ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಡಿ ಎತ್ಕೊಂಡೋದ್ರು!

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚುತ್ತಿದೆ. ಮುಂಜಾನೆ ಮತ್ತು ಸಂಜೆಯ ಪೀಕ್‌ ಅವರ್‌ನಲ್ಲಿ ದಟ್ಟಣೆಯಿಂದಾಗಿ ಸವಾರರು ನಿಗದಿತ ಸ್ಥಳಗಳಿಗೆ ತಲುಪಲು ಪರದಾಡುತ್ತಾರೆ. ನಿಷೇಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಹೀಗೆ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್‌ ಮಾಡಿ, ಸರಾಗ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸರು ಶ್ರಮಿಸುತ್ತಿದ್ದಾರೆ. ಟೋಯಿಂಗ್‌ ಸಂದರ್ಭದಲ್ಲಿ ವಾಹನ ವಾರಸುದಾರರು ವಾಗ್ವಾದಕ್ಕೆ ಇಳಿಯುವುದು ಸಾಮಾನ್ಯ. ಟೋಯಿಂಗ್ ಕುರಿತು ವಾಹನ ಸವಾರರು ಅರಿತಿರಬೇಕಾದ ಅಗತ್ಯ ಮಾಹಿತಿ ಇಲ್ಲಿದೆ.

ವಾಹನಗಳನ್ನು ಎಲ್ಲಿ ನಿಲ್ಲಿಸಬಾರದು: ನೋ–ಪಾರ್ಕಿಂಗ್‌, ನಿಗದಿತ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಪಕ್ಕ ಮತ್ತು ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳಿಂದ ದಟ್ಟಣೆ ಉಂಟಾಗುವಂತಿದ್ದರೆ ಅವುಗಳನ್ನು ಟೋಯಿಂಗ್‌ ಮಾಡಬಹುದಾಗಿದೆ.

ಟೋಯಿಂಗ್‌ ವಿಧಾನ: ಸಂಚಾರಿ ಪೊಲೀಸರು ಏಕಾಏಕಿ ಬಂದು ನಿಲ್ಲಿಸಿದ ವಾಹನಗಳನ್ನು ಎತ್ತಿ ಒಯ್ಯುವಂತಿಲ್ಲ.

*ನಿಷೇಧಿತ ಸ್ಥಳದಲ್ಲಿ ನಿಲ್ಲಿಸಿದ ವಾಹನದ ಫೋಟೊ ತೆಗೆಯಬೇಕು.

* ವಾಹನದ ಸಂಖ್ಯೆ ನೋಂದಾಯಿಸಿಕೊಂಡು, ವಾಹನ ತೆಗೆಯಲು ಧ್ವನಿ ವರ್ಧಕದ ಮೂಲಕ ಪ್ರಕಟಿಸಬೇಕು.

* ವಾಹನದ ವಾರಸುದಾರ ಅಲ್ಲಿಗೆ ಬಂದರೆ, ನೋ–ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದಕ್ಕಾಗಿ ದಂಡ ಮತ್ತು ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಾಕಿ ಇರುವ ದಂಡಗಳನ್ನು ಕಟ್ಟಿಸಿಕೊಳ್ಳಬೇಕು. ನಂತರ ವಾಹನವನ್ನು ವಾರಸುದಾರರಿಗೆ ಒಪ್ಪಿಸಬೇಕು.

* ಒಂದು ವಾಹನವನ್ನು ಎಳೆದೊಯ್ಯುವಾಗ ಮತ್ಯಾವುದೊ ವಾಹನ ನೋ–ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದರೆ, ಪೊಲೀಸರು ಅದಕ್ಕೆ ಕ್ಲ್ಯಾಂಪ್‌ ಹಾಕಿ ಲಾಕ್‌ ಮಾಡಬಹುದು. ನಿಯಮ ಉಲ್ಲಂಘಿಸಿರುವ ಸೂಚನೆ ಇರುವ ಹಾಳೆಯನ್ನು ವಾಹನದ ಮೇಲೆ ಹಾರಿಹೋಗದಂತೆ ಇರಿಸಬೇಕು. ಅದರಲ್ಲಿ ಸಂಬಂಧಿಸಿದ ಠಾಣೆಯ ಸಂಪರ್ಕ ಸಂಖ್ಯೆ ಇರಬೇಕು. ಈ ಮಾಹಿತಿಯ ಹಾಳೆ ಅಂಟಿಸಲು ₹100 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

* ಹತ್ತಿರದ ಸಂಚಾರ ಪೊಲೀಸ್‌ ಠಾಣೆಗೆ ವಾಹನ ಎಳೆದೊಯ್ಯಬೇಕು. ವಾರಸುದಾರರು ವಾಹನ ಪಡೆಯಲು ಬಂದಾಗ, ಆರ್.ಸಿ. ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ದಂಡ ಕಟ್ಟಿಸಿಕೊಂಡು ವಾಹನ ನೀಡಲಾಗುತ್ತದೆ.

* ಟೋಯಿಂಗ್‌ ಮಾಡಿದ ವಾಹನಗಳ ನೋಂದಣಿ ಸಂಖ್ಯೆಗಳನ್ನು ಠಾಣೆಯ ಪುಸ್ತಕದಲ್ಲಿ ಪ್ರತಿದಿನ ದಾಖಲಿಸಬೇಕು. 48 ಗಂಟೆಗಳಲ್ಲಿ ದಂಡ ಕಟ್ಟದ ವಾರಸುದಾರರನ್ನು ಸಂಪರ್ಕಿಸಲು ಪೊಲೀಸರು ಯತ್ನಿಸಬೇಕು. ವಾರಸುದಾರ ನಿಗದಿತ ಸಮಯದೊಳಗೆ ಠಾಣೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ, ದಂಡ ಕಟ್ಟಿ ವಾಹನ ಪಡೆಯಬಹುದು. ವಾರಸುದಾರ ಒಂದು ವರ್ಷದವರೆಗೂ ಬಾರದಿದ್ದರೆ ವಾಹನವನ್ನು ಹರಾಜು ಹಾಕಲಾಗುತ್ತದೆ.

* ಅಯ್ಯೋ, ವಾಹನ ಇರೋರೆಲ್ಲಾ ಇದೆಲ್ಲಾ ನೆನಪಿಡಿಕೊ ಆಗುತ್ತಾ ಎಂಬ ಪ್ರಶ್ನೆ ನೀವು ಕೇಳಬಹುದು. ಸಂಚಾರಿ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುವವರು ಇದನ್ನು ತಿಳಿಯುವ ಅಗತ್ಯವಿಲ್ಲ.

ಮಾಹಿತಿಗೆ: ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ನಗರ ಸಂಚಾರ ಪೊಲೀಸ್. www.banga*oretrafficpo*ice.gov.in

ಕೇಳಿದಾಕ್ಷಣ ವಾಹನ ಹಿಂದಿರುಗಿಸಬೇಕು
ವಾಹನ ಎಳೆದೊಯ್ಯುವ ದಾರಿಯಲ್ಲಿ ವಾರಸುದಾರರು ಬಂದು, ವಾಹನ ಹಿಂದಿರುಗಿಸಲು ಮನವಿ ಮಾಡಿಕೊಂಡರೇ, ಅವರಿಂದ ನೋ–ಪಾರ್ಕಿಂಗ್‌ ದಂಡ ಮತ್ತು ಟೋಯಿಂಗ್‌ ಶುಲ್ಕವನ್ನು ಪಡೆದು, ಅದೇ ಕ್ಷಣದಲ್ಲಿ ವಾಹನ ಹಿಂದಿರುಗಿಸಬೇಕು. ಈ ವೇಳೆ, ಪೊಲೀಸರು ಠಾಣೆಗೆ ಬಂದು ವಾಹನ ಪಡೆಯುವಂತೆ ತಾಕೀತು ಮಾಡುವಂತಿಲ್ಲ, ಧಮಕಿಯೂ ಹಾಕುವಂತಿಲ್ಲ ಎಂದು ನಿಯಮ ಹೇಳುತ್ತದೆ.

‘ವಾಹನ ತಡೆಯಲು ನಿರ್ದಿಷ್ಟ ಕಾರಣವಿರಬೇಕು’
ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದ್ದು ಹೊರನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದ್ದಾಗ ಮಾತ್ರ ಪೊಲೀಸರು ವಾಹನ ನಿಲ್ಲಿಸಿ, ವಿಚಾರಿಸಿ, ದಂಡ ವಿಧಿಸಬಹುದಾಗಿದೆ. ‘ಹೆಲ್ಮೆಟ್‌ ಧರಿಸದ, ಸೀಟ್‌ ಬೆಲ್ಟ್‌ ಹಾಕದ, ಮೊಬೈಲ್‌ ಬಳಸುತ್ತ ವಾಹನ ಚಲಾಯಿಸುವ ಸವಾರರನ್ನು, ಸಿಗ್ನಲ್‌ ಜಂಪ್‌ ಮಾಡಿದವರನ್ನು, ನಂಬರ್‌ ಪ್ಲೇಟ್‌ ಸರಿಯಿಲ್ಲದಕ್ಕೆ, ನೋ–ಎಂಟ್ರಿಯಲ್ಲಿ ಅಥವಾ ಒನ್‌ ವೇ ನಲ್ಲಿ ಬಂದಾಗ ನಿಲ್ಲಿಸಿ ವಿಚಾರಿಸಬಹುದು. ಸುಕಾಸುಮ್ಮನೆ ವಾಹನ ನಿಲ್ಲಿಸುವ ಪೊಲೀಸರನ್ನು ಪ್ರಶ್ನಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ’ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು.

ಟೋಯಿಂಗ್‌ ಶುಲ್ಕ
ದ್ವಿಚಕ್ರವಾಹನ : ₹650
ಎಲ್‌ಎಂವಿ ಮತ್ತು ಕಾರ್‌ (ಲಘು ಮೋಟಾರು ವಾಹನ) : ₹1,000
ಎಂಎಂವಿ (ಮಧ್ಯಮ ಗಾತ್ರದ ವಾಹನ) : ₹1,250
ಎಚ್‌ಎಂವಿ (ಭಾರಿ ಗಾತ್ರದ ವಾಹನ): ₹1,500
ನೋ–ಪಾರ್ಕಿಂಗ್‌ ದಂಡ : ವಾಹನಗಳಿಗೆ ಅನುಗುಣವಾಗಿ

*

ಟೋಯಿಂಗ್‌ ನಿಯಮಗಳನ್ನು ಪಾಲಿಸದ ಪೊಲೀಸರ ವಿರುದ್ಧ ವಾಹನಗಳ ವಾರಸುದಾರರು ದೂರು ದಾಖಲಿಸಬಹುದು. ನಮ್ಮ ಸಿಬ್ಬಂದಿಯ ತಪ್ಪು ಸಾಬೀತಾದರೆ ಸೂಕ್ತ ಕ್ರಮ ಜರುಗಿಸುತ್ತೇವೆ.
– ಆರ್‌.ಹಿತೇಂದ್ರ, ಹೆಚ್ಚುವರಿ ಪೊಲೀಸ್‌ ಕಮಿಷನರ್‌, ನಗರ ಸಂಚಾರ ವಿಭಾಗ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT