ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಕೆಯ ರಂಗ್‌ಬಿರಂಗ್‌

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಹೋಯ್‌, ಅಲ್ನೋಡು... ನಾವು ಹಿಂದೆ ಧರಿಸುತ್ತಿದ್ದ ಮೊಣಕೈ ಉದ್ದದ ಜಾಕೀಟ್ ಈಗ ಫ್ಯಾಷನ್‌ ಆಗಿಬಿಟ್ಟಿದೆ. ಎಲ್ಲ ಹುಡುಗಿಯರ ಮೈಮೇಲೂ ಅವೇ ಬಗೆಯ ರವಿಕೆಗಳು’ ಎಂದು ಮದುವೆಯೊಂದರ ಸಮಾರಂಭದಲ್ಲಿ 60 ದಾಟಿದ ವೃದ್ಧೆಯೊಬ್ಬರು ಸ್ನೇಹಿತೆಯರ ಜೊತೆ ಮಾತಿಗಿಳಿದರು.

ಜತೆಯಲ್ಲಿದ್ದವರು ‘ಹೂ... ನಮ್ಮ ಕಾಲದ ಫ್ಯಾಷನ್‌ ಈಗ ಮತ್ತೆ ಮೆರೆಯುತ್ತಿದೆ. ಓಲ್ಡ್‌ ಈಸ್‌ ಗೋಲ್ಡ್‌ ಎಂಬಂತೆ’ ಎಂದು ಅವರ ಮಾತಿಗೆ ತಲೆದೂಗಿದರು.

ಹೌದು, ಫ್ಯಾಷನ್‌ ಲೋಕದಲ್ಲಿ ಹಳತಾದುದೆಲ್ಲವೂ ಮತ್ತೆ ಹೊಸ ಲೇಪದೊಂದಿಗೆ ಮುನ್ನೆಲೆಗೆ ಬರುತ್ತಿವೆ. ಅದು ಸಹಜ ಎಂಬಷ್ಟು ಮಟ್ಟಿಗೆ ಹಳತನ್ನು ಫ್ಯಾಷನ್‌ ಲೋಕ ಅಪ್ಪಿಕೊಳ್ಳುತ್ತಿದೆ. ನಮ್ಮ ಅಜ್ಜಿಯಂದಿರು, ಅಮ್ಮಂದಿರು ತೊಡುತ್ತಿದ್ದ ಮೊಣಕೈ ಉದ್ದದ ಬ್ಲೌಸ್‌ (ಎಲ್ಬೊ ಲೆಂತ್‌ ಬ್ಲೌಸ್‌) ಕೆಲಕಾಲ ಹಿನ್ನೆಲೆಗೆ ಸರಿದಿತ್ತು. ಕ್ಯಾಪ್‌ ಸ್ಲೀವ್‌ ಅಥವಾ ಆಫ್‌ ಸ್ಲೀವ್‌ ಟ್ರೆಂಡಿಯಾಗಿತ್ತು.

ಭುಜದಿಂದ 2–3 ಇಂಚು ಉದ್ದದವರೆಗೆ ಮಾತ್ರ ಬ್ಲೌಸ್‌ಗಳನ್ನು ಹೊಲಿಸಿಕೊಳ್ಳುವುದು ಫ್ಯಾಷನ್‌ ಆಗಿತ್ತು. ಆದರೀಗ ಮೊಣಕೈ ಉದ್ದದ ಬ್ಲೌಸ್‌ ಎಲ್ಲ ವಯೋಮಾನದವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಸಿನಿಮಾ ತಾರೆಯರು, ಯುವತಿಯರು, ಗೃಹಿಣಿಯರು, ಮಧುಮಕ್ಕಳು ಹೀಗೆ ಎಲ್ಲರೂ ಈ ಬ್ಲೌಸ್‌ ಮೋಹಕ್ಕೆ ಒಳಗಾಗಿದ್ದಾರೆ. ಎಲ್ಲರಿಗೂ ಒಪ್ಪುವಂತ ಗುಣ ಈ ಬ್ಲೌಸ್‌ನದ್ದು ಎಂದು ಹೆಮ್ಮೆಯಿಂದ ಹೇಳುತ್ತಾರೆ ವಸ್ತ್ರ ವಿನ್ಯಾಸಕಾರರು.

ರೇಷ್ಮೆಸೀರೆ ಸೇರಿದಂತೆ ಎಲ್ಲ ಬಗೆಯ ಸೀರೆಗಳಿಗೂ ಮೊಣಕೈ ಉದ್ದದ ಬ್ಲೌಸ್‌ ಧರಿಸುವುದು ಈಗಿನ್ ಟ್ರೆಂಡ್‌ ಆಗಿಬಿಟ್ಟಿದೆ. ಅಲ್ಲದೇ ಹೈನೆಕ್‌ ಬ್ಲೌಸ್‌ಗಳಿಗೂ ಇದೂ ಹೆಚ್ಚು ಆಪ್ತವಾಗುತ್ತದೆ. ಸಾದಾ ಬ್ಲೌಸ್‌ಗಿಂತ ಹೆಚ್ಚು ವರ್ಕ್‌ ಇರುವ ಬ್ಲೌಸ್‌ಗಳು ವನಿತೆಯರನ್ನು ಆಕರ್ಷಿಸಿವೆ.

ತದ್ವಿರುದ್ಧ ಕಾಂಟ್ರಾಸ್ಟ್‌ನಲ್ಲೂ ಈ ಫ್ಯಾಷನ್‌ ಒಗ್ಗಿಕೊಳ್ಳುತ್ತದೆ. ಅಂದರೆ ಸೀರೆ ಅದ್ಧೂರಿಯಾಗಿದ್ದರೆ ಬ್ಲೌಸ್‌ ಸಾದಾ ಆಗಿರುವುದು, ಅಥವಾ ಸೀರೆ ಸಿಂಪಲ್ಲಾಗಿದ್ದರೆ ಬ್ಲೌಸ್‌ಗೆ ಹೆಚ್ಚು ವರ್ಕ್‌ ಮಾಡಿಸುವುದು ಈಗಿನ ಟ್ರೆಂಡ್‌. ಕಾಂಜಿವರಂ ಸಿಲ್ಕ್‌ ಸೀರೆಗಳಿಗೂ ಬಹು ಆಕರ್ಷಣಿಯವಾಗಿ ಕಾಣಿಸುತ್ತದೆ.

ಸಾಂಪ್ರದಾಯಿಕ ಉಡುಗೆಗಳಿಗೆ ಆಧುನಿಕತೆಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ವಸ್ತ್ರವಿನ್ಯಾಸಕಾರರೂ ಹಿಂದೆ ಬಿದ್ದಿಲ್ಲ. ಈಗ ಎಲ್ಲ ಬಟ್ಟೆಗಳಿಗೂ ಕೋಲ್ಡ್‌ ಶೋಲ್ಡರ್‌ನದ್ದೇ ಹವಾ. ಈಗ ರವಿಕೆಗಳಿಗೂ ಕೋಲ್ಡ್‌ ಶೋಲ್ಡರ್‌ ಸ್ಪರ್ಶ ನೀಡಿರುವುದು ಲಲನೆಯರಿಗೆ ಹೆಚ್ಚು ಆಪ್ಯಾಯಮಾನವಾಗಿದೆ. ರೇಷ್ಮೆ ಸೀರೆಗೆ ಕೋಲ್ಡ್‌ ಶೋಲ್ಡರ್‌ ಪ್ಯಾಟ್ರನ್‌ ಬಳಸಿ, ಅದರ ಸುತ್ತಲೂ ಎಂಬ್ರಾಯಿಡರಿ ವರ್ಕ್‌ ಮಾಡಿಸಿಕೊಳ್ಳುವುದು ಬಹು ಚಾಲ್ತಿಯಲ್ಲಿರುವ ಟ್ರೆಂಡ್‌.

‘ಪಟ್ಟು ಸೀರೆಗಳಿಗೆ ಮೊಣಕೈ ಉದ್ದದವರೆಗೆ ಕಟ್‌ವರ್ಕ್‌ ವಿನ್ಯಾಸ ಮಾಡಿಕೊಳ್ಳುವುದು, ರವಿಕೆ ತುಂಬಾ ಎಂಬ್ರಾಯಿಡರಿ ವಿನ್ಯಾಸಗೊಳಿಸಿ ಸಾದಾ ಸೀರೆ ಉಡುವುದು, ರವಿಕೆ ತುಂಬಾ ಹೂವು ಮಿಶ್ರಿತ ಹರಳುಗಳ ವಿನ್ಯಾಸ, ಜುಮುಕಿ, ಚಂದಬಳಿ ಚಿತ್ತಾರಗಳನ್ನು ಬ್ಲೌಸ್‌ಗಳ ಮೇಲೆ ಎಂಬ್ರಾಯಿಡರಿಯಲ್ಲಿ ವಿನ್ಯಾಸಗೊಳಿಸುವುದು... ಹೀಗೆ ಎಲ್ಲ ಬಗೆಯ ಡಿಸೈನ್‌ಗಳಿಗೂ ಮೊಣಕೈ ಉದ್ದದ ರವಿಕೆಗಳೇ ಈಗ ಜನಪ್ರಿಯ. ಹಬ್ಬ, ಮದುವೆ ಸಮಾರಂಭ, ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಅಫಿಶಿಯಲ್‌ ಹಾಗೂ ರಾಯಲ್‌ ಲುಕ್‌ ನೀಡುತ್ತದೆ. ಜತೆಗೆ, ಹೆಚ್ಚು ಕಂಫರ್ಟ್‌ ಆಗಿರುತ್ತದೆ’ ಎನ್ನುತ್ತಾರೆ ವಸ್ತ್ರ ವಿನ್ಯಾಸಕಿ ನಿರ್ಮಲಾ.

ಈ ಬಗೆಯ ರವಿಕೆ ಮೇಲೆ ಈಗ ಪ್ರಾಣಿ, ಪಕ್ಷಿ, ಹೂವುಗಳೂ ಒಡಮೂಡುತ್ತಿವೆ. ಅದೇ ಈಗಿನ ಟ್ರೆಂಡ್‌ ಆಗಿದೆ. ಆನೆ, ಜಿಂಕೆ, ನವಿಲು, ಗಿಳಿ, ಕಮಲ, ಗುಲಾಬಿ ಹೀಗೆ ತರಾವರಿ ವಿನ್ಯಾಸ ವಸ್ತ್ರವಿನ್ಯಾಸಕಾರರ ಕೈಯಲ್ಲಿ ಮೂಡಿವೆ. ಅವು ಸಿನಿಮಾ ತಾರೆಯರಾದಿಯಾಗಿ ಎಲ್ಲರ ಮನಕ್ಕೂ ಲಗ್ಗೆ ಇಟ್ಟಿವೆ. ಇನ್ನು ಸೀರೆಗಳಿಗೆ ಮಾತ್ರವಲ್ಲದೆ ಲೆಹಂಗಾ ಚೋಲಿ, ಗಾಗ್ರಾ ಮುಂತಾದ ಸಾಂಪ್ರದಾಯಿಕ ಧಿರಿಸಿಗೂ ಮೊಣಕೈ ಉದ್ದದ ರವಿಕೆ ಸೈ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT