ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಪ್ರತಿ ಸಂರಕ್ಷಣೆಗೆ ಸರ್ಕಾರ ಮುಂದಾಗಲಿ

ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸ ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ಒತ್ತಾಯ
Last Updated 24 ಮಾರ್ಚ್ 2018, 9:15 IST
ಅಕ್ಷರ ಗಾತ್ರ

ಕಮಲಾಪುರ (ಹೊಸಪೇಟೆ ತಾಲ್ಲೂಕು): ‘ಹಸ್ತಪ್ರತಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಬೃಹತ್‌ ಯೋಜನೆ ರೂಪಿಸಬೇಕು. ಆ ಕ್ಷೇತ್ರದಲ್ಲಿ ಪಳಗಿ ತಜ್ಞರೆನಿಸಿಕೊಂಡವರಿಗೆ ಆ ಕೆಲಸವನ್ನು ವಹಿಸಿಕೊಡಬೇಕು’ ಎಂದು ಹಿರಿಯ ವಿದ್ವಾಂಸ ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಸ್ತಪ್ರತಿಶಾಸ್ತ್ರ ವಿಭಾಗವು ಆಯೋಜಿಸಿದ್ದ ಅಖಿಲ ಕರ್ನಾಟಕ 14ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಯೋಜನೆಯ ಭಾಗವಾಗಿರುವ ತಜ್ಞರು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲೆಗಳಲ್ಲಿ ಸಂಚರಿಸಿ ಹಸ್ತಪ್ರತಿಗಳ ಒಡೆಯರ ಮನದಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಅವರ ಮನವೊಲಿಸಿ ಸಂಗ್ರಹಿಸಬೇಕು. ಈ ರೀತಿ ಮಾಡುವುದರಿಂದ ಬೆಳಕಿಗೆ ಬರದೇ ಕತ್ತಲೆ ಗರ್ಭದಲ್ಲಿರುವ ಅನೇಕ ವಿಷಯಗಳು ಹೊರಗೆ ಬರುತ್ತವೆ’ ಎಂದರು.

‘ರಾಜ್ಯದಲ್ಲಿ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗಿದೆ. ಈಗಲೂ ಅನೇಕರ ಮನೆಗಳಲ್ಲಿ ಹಸ್ತಪ್ರತಿಗಳಿವೆ. ಅವುಗಳಲ್ಲಿ ಭೂತವಿದೆ, ದೆವ್ವವಿದೆ, ಚೌಡಿ ಮನೆ ಮಾಡಿದೆ, ಯಂತ್ರ–ತಂತ್ರ–ಮಾಟವಿದೆ ಎಂಬ ತಪ್ಪು ತಿಳಿವಳಿಕೆಯಿಂದ ಅವುಗಳನ್ನು ಜನ ಸುಟ್ಟು ಹಾಕುತ್ತಿದ್ದಾರೆ. ಕೆಲವರು ಕೆರೆ, ಕಟ್ಟೆ, ಬಾವಿಗಳಿಗೆ ಹಾಕುತ್ತಿದ್ದಾರೆ. ಸ್ಮಶಾನದಲ್ಲಿ ಹೂತು ಹಾಕುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಸರ್ವನಾಶ
ವಾಗುವ ಬದಲು ಜನರಲ್ಲಿ ತಿಳಿವಳಿಕೆ ಮೂಡಿಸಿ ಸಂಗ್ರಹಿಸುವ ಕೆಲಸವಾಗಬೇಕು’ ಎಂದು ಹೇಳಿದರು.

‘ಮಠ–ಮಾನ್ಯಗಳು, ಸಾರ್ವಜನಿಕರು, ಆಸ್ತಿಕರು ಹಾಗೂ ಯಾರ್‍ಯಾರ ಬಳಿ ಹಸ್ತಪ್ರತಿಗಳಿವೆಯೋ ಅಂಥವರು ಅವುಗಳನ್ನು ಸಂಶೋಧನಾ ಸಂಸ್ಥೆಗಳಿಗೆ ಧರ್ಮಾರ್ಥ ಅಥವಾ ಹಣ ಪಡೆದು ನೀಡಬೇಕು. ಕನಿಷ್ಠ ಪಕ್ಷ ಸಂಶೋಧಕರಿಗೆ ಅವುಗಳನ್ನು ಪರಿಶೀಲಿಸಲು ಅವಕಾಶ ಕೊಡಬೇಕು. ಈ ಕುರಿತು ಗ್ರಾಮಸ್ಥರು, ಅಲ್ಲಿನ ಶಾಲಾ, ಕಾಲೇಜುಗಳ ಮಕ್ಕಳಿಗೆ ತಿಳಿಸಬೇಕು. ಹೀಗೆ ಮಾಡಿದರೆ ಅಲ್ಲಲ್ಲಿ ಇರುವ ಹಸ್ತಪ್ರತಿ
ಗಳನ್ನು ಸಂರಕ್ಷಿಸಬಹುದು’ ಎಂದರು.

ಸಮ್ಮೇಳನ ಹಾಗೂ ಹಸ್ತಪ್ರತಿ ಪ್ರದರ್ಶನ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ‘ಈಗಿರುವ
ಸ್ನಾತಕೋತ್ತರ ಕೇಂದ್ರಗಳನ್ನು ನೋಡಿದರೆ ಆತಂಕವಾಗುತ್ತದೆ. ನಿವೃತ್ತರಾದವರನ್ನು ಕರೆದು ಹಳೆಗನ್ನಡ, ಭಾಷಾಶಾಸ್ತ್ರ ಬೋಧಿಸಲಾಗುತ್ತಿದೆ. ನಮ್ಮ ಪೂರ್ವ ಪರಂಪರೆಯ ಜ್ಞಾನ ಕಳೆದುಕೊಳ್ಳುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈಗಿನ ಅನುಕೂಲಕ್ಕೆ ತಕ್ಕಂತೆ ಸ್ನಾತಕೋತ್ತರ ಕೇಂದ್ರಗಳು ನಡೆಯುತ್ತಿದ್ದು, ಅವುಗಳ ಗುಣಮಟ್ಟ ಬಹಳ ಕಳಪೆಯಾಗಿದೆ. ಬುದ್ಧಿವಂತರನ್ನು ಸೇರಿಸಿಕೊಳ್ಳುವ ಬದಲು ದಡ್ಡರನ್ನು ಸೇರಿಸಿಕೊಂಡು ಹಾಳು ಮಾಡಲಾಗುತ್ತಿದೆ’ ಎಂದರು.

‘ಹಸ್ತಪ್ರತಿಗಳ ಬಗೆಗಿನ ಮೌಢ್ಯ ಇನ್ನೂ ಜನರಿಂದ ದೂರವಾಗಿಲ್ಲ. ಅವುಗಳನ್ನು ಅನೇಕರು ಕತ್ತಲೆ ಕೋಣೆಯಲ್ಲಿ ಕೂಡಿಟ್ಟಿದ್ದಾರೆ. ಈಗಾಗಲೇ ಅನೇಕ ಹಸ್ತಪ್ರತಿಗಳು ನಾಶವಾಗಿವೆ. ಅಲ್ಲಲ್ಲಿ ಇದ್ದರೂ ಅವುಗಳು ಸೆರೆಮನೆ ವಾಸದಲ್ಲಿವೆ. ಆದರೆ, ಹಸ್ತಪ್ರತಿಗಳ ಸರ್ವೇಕ್ಷಣ, ಸಂಗ್ರಹಣೆ, ಸೂಚಿರಚನೆ, ಸಂಪಾದನೆ, ಅಧ್ಯಯನ, ಪ್ರಕಟಣೆಯ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮಹತ್ವದ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಹಸ್ತಪ್ರತಿ ವ್ಯಾಸಂಗ’ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ವಿ.ವಿ. ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ರಾಜೂರ ಮಾತನಾಡಿ, ‘ಕನ್ನಡ ಹಸ್ತಪ್ರತಿಗಳ ಸಮಗ್ರ ಸೂಚಿ ಹೊರಬರಬೇಕು. ಅಧ್ಯಯನ ಮಾಡುವವರಿಗೆ ಆಕರ ಗ್ರಂಥ ವಾಗುತ್ತದೆ. ಈ ಕ್ಷೇತ್ರ ಇನ್ನಷ್ಟು ಬೆಳೆಯಲು ಅನುಕೂಲವಾಗುತ್ತದೆ’ ಎಂದರು.

ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ಕುಲಸಚಿವ ಡಿ. ಪಾಂಡುರಂಗಬಾಬು, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ರವೀಂದ್ರನಾಥ, ಮಂಜಪ್ಪಶೆಟ್ಟಿ ಮಸಗಲಿ ಅವರ ಪತ್ನಿ ಲಲಿತಾ ಎಂ. ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT