ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಕಾನ್‌ಸ್ಟೆಬಲ್ ಮೇಲೆ ಹಲ್ಲೆ

‘ಕಿಚನ್‌ – ಸಿಕ್ಸ್’ ರೆಸ್ಟೊರೆಂಟ್‌ ಸಿಬ್ಬಂದಿ ಸೇರಿ ಏಳು ಮಂದಿ ಬಂಧನ
Last Updated 30 ಜುಲೈ 2018, 17:20 IST
ಅಕ್ಷರ ಗಾತ್ರ

ಬೆಂಗಳೂರು: ‘ರೆಸ್ಟೊರೆಂಟ್‌ ಎದುರು ಗಲಾಟೆ ಮಾಡಬೇಡಿ‘ ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 20 ಜನರಿದ್ದ ಗುಂಪು, ಕಾನ್‌ಸ್ಟೆಬಲ್‌ ಮೇಲೆಯೇ ಹಲ್ಲೆ ಮಾಡಿದೆ. ಆ ಸಂಬಂಧ, ಯಲಹಂಕ ಉಪನಗರದಲ್ಲಿರುವ ‘ಕಿಚನ್‌ – ಸಿಕ್ಸ್’ ರೆಸ್ಟೊರೆಂಟ್ ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ 12.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯಲಹಂಕ ಉಪನಗರ ಠಾಣೆ ಕಾನ್‌ಸ್ಟೆಬಲ್ ಸದಾಶಿವ ಕಾಂಬ್ಳೆ ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸದಾಶಿವ, ಠಾಣೆ ವ್ಯಾಪ್ತಿಯಲ್ಲಿ ಮಫ್ತಿಯಲ್ಲೇ ಗಸ್ತು ತಿರಗುತ್ತಿದ್ದರು. ನಾಲ್ಕನೇ ಹಂತದಲ್ಲಿರುವ ರೆಸ್ಟೊರೆಂಟ್‌ ಎದುರು ನಿಂತಿದ್ದ ಕೆಲಸಗಾರರು ಹಾಗೂ ಗ್ರಾಹಕರು, ಪರಸ್ಪರ ಗಲಾಟೆ ಮಾಡುತ್ತಿದ್ದರು. ಅದನ್ನು ಗಮನಿಸಿದ್ದ ಸದಾಶಿವ, ‘ರಸ್ತೆಯಲ್ಲಿ ನಿಂತು ಗಲಾಟೆ ಮಾಡಬೇಡಿ. ಒಳಗೆ ಹೋಗಿ’ ಎಂದಿದ್ದರೆಂದು ಹಿರಿಯ ಅಧಿಕಾರಿ ಹೇಳಿದರು.

ಆಗ ರೆಸ್ಟೊರೆಂಟ್ ಸಿಬ್ಬಂದಿ, ‘ಒಳಗೆ ಹೋಗು ಎನ್ನಲು ನೀನು ಯಾರು’ ಎಂದು ಪ್ರಶ್ನಿಸಿದ್ದರು. ‘ನಾನು ಪೊಲೀಸ್’ ಎಂದು ಸದಾಶಿವ ಹೇಳಿದರೂ ಸಿಬ್ಬಂದಿ ಕೇಳಿರಲಿಲ್ಲ. ಅವರ ಜತೆಯೇ ಜಗಳ ತೆಗೆದಿದ್ದ ಗುಂಪು, ರಸ್ತೆಯಲ್ಲೇ ತಳ್ಳಾಡಿ ಹಲ್ಲೆ ಮಾಡಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ರೆಸ್ಟೊರೆಂಟ್‌ ಮೇಲ್ವಿಚಾರಕ ಅಜಿಲ್ ಹಾಗೂ ಕೆಲಸಗಾರರಾದ ಮಾಜಿದ್, ಸೈರುಲ್ಲ ಇಸ್ಲಾಂ, ಫಜ್ಹಲ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಇನ್ನು ಹಲವರು ತಲೆಮರೆಸಿಕೊಂಡಿದ್ದಾರೆ ಎಂದರು.

ತಡರಾತ್ರಿ ವಹಿವಾಟಿಗೆ ಪೊಲೀಸರ ಸಹಕಾರ: ‘ಕಿಚನ್‌ – ಸಿಕ್ಸ್’ ರೆಸ್ಟೊರೆಂಟ್‌ ನಿತ್ಯವೂ ರಾತ್ರಿ 1 ಗಂಟೆ ಬಳಿಕ ವಹಿವಾಟು ನಡೆಸುತ್ತಿದೆ. ಇದಕ್ಕೆ ಪೊಲೀಸರೇ ಸಹಕಾರ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

‘ಪೊಲೀಸರು ರೆಸ್ಟೊರೆಂಟ್ ಬಳಿ ಹೋಗಿ ಹಣ ವಸೂಲಿ ಮಾಡುತ್ತಿದ್ದಾರೆ. ತಡರಾತ್ರಿಯವರೆಗೂ ತೆರೆಯುವ ರೆಸ್ಟೊರೆಂಟ್‌ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಈಗ ಮಫ್ತಿಯಲ್ಲಿದ್ದ ಕಾನ್‌ಸ್ಟೆಬಲ್‌ ಮೇಲೆಯೇ ಹಲ್ಲೆ ನಡೆದಿದ್ದು, ಇನ್ನಾದರೂ ಸೂಕ್ತ ಕ್ರಮ ಜರುಗಿಸಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT