ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಭಾಗವಾಗಬೇಕೇ ಮಹಾನಗರ ಪಾಲಿಕೆ?

ಅಭಿವೃದ್ಧಿ, ಅನುದಾನಕ್ಕಾಗಿ ಹುಬ್ಬಳ್ಳಿ–ಧಾರವಾಡ ಪ್ರತ್ಯೇಕತೆಯ ಕೂಗು
Last Updated 23 ಮಾರ್ಚ್ 2018, 10:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕವಾಗಿಸಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.

ಅವಳಿ ನಗರದ ಜನಸಂಖ್ಯೆ 10 ಲಕ್ಷ ಮೀರಿದೆ. ಜೊತೆಗೆ, ಆಸುಪಾಸಿನ ಹತ್ತಾರು ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಒಳಪಡಲಿರುವುದರಿಂದ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗಲಿದೆ. 67 ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಲಿದೆ. ಈ ಎಲ್ಲ ಕಾರಣಕ್ಕೆ ಅವಳಿ ನಗರವನ್ನು ಇಬ್ಭಾಗಿಸಿದರೆ ಆಡಳಿತಕ್ಕೆ ಅನುಕೂಲವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನ ಲಭಿಸುತ್ತದೆ ಎಂಬ ಕೂಗು ಪಕ್ಷಾತೀತವಾಗಿ ಕೇಳಿಬರುತ್ತಿದೆ. ಇದರ ಜೊತೆಯಲ್ಲೇ ಇಬ್ಭಾಗಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ ಮತ್ತು ಧಾರವಾಡ ಆಡಳಿತಾತ್ಮಕವಾಗಿ ಒಂದೇ ಆಗಿದ್ದರೂ ಎರಡು ನಗರಗಳ ನಡುವೆ ಹತ್ತು, ಹಲವು ವಿಭಿನ್ನತೆ ಇದೆ. ಹುಬ್ಬಳ್ಳಿ ವ್ಯಾಪಾರ, ವಹಿವಾಟಿನ ಕೇಂದ್ರವಾಗಿ ರೂಪುಗೊಂಡಿದ್ದರೆ, ಧಾರವಾಡವು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಎರಡೂ ನಗರಗಳ ನಡುವೆ ಯಾವುದೇ ಸಾಮ್ಯತೆ ಇಲ್ಲ. ಜೊತೆಗೆ ಅವಳಿ ನಗರಗಳ ನಡುವೆ ಸುಮಾರು 20 ಕಿ.ಮೀ. ಅಂತರವಿದೆ. ಹೀಗಿರುವಾಗ ಆಡಳಿತಾತ್ಮಕ ಉದ್ದೇಶದಿಂದ ಇಬ್ಭಾಗವಾಗುವುದೇ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಧಾರವಾಡಕ್ಕೆ ಹೆಚ್ಚಿನ ಅನುದಾನ ಲಭಿಸುತ್ತಿಲ್ಲ, ಮೇಯರ್‌, ಉಪಮೇಯರ್‌ ಹುದ್ದೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಹುಬ್ಬಳ್ಳಿಗೆ ಸಿಗುತ್ತಿದೆ ಎಂಬುದು ಸೇರಿದಂತೆ ವಿವಿಧ ವಿಷಯಗಳಲ್ಲಿ ಧಾರವಾಡ ನಗರಕ್ಕೆ ಅನ್ಯಾಯವಾಗುತ್ತಿದ್ದು, ಈ ಕಾರಣಕ್ಕೆ ಪ್ರತ್ಯೇಕವಾಗಬೇಕು ಎಂಬ ಬೇಡಿಕೆ ಸಾಮಾನ್ಯಸಭೆಯಲ್ಲಿಯೇ ಪಕ್ಷಾತೀತವಾಗಿ ಹಲವು ಸದಸ್ಯರಿಂದ ವ್ಯಕ್ತವಾಗಿದೆ. ಆದರೆ, ಈ ಬೇಡಿಕೆಗೆ ಸಾರ್ವಜನಿಕ ವಲಯದಿಂದ ಬೆಂಬಲ ವ್ಯಕ್ತವಾಗದೇ ಇರುವುದರಿಂದ, ಈ ಕೂಗು ಪಾಲಿಕೆ ಆವರಣ ದಾಟುತ್ತಿಲ್ಲ.

ಇಬ್ಭಾಗದ ಪರ: ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಪಾಲಿಕೆ ಹಿರಿಯ ಸದಸ್ಯರಾದ ಡಾ.ಪಾಂಡುರಂಗ ಪಾಟೀಲ, ದೀಪಕ್‌ ಚಿಂಚೋರೆ, ರಾಜಣ್ಣ ಕೊರವಿ ಪಾಲಿಕೆ ಪ್ರತ್ಯೇಕಗೊಳ್ಳಬೇಕು ಎಂಬ ಬೇಡಿಕೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಪ್ರಣಾಳಿಕೆಯಲ್ಲಿ ಸೇರ್ಪಡೆ: ‘ಈ ಬಾರಿಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮಹಾನಗರ ಪಾಲಿಕೆ ಪ್ರತ್ಯೇಕ ವಿಷಯವನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇವೆ’ ಎನ್ನುತ್ತಾರೆ ಶಾಸಕ ಪ್ರಸಾದ ಅಬ್ಬಯ್ಯ.

ದೂರದೃಷ್ಟಿ ಅಗತ್ಯ: ‘ಸದ್ಯ ಲಭಿಸುತ್ತಿರುವ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಸಾಲುತ್ತಿಲ್ಲ. ಅವಳಿ ನಗರದ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ‍ಪ್ರತ್ಯೇಕ ಮಾಡುವುದು ಒಳಿತು’ ಎಂದು ಪಾಲಿಕೆ ಜೆಡಿಎಸ್‌ ಸದಸ್ಯ ರಾಜಣ್ಣ ಕೊರವಿ ಹೇಳುತ್ತಾರೆ.

ವಿರೋಧ: ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಮೇಯರ್‌ ಸುಧೀರ ಸರಾಫ್‌, ಉಪಮೇಯರ್‌ ಮೇನಲಾ ಹುರಳಿ, ಹಿರಿಯ ಸದಸ್ಯ ವೀರಣ್ಣ ಸವಡಿ, ಪಾಲಿಕೆ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ ಅವರು ಪ್ರತ್ಯೇಕಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.

‘ಹೆಚ್ಚಿನ ಅನುದಾನ ಬರುತ್ತದೆ. ಆಡಳಿತ ಸುಧಾರಣೆಯಾಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಎರಡೂ ನಗರಗಳು ಒಂದಾಗಿದ್ದರೆ ಮತ್ತಷ್ಟು ಅಭಿವೃದ್ಧಿ ಹೊಂದಬಹುದು. ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಅವಕಾಶವಿದೆ. ಈಗಾಗಲೇ ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಪ್ರತ್ಯೇಕವಾದರೆ, ಈ ಯೋಜನೆಯಿಂದ ವಂಚಿತವಾಗಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.
**
ಸಾಧಕ, ಬಾಧಕ ಚರ್ಚೆಯಾಗಲಿ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಇಬ್ಭಾಗದ ಕುರಿತು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆ ನಡೆಯಲಿ ಎನ್ನುತ್ತಾರೆ ಶಾಸಕ ಅರವಿಂದ ಬೆಲ್ಲದ.

ಎರಡೂ ನಗರಗಳಿಗೆ ಏನಾದರೂ ಪ್ರಯೋಜನವಾಗಲಿದೆಯೇ ಎಂದು ಪ್ರಶ್ನಿಸುವ ಅವರು, ಇದರ ಸಾಧಕ, ಬಾಧಕ ಕುರಿತು ಗಂಭೀರ ಚರ್ಚೆ ನಡೆಯಲಿ, ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಬಹುದು. ಇದರಲ್ಲಿ ರಾಜಕೀಯ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
**
ರಾಜಕೀಯ ಮಡಿವಂತಿಕೆ ಬೇಡ
‘ಈ ಬಗ್ಗೆ 2010ರಲ್ಲೇ ಪ್ರಥಮ ಬಾರಿಗೆ ನಾನು ಧ್ವನಿ ಎತ್ತಿದ್ದೆ. ಆದರೆ, ಯಾರೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಈ ವಿಷಯದಲ್ಲಿ ಕೆಲವರು ರಾಜಕೀಯ ಮಡಿವಂತಿಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಪಾಲಿಕೆ ಹಿರಿಯ ಸದಸ್ಯ ಡಾ.ಪಾಂಡುರಂಗ ಪಾಟೀಲ.

‘ಅಖಂಡ ಧಾರವಾಡ ಜಿಲ್ಲೆಯನ್ನು ಹಾವೇರಿ, ಗದಗ, ಧಾರವಾಡ ಎಂದು ಮೂರು ಜಿಲ್ಲೆಗಳನ್ನಾಗಿಸಲಾಯಿತು. ಇದರಿಂದ ಧಾರವಾಡಕ್ಕೇನಾದರೂ ತೊಂದರೆಯಾಯಿತೇ? ಪಾಲಿಕೆ ಚಿಕ್ಕದಾದಷ್ಟು ಉತ್ತಮ ಆಡಳಿತ ಸಿಗಲಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT