ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಮಿಗೆ 2,500 ಟನ್‌ ಸಂಸ್ಕರಣೆ ಗುರಿ

ಅಥಣಿ ತಾಲ್ಲೂಕು ಐಗಳಿಯ ಕಲ್ಯಾಣ ನಗರದಲ್ಲಿ ಒಣದ್ರಾಕ್ಷಿ ಸಂಸ್ಕರಣಾ ಘಟಕ ಆರಂಭ
Last Updated 24 ಮಾರ್ಚ್ 2018, 8:45 IST
ಅಕ್ಷರ ಗಾತ್ರ

ಅಥಣಿ: ಈ ಭಾಗದ ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ತಾಲ್ಲೂಕಿನ ಐಗಳಿಯ ಕಲ್ಯಾಣನಗರದಲ್ಲಿ ಸ್ಥಾಪಿಸಲಾಗಿರುವ ಒಣದ್ರಾಕ್ಷಿ ಸಂಸ್ಕರಣಾ ಘಟಕ ಈಚೆಗೆ ಕಾರ್ಯಾರಂಭಿಸಿದೆ. ನಿತ್ಯ 10ರಿಂದ 12 ಟನ್‌ ದ್ರಾಕ್ಷಿ ಸಂಸ್ಕರಣೆ ಮಾಡಲಾಗುತ್ತಿದೆ.

ರಾಜ್ಯ ಸಣ್ಣ ಕೈಗಾರಿಕಾ ಇಲಾಖೆ, ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಇಲಾಖೆಯ ಅನುದಾನದೊಂದಿಗೆ ತನ್ನ ಪಾಲನ್ನೂ ಸೇರಿಸಿ ಅಥಣಿ ತಾಲ್ಲೂಕು ಒಣದ್ರಾಕ್ಷಿ ಸಂಸ್ಕರಣಾ ಸಮೂಹ ಘಟಕದಿಂದ ಕಟ್ಟಡ ನಿರ್ಮಿಸಲಾಗಿದೆ. ಕೆಲವು ಯಂತ್ರೋಪಕರಣಗಳನ್ನೂ ಅಳವಡಿಸಲಾಗಿದೆ.

ಸಮೂಹ ಅಭಿವೃದ್ಧಿ ಕಾರ್ಯಕ್ರಮದಡಿ ‘ಸಮೂಹ ಸೌಲಭ್ಯ ಕೇಂದ್ರ’ ತಲೆಎತ್ತಿದೆ. ಸೂಕ್ಷ್ಮ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ನೆರವಾಗುವುದು ಇದರ ಉದ್ದೇಶ. ತಾಂತ್ರಿಕತೆ ಬಳಸಿಕೊಂಡು ಗುಣಮಟ್ಟ ಉನ್ನತೀಕರಿಸುವುದು ಹಾಗೂ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಿವೆ.

ಈಗಿನ ಚಿತ್ರಣ: ಇಲ್ಲಿ ದ್ರಾಕ್ಷಿಯನ್ನು ನೈಸರ್ಗಿಕವಾಗಿ ಒಣಗಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಯಂತ್ರೋಪಕರಣ ಬಳಸಿ ಬೇರ್ಪಡಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಒಣದ್ರಾಕ್ಷಿ ಸಿದ್ಧಪಡಿಸಲಾಗುತ್ತಿದೆ. ಈಗ ಅಳವಡಿಸಿರುವ ಯಂತ್ರೋಪಕರಣಗಳಲ್ಲಿ, ನಿತ್ಯ 10ರಿಂದ 12 ಟನ್‌ನಷ್ಟು ಸಂಸ್ಕರಿಸಲಾಗುತ್ತಿದೆ. ಘಟಕವು ಪೂರ್ಣಗೊಂಡಲ್ಲಿ ಉತ್ಪಾದನಾ ಸಾಮರ್ಥ್ಯವು ನಿತ್ಯ 20ರಿಂದ 25 ಟನ್‌ಗೆ ಏರಿಕೆಯಾಗಲಿದೆ. ಹಂಗಾಮಿನ 100 ದಿನಗಳಲ್ಲಿ 2000ರಿಂದ 2500 ಟನ್‌ನಷ್ಟು ಸಂಸ್ಕರಣೆ ಮಾಡಬಹುದಾಗಿದೆ. ಫೆಬ್ರುವರಿಯಿಂದ ಏಪ್ರಿಲ್ ಅಂತ್ಯದವರೆಗೆ ಹಂಗಾಮು ಇರುತ್ತದೆ.

‘ಕೇಂದ್ರದಿಂದ ಶೇ 10, ರಾಜ್ಯದ ಶೇ 10 ಹಾಗೂ ಸಂಘದ ಪಾಲಾಗಿ ಶೇ 10ರಷ್ಟನ್ನು ಭರಿಸಿ ಘಟಕ ನಿರ್ಮಿಸಲಾಗಿದೆ. ₹ 14.84 ಕೋಟಿ ಮೊತ್ತದ ಯೋಜನೆಗೆ ಕೇಂದ್ರದಿಂದ ಅನುಮೋದನೆ ಪಡೆಯಲಾಗಿದೆ. ಒಟ್ಟಾರೆ ಯೋಜನಾ ವೆಚ್ಚ ₹ 18.50 ಕೋಟಿಗೆ ಮುಟ್ಟಿದೆ. ಹೆಚ್ಚುವರಿ ಹಣವನ್ನು ಸಂಘದಿಂದಲೇ ಭರಿಸಲಾಗುವುದು. ಕಟ್ಟಡ ಪೂರ್ಣಗೊಂಡಿದೆ. ಇನ್ನೂ ಕೆಲವು ಯಂತ್ರಗಳನ್ನು ಅಳವಡಿಸಬೇಕಾಗಿದೆ. ಶೈತ್ಯಾಗಾರದ ಕಾಮಗಾರಿಯೂ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದು ಅಥಣಿ ತಾಲ್ಲೂಕು ಒಣದ್ರಾಕ್ಷಿ ಸಂಸ್ಕರಣಾ ಸಮೂಹ ಘಟಕದ ಅಧ್ಯಕ್ಷ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇವಲ 11 ತಿಂಗಳಲ್ಲಿ ನಿರ್ಮಾಣ: ‘ಘಟಕದ ಸದಸ್ಯರ ಸಹಕಾರ ಹಾಗೂ ಅಧಿಕಾರಿಗಳ ನೆರವಿನಿಂದ ಘಟಕವನ್ನು, ಅನುಮೋದನೆ ದೊರೆತ ಕೇವಲ 11 ತಿಂಗಳಲ್ಲೇ ಪ್ರಾರಂಭಿಸಲಾಗಿದೆ. ದ್ರಾಕ್ಷಿ ಹಣ್ಣುಗಳನ್ನು ಉತ್ತಮ ಗುಣಮಟ್ಟದ ಒಣದ್ರಾಕ್ಷಿಗಳನ್ನಾಗಿ ಮಾಡುವ ವ್ಯವಸ್ಥೆಯೊಂದಿಗೆ ವಿದೇಶಗಳಿಗೆ ರಫ್ತಿಗೂ ಇಲ್ಲಿ ಅವಕಾಶವಿದೆ. ಬಹುದಿನಗಳವರೆಗೆ ಕೆಡದಂತೆ ಕಾಯ್ದಿಟ್ಟುಕೊಳ್ಳುವುದಕ್ಕಾಗಿ 1500 ಟನ್‌ ಸಾಮರ್ಥ್ಯದ ಶೈತ್ಯಾಗಾರವೂ ಸಿದ್ಧವಾಗುತ್ತಿದೆ. ದ್ರಾಕ್ಷಿ ಬೆಳೆಗಾರರಿಗೆ ರಸಗೊಬ್ಬರ, ಸಾವಯವ ಗೊಬ್ಬರ ಪೂರೈಸುವ ಗುರಿಯನ್ನೂ ಹೊಂದಿದ್ದೇವೆ’ ಎಂದು ಮಾಹಿತಿ ನೀಡಿದರು.

‘7.34 ಎಕರೆ ಜಾಗ ಖರೀದಿಸಿ, ಕೈಗಾರಿಕಾ ಉದ್ದೇಶಕ್ಕೆಂದು ಪರಿವರ್ತನೆ ಮಾಡಿಸಿ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ₹ 3.80 ಕೋಟಿ ವೆಚ್ಚವಾಗಿದೆ. ಯಂತ್ರೋಪಕರಣಗಳಿಗೆಂದೇ ₹ 12.84 ಕೋಟಿ ವೆಚ್ಚವಾಗುತ್ತಿದೆ. ಕೇಂದ್ರ ಸರ್ಕಾರದಿಂದ ₹ 7.10 ಕೋಟಿ ಬರಬೇಕಾಗಿದೆ. ಬಂದ ಕೂಡಲೇ ಎಲ್ಲ ಯಂತ್ರಗಳನ್ನೂ ಖರೀದಿಸಿ, ಅಳವಡಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರಕ್ಕೆ ಹೋಗುತ್ತಿದ್ದರು: ‘ಅಥಣಿ ತಾಲ್ಲೂಕಿನಲ್ಲಿ 4000ದಿಂದ 4500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ದ್ರಾಕ್ಷಿ ಹಣ್ಣು ಮಾರುವವರಿಗಿಂತ ಒಣದ್ರಾಕ್ಷಿಯನ್ನಾಗಿ ಮಾಡಿ ಮಾರುವವರ ಪ್ರಮಾಣವೇ ಹೆಚ್ಚು. ಸಂಸ್ಕರಣೆ ಮಾಡಿಸುವುದಕ್ಕಾಗಿ ಬೆಳೆಗಾರರು ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತಿತ್ತು. ಈಗ ಐಗಳಿಯಲ್ಲೇ ಘಟಕ ಲಭ್ಯವಿರುವುದರಿಂದ ಬೆಳೆಗಾರರು ಮಹಾರಾಷ್ಟ್ರಕ್ಕೆ ಹೋಗುವುದು ತಪ್ಪಲಿದೆ. ನಮ್ಮ ಸಂಘದ ಮೂಲಕವೇ ಮಾರಾಟ ಮಾಡುವ ಪ್ರಕ್ರಿಯೆಯನ್ನೂ ಮುಂದಿನ ದಿನಗಳಲ್ಲಿ ನಡೆಸುವುದಕ್ಕೆ ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಾದ ಪರವಾನಗಿ ಪಡೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಹೋದ ವರ್ಷ ಅಕ್ಟ್ರೋಬರ್‌ನಲ್ಲಿ ಮಳೆಯಾಗಿತ್ತು. ಇದರಿಂದ, ಈ ವರ್ಷ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಉತ್ಪಾದನೆ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ 10ರಷ್ಟು ಕಡಿಮೆಯಾಗಿದೆ’ ಎಂದು ವಿಶ್ಲೇಷಿಸಿದರು.

ಅಥಣಿ ತಾಲ್ಲೂಕು ಒಣದ್ರಾಕ್ಷಿ ಸಂಸ್ಕರಣಾ ಸಮೂಹ ಘಟಕದಲ್ಲಿ 54 ಸದಸ್ಯರಿದ್ದಾರೆ. ಏಳು ಮಂದಿ ಆಡಳಿತ ಮಂಡಳಿ ನಿರ್ದೇಶಕರಿದ್ದಾರೆ. ನೂರಾರು ಬೆಳೆಗಾರರಿದ್ದಾರೆ.

ಅಂಕಿ–ಅಂಶ

₹ 18.50 ಕೋಟಿ
ಘಟಕದ ಒಟ್ಟು ವೆಚ್ಚ

₹ 7.10 ಕೋಟಿ
ಕೇಂದ್ರದಿಂದ ಬರಬೇಕಿರುವ ಮೊತ್ತ

1500 ಟನ್‌
ಶೈತ್ಯಾಗಾರದ ಸಾಮರ್ಥ್ಯ

11 ತಿಂಗಳು
ಕಟ್ಟಡ ಪೂರ್ಣಗೊಳಿಸಲು ತೆಗೆದುಕೊಂಡ ಸಮಯ

4500 ಹೆಕ್ಟೇರ್‌
ಅಥಣಿ ತಾಲ್ಲೂಕಿನಲ್ಲಿ ದ್ರಾಕ್ಷಿ ಬೆಳೆಯುವ ಪ್ರದೇಶ

10 ಟನ್‌
ಪ್ರಸ್ತುತ ಸಂಸ್ಕರಣೆ ಮಾಡುತ್ತಿರುವ ಪ್ರಮಾಣ
**
ಅಥಣಿ ಭಾಗದ ಜನರು ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ದ್ರಾಕ್ಷಿ ಸಂಸ್ಕರಣೆ ಮಾಡುತ್ತಿದ್ದರು. ಇಲ್ಲಿ ವೈಜ್ಞಾನಿಕವಾಗಿ, ಅತ್ಯಾಧುನಿಕ ಯಂತ್ರಗಳನ್ನು ಬಳಸಲಾಗುವುದು

ಶಹಜಹಾನ ಡೊಂಗರಗಾಂವ , ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT