ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನೋಡಿ 9.3 ಕೆ.ಜಿ ಚಿನ್ನ ದೋಚಿದ್ದ ಗ್ಯಾಂಗ್!

ಕದ್ದ ಒಡವೆ ಕೊಲಂಬೊದಲ್ಲಿ ಮಾರಾಟ * ಚೀನಾದಲ್ಲಿ ಗುಂಡು ನಿರೋಧಕ ಜಾಕೆಟ್ ಖರೀದಿ
Last Updated 23 ಮಾರ್ಚ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಕೃತ್ಯ ಹಾಗೂ ಪೊಲೀಸ್ ತನಿಖೆಗೆ ಸಂಬಂಧಿಸಿದ ಸಿನಿಮಾಗಳಿಂದ ಪ್ರಚೋದನೆ ಪಡೆದು, ನಾಲ್ಕು ಚಿನ್ನಾಭರಣ ಮಳಿಗೆಗಳಲ್ಲಿ 9 ಕೆ.ಜಿ, 300 ಗ್ರಾಂ ಚಿನ್ನಾಭರಣ ದೋಚಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಉತ್ತರ ವಿಭಾಗದ ಪೊಲೀಸರು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ಇದೇ ಫೆ.19ರ ರಾತ್ರಿ ರಾಜಾಜಿನಗರ 1ನೇ ಬ್ಲಾಕ್‌ನ ‘ಚೆಮ್ಮನೂರ್ ಜ್ಯುವೆಲರ್ಸ್‌’ ಬಳಿ ಬಂದಿದ್ದ ಈ ನಾಲ್ವರು, ಮಳಿಗೆ ಬಳಿ ಪೆಟ್ರೋಲ್ ಬಾಂಬ್ ಎಸೆದು ಚಿನ್ನಾಭರಣ ದೋಚಲು ಯತ್ನಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ರಿವಾಲ್ವರ್‌ನಿಂದ ಗುಂಡಿನ ದಾಳಿ ನಡೆಸಿದ್ದರಿಂದ ಕೃತ್ಯ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಮಾರ್ಚ್ 12ರಂದು ದೇವನಹಳ್ಳಿ ರೈಲ್ವೆ ಪ್ರದೇಶದಲ್ಲಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಕೊತ್ತನೂರಿನ ಶಿವಮೂರ್ತಿ ಅಲಿಯಾಸ್ ಸಾಮ್ರಾಟ್ (30), ಆತನ ತಮ್ಮ ಶಂಕರ್ (26), ವೈಟ್‌ಫೀಲ್ಡ್‌ನ ನಿವೇಶ್ ಕುಮಾರ್ (29) ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಗದೀಶ್ (34) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ₹ 43 ಲಕ್ಷದ ಚಿನ್ನಾಭರಣ, ನಾಲ್ಕು ಕಾರುಗಳು, ನಾಲ್ಕು ಬೈಕ್‌ಗಳು ಹಾಗೂ ಗುಂಡು ನಿರೋಧಕ ಜಾಕೆಟ್‌ಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದರೋಡೆಗಿಳಿದ ಜ್ಯೋತಿಷಿಯ ಮಕ್ಕಳು!: ಶಿವು ಮತ್ತು ಶಂಕರ್, ಅಶೋಕ್‌ಕುಮಾರ್ ಎಂಬ ಜ್ಯೋತಿಷಿಯ ಮಕ್ಕಳು. 2002ರಲ್ಲಿ ರಾಮಮೂರ್ತಿನಗರದ ಜ್ಯೂಬಿಲಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಶಿವು, ಪರೀಕ್ಷೆಯಲ್ಲಿ ಕಾಪಿ ಮಾಡಿ ಡಿಬಾರ್ ಆಗುತ್ತಾನೆ. ಆ ನಂತರ ವಿದ್ಯಾಭ್ಯಾಸ ಬಿಟ್ಟು ತಂದೆಯ ಜತೆ ಜ್ಯೋತಿಷ ಹೇಳಲು ಶುರು ಮಾಡುತ್ತಾನೆ. ಆತನ ತಮ್ಮ ಶಂಕರ್, ಬಿ.ಕಾಂವರೆಗೆ ವ್ಯಾಸಂಗ ಮುಂದುವರಿಸುತ್ತಾನೆ.

ಕ್ರಮೇಣ ವಿಲಾಸಿ ಜೀವನಕ್ಕೆ ಮಾರು ಹೋಗುವ ಸೋದರರು, ಹಾಲಿವುಡ್ ಸಿನಿಮಾಗಳನ್ನು ನೋಡಿ ಬ್ಯಾಂಕ್‌ಗಳಿಗೆ ಕನ್ನ ಹಾಕಲು ಸಂಚು ರೂಪಿಸುತ್ತಾರೆ. ಅದು ಸುಲಭವಲ್ಲ ಎಂಬುದು ಅರಿವಾಗಿ, ಆಭರಣ ಮಳಿಗೆಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ.

2011ರಲ್ಲಿ ಸೋದರರು ರಾಮಮೂರ್ತಿನಗರದ ‘ಸಂತೋಷ್ ಜ್ಯುವೆಲರ್ಸ್’ನಲ್ಲಿ ದರೋಡೆ ಮಾಡುತ್ತಾರೆ. ಮರುವರ್ಷವೇ ಪೀಣ್ಯ ಹಾಗೂ ಸುಬ್ರಹ್ಮಣ್ಯನಗರದ ಚೆಮ್ಮನೂರ್ ಜ್ಯುವೆಲರ್ಸ್‌ ಮಳಿಗೆಗಳಲ್ಲಿ ದೋಚುತ್ತಾರೆ. ಈ ಮೂರು ಕಡೆಗಳಲ್ಲಿ ಇವರಿಗೆ ಎಂಟು ಕೆ.ಜಿಯಷ್ಟು ಚಿನ್ನ ದೊರೆಯುತ್ತದೆ. ಅವುಗಳನ್ನು ತೆಗೆದುಕೊಂಡು ಶ್ರೀಲಂಕಾದ ಕೊಲಂಬೊಗೆ ತೆರಳುವ ಅವರು, ವಿಕಾಸ್ ಶರ್ಮಾ ಎಂಬ ಆಭರಣ ವ್ಯಾಪಾರಿಗೆ ಮಾರಾಟ ಮಾಡಿ ಬರುತ್ತಾರೆ.‌

ಹೀಗೆ ಗಳಿಸಿದ ಹಣದಲ್ಲಿ ಶಿವು ಫಾರ್ಚ್ಯೂನರ್ ಹಾಗೂ ಐ–20 ಕಾರುಗಳನ್ನು ಖರೀದಿಸುತ್ತಾನೆ. ಜತೆಗೆ, ಯಲಹಂಕದಲ್ಲಿ ‘ಆರ್‌.ಎಸ್.ಬ್ಯುಸಿನೆಸ್ ಸಲ್ಯೂಷನ್ಸ್‌’ ಹೆಸರಿನಲ್ಲಿ ಬೃಹತ್ ಕಂಪನಿ ತೆರೆದು, ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸುತ್ತಾನೆ. ಬಿ.ಕಾಂ ಪದವಿ ಪಡೆದಿದ್ದ ಶಂಕರ್, ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಪ್ರತಿಷ್ಠಿತ ವಿದ್ಯಾಸಂಸ್ಥೆಯನ್ನು ಸೇರುತ್ತಾನೆ.

ಹೀಗಿರುವಾಗ, ವ್ಯವಹಾರದಲ್ಲಿ ಶಿವುಗೆ ಭಾರೀ ನಷ್ಟ ಉಂಟಾಗುತ್ತದೆ. ಶಂಕರ್ ಸಹ ಪೂರ್ವಭಾವಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಾನೆ. ನಂತರ ಇಬ್ಬರೂ ದೊಡ್ಡ ಮಟ್ಟದಲ್ಲಿ ದರೋಡೆ ಮಾಡಿಯೇ ಸಂಪಾದನೆ ಮಾಡಲು ನಿರ್ಧರಿಸುತ್ತಾರೆ. ಮೊದಲು ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ಸಲಾಕೆ, ಪೆಪ್ಪರ್‌ ಸ್ಪ್ರೆಗಳಂಥ ವಸ್ತುಗಳನ್ನು ಬಿಸಾಡಿ, ತಾವೇ ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸುತ್ತಾರೆ. ಅಲ್ಲದೆ, ಆಭರಣ ಮಳಿಗೆಯ ಸೆಕ್ಯುರಿಟಿ ಗಾರ್ಡ್‌ಗಳು ಬಂದೂಕಿನಿಂದ ಗುಂಡು ಹಾರಿಸಿದರೆ, ಅವು ತಮ್ಮ ದೇಹಕ್ಕೆ ತಗುಲಬಾರದು ಎಂದು ಚೀನಾದಿಂದ ಗುಂಡು ನಿರೋಧಕ ಜಾಕೆಟ್‌ಗಳನ್ನೂ ತರಿಸಿಕೊಳ್ಳುತ್ತಾರೆ!

ಮೂರ್ನಾಲ್ಕು ಭೇಟಿಗಳ ಬಳಿಕ ಶ್ರೀಲಂಕಾದ ವಿಕಾಸ್ ಶರ್ಮಾ, ‘ಒಡವೆ ಮಾರಲು ಇಷ್ಟೊಂದು ದೂರ ಯಾಕೆ ಬರುತ್ತೀರಾ? ಚೆನ್ನೈನ ಸುಭಾಷ್‌ ಚಂದ್ರಬೋಸ್ ರಸ್ತೆಯಲ್ಲಿ ನನ್ನ ಸ್ನೇಹಿತ ಜಗದೀಶ್ ಬೆಳ್ಳಿ ಕರಗಿಸುವ ಅಂಗಡಿ ಇಟ್ಟುಕೊಂಡಿದ್ದಾನೆ. ಆತನನ್ನು ಭೇಟಿಯಾಗಿ ನನ್ನ ಹೆಸರನ್ನು ಹೇಳಿ. ವಿಲೇವಾರಿಗೆ ಸಹಾಯ ಮಾಡುತ್ತಾನೆ’ ಎಂದಿದ್ದ. ಈ ಮೂಲಕ ಸೋದರರಿಗೆ ಜಗದೀಶ್‌ನ ಪರಿಚಯವಾಯಿತು. ಈತ ವೈಟ್‌ಫೀಲ್ಡ್‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ನಿವೇಶ್‌ನನ್ನೂ ಶಿವುಗೆ ಪರಿಚಯ ಮಾಡಿಸಿದ್ದ.

ದೊಡ್ಡ ದೊಡ್ಡ ಆಭರಣಗಳಲ್ಲಿ ಸಲೀಸಾಗಿ ದರೋಡೆ ಮಾಡುವ ಸಹೋದರರ ಸಾಮರ್ಥ್ಯ ಕಂಡ ಜಗದೀಶ್ ಹಾಗೂ ನಿವೇಶ್, ತಾವೂ ಅವರೊಟ್ಟಿಗೆ ಸೇರಿಕೊಂಡಿದ್ದರು. ನಂತರ ದೇವನಹಳ್ಳಿ ಹೊರವಲಯದ ವಿನಾಯಕನಗರದಲ್ಲಿ ಮನೆ ಬಾಡಿಗೆ ಪಡೆದು ನಾಲ್ವರೂ ಒಟ್ಟಿಗೇ ನೆಲೆಸಿದ್ದರು.

ಸರಣಿ ಕೃತ್ಯಕ್ಕೆ ಸಂಚು: 2017ರ ಫೆ.1ರ ರಾತ್ರಿ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದ ಆರೋಪಿಗಳು, ಅಲ್ಲಿನ ಚೆಮ್ಮನೂರ್ ಜ್ಯುವೆಲರ್ಸ್ ಮಳಿಗೆಯಲ್ಲಿ 600 ಗ್ರಾಂ ಆಭರಣ ದೋಚಿದ್ದರು. ಅಲ್ಲದೆ, ಸೆಕ್ಯುರಿಟಿ ಗಾರ್ಡ್‌ಗೆ ಹೊಡೆದು ರೈಫಲ್ ಸಹ ಕಿತ್ತುಕೊಂಡು ಬಂದಿದ್ದರು. ಅಲ್ಲಿ ನಿರೀಕ್ಷಿಸಿದಷ್ಟು ಮಾಲು ಸಿಗದಿದ್ದಾಗ ಬೇಸರಗೊಂಡ ಅವರು, ಮುಂದೆ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಬೇಕೆಂದು ವ್ಯವಸ್ಥಿತ ತಯಾರಿ ಮಾಡಿಕೊಂಡರು.

ಆರೋಪಿಗಳು ಇದೇ ಫೆ.19ರ ಸಂಜೆ ಏಳು ಪೆಟ್ರೋಲ್ ಬಾಂಬ್‌ಗಳನ್ನು ತೆಗೆದುಕೊಂಡು ಮೂರು ಬೈಕ್‌ಗಳಲ್ಲಿ ಸುಬ್ರಹ್ಮಣ್ಯನಗರದ ಚೆಮ್ಮನೂರ್ ಜ್ಯುವೆಲರ್ಸ್‌ ಬಳಿ ಬಂದಿದ್ದರು. ಜನರ ಓಡಾಟ ಕಡಿಮೆಯಾಗುವವರೆಗೂ ಕಾದು, 7.30ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ್ದರು. ಒಬ್ಬಾತ ಸೆಕ್ಯುರಿಟಿ ಗಾರ್ಡ್‌ಗೆ ಮಚ್ಚಿನಿಂದ ಹಲ್ಲೆ ನಡೆಸಿದರೆ, ಇನ್ನುಳಿದವರು ಜನರನ್ನು ಬೆದರಿಸಲು ಪೆಟ್ರೋಲ್ ಬಾಂಬ್‌ಎಸೆದಿದ್ದರು. ಈ ಹಂತದಲ್ಲಿ ಇನ್ನೊಬ್ಬ ಸೆಕ್ಯುರಿಟಿ ಗಾರ್ಡ್ ಇವರತ್ತ ಗುಂಡಿನ ದಾಳಿ ನಡೆಸಿದ್ದರಿಂದ ಎಲ್ಲರೂ ಪರಾರಿಯಾಗಿದ್ದರು.

**

ಮೊಬೈಲ್ ಬಳಸಲ್ಲ, ಸಾಕ್ಷ್ಯ ಉಳಿಸಲ್ಲ

‘ಇವರು ಕೃತ್ಯಕ್ಕೆ ಹೋಗುವಾಗ ಮೊಬೈಲ್ ಬಳಸುವುದಿಲ್ಲ. ಸ್ಥಳದಲ್ಲೂ ಯಾವುದೇ ಸಾಕ್ಷ್ಯಗಳನ್ನು ಉಳಿಸುವುದಿಲ್ಲ. ಬೆರಳಚ್ಚು ಹಾಗೂ ಪಾದದ ಮುದ್ರೆ ಮೂಡಬಾರದೆಂದು ಗ್ಲೌಸು, ಬೂಟುಗಳನ್ನು ಹಾಕಿಕೊಳ್ಳುತ್ತಾರೆ. ಹಾಗೆಯೇ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಚಹರೆ ಕಾಣಿಸಬಾರದೆಂದು ಮಂಕಿ ಕ್ಯಾಪ್ ಧರಿಸುತ್ತಾರೆ. ಕೃತ್ಯ ಎಸಗಿದ ಕೂಡಲೇ ಸಮೀಪದ ನಿರ್ಜನ ಪ್ರದೇಶಕ್ಕೆ ಹೋಗಿ, ಬೈಕ್‌ಗಳ ನೋಂದಣಿ ಫಲಕಗಳನ್ನು ಹಾಗೂ ತಮ್ಮ ಬಟ್ಟೆಗಳನ್ನು ಬದಲಾಯಿಸಿಬಿಡುತ್ತಾರೆ. ಹೀಗಾಗಿಯೇ ಏಳು ವರ್ಷಗಳಿಂದ ಕೃತ್ಯ ಎಸಗುತ್ತಿದ್ದರೂ, ಅವರ ಬಗ್ಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ’ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

**

ತಮ್ಮನ ಮೇಲೆಯೇ ಬಿತ್ತು ಬಾಂಬ್!

ರಾಜಾಜಿನಗರದ ಮಳಿಗೆ ಬಳಿ ಶಿವು ಎಸೆದಿದ್ದ ಪೆಟ್ರೋಲ್ ಬಾಂಬ್, ಆತನ ತಮ್ಮನ ಮೇಲೆಯೇ ಬಿದ್ದಿತ್ತು. ಇದರಿಂದ ಕಾಲು ಸಂಪೂರ್ಣ ಸುಟ್ಟು ಹೋಗಿತ್ತು. ಪೊಲೀಸರು ಎಲ್ಲ ಆಸ್ಪತ್ರೆಗಳಲ್ಲೂ  ಹುಡುಕಾಟ ನಡೆಸುತ್ತಿರಬಹುದೆಂದು ಆತ ತಮ್ಮನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದೆ, ಧರ್ಮಪುರಿಯ ಆಸ್ಪತ್ರೆಗೆ ದಾಖಲಿಸಿದ್ದ. 15 ದಿನ ಚಿಕಿತ್ಸೆ ಪಡೆದ ಆತ, ಮಾರ್ಚ್ 5ರಂದು ನಗರಕ್ಕೆ ವಾಪಸಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

**

ಜನಗಣತಿ ನೆಪದಲ್ಲಿ ಮನೆ ಶೋಧ!

ದೇವನಹಳ್ಳಿ ಹಾಗೂ ವಿಶ್ವನಾಥಪುರದ ನಡುವೆ ಬರುವ 14 ಹಳ್ಳಿಗಳಲ್ಲಿ ಪೊಲೀಸರು ಜನಗಣತಿ ಮಾಡುವವರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಿದ್ದಾರೆ!

ಆರೋಪಿಗಳ ಪತ್ತೆಗೆ ಡಿಸಿಪಿ ಚೇತನ್‌ ಸಿಂಗ್ ರಾಥೋಡ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳು ರಚನೆಯಾಗಿದ್ದವು. ಪ್ರತಿ ತಂಡಕ್ಕೂ ಪ್ರತ್ಯೇಕ ಕೆಲಸಗಳನ್ನು ಹಂಚಲಾಗಿತ್ತು.

ಬಸ್ ಹಾಗೂ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣ, ಹೋಟೆಲ್‌, ಲಾಡ್ಜ್‌, ಪಾರ್ಕಿಂಗ್ ಪ್ರದೇಶಗಳು, ಸ್ಮಶಾನಗಳು.. ಹೀಗೆ, ಮೊದಲ 15 ದಿನ ಎಲ್ಲ ಪ್ರದೇಶಗಳಲ್ಲೂ ಶೋಧ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಹೀಗಿರುವಾಗ, ಸಿ.ಸಿ ಟಿ.ವಿ ಕ್ಯಾಮೆರಾಗಳ ಪರಿಶೀಲನೆಗೆ ನಿಯೋಜನೆಗೊಂಡಿದ್ದ ತಂಡವು ಆರೋಪಿಗಳು ಸಾಗಿದ ಮಾರ್ಗವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.

ಮೂರು ಪಲ್ಸರ್ ಬೈಕ್‌ಗಳಲ್ಲಿ ಆರೋಪಿಗಳು ಹೋಗುತ್ತಿರುವ ದೃಶ್ಯ ರಾಜಾಜಿನಗರ ಮುಖ್ಯರಸ್ತೆಯ ಸಿ.ಸಿ ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು. ಅವರೇ ದರೋಡೆಕೋರರು ಎಂಬುದನ್ನು ಹಲ್ಲೆಗೊಳಗಾದ ಸೆಕ್ಯುರಿಟಿ ಗಾರ್ಡ್ ಸಹ ಖಚಿತಪಡಿಸಿದ್ದರು. ನಂತರ ಆ ಮಾರ್ಗದ ಎಲ್ಲ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾ ಹೋದ ಸಿಬ್ಬಂದಿಗೆ, ಆರೋಪಿಗಳು ದೇವನಹಳ್ಳಿವರೆಗೆ ಸಾಗಿರುವುದು ಗೊತ್ತಾಗಿತ್ತು. ಆದರೆ, ಅಲ್ಲಿಂದ ಮುಂದೆ ಸಿ.ಸಿ ಟಿ.ವಿ ಕ್ಯಾಮೆರಾಗಳು ಇಲ್ಲವಾದ್ದರಿಂದ, ಯಾವ ಕಡೆ ಹೋದರು ಎಂಬುದು ಗೊತ್ತಾಗಿರಲಿಲ್ಲ.

ಬಳಿಕ ಪೊಲೀಸರು ಅದೇ ಮಾರ್ಗದಲ್ಲಿ ಹೋದಾಗ ವಿಶ್ವನಾಥಪುರದ ಕಟ್ಟಡವೊಂದರಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಇರುವುದು ಗೊತ್ತಾಗಿತ್ತು. ಆ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ವಿಶ್ವನಾಥಪುರ ದಾಟಿ ಹೋಗಿಲ್ಲ ಎಂಬುದು ಖಾತ್ರಿಯಾಗಿತ್ತು. ಕೂಡಲೇ ದೇವನಹಳ್ಳಿ–ವಿಶ್ವನಾಥಪುರ ನಡುವಿನ ಹಳ್ಳಿಗಳಲ್ಲಿ ಪೊಲೀಸರು ಶೋಧ ಪ್ರಾರಂಭಿಸಿದ್ದರು.

22 ಜನ ಪೊಲೀಸರು ಪ್ರತಿ ಮನೆ ಮನೆಗೂ ಹೋಗಿ, ‘ನಾವು ಜನಗಣತಿ ಮಾಡಲು ಬಂದಿದ್ದೇವೆ. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ’ ಎಂದು ಕಾರ್ಯಾಚರಣೆ ಶುರು ಮಾಡಿದರು. ಬೀಗ ಹಾಕಿರುವ ಮನೆಗಳು ಕಂಡುಬಂದರೆ, ಅಕ್ಕಪಕ್ಕದ ನಿವಾಸಿಗಳಿಂದ ಅವರ ‌ಮಾಹಿತಿ ‍ಪಡೆದುಕೊಳ್ಳುತ್ತಿದ್ದರು. ಹೀಗೆ ಸಾಗುತ್ತಾ
ಮಾರ್ಚ್ 12ರಂದು ಆರೋಪಿಗಳ ಮನೆ ಬಾಗಿಲಿಗೂ ಹೋದರು.

ಬೀಗ ಹಾಕಿದ್ದರಿಂದ ಆ ಮನೆ ಮಾಲೀಕರನ್ನು ವಿಚಾರಣೆ ನಡೆಸಿದಾಗ, ‘ನಾಲ್ವರು ವ್ಯಕ್ತಿಗಳು ಒಂದು ವರ್ಷದಿಂದ ನಮ್ಮ ಮನೆಯಲ್ಲೇ ನೆಲೆಸಿದ್ದಾರೆ. ವಾರಕ್ಕೊಮ್ಮೆ ಬಂದು ಹೋಗುತ್ತಾರೆ. ಅವರ ಕೆಲಸದ ಬಗ್ಗೆ ಗೊತ್ತಿಲ್ಲ’ ಎಂದು ಅವರು ಹೇಳಿದ್ದರು. ಆ ನಂತರ ಮಾಲೀಕರಿಗೆ ತಮ್ಮ ಅಸಲಿ ಪರಿಚಯ ಮಾಡಿಕೊಂಡ ಪೊಲೀಸರು, ಕರೆ ಮಾಡಿ ಬಾಡಿಗೆದಾರರನ್ನು ಕರೆಸುವಂತೆ ಸೂಚಿಸಿದ್ದರು. ಅಂತೆಯೇ ಆರೋಪಿ ಶಿವುಗೆ ಕರೆ ಮಾಡಿದ್ದ ಅವರು, ‘ನೀವು ಇಷ್ಟು ದಿನವಾದರೂ ಬಾಡಿಗೆ ಕೊಟ್ಟಿಲ್ಲ. ಸಂಜೆಯೊಳಗೆ ಬರದಿದ್ದರೆ, ಮನೆಯನ್ನು ಬೇರೆಯವರಿಗೆ ನೀಡುತ್ತೇನೆ’ ಎಂದಿದ್ದರು.

ಸಂಜೆ 6 ಗಂಟೆ ಸುಮಾರಿಗೆ ಬೈಕ್‌ಗಳಲ್ಲಿ ಬಂದ ಆರೋಪಿಗಳಿಗೆ, ತಮ್ಮ ಮನೆ ಬಳಿ ನಿಂತಿರುವವರು ಪೊಲೀಸರು ಎಂಬುದು ಗೊತ್ತಾಗಿದೆ. ತಕ್ಷಣ ಅವರು ಬೈಕ್ ತಿರುಗಿಸಿಕೊಂಡು ದೇವನಹಳ್ಳಿ ರೈಲ್ವೆ ಪ್ರದೇಶದ ಕಡೆಗೆ ಸಾಗಿದ್ದಾರೆ. ಜೀಪುಗಳಲ್ಲಿ ಹಿಂಬಾಲಿಸಿದ ಪೊಲೀಸರು, ಅಲ್ಲಿ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಚೆಮ್ಮನೂರ್ ಜ್ಯುವೆಲರ್ಸ್‌ ಮಳಿಗೆಯಲ್ಲಿ ದರೋಡೆಗೆ ಯತ್ನಿಸಿದ್ದು ನಾವೇ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.

**

2,000 ಸಿನಿಮಾಗಳ ಸಿ.ಡಿ ಪತ್ತೆ!

ಇಂಗ್ಲಿಷ್, ಹಿಂದಿ, ಕನ್ನಡ, ತುಳು, ತೆಲುಗು ಹಾಗೂ ತಮಿಳು ಭಾಷೆಗಳನ್ನು ಬಲ್ಲ ಶಿವು, ಪ್ರತಿದಿನ ಎರಡು ಸಿನಿಮಾಗಳನ್ನು ನೋಡುವ ಹವ್ಯಾಸ ಹೊಂದಿದ್ದ. ಅದರಲ್ಲೂ ದರೋಡೆ, ಕಳ್ಳತನ, ಪೊಲೀಸ್ ತನಿಖೆಗೆ ಸಂಬಂಧಿಸಿದ ಚಿತ್ರಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಿದ್ದ. ಆತನ ಮನೆಯನ್ನು ಶೋಧಿಸಿದಾಗ 2,000 ಸಿ.ಡಿಗಳು ಪತ್ತೆಯಾದವು. ಅವುಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

**

ಸಿಬ್ಬಂದಿ 22 ದಿನ ಹಗಲು–ರಾತ್ರಿ ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಕರಣವನ್ನು ಭೇದಿಸಿದ್ದಾರೆ. ತನಿಖಾ ತಂಡಕ್ಕೆ ₹ 2 ಲಕ್ಷ ಬಹುಮಾನ ನೀಡಲಾಗುವುದು.

–ಟಿ.ಸುನೀಲ್‌ಕುಮಾರ್, ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT