ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಪ್ರಶಸ್ತಿ ಮಾನದಂಡವಲ್ಲ

‘ಕುವೆಂಪು ಓದು– ಹಲವು ಬಗೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಟಿ.ಎಸ್‌.ವಿವೇಕಾನಂದ
Last Updated 23 ಮಾರ್ಚ್ 2018, 12:43 IST
ಅಕ್ಷರ ಗಾತ್ರ

ತುಮಕೂರು: ಪ್ರಶಸ್ತಿ ಪಡೆದ ಮಾತ್ರಕ್ಕೆ ಯಾವುದೇ ಬರಹಗಾರ ಶ್ರೇಷ್ಠನಾಗುವುದಿಲ್ಲ. ಹೀಗಾಗಿ ಪ್ರಶಸ್ತಿಗಳ ಮೇಲೆ ಪ್ರತಿಭೆಯನ್ನು ಅಳೆಯುವುದು ಸರಿಯಲ್ಲ ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರದ

ಸದಸ್ಯ ಡಾ.ಟಿ.ಎಸ್‌.ವಿವೇಕಾನಂದ ಹೇಳಿದರು.

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ‘ಕುವೆಂಪು ಓದು– ಹಲವು ಬಗೆ’ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ‌ರು.

ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಹಲವರು ಪಡೆದುಕೊಂಡಿದ್ದಾರೆ. ಆದರೆ ಶಾಂತಿಯನ್ನು ಸಾರುತ್ತಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರಿಗೆ ಮಾತ್ರ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಲಿಲ್ಲ. ಹಾಗಂದ ಮಾತ್ರಕ್ಕೆ ಅವರು
ಶ್ರೇಷ್ಠರಲ್ಲ, ಅಥವಾ ಅವರು ಸಾಧನೆಯನ್ನೇ ಮಾಡಿಲ್ಲ ಎನ್ನುವ ಅರ್ಥವಲ್ಲ ಎಂದರು.

ಯಾವುದೇ ಒಬ್ಬ ಬರಹಗಾರ ತನ್ನ ಕಾಲಧರ್ಮಕ್ಕೆ ಅನುಗುಣವಾಗಿ ತನ್ನ ವ್ಯಕ್ತಿತ್ವ, ಬರವಣಿಗೆ ಮತ್ತು ಅವನು ಸಮಾಜಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವ ಅಂಶಗಳ ಮೇಲೆ ಅವನ ಶ್ರೇಷ್ಠತೆ ನಿರ್ಧಾರವಾಗುತ್ತದೆ. ಹೀಗಾಗಿಯೇ ಸಾವಿರಾರು ಕೋಟಿ ಜನರು ಬದುಕಿ ಹೋಗಿರುವ ವಿಶ್ವದ ಇತಿಹಾಸದಲ್ಲಿ ನಾವು ನೂರು ಅಥವಾ ಇನ್ನೂರು ಬರಹಗಾರರನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಿದರು.

ನಮ್ಮ ಸಾಮಾಜಿಕ ನೆಲೆಯಲ್ಲಿ ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ಗೋಡೆಗಳನ್ನು ಕಟ್ಟಿಕೊಳ್ಳಲಾಗಿದೆ. ಆದರೆ ಕುವೆಂಪು ಅವರು ತಮ್ಮ ಬರಹಗಳಲ್ಲಿ ಈ ಗೋಡೆಗಳನ್ನೆಲ್ಲಾ ಒಡೆದು, ವಿಶ್ವಮಾನವರಾಗಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗೀತಾ ವಸಂತ್‌ ಮಾತನಾಡಿ, ‘ಕುವೆಂಪು ಓದು ಎಂದರೆ ಅದು ನಾವು ಖಾಲಿ ಇರುವಾಗ ತುಂಬಿಕೊಳ್ಳುವ ಪ್ರಕ್ರಿಯೆಯಾಗಿದೆ’ ಎಂದು ಹೇಳಿದರು.

ಕುವೆಂಪು ಅವರು ಕಾಲ ಮತ್ತು ದೇಶಗಳನ್ನು ಮೀರಿ ಯೋಚಿಸುವ ದಾರ್ಶನಿಕರಾಗಿದ್ದರು. ಅವರು ವಾಸ್ತವದಲ್ಲಿ ಬದುಕುತ್ತಾ ಭೂತವನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ಕಾಣುತ್ತಿದ್ದರು. ಹೀಗಾಗಿಯೇ ಅವರ ಬರಹಗಳಲ್ಲಿ ಶ್ರೇಷ್ಠ ತತ್ವಗಳು ವ್ಯಕ್ತವಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT