ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನದಲ್ಲಿ ಗುರಿಯೇ ಇಲ್ಲ!’

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ನನಗೆ ತುಂಬಾ ನೆಗೆಟಿವ್ ಯೋಚನೆಗಳೇ ಬರುತ್ತವೆ. ಜೊತೆಗೆ ಜೀವನದಲ್ಲಿ ಯಾವುದೇ ನಿರ್ದಿಷ್ಟ ಗುರಿ ಇಲ್ಲ. ಯಾವ ಕೆಲಸ ಕೊಟ್ಟರು ಮಾಡುತ್ತೇನೆ. ಆದರೆ ನನ್ನ ಜೀವನಕ್ಕೆ ಇದೇ ಬೇಕು ಎನ್ನುವುದಿಲ್ಲ. ಯಾವುದೇ ವಿಷಯದ ಮೇಲೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರೀಕ್ಷೆ ಸಮಯದಲ್ಲಿ ಚೆನ್ನಾಗಿ ಓದಬೇಕು ಎಂದುಕೊಳ್ಳುತ್ತೇನೆ. ಆಮೇಲೆ ಎಲ್ಲಾ ಮರೆಯುತ್ತೇನೆ. ನಾನು ಐಎಎಸ್ ಪಾಸ್ ಮಾಡಬೇಕು ಎಂದುಕೊಂಡಿದ್ದೆ. ಆದರೆ ಅದರ ಮೇಲೆ ಗಮನ ಕಡಿಮೆ ಆಯ್ತು, ಜನರು ನನ್ನನ್ನು ಆಡಿಕೊಳ್ಳಲು ಆರಂಭಿಸಿದರು. ಇದರಿಂದ ನನಗೆ ಕಿರಿಕಿರಿ ಆರಂಭವಾಯಿತು. ಹೀಗಾಗಿ ನಾನು ಈ ರೀತಿ ಆಗಿದ್ದೇನೆ.
-ಹರೀಶ್, ಮಂಡ್ಯ

ಉತ್ತರ: ನಿಮ್ಮ ವಯಸ್ಸು ಮತ್ತು ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಅದೇನೇ ಇರಲಿ, ಈಗ ನಿಮಗೇ ತಿಳಿದಿದೆ – ನಿಮಗೆ ಯಾವುದೇ ವಿಷಯದ ಮೇಲೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ – ಎಂಬುದು. ಮೊದಲು ನಿಮ್ಮ ವ್ಯಕ್ವಿತ್ವದ ಮೇಲೆ ಗಮನವನ್ನು ಹರಿಸಿ. ನಿಮ್ಮ ಆಹಾರಕ್ರಮ ಹಾಗೂ ದೈಹಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಿ. ಇವು ನೀವು ಮಾಡುವ ಕೆಲಸಗಳ ಮೇಲೆ ಗಮನ ಹರಿಸಲು ನೆರವಾಗುವ ಮುಖ್ಯ ಅಂಶ. ನಿಮಗೆ ದೈಹಿಕ ವ್ಯಾಯಾಮ ತುಂಬ ಮುಖ್ಯ; ಬೆವರುವವರೆಗೂ ದೇಹವನ್ನು ದಂಡಿಸಿ. ಇದು ನಿಮಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಇದರಿಂದ ಜೀವನಕ್ಕೆ ನೀವು ಏನನ್ನು ರೂಪಿಸಿಕೊಳ್ಳಬೇಕು ಎಂಬ ಒಂದು ಸ್ಪಷ್ಟ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ.

ಸುಲಭವಾಗಿ ಸಾಧಿಸಲು ಸಾಧ್ಯವಾಗುವ ಹಾಗೂ ಕಡಿಮೆ ಅವಧಿಯಲ್ಲಿ ತಲುಪುವ ಗುರಿಗಳನ್ನು ಹಾಕಿಕೊಳ್ಳಿ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದಂತೆ ನಿಧಾನಕ್ಕೆ ಜೀವನದ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಲ್ಲಿಯವರೆಗೆ ನಿಮಗೆ ಇಷ್ಟವಾಗುವ ವಿಷಯದ ಮೇಲೆ ಕೆಲಸ ಮಾಡಿ. ಆಗ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಸ್ನೇಹಿತರು ಹಾಗೂ ಒಡಹುಟ್ಟಿದವರಿಂದ ಸಹಾಯ ಪಡೆದುಕೊಳ್ಳಿ. ಆಗ ನಿಮಗೆ ನಿಮ್ಮ ದಾರಿ ಬಿಟ್ಟು ಬೇರೆಡೆ ಸಾಗಲು ಮನಸ್ಸಾಗುವುದಿಲ್ಲ. ಧ್ಯಾನದಿಂದ ಮನಸ್ಸಿನಲ್ಲಿ ಸ್ಪಷ್ಟತೆ ಕಂಡುಕೊಳ್ಳಲು ಸಾಧ್ಯ.

ಆಗ ನಿಮಗೆ ಯಾವುದರ ಮೇಲೆ ಒಲವಿದೆ ಹಾಗೂ ಯಾವುದರ ಮೇಲೆ ಗಮನ ಹರಿಸಬೇಕು ಎಂಬುದರ ಅರಿವು ನಿಮಗಾಗುತ್ತದೆ. ಜನರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆತ್ಮವಿಶ್ವಾಸದಿಂದಷ್ಟೇ ನಿಮ್ಮ ವ್ಯಕ್ತಿತ್ವದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯ. ಸಾಮಾಜಿಕವಾಗಿರಿ ಮತ್ತು ಪುಸಕ್ತಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಹೆಚ್ಚು ಹೆಚ್ಚು ವಿಷಯಗಳನ್ನು ಪರಿಚಯ ಮಾಡಿಕೊಳ್ಳಿ. ಸ್ನೇಹಿತರ ಜೊತೆ ಮುಕ್ತವಾಗಿ ಮಾತನಾಡಿ. ಇದು ನಿರಂತರ ಪ್ರಕ್ರಿಯೆಯಾಗಬೇಕು, ಆಗ ಮಾತ್ರ ನಿಮ್ಮಲ್ಲಿ ಒಳ್ಳೆಯ ರೀತಿಯ ಬದಲಾವಣೆ ಕಾಣಲು ಸಾಧ್ಯ.

2. ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಏನು ಮಾಡಬೇಕು?
–ರೂಪ, ಬೆಂಗಳೂರು

ಉತ್ತರ: ಮಾನಸಿಕ ಆರೋಗ್ಯ ನಿಂತಿರುವುದು ದಿನನಿತ್ಯದ ಜೀವನದಲ್ಲಿ ನೀವು ಹೇಗೆ ಯೋಚಿಸುತ್ತೀರಿ, ವರ್ತಿಸುತ್ತೀರಿ ಹಾಗೂ ಭಾವನಾತ್ಮಕವಾಗಿ ಹೇಗಿರುತ್ತೀರಿ ಎಂಬುದರ ಮೇಲೆ. ಇದು ಒತ್ತಡ, ಸವಾಲುಗಳನ್ನು ಎದುರಿಸುವುದು, ಸಂಬಂಧಗಳನ್ನು ಹುಟ್ಟುಹಾಕುವುದು, ಜೀವನದಲ್ಲಿಯ ಹಾಗೂ ಕಷ್ಟಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂಬ ಸಂಗತಿಗಳ ಮೇಲೂ ನಿಂತಿದೆ. ನೀವು ಯಾವುದಾದರೂ ಇಂತಹದ್ದೇ ಎನ್ನುವಂತಹ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಭಾವನೆಗಳನ್ನು ಉತ್ತಮವಾಗಿ ನಿಭಾಯಿಸಿ ಅಥವಾ ಸುಮ್ಮನೆ ಧನಾತ್ಮಕವಾಗಿ ಯೋಚಿಸಿ. ಮಾನಸಿಕ ಆರೋಗ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾವಿರಾರು ದಾರಿಗಳಿವೆ.

ಮಾನಸಿಕ ಆರೋಗ್ಯವು ಒಟ್ಟಾರೆಯಾಗಿ ಮಾನಸಿಕ ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ನೀವು ನಿಮ್ಮ ಬಗ್ಗೆ ಹೇಗೆ ಯೋಚಿಸು‌ತ್ತೀರಿ, ನಿಮ್ಮ ಸಂಬಂಧಗಳ ಗುಣಮಟ್ಟ, ಭಾವನೆಗಳನ್ನು ನಿಭಾಯಿಸುವ ಸಾಮರ್ಥ್ಯ ಹಾಗೂ ಕಷ್ಟದ ಸಂದರ್ಭಗಳನ್ನು ಎದುರಿಸುವ ರೀತಿ  – ಈ ಎಲ್ಲವನ್ನೂ ಒಳಗೊಂಡಿದೆ.

ನಮ್ಮಲ್ಲಿ ಮಾನಸಿಕ ಸಮಸ್ಯೆ ಇಲ್ಲ ಎಂದ ಮಾತ್ರಕ್ಕೆ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂಬ ಅರ್ಥವಲ್ಲ. ಮಾನಸಿಕವಾಗಿ, ಭಾವನಾತ್ಮಕವಾಗಿ ಗಟ್ಟಿಯಾಗಿರುವುದು, ಆತಂಕ ಹಾಗೂ ಖಿನ್ನತೆಯಂತಹ ಇತರ ಸಮಸ್ಯೆಗಳಿಂದ ಮುಕ್ತವಾಗಿರುವಷ್ಟೇ ಮುಖ್ಯ. ಮಾನಸಿಕ ಸಮಸ್ಯೆಯಿಂದ ಮುಕ್ತರಾಗಿರುವವರು ಧನಾತ್ಮಕ ವ್ಯಕ್ತಿತ್ವವನ್ನೂ ಹೊಂದಿರುತ್ತಾರೆ. 

ಮಾನಸಿಕವಾಗಿ ಆರೋಗ್ಯವಾಗಿರುವುದು ಎಂದರೆ ಯಾವತ್ತೂ ಕೆಟ್ಟ ಘಟನೆ ಅಥವಾ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸದೇ ಇರುವುದು ಎಂಬುದಲ್ಲ. ಜೀವನದಲ್ಲಿ ಪ್ರತಿಯೊಬ್ಬರೂ ನಿರಾಶೆ, ಸೋಲು ಹಾಗೂ ಬದಲಾವಣೆಗಳನ್ನು ಎದುರಿಸಿಯೇ ಇರುತ್ತೇವೆ. ಹಾಗೆಯೇ ಇದರೊಂದಿಗೆ ದೈನಂದಿನ ಜೀವನದಲ್ಲಿ ದುಃಖ, ಆತಂಕ ಹಾಗೂ ಒತ್ತಡಗಳು ಸಾಮಾನ್ಯ. ದೈಹಿಕವಾಗಿ ಆರೋಗ್ಯವಾಗಿರುವರು ಕಾಯಿಲೆ ಹಾಗೂ ನೋವುಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ, ಹಾಗೆಯೇ ಮಾನಸಿಕವಾಗಿ ಆರೋಗ್ಯದಿಂದಿರುವವರು ಪ್ರತಿಕೂಲ ಪರಿಸ್ಥಿತಿ, ಆಘಾತ ಹಾಗೂ ಒತ್ತಡದಿಂದ ಬೇಗ ಹೊರ ಬರುತ್ತಾರೆ.

ಜನರು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಬೇಗನೆ ಚೇತರಿಸಿಕೊಳ್ಳುವ ಗುಣವನ್ನು ಹೊಂದಿದ್ದರೆ ಕಷ್ಟದ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಧನಾತ್ಮಕವಾದ ಬಾಹ್ಯನೋಟವನ್ನು ಕಾಪಾಡಿಕೊಳ್ಳಬಹುದು. ಆಗ ಅವರು ಒಳ್ಳೆಯ ಹಾಗೂ ಕೆಟ್ಟ – ಈ ಎರಡು ಸಂದರ್ಭಗಳಲ್ಲಿ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾಗಿರುವವರು ಹೊಸ ವಿಷಯಗಳಿಗೆ ಭಯಪಡುವುದಿಲ್ಲ ಮತ್ತು ಭವಿಷ್ಯದ ವಿಷಯದಲ್ಲಿ ಗೊಂದಲದಲ್ಲಿರುವುದಿಲ್ಲ. ಇಂತಹ ಮನಃಸ್ಥಿತಿಯವರು ತಕ್ಷಣಕ್ಕೆ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗದಿದ್ದರೂ ಪರಿಹಾರ ಮಾರ್ಗದ ಬಗ್ಗೆ ಭರವಸೆಯನ್ನು ಇಟ್ಟುಕೊಂಡಿರುತ್ತಾರೆ.

ನೀವು ಮಾನಸಿಕವಾಗಿ ಆರೋಗ್ಯವಾಗಿರಲು ಕೆಲವು ಸಲಹೆಗಳು:

1. ಸಾಮಾಜಿಕ ಸಂಪರ್ಕ ಚೆನ್ನಾಗಿರಲಿ; ವ್ಬಕ್ತಿಗಳೊಂದಿಗೆ ನೇರ ಸಂಪರ್ಕವಿರುವುದು ಮುಖ್ಯ.

2. ಚಟುವಟಿಕೆಯಿಂದಿರಿ. ದೇಹ–ಮನಸ್ಸು ಎರಡಕ್ಕೂ ಸರಿಯಾದ ವ್ಯಾಯಾಮವನ್ನು ನೀಡಿ.

3. ಪೌಷ್ಟಿಕ ಆಹಾರವನ್ನು ಸೇವಿಸಿ.

4. ನಿದ್ದೆಯ ವಿಷಯದಲ್ಲಿ ಕಾಂಪ್ರಮೈಸ್ ಬೇಡ.

5. ಜೀವನದ ಉದ್ದೇಶ ಹಾಗೂ ಅರ್ಥವನ್ನು ಕಂಡುಕೊಳ್ಳಿ.

ಈ ಎಲ್ಲ ವಿಷಯಗಳು ನಿಮ್ಮ ಮನಸ್ಸನ್ನು ಉಲ್ಲಾಸವಾಗಿಡಲು ಸಹಾಯ ಮಾಡುತ್ತವೆ.  ಜೀವನದ ಪ್ರತಿಕ್ಷಣವನ್ನೂ ಅನುಭವಿಸಿ.  ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.  ಇದರೊಂದಿಗೆ ಮಾನಸಿಕ ಆರೋಗ್ಯವು ಸೇರಿಕೊಂಡಿದೆ. ಇಂದಿನ ಜೀವನಶೈಲಿಯಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಷ್ಟೇ ಒತ್ತನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾದದ್ದು ಅನಿವಾರ್ಯ.

ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT