ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ನಾಳೆ

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ರಂಗದ ಮೇಲೆ ಭಾನುವಾರ (ಮಾ.25) ಸಂಜೆ 7ಕ್ಕೆ ರಾಮಾಯಣ ಪಾತ್ರ ಪ್ರಪಂಚ ಅನಾವರಣಗೊಳ್ಳಲಿದೆ. ಧಾರವಾಡದ ರಂಗಾಯಣ ತಂಡ ‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ಹೆಸರಿನಲ್ಲಿ ಪುರಾಣ ಕಥಾನಕವನ್ನು ನಾಟಕ ರೂಪದಲ್ಲಿ ಕಲಾಸಕ್ತರ ಮುಂದಿಡಲಿದೆ.

ಈ ನಾಟಕವನ್ನು ರಚಿಸಿದವರು ಗರುಡ ಸದಾಶಿವರಾಯರು. ಇದೇ ನಾಟಕವನ್ನು ಮೊದಲ ಬಾರಿಗೆ 90 ವರ್ಷಗಳ ಹಿಂದೆ ರಂಗದ ಮೇಲೆ ತರಲಾಗಿತ್ತು. ಅಂದಿನ ಸೊಗಡನ್ನೇ ಉಳಿಸಿಕೊಂಡು ಅವರ ಮೊಮ್ಮಗ ಪ್ರಕಾಶ ಗರುಡ ಈ ನಾಟಕವನ್ನು ಮರು ಸೃಷ್ಟಿಸಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಸಂಗೀತ ಪ್ರಧಾನವಾದ ನಾಟಕ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಾಣುತ್ತಿದೆ. ಸುಮಾರು ಮೂರೂವರೆ ತಾಸುಗಳ ಈ ನಾಟಕ ರಾಮಾಯಣದ ಬಹುಮುಖ್ಯ ಸನ್ನಿವೇಶಗಳನ್ನು ಕಟ್ಟಿಕೊಡಲಿದೆ.

‘ಸಾಕಷ್ಟು ಕಡೆ ಪ್ರದರ್ಶನ ಕಂಡು, ಜನ ಮೆಚ್ಚಿಕೊಂಡಿರುವ ನಾಟಕ ಇದು. ಬೆಂಗಳೂರಿನ ಜನತೆಗೂ ಈ ನಾಟಕದ ರುಚಿ ಉಣಬಡಿಸಬೇಕು ಎನ್ನುವುದು ನಮ್ಮ ಬಹುದಿನದ ಕನಸಾಗಿತ್ತು. ಹಾಡು, ನೃತ್ಯ, ನಟನೆ ಎಲ್ಲವನ್ನೂ ಪಾತ್ರಧಾರಿಗಳೇ ನಿರ್ವಹಿಸುತ್ತಾರೆ. ಉತ್ತಮ ಕಂಪೆನಿ ನಾಟಕ ನೋಡಿದ ಖುಷಿ ಜನರಿಗೆ ಸಿಗಲಿದೆ’ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್‌ ನಾಟಕದ ಬಗ್ಗೆ ವಿವರಿಸಿದರು.

ರಂಗಪರಿಕರಗಳು, ಹಿನ್ನೆಲೆಯಲ್ಲಿ ಪ‍್ರತಿಬಿಂಬಿಸುವ ಚಿತ್ರಗಳು, ವಸ್ತ್ರಾಲಂಕಾರ ಎಲ್ಲವೂ 90 ವರ್ಷಗಳ ಹಿಂದೆ ನಾಟಕಗಳಲ್ಲಿ ಹೇಗೆ ಬಳಸಿಕೊಳ್ಳಲಾಗಿತ್ತೋ ಹಾಗೆಯೇ ಇರಲಿವೆ. ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಲಿದ್ದು, ರಾಘವೇಂದ್ರ ಕಮ್ಮಾರ ಅವರ ಸಂಗೀತ ಇದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುತ್ತಿರುವ ಕಾರ್ಯಕ್ರಮ ಇದಾಗಿದ್ದು ಶನಿವಾರ ಸಂಜೆ 7ಕ್ಕೆ ಶಮಿತಾ ಮಲ್ನಾಡ್‌ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮವೂ ಇದೆ. ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT