ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಹೇಳಿದ ಸತ್ಯಗಳು!

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೇಘನಾ ಸುಧೀಂದ್ರ

ಇನ್ನೂ ನೆನಪಿದೆ – ಎರಡು ವರ್ಷಗಳ ಹಿಂದೆ ಇದೇ ಸಮಯದಲ್ಲಿ ನಾನು ಬಾರ್ಸಿಲೋನಾಕ್ಕೆ ಹೋಗುವ ತಯಾರಿಯಲ್ಲಿದ್ದೆ. ಮಧ್ಯಮ ವರ್ಗದ ಸಂಪ್ರದಾಯಸ್ಥ ಮನೆಗಳಲ್ಲಿ 24 ವರ್ಷದ ಹುಡುಗಿಯನ್ನು ಮದುವೆ ಮಾಡಿ ಗಂಡನ ಜೊತೆ ವಿದೇಶಕ್ಕೆ ಕಳುಹಿಸುವ ತರಾತುರಿಯಲ್ಲಿರುತ್ತಾರೆ. ಆದರೆ ನನ್ನಮ್ಮ ನನ್ನಿಷ್ಟದ್ದನ್ನು ಓದಿಸಲು ದುಡ್ಡು ಮತ್ತು ದಿಢೀರ್ ಅಡುಗೆಗಳನ್ನು ಏರ್ಪಾಡು ಮಾಡುತ್ತಿದ್ದಳು. ಅವಳಿಗೆ ಲೆಕ್ಕವಿಲ್ಲದಷ್ಟು ಜನರಿಂದ ಕರೆ ಬಂದಿತ್ತು.

‘ಈ ವಯಸ್ಸಿನಲ್ಲಿ ಏನೇ ಅವಳ ಹುಚ್ಚಾಟ, ನೀನೂ ಅದಕ್ಕೆ ತಾಳ ಹಾಕ್ತಿದ್ಯಲ್ಲ!’ ಎಂದು. ಮನೆಯಲ್ಲಿ ನಾವು ಇಬ್ಬರು ಹೆಣ್ಣುಮಕ್ಕಳು; ಜಗತ್ತೆಲ್ಲ ನನ್ನ ಅಪ್ಪನಿಗೆ ಅಯ್ಯೋ ಪಾಪ ಎನ್ನುವವರೇ! ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಿ – ಎಂದು ಹೇಳುವ ಮಂದಿಯ ನಡುವೆ ತನ್ನ ಮಕ್ಕಳ ಆಸೆಗೆ ತನ್ನನ್ನೇ ಕೆಟ್ಟವಳಾಗಿಸಿಕೊಳ್ಳಲು ಭಯಪಡದಿರುವ ಅಮ್ಮಂದಿರ ಗುಂಪಿಗೆ ಸೇರಿಕೊಳ್ಳುವ ಮೊದಲ ಅಭ್ಯರ್ಥಿಯೇ ಅಮ್ಮ.

ಹೆಣ್ಣನ್ನು ಹೆಣ್ಣೇ ಬೆಳೆಸುವ, ರೂಪಿಸುವ ಪರಿ ನಿಜವಾಗಲೂ ಅನನ್ಯವಾದ್ದದ್ದು. ತಾಯಿಯಂತೆ ಮಗಳು – ಎನ್ನುವ ಗಾದೆ ನಿಜವಾಗಲೂ ಅರ್ಥವನ್ನು ಪಡೆಯುವುದು ಮಗಳನ್ನು ‘ಬೆಳೆಸುವ’ ಕ್ಲಿಷ್ಟಕರವಾದ ಸಂದರ್ಭದಲ್ಲಿಯೇ. ನನ್ನಮ್ಮ ಚೆಂದ ಅಡುಗೆಯನ್ನು ಮಾಡುತ್ತಾಳೆ, ತುಂಬಾ ಸುಂದರವಾಗಿದ್ದಾಳೆ, ಮನೆಯಲ್ಲಿನ ವಾತಾವರಣವನ್ನು ತಿಳಿಯಾಗಿಸುತ್ತಾಳೆ, ಕ್ಷಮಯಾಧರಿತ್ರಿ, ತ್ಯಾಗಮಯಿಯ ಕಲ್ಪನೆಗಳ ಜೊತೆಜೊತೆಗೆ ಅಮ್ಮ ಹೇಗೆ ನಡೆದುಕೊಳ್ಳುತ್ತಾಳೋ ಹಾಗೆ ಅವಳ ಮಗಳಿಗೆ ವಿಷಯಗಳು ಅರ್ಥವಾಗುತ್ತಾ ಹೋಗುತ್ತವೆ.

ಮನೆಯಲ್ಲಿ ಅಮ್ಮ ಧೈರ್ಯವಾಗಿ ಎದ್ದು ನಿಂತು ಮಾತಾಡುವವಳಾಗಿದ್ದರೆ ಮಾತ್ರವೇ ಮಗಳಿಗೆ ಧೈರ್ಯದ ಪರಿಚಯವಾಗುವುದು. ಮಕ್ಕಳಿಗೆ ಮೊದಲು ಅಮ್ಮನ ಜಗತ್ತೇ ಪರಿಚಯವಾಗುವುದು. ಅವಳನ್ನೇ ಅನುಕರಿಸುವುದು. ಅಮ್ಮ ಪಟ್ಟಾಗಿ ಕುಳಿತು ನಮ್ಮ ಉಚ್ಚಾರಣೆಯನ್ನು ಸರಿ ಮಾಡದಿದ್ದರೆ ನಮ್ಮ ಭಾಷೆ ಅಧೋಗತಿಯಲ್ಲಿರುತ್ತದೆ. ಎನ್ನುವುದು ಸುಳ್ಳಲ್ಲ. ಮಾತೆ ಮಾತೃಭಾಷೆಯನ್ನು ಸಹ ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸುತ್ತಾಳೆ. ನೀವು ಕೊಂಚ ಗಮನಿಸಿ, ಮಕ್ಕಳ ವಿಷಯದಲ್ಲಿ ತಾಯಿಯ ನಿರ್ಣಯವೇ ಅಂತಿಮ. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಅವಳ ನಿಗಾ ಜಾಸ್ತಿಯೇ ಇರುತ್ತದೆ. ಅವಳು ಹೇಗಿರುತ್ತಾಳೋ ಹಾಗೆಯೇ ಹುಡುಗಿಯರು ರೂಪುಗೊಳ್ಳುತ್ತಾರೆ ಎಂಬುದಂತೂ ಸತ್ಯ.

ಅಮ್ಮ ಸೀರೆ ಉಟ್ಟ ಹಾಗೆ ನಾನೂ ಉಡಬೇಕು, ಅಮ್ಮ ಹಾಡುವ ಹಾಗೆ ನಾನೂ ಹಾಡಬೇಕು. ಜೊತೆಜೊತೆಗೆ ಅಮ್ಮನ ಧೈರ್ಯ, ಸಾಹಸ, ಸ್ವಂತಿಕೆಯನ್ನು ರೂಢಿಸಿಕೊಳ್ಳಬೇಕೆಂಬ ವಿಷಯ ಗೊತ್ತಾಗುವುದು ಅಮ್ಮ ಹಾಗೆ ಇದ್ದಾಗಲೇ. ಬೆಳಗ್ಗೆ ಬೇಗ ಎದ್ದು ಮಗಳಿಗೆ ಅಡುಗೆ ಮಾಡಿಕೊಡುವ ಅಮ್ಮನ ಪ್ರೀತಿಯ ಜೊತೆ ಒಂದಷ್ಟು ತರಕಾರಿಯನ್ನಾದರೂ ಹೆಚ್ಚಿಕೊಡಲಿ ಮಗಳು ಎಂದು ಅವಳನ್ನು ಎಬ್ಬಿಸುವ ಕಠಿಣ ಹೃದಯಿಯಾಗುತ್ತಾಳೆ. ಆದರೆ ಇದು ಮಗಳಿಗೆ ಜವಾಬ್ದಾರಿಯನ್ನು ಕಲಿಸುವ ವಿಧಾನ.

‘ಮುಂದೆ ನೀನು ಅಡುಗೆ ಕಲಿಯುವುದು ಮತ್ತ್ಯಾವುದೋ ಮನೆಗೆ ಹೋಗಿ ಅತ್ತೆ–ಮಾವ–ಗಂಡನಿಗೆ ಅದನ್ನು ಮಾಡುವುದಕ್ಕೆ’ ಎನ್ನುವುದಕ್ಕಿಂತ ನೀನು ಕೆಲಸದ ಮೇಲೆಯೋ ಅಥವಾ ಓದುವುದಕ್ಕೋ ಬೇರೆ ಊರಿಗೆ ಹೋದಾಗ ಉಪಯೋಗವಾಗಲಿ ಎಂದೇ ಹೌದು; ಅವಳಿಗೆ ಮಗಳು ನನಗೆ ಸಹಾಯ ಮಾಡಲಿ ಎನ್ನುವ ಯಾವ ಅಪೇಕ್ಷೆಯೂ ಇರುವುದಿಲ್ಲ. ಇನ್ನು ತನ್ನ ಕಾಲ ಮೇಲೆ ತಾನೇ ನಿಲ್ಲಬೇಕೆಂಬುದು ಮಗಳಿಗೆ ಅವಳು ಆಗಾಗ ಹೇಳುತ್ತಿರುವ ಕಿವಿಮಾತೇ ಸರಿ.

ಯಾವಾಗಲೋ ಅವಳ ಅತ್ತೆಯಿಂದಲೋ ಮತ್ತ್ಯಾರಿಂದಲೋ ಅವಳ ಕೆರಿಯರ್‌ಗೆ ಹೊಡೆತ ಬಿದ್ದಾಗ ಅವಳಿಗೆ ಆಗಿದ್ದ ಆಘಾತ–ಕೀಳರಿಮೆಯನ್ನು ಮಗಳು ಅನುಭವಿಸದಿರಲಿ ಎಂದು ಮಗಳ ಓದಿಗೆ ಅವಳು ಎಲ್ಲಿಲ್ಲದ ಪ್ರಾಮುಖ್ಯವನ್ನು ನೀಡುತ್ತಾಳೆ. ಮಗಳಿಗೆ ಒಳ್ಳೆಯ ಓದು, ಅದಕ್ಕೆ ತಕ್ಕ ಕೆಲಸ ಸಿಗಲಿ ಎಂದು ಅವಳು ಹಾರೈಸುತ್ತಲೇ ಇರುತ್ತಾಳೆ. ಮಗಳು ಸ್ಕೂಟರ್‌ ಓಡಿಸುವುದನ್ನು ನೋಡಲು ಇಷ್ಟು ಎಂದು ಹೇಳುತ್ತಲೇ ಅವಳಿಗೆ ಡ್ರೈವಿಂಗ್‌ ಕಲಿಸುವ ಉಪಾಯ ಮಾಡುತ್ತಾಳೆ.  ಮಾತ್ರವಲ್ಲ, ಮಗಳನ್ನು ಪ್ರೇರೇಪಿಸಲು 35 ವರ್ಷಕ್ಕೆ ಅವಳು ಗಾಡಿ ಹತ್ತಿ ಟ್ರಾಫಿಕ್ ಮಹಾಮಾರಿಯನ್ನು ಹಿಂದಿಕ್ಕಿ ತಾನೂ ಕಲಿಯುತ್ತಾಳೆ. ನಮಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಹಂತಹಂತವಾಗಿ ಕಲಿಸುವವಳು ಅಮ್ಮನೇ.

ನಿರ್ಬಂಧಗಳು ಹೆಣ್ಣುಮಕ್ಕಳಿಗೆ ನಮ್ಮ ಸಮಾಜದಲ್ಲಿ ಬಹಳ ನೈಸರ್ಗಿಕವಾಗಿ ಬಂದದ್ದು. ಮೊದಮೊದಲ ನಿರ್ಬಂಧಗಳಂತೂ ಅಮ್ಮನಿಂದಲೇ ಬಂದಿರುತ್ತವೆ. ಚಿಕ್ಕ ಬಟ್ಟೆ, ಹಣೆಗೆ ಕುಂಕುಮ, ಕೈಗೆ ಬಳೆ – ಇವೆಲ್ಲದರ ಜೊತೆಜೊತೆಗೆ ಯಾವುದಕ್ಕೆ ಆಸ್ಪದ ಕೊಡಬೇಕು, ಕೊಡಬಾರದು ಎಂಬ ಎಚ್ಚರಿಕೆಯನ್ನೂ ಅಮ್ಮನೇ ತಿಳಿಹೇಳಬೇಕು. ಮುಟ್ಟಾದಾಗ ಅದು ಸಹಜ ಪ್ರಕ್ರಿಯೆ, ಅದಕ್ಕೆ ಆಡಂಬರವೂ ಬೇಡ, ಶೋಕವೂ ಬೇಡ ಎಂಬುದನ್ನು ತಿಳಿಹೇಳುವುದಕ್ಕಿಂತ ಅದನ್ನು ಪಾಲಿಸುವುದರಲ್ಲಿಯೇ ಮಗಳಿಗೆ ಅಮ್ಮ ಆದರ್ಶವಾಗುವುದು. ಅದರ ಬಗ್ಗೆ ಬೇರೆಯವರು ಅಸಹ್ಯ ಭಾವನೆ ತಳೆದಾಗ ಅದನ್ನು ವಿರೋಧಿಸುವ ಗುಣವನ್ನು ರೂಢಿಸುವುದರಲ್ಲಿ ಅಮ್ಮನ ಪಾತ್ರವೇ ಪ್ರಮುಖ. ಆಕೆಯೇ ಅದರ ಬಗ್ಗೆ ಅಸಹ್ಯ ಭಾವನೆ ತಾಳದೇ ಸಹಜ ಪ್ರಕ್ರಿಯೆ ಎಂದು ಹೇಳಿಕೊಡುತ್ತಾಳಲ್ಲ ಅಲ್ಲಿ ಅಮ್ಮ ದೊಡ್ಡವಳಾಗುತ್ತಾಳೆ. ಅವಳೇ ಆ ಹಳೆಕಾಲದ ಮಡಿ–ಮೈಲಿಗೆಗಳನ್ನು ಪಾಲಿಸದೆ ಶುಚಿತ್ವದ ಮಡಿ–ಮೈಲಿಗೆಗಳನ್ನಷ್ಟೆ ಪಾಲಿಸುವುದರಲ್ಲಿ ಅವಳ ಹಿರಿತನ ಕಾಣಸಿಗುತ್ತದೆ.

ಗಟ್ಟಿತನ ಎಲ್ಲರಿಗೂ ಇರಬೇಕಾದ ಬಹುಮುಖ್ಯ ಗುಣ, ಎಲ್ಲೇ ಹೋದರೂ ಏನೇ ಮಾಡಿದರೂ ಅಲ್ಲಿ ಜೀವನವನ್ನು ಸಾಗಿಸಬೇಕೆಂಬ ಬಹು‌ಮುಖ್ಯವಾದ ಸತ್ಯ; ಅಮ್ಮ ಕಷ್ಟವಾದರೂ ಅದನ್ನೂ ತಿಳಿಸುತ್ತಾಳೆ. ‘ಬೇಗ ಏಳು, ನಿನ್ನ ಕೆಲಸ ನೀನು ಮಾಡಿಕೋ, ಬೇರೆ ಯಾರ ಮೇಲೆಯೂ ಅವಲಂಬಿತ
ವಾಗಬೇಡ’ ಎಂಬುದನ್ನು ಪದೇ ಪದೇ ಒತ್ತಿ ಒತ್ತಿ ಹೇಳುತ್ತಾಳೆ. ತಿಂಗಳಿಗೊಮ್ಮೆ ಹೊಟ್ಟನೋವು ಬಂದಾಗ ಬೆಂಗಳೂರಲ್ಲಿ ಹಾಯಾಗಿ ಮಲಗುತ್ತಿದ್ದೆ; ಅಮ್ಮ ಆಗಾಗ ಬಂದು ಎಬ್ಬಿಸುತ್ತಿದ್ದಳು. ಸ್ನಾತಕೋತ್ತರ ಪದವಿಗೆಂದು ಹೊರದೇಶಕ್ಕೆ ಹೋದಾಗ ಅಲ್ಲಿ ಯಾರ ಸಹಾಯವೂ ಯಾವುದಕ್ಕೂ ಇರದೆ ಇದ್ದಾಗ ಅವಳ ಕಠಿಣ ಮಾತುಗಳು ನೆನಪಾಗುತ್ತಿದ್ದವು.

ಯಾವುದೇ ಕಾರಣಕಕ್ಕೂ ಮರ್ಯಾದೆ, ಅತ್ಮಗೌರವಗಳನ್ನು ಬಿಡಬಾರದೆಂದು ಅಮ್ಮಂದಿರು ಯಾವಾಗಲೂ ಹೇಳಿಕೊಡಲೇಬೇಕು. ಬಗ್ಗುವಾಗ ಬಗ್ಗಬೇಕು, ಹಿಗ್ಗುವಾಗ ಹಿಗ್ಗಬೇಕು. ಅದುಬಿಟ್ಟು ಯಾವಾಗಲೂ ತಗ್ಗಿ–ಬಗ್ಗಿ ಬೇರೆಯವರ ಮಾತನ್ನಷ್ಟೆ ಕೇಳುತ್ತಾ ಕೂತಿದ್ದರೆ, ನಾವು ಸ್ವಂತಿಕೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಇವೆಲ್ಲದರ ಅರಿವಾಗುವುದು ನಾವು ಒಬ್ಬಂಟಿಯಾಗಿ ಜೀವನ ನಡೆಸಿದಾಗಲೇ. ಹೊರದೇಶದಲ್ಲೋ ಬೇರೆ ಯಾವುದೋ ಊರಲ್ಲಿ ಒಬ್ಬರೇ ಎಲ್ಲವನ್ನೂ ಸಂಭಾಳಿಸಲು ಹೆಣಗಾಡುವಾಗ ಅಮ್ಮನ ಸತ್ಯಗಳು ಮುಖಕ್ಕೆ ರಾಚುತ್ತವೆ. ನಿಜ, ‘ನಿನ್ನ ಜೀವನಕ್ಕೆ ನೀನೇ ಜವಾಬ್ದಾರಳು’ – ಎಂದು ಸಾರಿ ಸಾರಿ ಅವಳು ಹೇಳುವ ಮಾತುಗಳು; ಒಟ್ಟೊಟ್ಟಿಗೆ ಕೆಲಸ ಮಾಡಬೇಕು, ತನ್ನನ್ನು ಸಹ ಚೆನ್ನಾಗಿ ನೋಡಿಕೊಳ್ಳಬೇಕು – ಅವಳು ಹೇಳಿಕೊಟ್ಟ ಸಮಾನತೆಯ ಇಂಥ ಪಾಠಗಳನ್ನೆಲ್ಲಾ ಒಟ್ಟಿಗೆ ರೂಢಿಸಿಕೊಳ್ಳೋದು ತುಂಬ ಕಷ್ಟವಾಗುತ್ತದೆ. ಆಗಾಗ ಅವಳು ಹೇಳುತ್ತಿದ್ದ ‘ಅಂದಿನ ಕೆಲಸಗಳನ್ನು ಅಂದೇ ಮಾಡು’ – ಎಂಬುದಂತೂ ಕಣ್ಮುಚ್ಚಿದ್ದರೂ ಎದುರಿಗೇ  ಬರುತ್ತದೆ.

ದುಡ್ಡು ಕೂಡಿಡುವುದು ಹೇಗೆ, ಇದ್ದಿದ್ದರಲ್ಲಿಯೇ ಜೀವನವನ್ನು ಸುಖಮಯವಾಗಿಸುವುದು ಹೇಗೆ, ಅಲಂಕಾರ ಮಾಡಿಕೊಳ್ಳದೇ ಸುಂದರವಾಗಿರುವುದು ಹೇಗೆ – ಎಂಬ ಎಲ್ಲ ಜೀವನದ ಅತ್ಯಮೂಲ್ಯ ಸತ್ಯಗಳನ್ನು ಅಮ್ಮ ಹೇಳಿಕೊಟ್ಟು, ಅವಳೂ ಅದರ ಹಾಗೆಯೇ ನಡೆದುಕೊಳ್ಳುವುದು ಅವಳ ವಿಶೇಷ. ಯಾವುದೇ ದೇಶದ ಹಣಕಾಸು ಸಂಸ್ಥೆಯ ಬಡ್ಡಿದರ, ಅದರ ಮೇಲಿನ ವಹಿವಾಟುಗಳು ಅವಳ ಕೈಬೆರಳಿನಲ್ಲಿರುತ್ತವೆ! ಇರುವ ದುಡ್ಡಲ್ಲಿ ಅರ್ಧ ಉಳಿಸು – ಎಂದು ಕಡ್ಡಾಯ ಮಾಡುವ ಅಮ್ಮನ ಹತ್ತಿರ ನಮ್ಮ ಕೊಳ್ಳುಬಾಕತನದ ಹುಚ್ಚು ನಡೆಯುವುದೇ ಇಲ್ಲ!!

ಅಮ್ಮ ಮನಸ್ಸು ಮಾಡಿದಾಗಲೇ ಅಥವಾ ಅವಳು ಹಟ ಮಾಡಿದಾಗಲೇ ಮಕ್ಕಳ ಏಳಿಗೆ ಆಗುವುದು. ಅವಳು ಇರುವ ಹಾಗೆ, ಅವಳು ನಡೆದುಕೊಳ್ಳುವ ಹಾಗೆ ಮಗಳು ಕೂಡ ನಡೆದುಕೊಳ್ಳುವುದಲ್ಲವೆ? ವಿದೇಶದಲ್ಲಿ ದಿನಾ ಏನು ಅಡುಗೆ ಮಾಡಿಕೊಳ್ಳುತ್ತಿದ್ದೆ ಎಂದು ಅಮ್ಮ ಆಗಾಗ ಕೇಳುವಾಗ, ನಾನು ‘ಬೆಳಗ್ಗೆ ಎದ್ದು ಬರೀ ಮ್ಯುಸೆಲಿ ತಿಂದೆ’ ಎಂದಾಗ ಅವಳಿಗೆ ಸಂಕಟವಾಗುತ್ತಿತ್ತು. ಆದರೆ ಅದನ್ನು ನನ್ನ ಹತ್ತಿರ ತೋರಿಸಿಕೊಳ್ಳದೆ, ‘ಗುರಿಯತ್ತ ಮುನ್ನಡೆ’ ಎಂದು ಪ್ರೋತ್ಸಾಹಿಸುತ್ತಿದ್ದಳು. ಅವಳ ದುಃಖವನ್ನು ಅವಳಮ್ಮನ ಹತ್ತಿರ ತೋಡಿಕೊಳ್ಳುತ್ತಿದ್ದಳು. ಸಿಕ್ಕಾಪಟ್ಟೆ ಸೂಕ್ಷ್ಮಗ್ರಾಹಿಯಾಗಿದ್ದರೂ ಸಹ ತನ್ನ ದುರ್ಬಲತೆಯನ್ನು ಎಲ್ಲಿಯೂ ಪ್ರದರ್ಶಿಸದೆಯೇ ಮಗಳಿಗೆ ಪ್ರೋತ್ಸಾಹ ಕೊಡುವ ಚೈತನ್ಯದ ಚಿಲುಮೆಯಾಗಿ ಪರಿವರ್ತನೆಯಾಗುವವಳು ಅಮ್ಮ ಮಾತ್ರ. ಕಷ್ಟ ಅಂದಾಗ ಅಪ್ಪ ಧುತ್ತನೆ ಕುಸಿದು ಸಹಾಯಕ್ಕೆ ಓಡಿ ಬರುತ್ತಾನೆ; ಆದರೆ ಅಮ್ಮ ಹಾಗೆ ಅಲ್ಲ.

‘ಸಹಿಸಿಕೊಳ್ಳಲಿ, ಸರಿ ಮಾಡಿಕೊಳ್ಳಲಿ’ – ಎಂದು ಅವಳು ಬಯಸುತ್ತಾಳೆ. ಆ ಕ್ಷಣಕ್ಕೆ ಅವಳೊಬ್ಬ ಕಟುಕಿಯಂತೆ ಕಂಡರೂ ಅವಳ ಆ ನಡೆವಳಿಕೆ ನಮ್ಮ ಜೀವನಕ್ಕೆ ಬಹುಮುಖ್ಯ ಪಾಠವೇ ಸರಿ. ನನಗೆ ನೆನಪಿರುವಂತೆ, ನಾನು ಆಟವಾಡಿ ಬಿದ್ದಾಗ ಯಾವಾಗಲೂ ಎತ್ತಿ, ಸಮಾಧಾನ ಮಾಡಲು ಧಾವಿಸಿದವಳಲ್ಲ; ‘ಅತ್ತ ನಂತರ ಏಳಲಿ’ ಎಂದೇ ಅವಳು ಕಾಯುತ್ತಿದ್ದಳು. ನಾನು ಜೀವನದಲ್ಲಿ ಕಂಡ ಏಳುಬೀಳುಗಳಲ್ಲಿ, ಮುಖ್ಯವಾಗಿ ಬೀಳುಗಳಲ್ಲಿ ನಾನೇ ಎದ್ದು ಬಂದಿದ್ದೀನಿ. ಇದಕ್ಕೆ ಅವಳು ಕೊಟ್ಟ ಆ ತರಬೇತಿಯೇ ಕಾರಣ.

‘ಮಗಳು ಸ್ವತಂತ್ರವಾಗಿ ಬದುಕಬೇಕು, ಯಾರಿಗೂ ತಲೆ ಬಾಗಲೇ ಬಾರದು’ ಎಂದು ಸುಮ್ಮನೆ ಮಾತಿನಲ್ಲಿ ಹೇಳದೆ, ಅವಳು ಮಾಡಿಯೂ ತೋರಿಸಿದ್ದಾಳೆ. ಹೌದು, ಅವಳಲ್ಲೂ ನ್ಯೂನ್ಯತೆಗಳು ಇರುತ್ತವೆ; ಅವಳೂ ಮನುಷ್ಯಳೇ. ಆದರೆ ಆ ನ್ಯೂನ್ಯತೆಗಳು ರಕ್ತಗತವಾಗಿ ಮಗಳಿಗೆ ಬಂದಾಗ ಮರುಕ ಪಡುವ ಮನಸ್ಸದು. ಅವು ಮಗಳಲ್ಲಿ ಬೇಗ ತೊಲಗಿ, ಅವಳ ವ್ಯಕ್ತಿತ್ವ ಗಟ್ಟಿಯಾಗಲಿ ಎಂದು ಬಯಸುವವಳು.

ಅಮ್ಮ ಎಂದಿಗೂ ಪೂಜೆಯ ವಸ್ತುವಾಗದೆ ಜೀವನದ ಒಂದೊಂದು ಘಟ್ಟದಲ್ಲಿಯೂ – ಗೆಳತಿಯಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕಿಯಾಗಿ ಕೈಹಿಡಿದು ನಡೆಸಿದ್ದಾಳೆ. ಅವಳ ಎಲ್ಲ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮನುಷ್ಯಳಾಗಿ ನನಗೆ ಕಾಣಿಸುತ್ತಾಳೆ. ಅವಳ ಹಾಗೆ ಮಕ್ಕಳು ಕಷ್ಟವೇ ಪಡಬಾರ
ದೆಂದು ಒಮ್ಮೊಮ್ಮೆ ತೀರ ಕಠೋರವಾಗಿಯೋ ಅಥವಾ ತೀರ ಮುದ್ದಾಗಿಯೋ ನಡೆದುಕೊಳ್ಳುತ್ತಾಳೆ.

ಜೀವ ಕೊಟ್ಟ, ಜೀವನ ಬದಲಾಯಿಸಿದ ಈ ಹಣ್ಣಿಗೆ ಅವಳ ಮಗಳಿಂದ ಎಂದಿಗೂ ಧನ್ಯವಾದಗಳು ಸಲ್ಲುತ್ತಲೇ ಇರುತ್ತವೆ. ಅವಳ ಗುಣದಲ್ಲಿ ಅರ್ಧದಷ್ಟಾದರೂ ಮಗಳಿಗೂ ಬರಲಿ, ಅವಳ ಶಕ್ತಿಯಲ್ಲಿ  ಪೂರ್ತಿ ಬರಲಿ – ಎಂದು ಬಯಸುತ್ತ, ಜೀವನವನ್ನು ಬದಲಾಯಿಸಿದ ಎಲ್ಲ ಅಮ್ಮಂದಿರಿಗೂ ಶುಭಾಶಯಗಳು.

ಅಮ್ಮ ಎಂದರೆ....
ಅಮ್ಮ – ಎಂದ ಕೂಡಲೇ ನಮಗೆಲ್ಲರಿಗೂ ಶಕ್ತಿಯ ಸಂಚಾರವಾಗುತ್ತದೆ; ಪ್ರೀತಿಯ ಬೆಚ್ಚನೆಯ ಪುಲಕಾನುಭವಾಗುತ್ತದೆ. ಮಕ್ಕಳ ಏಳಿಗೆಯಲ್ಲಿ ತಾಯಿಯ ಪ್ರೀತಿ–ತ್ಯಾಗಗಳ ಜೊತೆಗೆ ಅವಳ ಅನುಭವಪಾಠವೂ ಸೇರಿರುತ್ತದೆ. ನಿಮ್ಮ ಜೀವನದ ಕಷ್ಟದಲ್ಲಿ, ಪ್ರಗತಿಯಲ್ಲಿ, ಸಾಧನೆಯಲ್ಲಿ ನಿಮ್ಮ ತಾಯಿ ಬೀರಿದ ಪಾತ್ರವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಬರಹಗಳು 400 ಪದಗಳ ಮಿತಿಯಲ್ಲಿರಲಿ. ಇತ್ತೀಚಿನ ನಿಮ್ಮ ಭಾವಚಿತ್ರವನ್ನೂ ಕಳುಹಿಸಿ. ಲೇಖನವನ್ನು ಇ–ಮೇಲ್‌ ಮೂಲಕವೂ ಕಳುಹಿಸಬಹುದು.
ನಮ್ಮ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001.
ಇ–ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT