ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಣ್ಯದ ಮಳೆ

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಸಲರಾಜ್ಯದ ರಾಜಧಾನಿಯಾದ ಶ್ರಾವಸ್ತಿಯಲ್ಲಿ ಒಂದು ದೊಡ್ಡ ಸರೋವರವಿತ್ತು. ಅದರ ಆಳವನ್ನು ಬಲ್ಲವರು ಯಾರೂ ಇರಲಿಲ್ಲ. ತುಂಬ ಸುಂದರವಾದ ಸರೋವರ. ಕಮಲ ಮುಂತಾದ ಹಲವು ಹೂವುಗಳು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಸರೋವರದ ಸುತ್ತಲೂ ಹಲವು ಜಾತಿಯ ವೃಕ್ಷಗಳು ಎಲ್ಲ ಕಾಲದಲ್ಲಿಯೂ ಹಸಿರಿನಿಂದ ಕಂಗೊಳಿಸುತ್ತಿದ್ದವು. ಆ ಸರೋವರದಲ್ಲಿ ಹಲವು ಬಗೆಯ, ಹಲವು ಗಾತ್ರದ ಮೀನುಗಳು ಇದ್ದವು. ಸುಮಾರು ಎಂಬತ್ತು ಸಾವಿರದಷ್ಟಿದ್ದ ಮೀನುಗಳಲ್ಲಿ ಒಂದು ದೊಡ್ಡ ಮೀನು ಅದರ ಗುಣದಿಂದಾಗಿ ವಿಶೇಷವಾಗಿತ್ತು. ಏಕೆಂದರೆ ಬೋಧಿಸತ್ವನೇ ಆ ಮೀನಾಗಿ ಹುಟ್ಟಿದ್ದನು.

ಆ ರಾಜ್ಯದಲ್ಲಿ ಒಮ್ಮೆ ಬರಗಾಲ ತಲೆದೋರಿತು. ಮಳೆಗಾಲದಲ್ಲಿ ಮಳೆಯೇ ಆಗಲಿಲ್ಲ. ಮರಗಳು ಒಣಗಿದವು. ನೀರಿನ ಎಲ್ಲ ಮೂಲಗಳೂ ಒಣಗುತ್ತ ಬಂದವು. ಕೆರೆಗಳು, ಹೊಳೆಗಳು ಬರಿದಾದವು. ಬರಗಾಲದ ಸಂಕಟ ಆ ಸರೋವರಕ್ಕೂ ತಾಕಿತು.  ಸರೋವರದಲ್ಲಿದ್ದ ಆಮೆಗಳು, ಮೀನುಗಳು ಜೀವವನ್ನು ಕಳೆದುಕೊಳ್ಳುವಂಥ ಸ್ಥಿತಿ ಎದುರಾಯಿತು. ಹೇಗಾದರೂ ಮಾಡಿ ಜೀವವನ್ನು ಉಳಿಸಿಕೊಳ್ಳೋಣ ಎಂದು ಕೆಸರಿನಲ್ಲಿ ಹುದುಗಿಕೊಂಡವು. ಆದರೆ ಕಾಗೆಗಳೂ ಹದ್ದುಗಳೂ ಅವುಗಳ ಮೇಲೆ ಎರಗಿ ಆಹಾರವನ್ನಾಗಿಸಿಕೊಳ್ಳುತ್ತಿದ್ದವು. ಹೀಗೆ ನೀರಿಲ್ಲದೆ ಕೆಲವು ಮೀನಗಳು ಸತ್ತರೆ, ಮತ್ತೆ ಕೆಲವು ಬಿಸಿಲಿನ ಉರಿಗೆ ಸತ್ತವು; ಮತ್ತೆ ಹಲವು ಹದ್ದಗಳಿಗೂ ಕಾಗೆಗಳಿಗೂ ಆಹಾರವಾದವು.

ತನ್ನ ಜೊತೆಗಾಗರರು ಹೀಗೆ ಸಂಕಷ್ಟಕ್ಕೆ ಸಿಕ್ಕಿ, ಪ್ರಾಣವನ್ನು ಕಳೆದುಕೊಳ್ಳುತ್ತಿರುವುದನ್ನು ಕಂಡು ಆ ದೊಡ್ಡ ಮೀನಿಗೆ ತುಂಬ ದುಃಖವಾಯಿತು. ‘ನನ್ನ ಎದುರಿನಲ್ಲಿಯೇ ನನ್ನವರ ದುರ್ಮರಣ ನಡೆಯುತ್ತಿದೆ. ತೊಂದರೆಗೆ ಸಿಕ್ಕಿರುವ ನನ್ನವರನ್ನು ನಾನು ಹೇಗಾದರೂ ಕಾಪಾಡಲೇ ಬೇಕು. ಆದರೆ ಏನು ಮಾಡುವುದು?’ ಹೀಗೆ ದೀರ್ಘವಾಗಿ ಯೋಚಿಸಿತು. ಕೊನೆಗೊಂದು ಉಪಾಯ ಹೊಳೆಯಿತು. ಮಳೇಯ ದೇವರಾದ ಪರ್ಜನ್ಯನನ್ನೇ ಪ್ರಾರ್ಥಿಸಿಕೊಳ್ಳುತ್ತೇನೆ – ಎಂದು ತೀರ್ಮಾನಿಸಿಕೊಂಡಿತು.

‘ನನಗೆ ಬುದ್ಧಿಬಂದಾಗಿನಿಂದಲೂ ನಾನು ಯಾವುದೇ ಅಧರ್ಮಕಾರ್ಯವನ್ನೂ ಮಾಡಿಲ್ಲ. ಇದು ನಿಜವಾದರೆ ನನ್ನ ಮೇಲೆ ಯಾವುದೇ ಹಕ್ಕಿ ದಾಳಿ ಮಾಡಿ ಕೊಲ್ಲದಿರಲಿ’ ಎಂದು ಕೆಸರಿನಿಂದ ಹೊರಗೆ ಬಂದಿತು. ಈಗ ಪರ್ಜನ್ಯನನ್ನೇ ಉದ್ದೇಶಿಸಿ ‘ಎಲೈ ಮಳೆಯ ಒಡೆಯ! ಇದುವರೆಗೂ ನಿನ್ನ ಕೃಪೆಯಿಂದ ನಾನೂ ನನ್ನ ಎಂಬತ್ತು ಸಾವಿರ ಬಂಧುಗಳೂ ಈ ಸರೋವರದಲ್ಲಿ ನೆಮ್ಮದಿಯಾಗಿದ್ದೆವು. ಆದರೆ ಈಗ ನನ್ನ ಬಂಧುಗಳು ಒಬ್ಬೊಬ್ಬರಾಗಿ ಸಾವಿಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯವಾಗಿ ದೊಡ್ಡ ಮೀನು ಚಿಕ್ಕ ಮೀನನ್ನು ತಿನ್ನುವುದು ಲೋಕಧರ್ಮ. ಆದರೆ ನಾನು ಇದುವರೆಗೂ ಹಾಗೆ ನಡೆದುಕೊಂಡಿಲ್ಲ. ಮಾತ್ರವಲ್ಲ, ನಾನು ಯಾವ ಜೀವಿಯನ್ನೂ ಹಿಂಸಿಸಿಲ್ಲ. ಇದು ನಿಜವೇ ಆಗಿದ್ದರೆ ನೀನು ಕೃಪೆ ಮಾಡಿ ಮಳೆಯನ್ನು ಸುರಿಸು’ ಎಂದು ಪ್ರಾರ್ಥಿಸಿಕೊಂಡಿತು.

ಆ ದೊಡ್ಡ ಮೀನು ಹೇಳಿದ ಮಾತು ಸತ್ಯವಾಗಿತ್ತು. ಇದರಿಂದ ಸಂತೋಷಗೊಂಡ ಮಳೆಯ ದೇವರು ಧಾರಕಾರವಾಗಿ ಮಳೇಯನ್ನು ಸುರಿಸಿದ.  ಆ ಸರೋವರ ನೀರಿನಿಂದ ತುಂಬಿತು. ಎಲ್ಲೆಡೆ ಹಸಿರು ಚಿಗುರಿತು. ಮತ್ತೆ ಶ್ರಾವಸ್ತಿಯಲ್ಲಿ ಸಂತಸ ನೆಲೆಗೊಂಡಿತು.

ಬೌದ್ಧದರ್ಶನದ ಇಂಥ ‘ಜಾತಕಕಥೆ’ಗಳು ನೀತಿಯನ್ನು ಸರಳವಾಗಿ ಉಪದೇಶಿಸುವಂಥವು. ಮೇಲ್ನೋಟಕ್ಕೆ ಇವು ಮಕ್ಕಳ ಕಥೆಗಳಂತೆ ಕಾಣುತ್ತವೆ. ಆದರೆ ಬುದ್ಧನ ದರ್ಶನವಾದ ಕಾರುಣ್ಯದ ವಿವಿಧ ಆಯಾಮಗಳನ್ನು ಇವು ಸರಳವಾಗಿ ನಿರೂಪಿಸುತ್ತವೆ.
 

-ಹರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT