ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತೆ ಬಿಟ್ಟು, ಖುಷಿಯಾಗಿರಿ...

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಸಮಾಧಾನ: ಅನಗತ್ಯ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳುವುದು. ಪ್ರತಿಯೊಂದು ವಿಷಯಗಳಿಗೂ ರೇಗುವುದರಿಂದ ಜೀವನದ ಸಂತೋಷವೇ ಕಳೆದುಕೊಂಡು ಬಿಡಬೇಕಾಗುತ್ತದೆ. ಜೀವನದಲ್ಲಿ ತಾಳ್ಮೆ ತುಂಬಾ ಮುಖ್ಯ. ಕಂಡಿದ್ದನ್ನು ಪರೀಕ್ಷಿಸುವ ವ್ಯವಧಾನ ಬೆಳೆಸಿಕೊಳ್ಳಬೇಕು. ಯೋಚಿಸದೆ ಮಾಡುವ ತೀರ್ಮಾನ ದುಃಖಕ್ಕೆ ದೂಡಬಹುದು ಎಂಬುದು ನೆನಪಿರಲಿ.

* ದುರಾಸೆಯ ನಿಯಂತ್ರಣ: ಮನುಷ್ಯನ ಆಸೆಗೆ ಮಿತಿ ಇಲ್ಲ, ನೂರು ರೂಪಾಯಿ ಗಳಿಸುವವನಿಗೆ ಸಾವಿರ, ಹತ್ತು ಸಾವಿರ... ಹೀಗೆ ಇನ್ನು ಗಳಿಸಬೇಕೆಂಬ ಆಸೆ. ಎಲ್ಲವೂ ನನಗೆ ದೊರಕಬೇಕೆಂಬ ಹಂಬಲ. ಆಸೆಪಡುವುದು ತಪ್ಪಲ್ಲ. ಆದರೆ ಎಲ್ಲದಕ್ಕೂ ಮಿತಿ ಇರುತ್ತದೆ. ಆಸೆ ದುರಾಸೆ ಆಗಬಾರದು. ಇರುವುದರಲ್ಲಿಯೇ ತೃಪ್ತಿ ಪಡಿ. ಇನ್ನಷ್ಟು ಗಳಿಸಲು ಶ್ರಮ ಪಡಿ. ವಾಮ ಮಾರ್ಗ ಹಿಡಿಯಬೇಡಿ. ಇದಕ್ಕಾಗಿಯೇ ಹಿರಿಯರು ಹೇಳಿರುವುದು ‘ಹಾಸಿಗೆ ಇದ್ದಷ್ಟು ಕಾಲುಚಾಚು’ ಎಂದು.

* ಸರಳತೆ: ಎಷ್ಟೇ ಶ್ರೀಮಂತನಾಗಿದ್ದರೂ, ಸರಳತೆ ಮೈಗೂಡಿಸಿಕೊಳ್ಳುವುದು ಅಗತ್ಯ. ಜೀವನದಲ್ಲಿ ಬೆಳೆಯುತ್ತಾ ಹೋದಂತೆ ದುರಹಂಕಾರ ಬೆಳೆಸಿಕೊಂಡು ಹೋದರೆ  ವ್ಯಕ್ತಿತ್ವಕ್ಕೂ ಚ್ಯುತಿ ಬರಬಹುದು. ಸರಳ ವ್ಯಕ್ತಿತ್ವ ಇಲ್ಲದೇ ಹೋದರೆ ನಿಮ್ಮ ವ್ಯಕ್ತಿತ್ವದ ಜೊತೆಗೆ ಸಾಧನೆಯೂ ಗೌಣವಾಗುತ್ತದೆ. ನಿಮ್ಮ ವ್ಯಕ್ತಿತ್ವ ನಾಲ್ಕು ಜನರಿಗೆ ಮಾದರಿಯಾಗುವಂತಿರಲಿ.

* ಮುಖದಲ್ಲಿ ನಗು: ಎಷ್ಟೇ ಕಷ್ಟವಿದ್ದರೂ, ಮುಖದಲ್ಲಿ ಮಂದಹಾಸ ಮರೆಯಾಗದಿರಲಿ. ಸಮಸ್ಯೆ ಬಂತೆಂದು ಮುಖ ಗಂಟಿಕ್ಕಿಕೊಂಡಿದ್ದರೆ ಯಾವುದೇ ಲಾಭವಿಲ್ಲ. ಒಂದಿಷ್ಟು ಹಾಸ್ಯಪ್ರಜ್ಞೆಯನ್ನು ರೂಢಿಸಿಕೊಳ್ಳಿ. ನೀವು ನಗುವುದರೊಂದಿಗೆ ಬೇರೆಯವರನ್ನು ನಗಿಸುತ್ತ ಜೀವನದಲ್ಲಿ ಸಂತೋಷವಾಗಿರಿ.

* ವಿಶ್ರಾಂತಿ: ಇಂದು ನಾವು ಯಾಂತ್ರಿಕ ಜಗತ್ತಿನಲ್ಲಿದ್ದೇವೆ. ಮೈತುಂಬ ಕೆಲಸ ಹೊದ್ದುಕೊಂಡು ಬಿಡುವಿಲ್ಲದವರಂತೆ ಆಗಿಬಿಟ್ಟಿದ್ದೇವೆ. ಜೀವನದ ಖುಷಿಗೆ ವಿಶ್ರಾಂತಿ ಅಗತ್ಯ. ಮನೆಮಂದಿಗೆ ವಿರಾಮ ಪಡೆದು ಪಿಕ್‌ನಿಕ್‌, ಸಿನಿಮಾ, ಶಾಪಿಂಗ್‌...ಇದಕ್ಕಾಗಿಯೇ ಒಂದಷ್ಟು ಸಮಯ ಮೀಸಲಿಡಿ. ಇದು ದೇಹದ ಜೊತೆಗೆ ಮನಸಿಗೂ ವಿಶ್ರಾಂತಿ ನೀಡಿ ಚೈತನ್ಯದಿಂದ ಬದುಕಲು ನೆರವಾಗುತ್ತದೆ.

* ಮಕ್ಕಳ ಜೊತೆ ಕಾಲ ಕಳೆಯಿರಿ: ದಿನ ಪೂರ್ತಿಯ ಕಾರ್ಯಗಳ ನಡುವೆ ಮಕ್ಕಳಿಗಾಗಿ ಒಂದಷ್ಟು ಸಮಯವನ್ನು ನೀಡಿ. ಅವರ ಮಾತು, ನಗು ನಿಮ್ಮ ಹಲವು ಸಮಸ್ಯೆಗಳನ್ನು ಮರೆಸುತ್ತದೆ. ಅವರೊಂದಿಗೆ ಆಟವಾಡುತ್ತ ನಿಮ್ಮ ಬಾಲ್ಯದ ಕ್ಷಣಗಳಿಗೆ ಮರಳುತ್ತೀರಿ.

* ಸಹಾಯ ಮಾಡಿ: ಮತ್ತೊಬ್ಬರಿಗೆ ಸಹಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಹಣಕಾಸಿನ ಸಹಾಯವೇ ಆಗಬೇಕೆಂದಿಲ್ಲ. ಸಹಾಯ ಮಾಡಲು ಹಲವು ಮಾರ್ಗಗಳಿವೆ. ನಿಮ್ಮ ಧೈರ್ಯದ ಮಾತು ಇನ್ನೊಬ್ಬರ ಬಾಳನ್ನು ಬೆಳಗಿಸಬಹುದು. ಇದು ನಿಮಗೂ ಸಾರ್ಥಕತೆ ನೀಡುತ್ತದೆ.

* ಉತ್ಸಾಹ: ಮಾಡುವ ಕೆಲಸವನ್ನು ಉತ್ಸಾಹದಿಂದ ಮಾಡಿ. ನಿಮ್ಮ ಬೆಳಗು ಉತ್ಸಾಹದಿಂದಲೇ ಪ್ರಾರಂಭವಾಗಲಿ. ಯಾವುದೇ ಕೆಲಸವನ್ನಾದರೂ, ತಲೆನೋವು ಎಂಬಂತೆ ಪ್ರಾರಂಭಿಸದಿರಿ. ಕೆಲಸದ ಪ್ರತಿಫಲ ನಿಮ್ಮ ಚೈತನ್ಯದ ಮೇಲೆ ಅವಲಂಬಿತವಾಗಿರುತ್ತದೆ.
–ಎಲ್.ಪಿ.ಕುಲಕರ್ಣಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT