ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3.01 ಕೋಟಿ ಕೊರತೆ ಬಜೆಟ್‌ ಮಂಡನೆ

ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪ್ರಸ್ತಕ ವರ್ಷದಿಂದ ನೂತನ ಕೋರ್ಸ್‌ಗಳು ಆರಂಭ
Last Updated 23 ಮಾರ್ಚ್ 2018, 12:37 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾ ವಿಷಯಕ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ 2018–19ರ ಸಾಲಿಗೆ ₹ 3.01 ಕೋಟಿ ಕೊರತೆಯ ಬಜೆಟ್‌ನ್ನು ಹಣಕಾಸು ಅಧಿಕಾರಿ ಪ್ರೊ.ಹಿರೇಮಣಿ ನಾಯಕ್ ಮಂಡಿಸಿದರು.

ಶೈಕ್ಷಣಿಕ ವೆಚ್ಚಗಳಿಗೆ ₹ 44.35 ಕೋಟಿ, ಆಡಳಿತಾತ್ಮಕ ವೆಚ್ಚಗಳಿಗೆ ₹ 35.46 ಕೋಟಿ, ಪರೀಕ್ಷಾ ವೆಚ್ಚಗಳಿಗಾಗಿ ₹ 14 ಕೋಟಿ, ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚಗಳಿಗೆ ₹ 15 ಕೋಟಿ, ಅಭಿವೃದ್ಧಿ ಕಾಮಗಾರಿಗಳಿಗೆ ₹ 22.95 ಕೋಟಿ, ವಿದ್ಯಾರ್ಥಿ ಬೆಂಬಲ ಸೇವೆಗಳಿಗಾಗಿ ₹ 5.46 ಕೋಟಿ ಮತ್ತು ಯುಜಿಸಿ, ಭಾರತ ಸರ್ಕಾರದ ಅನುದಾನಗಳ ಅಡಿಯಲ್ಲಿ ₹ 16.53 ಕೋಟಿ ವೆಚ್ಚ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ ಎಂದು ಅವರು ಹೇಳಿದರು.

2017–18ನೇ ಸಾಲಿನಲ್ಲಿ ₹ 155.71 ಕೋಟಿ ಆದಾಯ ನಿರೀಕ್ಷಿಸಲಾಗಿದೆ. 2018ರ ಫೆಬ್ರುವರಿ ಹೊತ್ತಿಗೆ ಸರ್ಕಾರದಿಂದ ವೇತನ ಮತ್ತು ಅಭಿವೃದ್ಧಿ ಅನುದಾನಗಳಿಗೆ ₹ 40.83 ಕೋಟಿ, ಆಂತರಿಕ ಸಂಪನ್ಮೂಲಗಳಿಂದ ₹ 40.60 ಕೋಟಿ, ಯುಜಿಸಿ ಮತ್ತು ಇತರೆ ಸ್ವೀಕೃತಿಗಳಿಂದ ₹ 1.08 ಕೋಟಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ₹ 59.02 ಲಕ್ಷ, ಸೇರಿದಂತೆ ಒಟ್ಟು
₹ 125.31 ಕೋಟಿ ಆದಾಯ ಬಂದಿದೆ ಎಂದರು.

2017–18ನೇ ಸಾಲಿನಲ್ಲಿ ವೆಚ್ಚಗಳಿಗೆ ₹ 141.34 ಕೋಟಿ ಆಯವ್ಯಯದಲ್ಲಿ ನಿಗದಿಗೊಳಿಸಲಾಗಿದ್ದು, 2018ರ
ಫೆಬ್ರುವರಿ ಹೊತ್ತಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ₹ 10.50 ಕೋಟಿ, ಶೈಕ್ಷಣಿಕ ವೆಚ್ಚಗಳಿಗೆ ₹ 40.30 ಕೋಟಿ, ಆಡಳಿತಾತ್ಮಕ ವೆಚ್ಚಗಳಿಗೆ ₹ 30.80 ಕೋಟಿ, ವಿದ್ಯಾರ್ಥಿ ಬೆಂಬಲ ಸೇವೆಗಳಿಗೆ ₹ 3.59 ಕೋಟಿ, ಪರೀಕ್ಷಾ ವೆಚ್ಚಗಳಿಗೆ
₹ 13.27 ಕೋಟಿ ಮತ್ತು ದೂರ ಶಿಕ್ಷಣಕ್ಕೆ ₹ 7.29 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು.

ಗ್ರಾಮದತ್ತು ಹಾಗೂ ಹೊಸ ಕೋರ್ಸ್‌: ಆಯವ್ಯಯದಲ್ಲಿ ಔದ್ಯೋಗಿಕ ಕೌಶಲ ಕೇಂದ್ರ ಹಾಗೂ ಗ್ರಾಮದತ್ತು ಯೋಜನೆಗೆ ಹಣ ಒದಗಿಸಲಾಗಿದೆ. ಅಲ್ಲದೆ 2018–19ನೇ ಸಾಲಿನಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಬಿಬಿಎ (ಕೈಗಾರಿಕಾ ಸುರಕ್ಷತಾ ನಿರ್ವಹಣೆ) ಕೋರ್ಸ್‌ ಪ್ರಾರಂಭವಾಗಲಿದೆ. ಜತೆಗೆ ರಂಗ ಅಧ್ಯಯನ, ಭರತನಾಟ್ಯ, ನವೀನ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ, ಕುವೆಂಪು ಮತ್ತು ವೈಚಾರಿಕತೆ, ಅಲ್ಲಮ ಪ್ರಭು ಮತ್ತು ಬಸವ ತತ್ವ ವಿಷಯಗಳಲ್ಲಿ ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಎಂಎಸ್ಸಿ ಜೀವ ವಿಜ್ಞಾನ ಕೋರ್ಸ್‌: ಎಂಎಸ್ಸಿ ಜೀವ ವಿಜ್ಞಾನ ಸ್ನಾತಕೋತ್ತರ ಪದವಿಯನ್ನು ಎಂಎಸ್ಸಿ ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ಕೋರ್ಸ್‌ಗಳಿಗೆ ಸಮಾನವೆಂದು ಮಾನ್ಯತೆ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸ್ನಾತಕ ಪದವಿಯಲ್ಲಿ ಕಡ್ಡಾಯ ಭಾಷೆಯಾಗಿ ಕನ್ನಡ: ಕನ್ನಡ ಪ್ರಾಧಿಕಾರದ ನಿರ್ದೇಶನದ ಮೇರೆಗೆ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸ್ನಾತಕ ಪದವಿಯಲ್ಲಿ ಕಡ್ಡಾಯ ಭಾಷೆಯಾಗಿ ಕನ್ನಡವನ್ನು ಬೋಧಿಸುವ ನಿಟ್ಟಿನಲ್ಲಿ ವಿವಿಧ ಅಧ್ಯಯನ ಮಂಡಳಿಗಳ ಮೂಲಕ ವರದಿ ಪಡೆದು ಸರ್ಕಾರಕ್ಕೆ ಕಳುಹಿಸಲು ಸಭೆ ಅನುಮೋದನೆ ನೀಡಿತು.

ಸಹ್ಯಾದ್ರಿ ವಿಜ್ಞಾನ ಕಾಲೇಜು ಸ್ವಾಯತ್ತತೆ ವಾಪಸ್: ನ್ಯಾಕ್ ನಿಯಮಾವಳಿಯ ಪ್ರಕಾರ ‘ಎ’ ಗ್ರೇಡ್‌ಗಿಂತ ಕಡಿಮೆ ಶ್ರೇಣಿ ಪಡೆದಿರುವ ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ನೀಡಲಾಗಿದ್ದ ಸ್ವಾಯತ್ತತೆ ಹಿಂಪಡೆದುಕೊಳ್ಳಲಾಗಿದೆ. ಇನ್ನು ಮುಂದೆ, ಕಾಲೇಜು ವಿಶ್ವವಿದ್ಯಾಲಯದ ಆಡಳಿತ ವ್ಯಾಪ್ತಿಗೆ ಬರುತ್ತದೆ ಎಂದು ಕುಲಸಚಿವರು ಹೇಳಿದರು.

ದ್ವಿಗುಣ ಅವಧಿ ಪೂರೈಸಿದವರಿಗೆ ಅಂತಿಮ ಅವಕಾಶ: ಈಗಾಗಲೇ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ದ್ವಿಗುಣ ಅವಧಿ ಪೂರೈಸಿ ಕಾರಣಾಂತರಗಳಿಂದ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ 2018ರ ಪರೀಕ್ಷೆ ಬರೆಯಲು ಅಂತಿಮ ಅವಕಾಶ ನೀಡಲು ಸಭೆ ಅನುಮೋದನೆ ನೀಡಿತು.

ಸಭೆಯಲ್ಲಿ ವಿದ್ಯಾ ವಿಷಯಕ ಪರಿಷತ್‌ಗೆ ನೂತನವಾಗಿ ನಾಮನಿರ್ದೇಶನ ಆದವರನ್ನು ಸ್ವಾಗತಿಸಲಾಯಿತು. ಅಲ್ಲದೆ ಸದಸ್ಯತ್ವದಿಂದ ಬಿಡುಗಡೆಗೊಂಡ ವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನೂತನ ಸಿಂಡಿಕೇಟ್‌ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು.

ಸಭೆಯಲ್ಲಿ ಕುಲಪತಿ ಪ್ರೊ.ಜೋಗನ್‌ ಶಂಕರ್, ಕುಲಸಚಿವ ಪ್ರೊ.ಭೋಜ್ಯಾನಾಯ್ಕ್, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜಾ ನಾಯಕ, ವಿವಿಧ ನಿಕಾಯಗಳ ಡೀನರು, ನಾಮನಿರ್ದೇಶಿತ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT