂಡದಲ್ಲಿ ಅವರು ಪ್ರಮುಖ ಆಟಗಾರ. ನಾಳೆ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ಮುಂದಿನ ವಿಚಾರಣೆಗೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ ಅವರನ್ನು ಅಮಾನತು ಮಾಡದೆ ಬೇರೆ ದಾರಿ ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಕಾಯ್ದಿಟ್ಟ ಆಟಗಾರ ಸನಿಲ್ ಶೆಟ್ಟಿಗೆ ಕಾಮನ್‌ವೆಲ್ತ್ ಕೂಟದ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಘೋಷ್ ಅವರೊಂದಿಗೆ ತಂಡದಲ್ಲಿ ಜಿ.ಸತ್ಯನ್‌, ಶರತ್ ಕಮಲ್‌, ಅಂಥೋಣಿ ಅಮಲರಾಜ್‌ ಮತ್ತು ಹರ್ಮೀತ್ ದೇಸಾಯಿ ಇದ್ದಾರೆ. ‘ಘೋಷ್ ಅವರನ್ನು ಟಿಟಿಎಫ್‌ಐ ಕೈಬಿಟ್ಟರೂ ಕಾಯ್ದಿಟ್ಟ ಆಟಗಾರನಿಗೆ ಕಾಮನ್‌ವೆಲ್ತ್‌ ಕೂಟದ ಫೆಡರೇಷನ್‌ ಅನುಮತಿ ನೀಡುವುದಿಲ್ಲ’ ಎಂದು ಭಾರತ ಒಲಿಂಪಿಕ್ ಅಸೋಸಿಯೇಷನ್‌ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

‘ಐಒಎ ವರೆಗೂ ಇನ್ನು ಸುದ್ದಿ ತಲುಪಿಲ್ಲ. ಆದರೆ ನಿಯಮದ ಪ್ರಕಾರ ಸ್ಪರ್ಧಿ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ಮಾತ್ರ ಬೇರೆ ಆಟಗಾರನಿಗೆ ಅವಕಾಶ ಸಿಗುತ್ತದೆ’ ಎಂದು ಬಾತ್ರಾ ವಿವರಿಸಿದ್ದಾರೆ.

**

ಆರೋಪ ತಳ್ಳಿಹಾಕಿದ ಘೋಷ್‌

‘ಅತ್ಯಾಚಾರದ ಆರೋಪ ಸುಳ್ಳು. ನಮ್ಮ ನಡುವೆ ಇದ್ದ ಸಂಬಂಧ ಕೊನೆಗೊಂಡ ನಂತರ ಆಕೆ ನನಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಘೋಷ್ ಹೇಳಿದ್ದಾರೆ.

‘ನಾವು ಒಟ್ಟಿಗೆ ಇದ್ದದ್ದು ನಿಜ. ಆ ಬಳಿಕ ಆಟದ ಬಗ್ಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿದ್ದೆ. ಈ ಕಾರಣದಿಂದಲೇ ಆಕೆಯೊಂದಿಗೆ ಇರಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ಸಂಬಂಧ ಕೊನೆಗೊಂಡ ಕೆಲವು ದಿನಗಳ ಬಳಿಕ ಅವರು ನನ್ನ ಕುಟುಂಬದವರು, ಸ್ನೇಹಿತರಿಗೆ ಕೂಡ ಬೆದರಿಕೆ ಹಾಕಿದ್ದಾರೆ. ಕಳೆದ ಆರು ತಿಂಗಳಿನಿಂದ ಹೀಗೆ ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿ ನನ್ನನ್ನು ಸಿಕ್ಕಿಹಾಕಿಸಲು ನಡೆಸಿದ ಸಂಚು’ ಎಂದು ಘೋಷ್ ಮರು ಆರೋಪ ಮಾಡಿದ್ದಾರೆ.

‘ನಾನು ಅವರ ಕುಟುಂಬದೊಂದಿಗೆ ಚೆನ್ನಾಗಿ ಇದ್ದೇನೆ. ನನಗೆ ಅರ್ಜುನ ಪ್ರಶಸ್ತಿ ನೀಡಿದಾಗ ಅವರ ಅಮ್ಮ ಕೂಡ ಜೊತೆಗೆ ಇದ್ದರು. ಅವರು ನಮಗೆ ಜಮೀನು ಉಡುಗೊರೆಯಾಗಿ ನೀಡಿದ್ದರು. ಅದು ನಮ್ಮಿಬ್ಬರ ಹೆಸರಿನಲ್ಲಿ ಇದೆ. ನಾನು ಕೂಡ ಅವರಿಗೆ ಸಹಾಯ ಮಾಡಿದ್ದೇನೆ. ಫೆಡರೇಷನ್‌ಗೆ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ’ ಎಂದು ಘೋಷ್ ಹೇಳಿದ್ದಾರೆ.

**

ಸಚಿವಾಲಯದ ಕ್ರಮ ಟೀಕಿಸಿದ ಬಾತ್ರಾ

‘ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತೆರಳುವ ಅಥ್ಲೀಟ್‌ಗಳೊಂದಿಗೆ ಕುಟುಂಬದವರು ಪ್ರಯಾಣ ಮಾಡುವಂತಿಲ್ಲ ಎಂದು ಕ್ರೀಡಾ ಸಚಿವಾಲಯ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ. ಈ ಹಿಂದಿನ ಮಾನದಂಡಗಳನ್ನೇ ಉಳಿಸಿಕೊಳ್ಳಬೇಕು’ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

ಖೇಲೊ ಇಂಡಿಯಾ ಶಾಲಾ ಕ್ರೀಡಾಕೂಟ ಆಯೋಜನೆಯಾಗಿದ್ದ ಸಂದರ್ಭದಿಂದ ಕ್ರೀಡಾ ಸಚಿವಾಲಯ ಹಾಗೂ ಐಒಎ ನಡುವೆ ಉತ್ತಮ ಬಾಂಧವ್ಯ ಇಲ್ಲ.

‘ಇತರೆ ಅಧಿಕಾರಿಗಳ ಪಟ್ಟಿಗೆ ಅನುಮತಿ ನೀಡಲು ಸಚಿವಾಲಯ ಹಿಂದೇಟು ಹಾಕುತ್ತಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಪರ್ಧೆ ಒಡ್ಡಲು ಕೋಚ್‌ಗಳು ಮಾತ್ರ ಸಾಕಾಗುವುದಿಲ್ಲ. ವೈದ್ಯರು, ಫಿಸಿಯೊಗಳ ಅಗತ್ಯ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.

‘ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಅವರೊಂದಿಗೆ ಕುಟುಂಬದವರು ಗೋಲ್ಡ್‌ ಕೋಸ್ಟ್‌ಗೆ ತೆರಳಲು ಅನುಮತಿ ನೀಡಬೇಕು. ದೇಶಕ್ಕೆ ಪದಕ ತಂದುಕೊಡುವ ಆಟಗಾರರಿಗೆ ಬೆಂಬಲ ನೀಡಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT