ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಹಾದಿ ಬಿಚ್ಚಿಟ್ಟ ರೈತರು

Last Updated 23 ಮಾರ್ಚ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರ ಕುರಿತ ಕಿರುಹೊತ್ತಿಗೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ಸ್‌ನ (ಐಐಎಚ್‌ಎಸ್) ನಿರ್ದೇಶಕ ಅರೋಮರ್ ರೇವಿ ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಸಂಶೋಧಕರಾದ ಗ್ರೀಷ್ಮಾ ಹೆಗಡೆ, ಚಾಂದಿನಿ ಸಿಂಗ್ ಹಾಗೂ ಹರ್‌ಪ್ರೀತ್ ಕೌರ್ ಅವರು ರಾಜ್ಯದ ಹಲವಡೆ ಕ್ಷೇತ್ರ ಕಾರ್ಯ ನಡೆಸಿ ಈ ಕಿರುಹೊತ್ತಿಗೆ ಹೊರತಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಕೆಲ ಪರಿಹಾರಗಳನ್ನು ಗುರುತಿಸಿದ್ದಾರೆ.

ಗ್ರೀಷ್ಮಾ ಹೆಗಡೆ ಮಾತನಾಡಿ, ‘ಕೋಲಾರ ಹಾಗೂ ಕಲಬುರ್ಗಿಯ ಬಹುತೇಕ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಕೆಲ ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಲಾಭ ಗಳಿಸುತ್ತಿದ್ದಾರೆ. ಹಲವರು ಯಾರ ಸಹಾಯವಿಲ್ಲದೆಯೇ ಹೊಸ ತಂತ್ರಜ್ಞಾನ ಆವಿಷ್ಕರಿಸಿ, ಅದನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.

ಸಾವಯವ ಕೃಷಿ ಪದ್ಧತಿಯಿಂದ ಯಶಸ್ಸು ಗಳಿಸಿದ ಆರು ಮಂದಿಯನ್ನು ಸನ್ಮಾನಿಸಲಾಯಿತು.

ಸಾವಯವ ಕೃಷಿಕರ ಮಾತು:

‘ಕುಟುಂಬ ನಿರ್ವಹಣೆಗಾಗಿ ಅನಿವಾರ್ಯವಾಗಿ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟೆ. ನಮ್ಮದು ಬರಗಾಲಪೀಡಿತ ಭೂಮಿ. 20 ಎಕರೆ ಜಮೀನಿನಲ್ಲಿ 15 ಕೊಳವೆಬಾವಿ ಕೊರೆಸಿದೆ. 65 ಅಡಿ ಆಳದ ಬಾವಿ ತೊಡಿಸಿದೆ. ಆದರೆ, ನೀರು ಸಿಗಲಿಲ್ಲ’ ಎಂದು ಕಲಬುರ್ಗಿಯ ಭೀಮಹಳ್ಳಿಯ ಶಿವಲಿಂಗಪ್ಪ ಚೊರಗಸ್ತಿ ಹೇಳಿದರು.

‘ಮಳೆ ನೀರು ಇಂಗಿಸುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು. ಜಮೀನಿನ ಹಲವೆಡೆ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಿ ಭೂಮಿಯಲ್ಲಿಯೇ ನೀರು ಇಂಗುವಂತೆ ಮಾಡಿದೆ. ಅದರಿಂದ ಕೊಳವೆಬಾವಿ ಹಾಗೂ ಬಾವಿಯಲ್ಲಿ ನೀರು ಬಂತು. ಗಂಜಲದಿಂದ ದನಗಳನ್ನು ಹಾಗೂ ಅವುಗಳ ಕೊಟ್ಟಿಗೆಯನ್ನು ಶುಚಿ ಮಾಡಬೇಕಾದ ಪರಿಸ್ಥಿತಿ ನಮ್ಮಲ್ಲಿ ಇತ್ತು. ಅಂತಹ ಕಡೆ 12 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ’ ಎಂದರು.

ಜಮೀನಿನ ಸುತ್ತಲೂ 600 ತೇಗದ ಮರಗಳನ್ನು ಬೆಳೆಸಿದ್ದೆ. 300 ಮರಗಳನ್ನು ಮಾರಿದ್ದರಿಂದ ₹21ಲಕ್ಷ ಆದಾಯ ಬಂತು ಎಂದರು.

ಕಲಬುರ್ಗಿಯ ಹಾಲಸ ಸುಲ್ತಾನಪುರದ ಶರಣಬಸಪ್ಪ ಪಾಟೀಲ, ‘ಕಡಿಮೆ ನೀರಿನಿಂದ ಹೆಚ್ಚು ಬೆಳೆ ಬೆಳೆಯುವ ಪದ್ಧತಿ ಅನುಸರಿಸುತ್ತಿದ್ದೇನೆ. ಅರ್ಧ ಎಕರೆಗೆ ಸಾಲುತ್ತಿದ್ದ ನೀರಿನಲ್ಲಿ, ಈಗ ಮೂರು ಎಕರೆಯಲ್ಲಿ ಬೆಳೆ ಬೆಳೆಯುತ್ತಿದ್ದೇನೆ. ಸೌರ ಚಾಲಿತ ಬೇಲಿ, ನಲ್ಲಿ ನೀರಾವರಿ ಪದ್ಧತಿ ಪರಿಚಯಿಸಿದ್ದೇನೆ’ ಎಂದರು.

ಕೋಲಾರದ ರಾಂಪುರದ ಅಶೋಕ್, ‘ಸರ್ಕಾರಿ ಉಪನ್ಯಾಸಕ ವೃತ್ತಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡೆ. ಸಾವಯವ ಕೃಷಿ ಪದ್ಧತಿ ಆರಂಭಿಸಿದಾಗ ಸಾಕಷ್ಟು ಸವಾಲುಗಳು ಎದುರಾದವು. ಅವುಗಳನ್ನು ಮೆಟ್ಟಿ ನಿಂತು ಕೃಷಿ ಕುಟುಂಬ ಮಳೆಯಾಶ್ರಿತವಾಗಿ ಹೇಗೆ ಬದುಕಬಲ್ಲದು ಎಂದು ತೋರಿಸಿಕೊಟ್ಟೆ. ಸದ್ಯ ವಾರ್ಷಿಕವಾಗಿ ₹1 ಕೋಟಿ ಆದಾಯ ಗಳಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT