ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನ್‌ ಸಾಹೇಬರ ‘ಕೈ’ ಬಿಡದ ಉಪ ಚುನಾವಣೆಗಳು

ಬೀದರ್‌ ವಿಧಾನಸಭಾ ಕ್ಷೇತ್ರದ ಶಾಸಕ ರಹೀಂ ಖಾನ್‌
Last Updated 23 ಮಾರ್ಚ್ 2018, 9:15 IST
ಅಕ್ಷರ ಗಾತ್ರ

ಬೀದರ್‌: ‘2009ರ ಬೀದರ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರನ ವಿರುದ್ಧ ವಿಜಯ ಪತಾಕೆ ಹಾರಿಸಿದ ಸಂಭ್ರಮದಲ್ಲಿ ನೇರವಾಗಿ ಸ್ಪೀಕರ್‌ ಬಳಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಿ ಮರಳಿ ಬೀದರ್‌ಗೆ ಬಂದಿದ್ದೆ. ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡ ನಂತರವೇ ನನಗೆ ಕ್ಷೇತ್ರ ಹಾಗೂ ವಿಧಾನಸೌಧದ ರಾಜಕೀಯ ಬೇರೆ ಬೇರೆ ಎನ್ನುವುದು ಅರಿವಿಗೆ ಬಂದಿತು’– ಹೀಗೆಂದು ಶಾಸಕ ರಹೀಂ ಖಾನ್‌ ಮಾತು ಶುರು ಮಾಡಿದರು.

‘ಅಧಿವೇಶನ ಆರಂಭವಾದಾಗ ಭೂ ಹಗರಣಗಳ ಸರಮಾಲೆಯನ್ನೇ ಯಡಿಯೂರಪ್ಪ ಅವರ ತಲೆಯ ಮೇಲೆ ಕಟ್ಟಿ ಪ್ರತಿಪಕ್ಷಗಳ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದರು. ಯಡಿಯೂರಪ್ಪ ಇರ್ತಾರಾ, ಹೋಗ್ತಾರಾ ಎಂದು ಬಿಜೆಪಿಯವರೇ ಕೇಳತೊಡಗಿದ್ದರು. ವಿಧಾನಸೌಧದಲ್ಲಿ ಇಷ್ಟು ಗದ್ದಲ ಇದ್ದರೆ ನನ್ನ ಕ್ಷೇತ್ರದ ಕೆಲಸ ಹೇಗೆ ಮಾಡಿಕೊಳ್ಳುವುದು ಎನ್ನುವ ಆತಂಕ ಕಾಡಿತ್ತು. ನಿಧಾನವಾಗಿ ಎಲ್ಲವೂ ಸರಿಹೋಯಿತು’ ಎಂದು ಮೊದಲು ವಿಧಾನಸಭೆ ಪ್ರವೇಶಿಸಿದ ಘಟನೆಯೊಂದನ್ನು ಮೆಲುಕು ಹಾಕಿದರು.

‘ಬೀದರ್‌ನಲ್ಲಿ ರಸ್ತೆ ಅತಿಕ್ರಮಣ ತೆರವು ಕಾರ್ಯ ಅರ್ಧ ಆಗಿತ್ತು. ಈ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕಿತ್ತು. ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕಿತ್ತು. ಇದಕ್ಕಾಗಿಯೇ ನಾನು ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಕೋರಿದ್ದೆ. ಸ್ಪೀಕರ್‌ ಒಳ್ಳೆಯವರಾಗಿದ್ದರು. ನನಗೆ 10 ನಿಮಿಷ ಮಾತನಾಡಲು ಅವಕಾಶ ಕೊಟ್ಟಿದ್ದರು. ಅದನ್ನು ಸರಿಯಾಗಿ ಬಳಸಿಕೊಂಡಿದ್ದೆ’ ಎಂದು ವಿವರಿಸಿದರು.

‘ನಂತರ ಗಣಿಧಣಿಗಳ ನಡುವಿನ ಜಗಳ ಕಲಾಪವನ್ನೇ ನುಂಗಿ ಹಾಕಿತ್ತು. ಕಾಂಗ್ರೆಸ್ ಶಾಸಕರು ಹಗಲು ರಾತ್ರಿ ಧರಣಿ ನಡೆಸಿದ್ದರಿಂದ ಅವರೊಂದಿಗೆ ನಾನೂ ವಿಧಾನಸೌಧದಲ್ಲೇ ಮಲಗಿ ರಾತ್ರಿ ಕಳೆಯಬೇಕಾಯಿತು. ಬಿಜೆಪಿ ಸರ್ಕಾರದಲ್ಲಿ ಮೂರು ಮುಖ್ಯಮಂತ್ರಿಗಳು ಆದರು. ರಾಜಕೀಯ ಅಷ್ಟು ಸುಲಭ ಅಲ್ಲ ಎನ್ನುವುದು ಗೊತ್ತಾದದ್ದು ಸಹ ಆಗಲೇ’ ಎಂದರು.

‘ಸೋಲಿನಿಂದ ಮೇಲೆ ಬಂದವನು ನಾನು. ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಎರಡು ಬಾರಿ ಸೋಲು, ಎರಡು ಬಾರಿ ಗೆಲುವು ಕಂಡಿದ್ದೇನೆ. ಸೋತಾಗ ಹತಾಶನಾಗಿಲ್ಲ, ಗೆದ್ದಾಗ ಅಹಂನಿಂದ ಮೆರೆದಿಲ್ಲ. ಹೀಗಾಗಿ ನನ್ನ ವಿಷಯದಲ್ಲಿ ಜನರಿಗೆ ಗೌರವ ಇದೆ. ಅಭಿವೃದ್ಧಿಯ ಮೂಲಕ ಅವರ ಋಣ ತೀರಿಸಬೇಕು ಎನ್ನುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಮನದಾಳವನ್ನು ಹಂಚಿಕೊಂಡರು.
**
ಶಿಕ್ಷಣ ಸಂಸ್ಥೆಯ ಮೂಲಕ ಮೇಲೆ ಬಂದರು...

ರಹೀಂ ಖಾನ್‌ ತಂದೆ ಬೀದರ್‌ನಲ್ಲಿ ಕೆಇಬಿಯಲ್ಲಿ ಲೈನ್‌ಮನ್‌ ಆಗಿದ್ದರು. ರಹೀಂ ಖಾನ್‌ ಒಂದನೇ ತರಗತಿಯಿಂದ 10ನೇ ತರಗತಿ ವರೆಗೂ ನಗರದ ನಾರ್ಮಾ ಫೆಂಡ್ರಿಕ್‌ ಶಾಲೆಯಲ್ಲಿ ಓದಿದರು. ಬಿವಿಬಿ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪಿಯುಸಿ ಪಾಸಾದರು. ನಂತರ ಬಿಎ ಪರೀಕ್ಷೆಗೆ ಕುಳಿತು ಪಾಸಾದರು.
ಗೆಳೆಯರೊಬ್ಬರು ನರ್ಸಿಂಗ್‌ ಕಾಲೇಜು ನಡೆಸುತ್ತಿದ್ದರು. ಗೆಳೆಯನಿಂದ ಪ್ರೇರಿತರಾಗಿ ರೂಹಿ ನರ್ಸಿಂಗ್‌ ಕಾಲೇಜು ಆರಂಭಿಸಿದರು. ವಿದ್ಯಾರ್ಥಿ ಸಮೂಹದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಮೇಲೆ ಫಾರ್ಮಾಸಿ, ಬಿಇಡಿ ಕಾಲೇಜುಗಳನ್ನೂ ತೆರೆದರು. ಇಂದು 12 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
**
ರಾಜಕೀಯದತ್ತ ರಹೀಂ ಖಾನ್‌ ಹೆಜ್ಜೆ
ರೂಹಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್ ಮೂಲಕವೇ ರಹೀಂ ಖಾನ್‌ ಬೀದರ್‌ ಜನತೆಗೆ ಹೆಚ್ಚು ಪರಿಚಿತರು.

ಬೀದರ್, ಕಲಬುರ್ಗಿ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದ ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ನೆರವಾದವು. ಸಮಾಜದ ಬಗೆಗಿನ ಕಳಕಳಿ ಅವರನ್ನು ರಾಜಕೀಯಕ್ಕೆ ಬರುವಂತೆ ಮಾಡಿತು. 12 ವರ್ಷಗಳ ಹಿಂದೆ ಅವರು ಕಾಂಗ್ರೆಸ್‌ಗೆ ಸೇರಿದರು.
ಖಾನ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2008ರಲ್ಲಿ ಪಕ್ಷದ ‘ಬಿ’ ಫಾರ್ಮ್‌ ಕೊಡಿಸಿದ್ದರು. ಗುರುಪಾದಪ್ಪ ಅವರು ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶ ಸಾಧಿಸಿದ್ದರು. ಖರ್ಗೆ ಅವರು ಬೇಸರದಿಂದಲೇ ಖಾನ್‌ ಅವರಿಂದ ‘ಬಿ’ ಫಾರ್ಮ್‌ ವಾಪಸ್‌ ಪಡೆದುಕೊಂಡಿದ್ದರು.
ಕಾಂಗ್ರೆಸ್‌ ಮುಖಂಡರ ವಿರುದ್ಧ ಮುನಿಸಿಕೊಂಡು ಬಿಎಸ್‌ಪಿಯಿಂದ ಸ್ಪರ್ಧಿಸಿ ಪ್ರಬಲ ಸ್ಪರ್ಧೆ ಒಡ್ಡಿ ಗುರುಪಾದಪ್ಪ ನಾಗಮಾರಪಳ್ಳಿ ಎದುರು 2,930 ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2009ರಲ್ಲಿ ರಾಜ್ಯದಲ್ಲಿ ನಡೆದ ಆಪರೇಷನ್‌ ಕಮಲದಲ್ಲಿ ಗುರುಪಾದಪ್ಪ ಬಿಜೆಪಿಗೆ ಹೋದರು. ಹೀಗಾಗಿ ಮತ್ತೆ ಕಾಂಗ್ರೆಸ್‌ ಸೇರಿಕೊಂಡು 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗುರುಪಾದಪ್ಪ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಪರಾಭವಗೊಳಿಸಿದ್ದರು.

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುರುಪಾದಪ್ಪ ವಿರುದ್ಧ ಕೇವಲ 2,513 ಮತಗಳ ಅಂತರದಿಂದ ಪರಾಭವಗೊಂಡರೂ ರಹೀಂಖಾನ್‌ ಕ್ಷೇತ್ರದ ಜನರೊಂದಿಗಿನ ನಂಟು ಕಳೆದುಕೊಂಡಿರಲಿಲ್ಲ. ಜನ ಕೌಟುಂಬಿಕ ಕಾರ್ಯಕ್ರಮಕ್ಕೆ ಕರೆದರೂ ಅವರ ಮನೆಗೆ ಹೋಗುವುದನ್ನು ಮುಂದುವರಿಸಿದರು. ಇದೇ ಅವರಿಗೆ ಅನುಕೂಲವಾಗಿ ಪರಿಣಮಿಸಿತು. ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆ ಇದ್ದಾಗ ದಿಬ್ಬಣ ಒಯ್ಯಲು ಶಾಲಾ ವಾಹನಗಳನ್ನು ಕಳಿಸಿಕೊಟ್ಟು ನೆರವಾದರು.

ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬರ ಕಾಣಿಸಿಕೊಂಡು ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು. ಇದನ್ನು ಕಂಡು ಮರಗಿದ ಖಾನ್‌ ಟ್ಯಾಂಕರ್‌ಗಳ ಮೂಲಕ ಜನರ ಮನೆಗಳಿಗೆ ನೀರು ತಲುಪಿಸಿ ಮಾನವೀಯತೆ ಮೆರೆದರು. ಜನ ರಹೀಂ ಖಾನ್‌ ಎನ್ನುವ ಬದಲು ‘ನೀರ್‌ ಖಾನ್‌’ ಎಂದು ಕರೆದರು. ಮುಂಬರುವ ಚುನಾವಣೆಯಲ್ಲಿ ರಹೀಂ ಖಾನ್‌ ಬೀದರ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.
*
2008ರ ವಿಧಾನಸಭಾ ಚುನಾವಣೆ ಬಿಎಸ್‌ಪಿ 30,627 ಮತ ಸೋಲು
2009ರ ವಿಧಾನಸಭಾ ಉಪ ಚುನಾವಣೆ ಕಾಂಗ್ರೆಸ್ 39,595 ಮತ ಗೆಲುವು
2013ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ 48,147 ಮತ ಸೋಲು
2016ರ ವಿಧಾನಸಭಾ ಉಪ ಚುನಾವಣೆ ಕಾಂಗ್ರೆಸ್ 70,138 ಮತ ಗೆಲುವು
**
ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ನಗರಸಭೆಗೆ ಅಲೆಯುವಂತೆ ಶಾಸಕರೂ ವಿಧಾನಸೌಧದಲ್ಲಿ ಅಲೆದಾಡಬೇಕಾಗುತ್ತದೆ. ಅಂದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ.

ರಹೀಂ ಖಾನ್‌, ಬೀದರ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT