ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಶಾಸ್ತ್ರ ಅರಿಯದವ ಶ್ರೇಷ್ಠ ಸಾಹಿತ್ಯ ರಚಿಸಲಾರ

ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ ಅಭಿಮತ
Last Updated 23 ಮಾರ್ಚ್ 2018, 8:21 IST
ಅಕ್ಷರ ಗಾತ್ರ

ಮೈಸೂರು: ತತ್ವಶಾಸ್ತ್ರ ಅಧ್ಯಯನ ಮಾಡದ ಸಾಹಿತಿ ದೊಡ್ಡ ಕೃತಿ ರಚಿಸಲಾರ. ಸಾಹಿತ್ಯ ಓದದ ತತ್ವಶಾಸ್ತ್ರಜ್ಞ ಉತ್ತಮವಾಗಿ ಬೋಧನೆ ಮಾಡಲಾರ. ಸಾಹಿತ್ಯ ಮತ್ತು ತತ್ವಶಾಸ್ತ್ರಕ್ಕೆ ಪೂರಕ ಸಂಬಂಧವಿದೆ ಎಂದು ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ ಗುರುವಾರ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗಕ್ಕೆ ಶತಮಾನ ತುಂಬಿದ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ತತ್ವಶಾಸ್ತ್ರ ಅಧ್ಯಯನದ ಬಳಿಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ನನ್ನ ಅದೃಷ್ಟ. ಇದು ನನ್ನ ಸಾಹಿತ್ಯದ ಶಕ್ತಿ ಕೂಡ ಹೌದು’ ಎಂದರು.

‘ಪ್ರತಿ ಕಾದಂಬರಿಯಲ್ಲೂ ಜೀವನದ ಮೌಲ್ಯಗಳನ್ನು ತಾತ್ವಿಕವಾಗಿ ತರಲು ಪ್ರಯತ್ನಿಸಿದ್ದೇನೆ. ತತ್ವ ಹಾಗೂ ಮೌಲ್ಯಗಳನ್ನು ಸಾಹಿತ್ಯ ಕೃತಿಯಲ್ಲಿ ರಸಪೂರ್ಣವಾಗಿ ತರಬಲ್ಲೆ ಎಂಬ ವಿಶ್ವಾಸ ಮೂಡಿದ್ದು ತತ್ವಶಾಸ್ತ್ರ ಅಧ್ಯಯ ನದ ಫಲ. ಸಿದ್ಧಾಂತದ ರೂಪದಲ್ಲಿರುವ ಶುಷ್ಕ ಜ್ಞಾನವನ್ನು ಓದುಗರ ಅನುಭವಕ್ಕೆ ಸಿಗುವಂತೆ ಮಾಡಲು ಪಾತ್ರಗಳ ರೂಪ ಕೊಟ್ಟಿದ್ದೇನೆ. ಪರಿಕಲ್ಪನೆಗಳನ್ನು ಸೃಷ್ಟಿಸಿ ಮೌಲ್ಯದ ಆಳಕ್ಕೆ ಇಳಿಯುವ ಅವಕಾಶ ಸಾಹಿತ್ಯದಲ್ಲಿ ಸಿಕ್ಕಿತು’ ಎಂದು ಹೇಳಿದರು.

‘ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಜ್ಞಾನ ಆಧಾರಿತ ತತ್ವಜ್ಞಾನ ಬೆಳೆದಿದೆ. ಆದರೆ, ಭಾರತದ ಪರಿಸ್ಥಿತಿಯಲ್ಲಿ ಸಾವಿನ ತಾತ್ವಿಕ ಪರಿಕಲ್ಪನೆಯಿಂದ ಹುಟ್ಟಿದೆ. ಸಾವು ಏಕೆ ಸಂಭವಿಸುತ್ತದೆ ಎಂಬ ಪ್ರಶ್ನೆಯೇ ನನ್ನನ್ನು ತತ್ವಶಾಸ್ತ್ರದತ್ತ ಸೆಳೆಯಿತು. ಹೀಗಾಗಿ, ಸಾವಿನ ಚಿತ್ರಣ, ತಳಮಳ ಬಹುತೇಕ ಕಾದಂಬರಿಗಳಲ್ಲಿ ಬಂದಿದೆ’ ಎಂದು ನೆನಪಿಸಿಕೊಂಡರು.

‘ಸಂಸ್ಕೃತಿಯ ಆಧಾರವಾಗಿರುವ ವೇದವೇ ಭಾರತೀಯ ತತ್ವಶಾಸ್ತ್ರದ ಮೂಲ. ಇದರ ಸಾರ ಉಪನಿಷತ್ತುಗಳಲ್ಲಿ ಅಡಗಿದೆ. ವೇದದ ಸಾರವನ್ನು ರಾಮಾ ಯಣ ಮತ್ತು ಮಹಾಭಾರತದ ಮೂಲಕ ಜನಸಾಮಾನ್ಯರಿಗೆ ತಲುಪಿಸಿದವರು ವಾಲ್ಮೀಕಿ ಹಾಗೂ ವ್ಯಾಸ’ ಎಂದು ಪ್ರತಿಪಾದಿಸಿದರು.

‘ಸಂಸ್ಕೃತ ಜ್ಞಾನವಿಲ್ಲದೇ ಭಾರತೀಯ ತತ್ವಜ್ಞಾನ ಅರ್ಥವಾಗದು. ಇಂಗ್ಲಿಷ್‌ ಭಾಷೆಯ ಮೂಲಕ ಇದನ್ನು ಅರಿಯಲು ಸಾಧ್ಯವಿಲ್ಲ. ಕನ್ನಡ, ಹಿಂದಿ, ಮರಾಠಿ, ತೆಲಗು, ಮಲಯಾಳಂ ಸೇರಿದಂತೆ ಭಾರತೀಯ ಭಾಷೆಯಲ್ಲಿಯೇ ಅಧ್ಯಯನ ಮಾಡಬೇಕು. ತಾತ್ವಜ್ಞಾನ ಹಾಗೂ ಕಾವ್ಯ ವಿಮಾಂಸೆಯ ಪರಿಭಾಷೆ ಮೂಲ ಸಂಸ್ಕೃತದಲ್ಲಿ ಅಡಗಿದೆ. ಕಷ್ಟಪಟ್ಟು ಸಂಸ್ಕೃತ ಓದದೇ ಇದ್ದಿದ್ದರೆ ಕನ್ನಡದ ಉತ್ತಮ ಲೇಖಕನಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ಪ್ರಭಾರಿ ಕುಲಪತಿ ಪ್ರೊ.ಸಿ.ಬಸವರಾಜು, ಪ್ರೊ.ಹೇಮಂತ ಕುಮಾರ್‌, ಪ್ರೊ.ಶೇಷಗಿರಿರಾವ್‌, ಪ್ರೊ.ವೆಂಕಟೇಶ್‌ ಇದ್ದರು.
**
ಸತ್ಯ, ದುಃಖವನ್ನು ಅರಸುತ್ತ ಸಾಗಿದ ಗೌತಮ ಬುದ್ಧನಿಗೂ ಕಂಡಿದ್ದು ಉಪನಿಷತ್ತುಗಳ ಸಾರ. ಬುದ್ಧ ಉಪನಿಷತ್ತು ವಿರೋಧಿಸಿದ್ದರು ಎಂಬುದು ತಪ್ಪು ಕಲ್ಪನೆ.
-ಪ್ರೊ.ಎಸ್.ಎಲ್.ಭೈರಪ್ಪ, ಕಾದಂಬರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT