ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಬರ್’ ಲೋಕದೊಳು ಕುತಂತ್ರಿಗಳ ಕಳ್ಳಾಟ

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಹದಿಮೂರು ವರ್ಷದ ಆ ಬಾಲಕ, 2017ರ ಏಪ್ರಿಲ್‌ನಲ್ಲಿ ಫೇಸ್‌ಬುಕ್ ಖಾತೆ ತೆರೆಯುತ್ತಾನೆ. ಅಲ್ಲಿ ಆತನಿಗೆ ತೇಜಸ್ ಪಟೇಲ್ ಎಂಬ ದೆಹಲಿ ಯುವಕನ ಸ್ನೇಹವಾಗುತ್ತದೆ. ಕೆಲ ದಿನಗಳ ಸಂದೇಶ ವಿನಿಮ‌ಯದ ಬಳಿಕ, ಆತ ಈ ಬಾಲಕನಿಗೆ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಕಳುಹಿಸಲು ಶುರುವಿಡುತ್ತಾನೆ.

ಕ್ರಮೇಣ ಬಾಲಕನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಯುವಕ, ಪೋಷಕರು ಏಕಾಂತದಲ್ಲಿರುವ ವಿಡಿಯೊ ಸೆರೆಹಿಡಿದು ಕಳುಹಿಸುವಂತೆ ತಾಕೀತು ಮಾಡು
ತ್ತಾನೆ. ಅಂತೆಯೇ ತನ್ನ ಅಪ್ಪ–ಅಮ್ಮನ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವ ಬಾಲಕ, ಅದನ್ನು ಫೇಸ್‌ಬುಕ್ ಗೆಳೆಯನಿಗೆ ರವಾನಿಸಿಬಿಡುತ್ತಾನೆ.

ಕೆಲ ದಿನಗಳ ನಂತರ ಆ ದೃಶ್ಯವನ್ನು ಬಾಲಕನ ತಂದೆಗೇ ಕಳುಹಿಸುವ ಯುವಕ, ‘ಒಂದು ಕೋಟಿ ಕೊಡಿ. ಇಲ್ಲದಿದ್ದರೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ತಂದೆ ಸೈಬರ್ ಠಾಣೆಯ ಮೆಟ್ಟಿಲೇರುತ್ತಾರೆ. ಪೊಲೀಸರು ತನಿಖೆ ಪ್ರಾರಂಭಿಸಿದಾಗ, ಅದನ್ನು ಆರೋಪಿಗೆ ಮಗನೇ ಕಳುಹಿಸಿದ್ದು ಎಂಬ ಸತ್ಯ ಬಯಲಾಗುತ್ತದೆ. ತಂದೆ ದಿಗ್ಭ್ರಾಂತರಾಗುತ್ತಾರೆ. ವಿಪರ್ಯಾಸ ಎಂದರೆ ಆ ತೇಜಸ್‌ ಯಾರೆಂದು ಇನ್ನೂ ಗೊತ್ತಾಗಿಲ್ಲ. ಆತ ಆ ವಿಡಿಯೊವನ್ನು ಎಲ್ಲಿ ಅಪ್‌ಲೋಡ್ ಮಾಡಿಬಿಡುತ್ತಾನೋ ಎಂಬ ಆತಂಕದಲ್ಲೇ ದಂಪತಿ ದಿನ ದೂಡುತ್ತಿದ್ದಾರೆ.

ಹೀಗೆ, ಸೈಬರ್ ಎಂಬುದು ಒಂದು ಮಾಯಾವಿ ಲೋಕ. ಬೆರಳ ತುದಿಯಲ್ಲೇ ಇಡೀ ಪ್ರಪಂಚವನ್ನು ಸುತ್ತಬಹುದು. ಯಾರೊಡನೆ ಬೇಕಾದರೂ ಮಾತನಾಡಬಹುದು. ಅವರನ್ನು ಕಂಪ್ಯೂಟರ್ ಇಲ್ಲವೇ ಮೊಬೈಲ್ ಪರದೆಯಲ್ಲಿ ನೋಡಲೂಬಹುದು. ಒಂದೇ ಕ್ಲಿಕ್‌ನಿಂದ ಯಾವುದೇ ರೀತಿಯ ಸೈಬರ್ ಅಪರಾಧವನ್ನೂ ಮಾಡಬಹುದು. ಹಾಗೆಯೇ, ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತು ಅಪರಾಧ ಎಸಗಿದಾಗ, ಅದೇ ಕ್ಲಿಕ್‌ನಿಂದ ಆ ಅಪರಾಧಿಯನ್ನು ಪತ್ತೆಹಚ್ಚಲೂ ಅವಕಾಶವಿದೆ.

ಸಂವಹನ ಸೇರಿದಂತೆ ನಿತ್ಯದ ಬಹುತೇಕ ಕೆಲಸಗಳಿಗೆ ನಾವೆಲ್ಲರೂ ಈಗ ಅತಿ ಎನ್ನುವಷ್ಟು ತಂತ್ರಜ್ಞಾನ, ಅದರಲ್ಲೂ ಅಂತರ್ಜಾಲವನ್ನೇ ಅವಲಂಬಿಸಿದ್ದೇವೆ. ಅದು ತಿಳಿದೋ, ತಿಳಿಯದೆಯೋ ಎಲ್ಲರನ್ನೂ ಸೈಬರ್ ಹ್ಯಾಕರ್‌ಗಳ ಮುಂದೆ ಪರೀಕ್ಷೆಗೆ ನೂಕುತ್ತಿದೆ. ಹರೆಯದ ಮಕ್ಕಳಿಂದ ಹಿಡಿದು, ಜೀವನದ ಕೊನೆ ದಿನಗಳನ್ನು ಎಣಿಸುತ್ತಿರುವ ಎಲ್ಲರೂ ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ.

ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಹೇಳುವ ಪ್ರಕಾರ, ಸೈಬರ್ ಅಪರಾಧಕ್ಕೆ ಕೊನೆ ಎಂಬುದೇ ಇಲ್ಲ. ಮನೆ ಬಾಗಿಲು ಮುರಿದು ಕಳ್ಳತನ ಮಾಡುವುದ
ಕ್ಕಿಂತ, ಇದೇ ಸುಲಭವಾದ ಮಾರ್ಗ ಎಂಬುದು ಕಳ್ಳರಿಗೆ ಅರ್ಥವಾಗಿ ಹೋಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸೈಬರ್ ಅಪರಾಧ ಇನ್ನೂ ಹೆಚ್ಚಾಗುತ್ತದೆ. ಜನ ಜಾಗೃತರಾಗದ ಹೊರತು ಈ ಸಮಸ್ಯೆಗೆ ಬೇರೆ ಪರಿಹಾರವೇ ಇಲ್ಲ.

ಈಗ ಎಲ್ಲರನ್ನೂ ಕಾಡುತ್ತಿರುವ ಹಾಗೂ ದೇಶದ ಭದ್ರತೆಗೇ ಸವಾಲಾಗಿರುವ ಈ ‘ಸೈಬರ್ ಕ್ರೈಂ’ ಪರಿಕಲ್ಪನೆ ಬೆಳೆದುಬಂದ ದಾರಿಯನ್ನು ನೋಡೋಣ...

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಂತರ್ಜಾಲವನ್ನು ಅಮೆರಿಕ ಅಭಿವೃದ್ಧಿಪಡಿಸಿತು. ಆರಂಭದಲ್ಲಿ ಸೇನೆಗೆ ಮಾತ್ರ ಸೀಮಿತವಾಗಿದ್ದ ಅದರ ಬಳಕೆ, ಕ್ರಮೇಣ ದೇಶ–ಗಡಿಗಳ ಹಂಗಿಲ್ಲದೆ ಜಗತ್ತಿನಾದ್ಯಂತ ವಿಸ್ತರಿಸಿತು. ಆನಂತರ ಸಂವಹನಕ್ಕಾಗಿ ಇ–ಮೇಲ್, ಚಾಟ್‌ ಬಾಕ್ಸ್‌, ವೆಬ್‌ಸೈಟ್‌, ಜಾಲತಾಣಗಳು ಸೃಷ್ಟಿಯಾದವು. ಹ್ಯಾಕರ್‌ಗಳೂ ಹುಟ್ಟಿಕೊಂಡರು. ತಂತ್ರಜ್ಞಾನ ಬಳಸಿಕೊಂಡೇ ಅಪರಾಧ ಕೃತ್ಯಗಳನ್ನು ಎಸಗುವ ಪ್ರಕ್ರಿಯೆ ಶುರುವಾಯಿತು. ಫಿಶಿಂಗ್, ಸ್ಕಿಮ್ಮಿಂಗ್, ಮಕ್ಕಳು ಮತ್ತು ಮಹಿಳೆಯರ ಸಾಗಣೆ, ಡ್ರಗ್‌ ಮಾಫಿಯಾ... ಹೀಗೆ ಡಾರ್ಕ್‌ ವೆಬ್‌ಸೈಟ್‌ಗಳ ಮೂಲಕ ದೊಡ್ಡ ದೊಡ್ಡ ದಂಧೆಗಳು ಆರಂಭವಾದವು.

‘ಸೈಬರ್ ಕ್ರೈಂ ಪರಿಕಲ್ಪನೆ ಭಾರತಕ್ಕೆ ಪರಿಚಯವಾಗಿ ಎರಡು ದಶಕಗಳಾಗಿವೆ ಅಷ್ಟೇ. ಆದರೆ, ಇಷ್ಟು ಕಡಿಮೆ ಅವಧಿಯಲ್ಲೇ ಆಗಿರುವ ಬೆಳವಣಿಗೆಗಳು ಇಡೀ ದೇಶವನ್ನೇ ಆತಂಕಕ್ಕೆ ದೂಡುವಂತೆ ಮಾಡಿವೆ. ಆಧುನಿಕ ಸೈಬರ್ ಅಪರಾಧಗಳು ಭಯೋತ್ಪಾದನೆಯನ್ನೂ ಮೀರಿದವು’ ಎಂದು ವಿಶ್ಲೇಷಿಸುತ್ತಾರೆ ಸೈಬರ್ ಕ್ರೈಂ ತಜ್ಞೆ ಶುಭಮಂಗಳಾ.

‘ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳು ಘಟಿಸುತ್ತಾ ಹೋದಂತೆ, ‌ಅಪರಾಧಗಳೂ ಹೊಸ ಮಜಲುಗಳನ್ನು ಪಡೆಯುತ್ತಿವೆ. ಸೈಬರ್ ಅಪರಾಧಿಗಳು ಕಾರ್ಪೊರೇಟ್ ಮಾದರಿಯಲ್ಲಿ ಒಂದು ವ್ಯವಸ್ಥಿತ ಕಾರ್ಯವೈಖರಿ ಆರಂಭಿಸಿದ್ದಾರೆ. ಉದ್ಯಮಗಳು ಹಾಗೂ ಗ್ರಾಹಕರ ಮೇಲೆ ದಾಳಿ ಸಂಘಟಿಸುತ್ತಿದ್ದಾರೆ. ತಾಂತ್ರಿಕ ಕೌಶಲ ಹೊಂದಿರುವ ವಂಚಕರು ವಾರದ ರಜೆ, ವಾರಾಂತ್ಯದ ವಿರಾಮಗಳಲ್ಲೇ ತಮ್ಮ ಕೆಲಸ ಮುಗಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

ಫಿಶಿಂಗ್ ಮಾಫಿಯಾ

ಸೈಬರ್ ಕ್ರೈಂನಲ್ಲಿ ಇದೊಂದು ಮಾರಕ ಅಪರಾಧಿಗಳ ದಂಡು. ಅಣಬೆಗಳಂತೆ ಬೆಳೆದು, ಈಗ ಪ್ರಪಂಚವನ್ನೇ ಆವರಿಸಿಬಿಟ್ಟಿದೆ. ‘ಫಿಶಿಂಗ್’ (ಗಾಳ) ಎಂದರೆ ಅಂತರ್ಜಾಲ ಬಳಕೆದಾರರ ಪಾಸ್‌ವರ್ಡ್, ಯೂಸರ್ ನೇಮ್, ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಡೆಯಲು ಪ್ರಯತ್ನಿಸುವ ವಿಧಾನ. ಇ-ಮೇಲ್ ಅಥವಾ ಮೆಸೇಜಿಂಗ್ ಮೂಲಕ ಬಳಕೆದಾರರನ್ನು ವಂಚಿಸಲು ಬಳಸುತ್ತಿರುವ ಶೈಲಿ. ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿದ್ದ ಓಂಪ್ರಕಾಶ್ ಅವರೇ ಈ ಗಾಳಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರು ಎಂದರೆ, ವಂಚಕರು ಎಷ್ಟು ಚಾಣಾಕ್ಷರು ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಮೊದಲನೇ ಫಿಶಿಂಗ್ ಅಪರಾಧ ಬೆಳಕಿಗೆ ಬಂದಿದ್ದು 1995ರಲ್ಲಿ. ಮುಂಬೈನ ಒಬ್ಬ ಉದ್ಯಮಿಗೆ ಯಾವುದೋ ವಿಳಾಸದಿಂದ ಇ–ಮೇಲ್ ಬಂದಿತ್ತು. ಅದರ
ಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದಾಗ, ಉದ್ಯಮಿಯ ಕಂಪ್ಯೂಟರ್‌ನಲ್ಲಿ ಶೇಖರಿಸಿದ್ದ ಎಲ್ಲ ದಾಖಲೆಗಳೂ ಅಪರಾಧಿಗಳ ಕಂಪ್ಯೂಟರ್‌ಗೆ ವರ್ಗಾವಣೆಯಾಗಿದ್ದವು. ಎರಡು ವರ್ಷಗಳ ಬಳಿಕ ಫಿರೋಜ್, ಅಭಿಷೇಕ್ ಹಾಗೂ ಅಬ್ದುಲ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪೊಲೀಸರಿಗೆ ಸಿಕ್ಕಿಬಿದ್ದರು.

ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸುವ ಫಿಶಿಂಗ್ ಅಪರಾಧಿಗಳು, ಲಾಟರಿ, ಬಹುಮಾನ, ಹೊಸ ನೌಕರಿ, ವಿದೇಶ ಪ್ರಯಾಣ... ಹೀಗೆ ಹಲವು ಆಮಿಷಗಳನ್ನು ಒಡ್ಡಿ ಗ್ರಾಹಕರನ್ನು ಸೆಳೆಯುತ್ತಾರೆ. ನಯವಾದ ಮಾತುಗಳಿಂದಲೇ ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆದು, ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ದೋಚುತ್ತಿದ್ದಾರೆ. ಇಲ್ಲವೇ, ನಕಲಿ ದಾಖಲೆಗಳನ್ನು ಸಲ್ಲಿಸಿ ತಾವೇ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ.

‘ಇಂತಹ ಜಾಲಗಳ ಬಗ್ಗೆ ಎಚ್ಚರದಿಂದಿರಿ ಎಂದು ಎಷ್ಟೇ ಹೇಳಿದರೂ ಜನ ಬದಲಾಗುತ್ತಿಲ್ಲ’ ಎಂದು ಸೈಬರ್ ಸೆಲ್ ಎಸ್ಪಿ ಸಚಿನ್ ಘೋರ್ಪಡೆ ಬೇಸರ
ವ್ಯಕ್ತಪಡಿಸಿದರು. ‘ಕೆಲ ದಿನಗಳ ಹಿಂದೆ ಒಬ್ಬ ಮಹಿಳೆ 1.36 ಕೋಟಿ ವಂಚಕರ ಖಾತೆಗೆ ಹಾಕಿದ್ದರೆ, ಯುಗಾದಿ ಹಬ್ಬದ ಹಿಂದಿನ ದಿನ ಇನ್ನೊಬ್ಬ ಮಹಿಳೆ 36 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಜನ ನಮ್ಮ ಮಾತನ್ನು ಎಲ್ಲಿ ಕೇಳುತ್ತಾರೆ’ ಎನ್ನುತ್ತಾರೆ ಅವರು.

‘ನೀವು ಯಾರ ಖಾತೆಗಾದರೂ ಹೆಚ್ಚು ಹಣ ಹಾಕುವ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಮೊದಲು 500 ಅಥವಾ 1,000 ರೂಪಾಯಿ ಮಾತ್ರ ಜಮೆ ಮಾಡಿ ಪರಿಶೀಲಿಸಿಕೊಳ್ಳಿ. ಅವರು ಹಣ ಬಂದಿದೆ ಎಂದು ಖಾತ್ರಿಪಡಿಸಿದ ಬಳಿಕವೇ ಹೆಚ್ಚಿನ ಹಣವನ್ನು ಹಾಕಿ’ ಎಂದು ಸಲಹೆ ನೀಡುತ್ತಾರೆ ಸೈಬರ್ ವಂಚಕರಿಂದ
₹ 7.5 ಲಕ್ಷ ಕಳೆದುಕೊಂಡ ಉದ್ಯಮಿಯೊಬ್ಬರು.

‘2016ರ ಆಗಸ್ಟ್‌ನಲ್ಲಿ ನಾನು ಕುಟುಂಬ ಸಮೇತ ಆಫ್ರಿಕಾ ಪ್ರವಾಸ ಹೊರಟಿದ್ದೆ. ಉಗಾಂಡದ ಸಂಫಾಲಿಯಲ್ಲಿರುವ ಸ್ನೇಹಿತನಿಗೆ ನಮ್ಮ ವಿವರಗಳನ್ನು ಕಳುಹಿಸಿ, ಟಿಕೆಟ್ ಹಾಗೂ ಲಾಡ್ಜಿಂಗ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೆ. ಒಂದು ವಾರದಲ್ಲಿ ನೈರೋಬಿಯ ಟ್ರಾವೆಲ್ ಏಜೆನ್ಸಿಯೊಂದರ ಹೆಸರಿನಲ್ಲಿ ನನಗೆ ಮೇಲ್ ಬಂತು. ‘ಆಫ್ರಿಕನ್ ಸಫಾರಿ ಪ್ಯಾಕೇಜ್’ನಡಿ ವ್ಯವಸ್ಥೆ ಮಾಡಲಾಗಿದ್ದು, ಬ್ಯಾಂಕ್ ಖಾತೆಗೆ 7.5 ಲಕ್ಷ ರೂಪಾಯಿ ಪಾವತಿಸಿ ಎಂದು ಅದರಲ್ಲಿತ್ತು. ಅಂತೆಯೇ ನಾನು ಹಣ ಜಮೆ ಮಾಡಿದೆ. ಆದರೆ, ಅದು ಟ್ರಾವೆಲ್ಸ್ ಏಜೆನ್ಸಿಯಿಂದ ಬಂದಿದ್ದ ಮೇಲ್ ಅಲ್ಲ ಹಾಗೂ ನಾನು ವಂಚಕರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದೇನೆ ಎಂಬುದು ಆ ನಂತರ ಗೊತ್ತಾಯಿತು’ ಎಂದು ವಿವರಿಸಿದರು ಆ ಉದ್ಯಮಿ.

2017ರ ಅಕ್ಟೋಬರ್‌ನಲ್ಲಿ ಫಿಶಿಂಗ್ ದಂಧೆಯಲ್ಲಿ ತೊಡಗಿದ್ದ ಜಾರ್ಖಂಡ್‌ನ ಆ್ಯಂಡ್ರಿಲಾ ದಾಸ್ ಗುಪ್ತಾ ಎಂಬಾಕೆಯನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದರು. ಆ್ಯಂಡ್ರಿಲಾಳನ್ನು ಆಕೆಯ ಪತಿಯೇ ಹಿಡಿದುಕೊಟ್ಟಿದ್ದು ವಿಶೇಷ.‌

ಎಟಿಎಂ ಸ್ಕಿಮ್ಮಿಂಗ್

ಎಟಿಎಂ ಎಂಬುದು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆದರೆ, ಇಲ್ಲೂ ಸೈಬರ್ ವಂಚಕರು ತಮ್ಮ ಕರಾಮತ್ತು ತೋರುತ್ತಿದ್ದಾರೆ. ಗ್ರಾಹಕರನ್ನು ಬೆಂಬಿಡದೆ ಕಾಡುತ್ತಿರುವ ಅಪಾಯಗಳಲ್ಲಿ ಪ್ರಮುಖವಾದದ್ದು ಕಾರ್ಡ್‌ ಸ್ಕಿಮ್ಮಿಂಗ್. ಆಫ್ರಿಕಾ ಖಂಡದವರು ಈ ದಂಧೆಯಲ್ಲಿ ನಿಸ್ಸೀಮರು.

ನಕಲಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಲು ವಂಚಕರಿಗೆ ಈ ಸ್ಕಿಮ್ಮರ್‌ಗಳು ಸಹಾಯ ಮಾಡುತ್ತಾರೆ. ಆರೋಪಿಗಳು ಎಟಿಎಂ ಕೀಪ್ಯಾಡ್‌ನ ಮೇಲ್ಭಾಗದಲ್ಲಿ ಅದರ ಪ್ರತಿರೂಪವನ್ನೇ ಹೋಲುವ ಇನ್ನೊಂದು ಕೀಪ್ಯಾಡ್ ಹಾಕಿ ಬರುತ್ತಾರೆ. ಗ್ರಾಹಕನು ಎಟಿಎಂ ಘಟಕಕ್ಕೆ ಹೋಗಿ ಹಣ ಡ್ರಾ ಮಾಡಿಕೊಂಡು ಬಂದ ನಂತರ, ಆರೋಪಿಗಳು ತಾವು ಹಾಕಿದ್ದ ಕೀಪ್ಯಾಡ್ ತೆಗೆದುಕೊಳ್ಳುತ್ತಾರೆ. ಅದರಲ್ಲಿ, ಗ್ರಾಹಕ ಒತ್ತಿದ್ದ ಪಾಸ್‌ವರ್ಡ್‌ನ ಗುರುತು ಬಿದ್ದಿರುತ್ತದೆ. ಅದನ್ನು ಬಳಸಿಯೇ ನಕಲಿ ಕಾರ್ಡ್ ಸೃಷ್ಟಿಸಿ ಹಣ ದೋಚುತ್ತಾರೆ.

ಹಾಗೆಯೇ, ಲಾಟರಿ ಹಾಗೂ ಬಹುಮಾನದ ಆಮಿಷವೊಡ್ಡಿ ಗ್ರಾಹಕರಿಗೆ ವಂಚಿಸುವ ನೈಜೀರಿಯಾದ ದೊಡ್ಡ ಜಾಲವೇ ಇದೆ. ‘ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ’ ಎಂದು ವಂಚಕರು ಒಮ್ಮೆಲೇ ಮೂರ್ನಾಲ್ಕು ಸಾವಿರ ಮಂದಿಗೆ ಇ–ಮೇಲ್ ರವಾನಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವವರ ವಿವರ ಪಟ್ಟಿ ಮಾಡಿ, 2ನೇ ಸುತ್ತಿನಲ್ಲಿ ಅವರಿಗೆ ಕರೆ ಮಾಡಿ ನಂಬಿಕೆ ಗಿಟ್ಟಿಸಿಕೊಳ್ಳುವ ಹಾಗೆ ಮಾತನಾಡುತ್ತಾರೆ. ಲಾಟರಿ ಹಣ ತಮಗೆ ತಲುಪಿಸಲು ವಿವಿಧ ಶುಲ್ಕಗಳನ್ನು ಪಾವತಿಸಬೇಕು ಎಂದು ಸುಳ್ಳು ಹೇಳಿ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಾರೆ.
ಆ ನಂತರ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಬನಶಂಕರಿಯ ಗ್ರಾನೈಟ್ ಉದ್ಯಮಿ ಪ್ರಕಾಶ್ ನಿರಂಜನ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಾವು ಬ್ರಿಟನ್‌ನ ಶ್ರೀಮಂತ ಮನೆತನದವರು. ಅಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ಭಾರತಕ್ಕೆ ತರಲು ಸಹಾಯ ಮಾಡಿದಲ್ಲಿ, ನಿಮಗೆ ಪಾಲು ಕೊಡುತ್ತೇವೆ’ ಎಂದು ನಂಬಿಸಿದ್ದರು. ಆ ನಂತರ ವಿವಿಧ ಶುಲ್ಕಗಳ ಹೆಸರಿನಲ್ಲಿ ನಿರಂಜನ್‌ಗೆ ₹4.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಬುದ್ಧಿವಂತಿಕೆ ಪ್ರದರ್ಶಿಸಿದ ನಿರಂಜನ್, ‘ನನಗೆ ಯಾವ ಆಸ್ತಿಯಲ್ಲೂ ಪಾಲು ಬೇಡ’ ಎಂದು ಹೇಳಿ ಸಂಪರ್ಕ ಕಡಿತ ಮಾಡಿದ್ದರು. ಇಂತಹ ಅಪರಾಧವನ್ನು ಪೊಲೀಸ್ ಭಾಷೆಯಲ್ಲಿ ‘ನೈಜೀರಿಯನ್ 419 ಸ್ಕ್ಯಾಮ್’ ಅಥವಾ ‘419 ಅಡ್ವಾನ್ಸ್ ಫ್ರೀ ಫ್ರಾಡ್’ (419ಎಫ್‌ಎಫ್‌) ಎನ್ನಲಾಗುತ್ತಿದೆ.

ಸೈಬರ್ ಮತ್ತು ಮಹಿಳೆ

ಭಾರತದಲ್ಲಿ ಅಂತರ್ಜಾಲ ಜಾಲಾಡುವ ಮಹಿಳೆಯರ ಸಂಖ್ಯೆ 7 ಕೋಟಿಯಷ್ಟಿದೆ. ಏನಿಲ್ಲವೆಂದರೂ ಒಬ್ಬ ಮಹಿಳೆ ನಿತ್ಯ ಸರಾಸರಿ 24 ನಿಮಿಷವಾದರೂ ಆನ್‌ಲೈನ್‌ನಲ್ಲಿ ಕಾಲ ಕಳೆಯುತ್ತಿದ್ದಾಳೆ. ತನ್ನ ನಿತ್ಯ ಬದುಕಿನ ನಿರ್ವಹಣೆಗೆ ಕೂಡ ಆಕೆ ಅಂತರ್ಜಾಲವೆಂಬ ಮಹಾಸಾಗರವನ್ನು ಅವಲಂಬಿಸಿದ್ದಾಳೆ’ ಎಂದು ‘ಗೂಗಲ್’ನ ಇತ್ತೀಚಿನ ಸಮೀಕ್ಷೆ ಹೇಳುತ್ತದೆ.

ಸುಮಾರು 4.80 ಕೋಟಿ ಮಹಿಳೆಯರು ಪ್ರತಿದಿನ ತಮ್ಮ ಇ-ಮೇಲ್ ಖಾತೆ ಪರಿಶೀಲಿಸುತ್ತಿದ್ದಾರೆ, ಸಾಮಾಜಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ ಹಾಗೂ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಮನೆ, ಸೈಬರ್ ಕೆಫೆ, ಕಚೇರಿ ಇಲ್ಲವೇ ತಮ್ಮ ಸ್ಮಾರ್ಟ್‌ಫೋನ್‌ನಿಂದಲೇ ವನಿತೆಯರು ಇಂಟರ್‌ನೆಟ್ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ. ಸಮೀಕ್ಷೆಗೆ ಒಳಪಡಿಸಿದ 1 ಸಾವಿರ ಮಹಿಳೆಯರಲ್ಲಿ,ಶೇ 75ರಷ್ಟು ಮಂದಿ ಚಾಟಿಂಗ್‌ಪ್ರಿಯರಾಗಿದ್ದಾರೆ. ಆದರೆ, ಈ ಇಷ್ಟವೇ ಕೆಲವ
ರನ್ನು ಸಮಸ್ಯೆಯ ಕೂಪಕ್ಕೆ ತಂದು ನಿಲ್ಲಿಸಿದೆ. ಇಲ್ಲೊಂದು ಪ್ರಕರಣ ನೋಡಿ...

ಆಕೆ ಕೊಡಗಿನ ಪಿಯುಸಿ ವಿದ್ಯಾರ್ಥಿನಿ. ಸಿಕಂದರಾಬಾದ್‌ನಲ್ಲಿದ್ದ ತನ್ನ ಗೆಳೆಯನೊಂದಿಗೆ ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಒಂದು ದಿನ ಆಕೆಯ ಮೊಬೈಲ್‌ಗೆ ಗೆಳೆಯನ ದೊಡ್ಡಪ್ಪ ಶೈಲೇಂದ್ರನಿಂದ ಸಂದೇಶ ಬಂತು. ಅದರಲ್ಲಿ ಅಶ್ಲೀಲ ಪದಗಳು ಇದ್ದುದರಿಂದ ವಿದ್ಯಾರ್ಥಿನಿ ಬೈದಿದ್ದಳು. ಅಷ್ಟಕ್ಕೇ ಕುಪಿತಗೊಂಡ ಶೈಲೇಂದ್ರ,  ಫೇಸ್‌ಬುಕ್‌ನಲ್ಲಿದ್ದ ವಿದ್ಯಾರ್ಥಿನಿಯ ಫೋಟೊ ಡೌನ್‌ಲೋಡ್ ಮಾಡಿದ್ದ. ಅದೇ ರೀತಿ ಅಂತರ್ಜಾಲದಲ್ಲಿ ಇನ್ನಾವುದೋ
ಯುವತಿಯ ಬೆತ್ತಲೆ ಫೋಟೊವನ್ನು ತೆಗೆದುಕೊಂಡಿದ್ದ. ಕೊನೆಗೆ, ಎರಡೂ ಫೋಟೊಗಳನ್ನು ಜೋಡಿಸಿ ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್ ಮಾಡಿದ್ದ. ಅದನ್ನು ನೋಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಳು. ಕೊನೆಗೆ, ಗೆಳೆಯಕೊಟ್ಟ ದೂರಿನ ಅನ್ವಯ ತನಿಖೆ ಪ್ರಾರಂಭಿಸಿದ್ದ ಬೆಂಗಳೂರು ಸೈಬರ್ ಪೊಲೀಸರು, ಸಿಕಂದರಾಬಾದ್‌ನಲ್ಲಿ ಬ್ಯಾಂಕ್‌ ವ್ಯವಸ್ಥಾಪಕನಾಗಿದ್ದ 58 ವರ್ಷ ವಯಸ್ಸಿನ ಶೈಲೇಂದ್ರನನ್ನು ಬಂಧಿಸಿದರು.

ಇಂಥ ಶೋಷಣೆಗಳಿಗೆ ಈಗ ಚಿತ್ರನಟಿಯರು ಹಾಗೂ ರೂಪದರ್ಶಿಯರು ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಮಹಿಳೆಯರ ಸುರಕ್ಷತೆ ಬಗ್ಗೆ ನಮ್ಮೊಂದಿಗೆ ಮಾತನಾಡಿದ ಸೈಬರ್ ತಜ್ಞರೊಬ್ಬರು, ‘ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ಯುವತಿಯರು, ತಮ್ಮ ಖಾತೆಗಳ ಸೆಕ್ಯುರಿಟಿ ಸೆಟ್ಟಿಂಗ್ಸ್‌ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ತಮ್ಮ ಹಾಗೂ ಕುಟುಂಬದ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಹೇಳಿಕೊಳ್ಳಬಾರದು. ಅಪರಿಚಿತರೊಂದಿಗೆ ವ್ಯವಹರಿಸುವುದು
ಹಾಗೂ ತಮ್ಮ ಚಟುವಟಿಕೆಗಳನ್ನು ಜಾಲತಾಣಗಳ ಮೂಲಕ ಪ್ರಪಂಚಕ್ಕೇ ಸಾರುತ್ತಹೋಗುವುದು ಅಪಾಯಗಳನ್ನು ಮೈಮೇಲೆ ಎಳೆದುಕೊಂಡಂತೆ’ ಎಂದು ಎಚ್ಚರಿಸಿದರು.

ತನಿಖೆ ಸವಾಲು–ಪೊಲೀಸರು ಸುಸ್ತು

ಭಾರತದಲ್ಲಿ ಈಗ ಎಲ್ಲ ಯೋಜನೆಗಳನ್ನು ಇ-ಆಡಳಿತಕ್ಕೆ ಒಳಪಡಿಸಲಾಗುತ್ತಿದೆ. ಜೊತೆಗೆ ಬ್ಯಾಂಕುಗಳ ವಹಿವಾಟು ಕೂಡ ಹೆಚ್ಚಾಗಿ ಅಂತರ್ಜಾಲದ ಮೂಲಕವೇ ನಡೆಯುತ್ತಿದೆ. ನಗದುರಹಿತ ವಹಿವಾಟು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸಾಕಾರಕ್ಕೆ ಮುಂದಡಿ ಇಟ್ಟ ಕರ್ನಾಟಕ, ಒಂದೇ ವರ್ಷದಲ್ಲಿ ಸೈಬರ್ ವಂಚಕರ ಕೈಚಳಕಕ್ಕೆ ಸುಸ್ತು ಹೊಡೆದು ಹೋಗಿದೆ. 2017ರಲ್ಲಿ ಆನ್‌ಲೈನ್ ವಂಚನೆ ಸಂಬಂಧ ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪೊಲೀಸರು ತಂತ್ರಜ್ಞಾನ ಬಳಕೆಯಲ್ಲಿ ಪರಿಣತಿ ಪಡೆಯುತ್ತಿದ್ದರೂ ಸೈಬರ್‌ ವಂಚಕರು ಅವರಿಗಿಂತ ವೇಗದಲ್ಲಿ ಅಪರಾಧದ ಹೊಸ ಮಾದರಿಗಳನ್ನು ಸೃಷ್ಟಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಳ್ಳದೆ ಬಾಯಿಮಾತಿನ ಭರವಸೆ ಕೊಟ್ಟು ಕಳುಹಿಸುತ್ತಾರೆ.

‘ಕಿಡಿಗೇಡಿಗಳು ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತು ಇಲ್ಲಿನವರಿಗೆ ವಂಚಿಸುತ್ತಿರುತ್ತಾರೆ. ಹೀಗಾಗಿ, ಈ  ಪ್ರಕರಣಗಳನ್ನು ಭೇದಿಸುವುದು ತುಂಬ ಕಷ್ಟ. ಆದರೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಮೊದಲ ಸಲ ಹಣ ಕಳದುಕೊಂಡಾಗಲೇ ನಾಗರಿಕರು ದೂರು ಕೊಟ್ಟರೆ, ನಾವು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಬ್ಯಾಂಕ್ ಖಾತೆಯನ್ನು ಬಂದ್ ಮಾಡಿಸುತ್ತೇವೆ. ಆ ನಂತರ ವಂಚಕನಿಗೆ ಖಾತೆಯಿಂದ ಹಣ ತೆಗೆದು
ಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಸಲಹೆ ನೀಡುತ್ತಾರೆ ಪ್ರವೀಣ್ ಸೂದ್.

ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳಲ್ಲೂ ಮಾರ್ಚ್ 31ರೊಳಗೆ ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವಂತೆ ಗಡುವು ನೀಡಿದೆ. ಸೈಬರ್‌ ವಿಧಿವಿಜ್ಞಾನ ಸಲಕರಣೆ ಮತ್ತು ಸಂಪನ್ಮೂಲ ಖರೀದಿಗೆ ರಾಜ್ಯ ಸರ್ಕಾರ ₹ 20 ಕೋಟಿ ನೀಡಿದೆ. ಸದ್ಯ ರಾಜ್ಯದ ಆರೂ ವಲಯಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಸೈಬರ್ ಠಾಣೆ ಪ್ರಾರಂಭಿಸಲು ಚಿಂತನೆ ನಡೆದಿದೆ.

ರಾಜಕೀಯ ವೇದಿಕೆಯೂ ಹೌದು

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ರಾಜಕೀಯ ನಾಯಕರ ನಿದ್ದೆ ಕೆಡಿಸಿರುವುದಂತೂ ಸುಳ್ಳಲ್ಲ. ಯಾರು? ಯಾವಾಗ? ಹೇಗೆ? ತೇಜೋವಧೆಗೆ ಗುರಿಯಾಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ.

ಜನಪ್ರತಿನಿಧಿಗಳು ‘ಟ್ವಿಟರ್ ವಾರ್’ ಮೂಲಕ ಒಬ್ಬರ ಕಾಲನ್ನೊಬ್ಬರು ಎಳೆಯುವುದೂ ಈಗ ಸಾಮಾನ್ಯವಾಗಿದೆ. ಸರ್ಕಾರ ಹಾಗೂ ರಾಜಕಾರಣಿಗಳ ತೇಜೋವಧೆ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ 2017ರಲ್ಲಿ 22 ದೂರುಗಳು ದಾಖಲಾಗಿವೆ.

ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ದೂರುವುದಕ್ಕೂ ಮುನ್ನ, ಸೈಬರ್ ಕಳ್ಳರ ಬಗ್ಗೆ ಜನ ಎಚ್ಚರಗೊಳ್ಳಬೇಕಿದೆ. ಪೊಲೀಸರು ಎಷ್ಟೇ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದರೂ, ಜನ ಮೋಸ ಹೋಗುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಸಾರ್ವಜನಿಕರು ಇನ್ನಾದರೂ ಜಾಗೃತರಾಗಲಿ.\

ಸೈಬರ್ ವಾರ್‌ಫೇರ್

ದಿನಬೆಳಗಾದರೆ, ಇರಾಕ್‌ನಲ್ಲಿ ಐಎಸ್ ಉಗ್ರರು ರಕ್ತಪಾತ ನಡೆಸುತ್ತಿದ್ದ ಸುದ್ದಿಗಳನ್ನು ಓದುತ್ತಿದ್ದ ಕಾಲವದು. ಆದರೆ, ಆ ಉಗ್ರರ ಟ್ವಿಟರ್ ಖಾತೆ ಬೆಂಗಳೂರಿನಿಂದಲೇ ನಿರ್ವಹಣೆ ಆಗುತ್ತಿದೆ ಎಂದು ವಿದೇಶಿ ವಾಹಿನಿಯ ಸುದ್ದಿ ಕೇಳಿ ಭಾರತವೇ ಬೆಚ್ಚಿ ಬಿದ್ದಿತ್ತು. ಟ್ವಿಟರ್ ಖಾತೆಯ ಸೂತ್ರಧಾರ ಮೆಹದಿ ಮಸ್ರೂರ್ ಬಿಸ್ವಾಸ್ ಎಂಬಾತನನ್ನು 2015ರಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರೇ ಬಂಧಿಸಿದ್ದರು.

2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಉಗ್ರರು ಸ್ಯಾಟಲೈಟ್ ಫೋನ್, ಜಿಪಿಎಸ್ ಹಾಗೂ ಗೂಗಲ್ ಅರ್ಥ್ ಬಳಸಿದ್ದರು. ಅವರು ಸಹ ಅಂತರ್ಜಾಲವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವು ನಿದರ್ಶನಗಳಷ್ಟೆ. ಇಂಥ ಯುದ್ಧಗಳಿಗೆ ‘ಸೈಬರ್ ವಾರ್‌
ಫೇರ್’ ಅಥವಾ ಇನ್ಫರ್ಮೇಷನ್ ವಾರ್ (ಮಾಹಿತಿ ಯುದ್ಧ) ಎನ್ನಲಾಗುತ್ತದೆ. ಇದರಡಿ ಬರುವ ಸೈಬರ್ ಭಯೋತ್ಪಾದನೆ ಇಂದು ಜಾಗತಿಕ ಮಟ್ಟ
ದಲ್ಲಿ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಈಗಿನ ಪರಿಸ್ಥಿತಿಯಲ್ಲಿ ಒಂದು ದೇಶದ ಬಲ ಕುಗ್ಗಿಸಲು ಯುದ್ಧವನ್ನೇ ಮಾಡಬೇಕೆಂದಿಲ್ಲ. ಉಗ್ರರು ಎಸೆಯುವ ಒಂದು ವೈರಸ್, ದೇಶದ ಆಡಳಿತ ವ್ಯವಸ್ಥೆಯೇ ನೆಲಕಚ್ಚುವಂತೆ ಮಾಡಿಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಲ್‌ವೇರ್‌ಗಳ (ಕುತಂತ್ರಾಂಶ) ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. 2017ರಲ್ಲಿ ಒಟ್ಟು 43 ಕೋಟಿ ಮಾಲ್‌ ವೇರ್‌ಗಳು ಪತ್ತೆಯಾಗಿದ್ದವು. ಈಗ ಸರ್ಕಾರಿ ದಾಖಲೆಗಳು ಹೆಚ್ಚು ದಾಳಿಗೆ ಒಳಗಾಗುತ್ತಿವೆ. ಸೈಬರ್ ಅಪರಾಧಿಗಳು ಒಂದೇ ದಾಳಿಗೆ 19 ಕೋಟಿ ದಾಖಲೆಗಳನ್ನು ನಾಶಪಡಿಸಿರುವ ಉದಾಹರಣೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT