ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ, ಕಮಲ ಕಾರ್ಯಕರ್ತರ ಜಟಾಪಟಿ

ಯಾವ ಕಾರಣಕ್ಕೆ ಕೊಡಗಿನ ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಿದ್ದಾರೆ: ಸೀತಾರಾಂ ಪ್ರಶ್ನೆ
Last Updated 23 ಮಾರ್ಚ್ 2018, 11:27 IST
ಅಕ್ಷರ ಗಾತ್ರ

ಮಡಿಕೇರಿ: ಕಾಮಗಾರಿ ಪೂರ್ಣಗೊಳ್ಳದಿದ್ದರೂ ಖಾಸಗಿ ಬಸ್ ನಿಲ್ದಾಣವನ್ನು ರಾಜಕೀಯ ಲಾಭಕ್ಕಾಗಿ ಉದ್ಘಾಟಿಸಲಾಗುತ್ತಿದೆ. ಅಲ್ಲದೇ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆಪಾದಿಸಿ, ಗುರುವಾರ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಲು ಮುಂದಾದರು. ಆಗ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಅದೇ ಆವರಣದಲ್ಲಿರುವ ‘ಇಂದಿರಾ ಕ್ಯಾಂಟೀನ್‌’ ಉದ್ಘಾಟಿಸಿದ ಬಳಿಕ ಖಾಸಗಿ ಬಸ್‌ ನಿಲ್ದಾಣದ ಬಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಆಗಮಿಸಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ. ಶ್ರೀದೇವಿ ಜತೆಗಿದ್ದರು.

ಆಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡರಾದ ಮಹೇಶ್‌ ಜೈನಿ, ಸತೀಶ್‌, ಅರುಣ್‌ಕುಮಾರ್‌, ಡೀನ್‌ ಬೋಪಣ್ಣ ನಾಮಫಲಕ ಅನಾವರಣದ ತನಕವೂ ಸುಮ್ಮನಿದ್ದರು. ಸಚಿವರು ಟೇಪ್‌ ಕತ್ತರಿಸಲು ಮುಂದಾಗುತ್ತಿದ್ದಂತೆಯೇ ಯಾವುದೇ ಕಾರಣಕ್ಕೂ ಬಸ್‌ ನಿಲ್ದಾಣ ಉದ್ಘಾಟನೆ ಮಾಡಬಾರದು ಎಂದು ಘೋಷಣೆ ಕೂಗಿದರು. ಶಾಸಕರಿಗೆ ಆಹ್ವಾನವನ್ನೇ ನೀಡಿಲ್ಲ; ಕಾಮಗಾರಿಯೂ ಮುಗಿಯದೆ ರಾಜಕೀಯ ಲಾಭಕ್ಕಾಗಿ ಉದ್ಘಾಟನೆ ಮಾಡಲಾಗುತ್ತಿದೆ ಎಂದು ದೂರಿದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

‘ನಮ್ಮ ಅವಧಿಯಲ್ಲಿ ಬಸ್‌ ನಿಲ್ದಾಣ ಮಂಜೂರಾಗಿತ್ತು. ಚುನಾವಣೆ ಲಾಭಕ್ಕಾಗಿ ಮುಗಿಯದ ಕಾಮಗಾರಿಯನ್ನು ಉದ್ಘಾಟಿಸಲಾಗುತ್ತಿದೆ’ ಬಿಜೆಪಿ ಮುಖಂಡರು ಹೇಳಿದರು. ಇದು ವೇದಿಕೆ ಮುಂಭಾಗದ ಆಸೀನರಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಕೆರಳಿಸಿತು. ಪರಸ್ಪರ ಕೈಕೈ ಮಿಸಲಾಯಿಸುವ ಹಂತಕ್ಕೆ ತಲುಪಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿ, ಬಿಜೆಪಿ ಮುಖಂಡರನ್ನು ಹೊರ ಕಳುಹಿಸಿದರು.

ಬಿಜೆಪಿಯ ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್‌ ಚಟುವಟಿಕೆಯಿಂದ ದೂರವೇ ಉಳಿದಿದ್ದ ನಗರಸಭೆ ಸದಸ್ಯೆ ವೀಣಾಕ್ಷಿ ಮಾತ್ರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಮಾತನಾಡಿ, ‘ಶಾಸಕ ಕೆ.ಜಿ. ಬೋಪಯ್ಯ ಬುಧವಾರ ನನ್ನೊಂದಿಗೆ ಎಲ್ಲ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು. ಆಗಲೇ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದೆ. ಬೆಂಗಳೂರಿನಲ್ಲಿ ಪೂರ್ವನಿಗದಿ ಕಾರ್ಯಕ್ರಮದ ಕಾರಣ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ಅವರ ಪಕ್ಷದ ಕಾರ್ಯಕರ್ತರು ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ. ಅವರು ಕಲಿತಿರುವ ವಿದ್ಯೆಯೇ ಅಷ್ಟು’ ಎಂದು ಆಕ್ರೋಶ ಭರಿತವಾಗಿದ ಹೇಳಿದರು.

‘ಒಬ್ಬರು ಮೂರು ಬಾರಿ, ಮತ್ತೊಬ್ಬರು ನಾಲ್ಕು ಬಾರಿ ಗೆದ್ದಿದ್ದಾರೆ. ಅವರಿಗೇಕೆ ಬಹು ಬೇಡಿಕೆಯ ಬಸ್‌ ನಿಲ್ದಾಣ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಇಂತಹ ಮುಖಂಡರಿಗೆ ಕೊಡಗಿನ ಜನರು ಪದೇ ಪದೇ ಆಶೀರ್ವಾದ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ’ ಎಂದು ಕುಟುಕಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ‘ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಕಾಮಗಾರಿ ಮುಕ್ತಾಯವಾಗಲಿದೆ. ಮಳೆಗಾಲದಲ್ಲಿ ಕೆಲಸ ವಿಳಂಬವಾದ ಕಾರಣಕ್ಕೆ ಉದ್ಘಾಟನೆ ತಡವಾಗಿದೆ. ಕೆಲವೇ ದಿನಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್‌ ಸಭೆ ಕರೆದು ಬಸ್‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್‌ ಮಿಶ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT