ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಕುಸಿತ: ರೈತರ ಪರದಾಟ

ತರಕಾರಿಗೆ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಬರಲು ಸರ್ಕಾರಕ್ಕೆ ಆಗ್ರಹ
Last Updated 23 ಮಾರ್ಚ್ 2018, 11:50 IST
ಅಕ್ಷರ ಗಾತ್ರ

ಹನುಮಸಾಗರ: ಕೊಳವೆಬಾಯಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ದೀರ್ಘಾವಧಿ ಬೆಳೆ ಹಾಕಿ ಕೈಸುಟ್ಟುಕೊಳ್ಳುವುದರ ಬದಲು ಕೈಕಾಸು ತರುವ ತರಕಾರಿ ಬೆಳೆದು ಬದುಕು ನಡೆಸಬಹುದು ಎಂಬ ರೈತರ ನಿರೀಕ್ಷೆ ಸುಳ್ಳಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕುಸಿದಿದ್ದು, ಬೆಳೆದ ತರಕಾರಿಗಳನ್ನು ರೈತರು ಜಾನುವಾರುಗಳಿಗೆ ಹಾಕುತ್ತಿರುವ ದೃಶ್ಯ ಪ್ರತಿ ತೋಟಗಳಲ್ಲಿ ಕಂಡು ಬರುತ್ತಿದೆ.

ಈ ಭಾಗದಲ್ಲಿ ಟೊಮೆಟೊ, ಬದನೆಕಾಯಿ, ಚವಳಿಕಾಯಿ, ಗಜ್ಜರಿ ಬೆಳೆಯಲಾಗಿದೆ. ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈ ತರಕಾರಿಗಳಿಗೆ ಉತ್ತಮ ಬೆಲೆ ಇಲ್ಲ.

ಕಾರಣ ಮಾಡಿದ ಖರ್ಚು ಮೈಮೇಲೆ ಬಂದಂತಾಗಿದೆ. ರೈತರು ಬೀಜ, ಗೊಬ್ಬರದ ಸಾಲ ತೀರಿಸಲು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಹನುಮಂತಪ್ಪ, ಮರ್ತುಜಾಸಾಬ ಬಾಗವಾನ ಒಂದು ಎಕರೆಯಲ್ಲಿ ಬದನೆ, ಒಂದು ಎಕರೆಯಲ್ಲಿ ಟೊಮೆಟೊ, ಅರ್ಧ ಎಕರೆ ಪಾಲಕ ಹಾಕಿದ್ದಾರೆ. ಎರಡು ಬಾರಿ ಕ್ರಿಮಿನಾಶಕ, ಗೊಬ್ಬರ ನೀಡಿದ್ದರಿಂದ ಉತ್ತಮ ರೀತಿಯಲ್ಲಿ ಇಳುವರಿ ಬಂದಿದೆ. ಆದರೆ, ಬೆಲೆ ನೆಲಕಚ್ಚಿದೆ.‘ಸುಮಾರು ₹40 ಸಾವಿರ ಖರ್ಚಾಗಿದೆ. ಬದನೆಕಾಯಿಗಳನ್ನು ದನಗಳಿಗೆ ಹಾಕುತ್ತಿದ್ದೇವೆ’ ಎಂದು ಹನುಮಂತಪ್ಪ ಮಾವಿನಇಟಗಿ ಗೋಳು ತೋಡಿಕೊಂಡರು.
ಟೊಮೆಟೊ ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಸಿಗದಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಬಿಡಿಸುವುದನ್ನು ಬಿಟ್ಟಿದ್ದಾರೆ.

20 ಕೆ.ಜಿ ಬದನೆಕಾಯಿ ಬಾಕ್ಸ್‌ಗೆ ಮಾರುಕಟ್ಟೆಯಲ್ಲಿ ₹30 ಬೆಲೆ ಇದೆ. ಅಷ್ಟೆ ತೂಕದ ಟೊಮೆಟೊಗೆ ₹15 ಇದೆ. ಇವುಗಳನ್ನು ಕೊಯಿಲು ಮಾಡಲು ಒಬ್ಬ ಕಾರ್ಮಿಕರ ದಿನಗೂಲಿ ₹150 ಇದೆ. ಬೆಳೆಗೆ ಹಾಕಿದ ಬಂಡವಾಳವಂತೂ ಕೈಗೆ ಬರುವುದಿಲ್ಲ.

ಕಿತ್ತು ಮಾರುಕಟ್ಟೆಗೆ ಹಾಕಿದರೆ, ಕೀಳುವ ಕೂಲಿ, ಮಾರುಕಟ್ಟೆಗೆ ಸಾಗಿಸುವ ಲಗೇಜ್‌, ಬಾಕ್ಸ್‌ ಬಾಡಿಗೆ, ಶೇ 10 ರಷ್ಟು ಕಮೀಷನ್‌ ಕಳೆದರೆ ನಾವೇ ದುಡ್ಡು ಕೊಟ್ಟು ಬರಬೇಕಾಗುತ್ತದೆ. ಈ ಕಾರಣದಿಂದ ಜಮೀನಿಗೆ ಗೊಬ್ಬರವಾದರೂ ಆಗಲಿ ಎಂಬ ಕಾರಣದಿಂದ ಟೊಮೆಟೊ ಹಾಗೇ ಬಿಟ್ಟಿದ್ದೇವೆ’ ಎಂದು ರೈತ ಬಸವರಾಜ ಹೇಳಿದರು.

ಎಲೆ ಕೋಸು, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳ ಬೆಲೆಯೂ ತೀರಾ ಕುಸಿದಿದೆ.
ಈ ಮಧ್ಯೆ ಬೆಳಗಾವಿ ಭಾಗದಿಂದ ಗಜ್ಜರಿ, ಹೂಕೋಸು, ಎಲೆಕೋಸು ಬರುತ್ತಿದೆ.

‘ಇಳಕಲ್‌ನ ಜೈನ ಸಮುದಾಯದವರು ತಲಾ ₹10 ಗೆ ಹತ್ತಾರು ಬುಟ್ಟಿ ತರಕಾರಿ ಖರೀದಿಸಿ ಗೋಶಾಲೆಗೆ ಕಳಿಸುತ್ತಾರೆ. ನಮ್ಮ ದನಗಳಿಗೆ ನಾವೂ ಬದನೆಕಾಯಿ ಕತ್ತರಿಸಿ ಹಾಕುತ್ತಿದ್ದೇವೆ. ಅವು ಕೂಡಾ ತಿನ್ನಲು ಹಿಂದೆ ಮುಂದೆ ನೋಡುತ್ತಿವೆ’ ಎಂದು ಹನುಮಂತ ಹೇಳಿದರು.
**
ಬೆಲೆ ಕುಸಿತದಿಂದ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು.          ಪ್ರಾಣೇಶ ಪಪ್ಪು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT