ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಎಂ.ಕೆ ನಗರ ಲೋಕಾರ್ಪಣೆ

ಎರಡು ತಿಂಗಳಲ್ಲಿ ಸಾರ್ವಜನಿಕರಿಗೆ ಅರ್ಪಣೆ, ಕ್ರಿಕೆಟ್ ಮೈದಾನಕ್ಕೆ ಭೂಮಿಪೂಜೆ
Last Updated 23 ಮಾರ್ಚ್ 2018, 10:55 IST
ಅಕ್ಷರ ಗಾತ್ರ

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದಲ್ಲಿ ನಿರ್ಮಿಸಿರುವ ಎಸ್.ಎಂ. ಕೃಷ್ಣ ಬಡಾವಣೆಯನ್ನು ಸಚಿವ ಎ.ಮಂಜು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು,  ಏಷ್ಯಾದಲ್ಲಿಯೇ ಉತ್ತಮ ಬಡಾವಣೆಯಾಗಿದ್ದು, ಪ್ರತಿ ಚದರಡಿಗೆ ₹ 725ರಂತೆ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ. ಜತೆಗೆ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಈ ಭೂಮಿಗೆ ಇನ್ನು ಉತ್ತಮ ಬೆಲೆ ಬರಲಿದ್ದು, ರೈತರು ನಿವೇಶನಗಳನ್ನು ಮಾರಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಬಡಾವಣೆಗೆ ಅಮೃತ್ ಯೋಜನೆಯ ಮೂಲಕ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ವ್ಯವಸ್ಥೆಯನ್ನು 2019ರ ಒಳಗೆ ಪೂರ್ಣಗೊಳಿಸಲಾಗುವುದು.  ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ಮಕ್ಕಳು ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಕ್ರೀಡಾಂಗಣ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಹಾಸನದಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, 5 ವರ್ಷ ಕಳೆದರೆ ಈ ಭೂಮಿಯ ಬೆಲೆ 10 ಪಟ್ಟು ಹೆಚ್ಚಳವಾಗಲಿದೆ. ಹೀಗಾಗಿ ಅವಸರದಲ್ಲಿ ನಿವೇಶನ ಮಾರಿ
ಕೊಳ್ಳದೆ ಬಡಾವಣೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಮಾತನಾಡಿ, 453 ಎಕರೆ ಪ್ರದೇಶದಲ್ಲಿ ಎಸ್.ಎಂ.ಕೃಷ್ಣ ಬಡಾವಣೆ ಬಡಾವಣೆ ನಿರ್ಮಿಸಿ, ವಿವಿಧ ಅಳತೆಯ 6,335 ನಿವೇಶನಗಳನ್ನು ಸಿದ್ದಪಡಿಸಲಾಗಿದೆ. ಇದರಲ್ಲಿ 2,456 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದ್ದು, ಶೇ 40 ರಷ್ಟು ನಿವೇಶನಗಳನ್ನು ಬಡಾವಣೆಗೆ ಭೂಮಿ ನೀಡಿದ ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಸುಧಾಕರ್, ಹಿರಿಯ ಕ್ರಿಕೆಟ್ ಪಟುಗಳಾದ ದೊಡ್ಡಗಣೇಶ್, ಡೇವಿಡ್ ಜಾನ್ಸನ್, ಹುಡಾ ಸದಸ್ಯರಾದ ಮೋಹನ್‌ಕುಮಾರ್, ತಾರಾ ಚಂದನ್, ಶಂಕರರಾಜು, ಹೀನಾ ಕೌಸರ್, ಬುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ, ಕಾಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ. ರಂಗನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT