ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ಅಕಾಲಿಕ ಮಳೆ, ವಿಪರೀತ ಮಂಜು, ಬಿಸಿಲಿನ ಝಳಕ್ಕೆ ಜಿಲ್ಲೆಯಲ್ಲಿ ಇಳುವರಿ ಕುಂಠಿತ
Last Updated 24 ಮಾರ್ಚ್ 2018, 11:04 IST
ಅಕ್ಷರ ಗಾತ್ರ

ಹಾವೇರಿ: ರೋಗ ಬಾಧೆ, ದರ ಕುಸಿತ, ಇಳುವರಿ ಕುಂಠಿತ, ವಿಪರೀತ ಮಂಜು, ಬಿಸಿಲಿನ ಝಳ, ಅಕಾಲಿಕ ಮಳೆ... ಹೀಗೆ ಹಲವು ಸಂಕಷ್ಟಗಳು ಮಾವು ಬೆಳೆಗಾರರನ್ನು ಬೆನ್ನು ಹತ್ತಿದ ಬೇತಾಳದಂತೆ ಕಾಡುತ್ತಿವೆ.

ಈ ಬಾರಿ ಬಿಸಿಲಿನ ಝಳ ಹೆಚ್ಚಿದ್ದು, ಚಳಿಗಾಲದ ಕೊನೆಯಲ್ಲಿ ವಿಪರೀತ ಮಂಜು ಹಾಗೂ ಅಕಾಲಿಕ ಮಳೆ ಆಗಿತ್ತು. ಹೀಗಾಗಿ ಮಾವಿನ ಇಳುವರಿ ಕುಂಠಿತವಾಗುತ್ತಿದ್ದು, ಜಿಲ್ಲೆಯ ಮಾವು ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.

‘ಮುಂಗಾರು ಹಾಗೂ ಹಿಂಗಾರು ಸಾಧಾರಣ ಆಗಿದ್ದರೂ ಮಾವಿನ ಗಿಡಗಳು ಚೆನ್ನಾಗಿ ಚಿಗುರಿ ಎಲೆ ಬಿಟ್ಟಿದ್ದವು. ಆದರೆ, ಸರಿಯಾಗಿ ಹೂವು ಬಿಟ್ಟಿಲ್ಲ. ಇನ್ನೊಂದೆಡೆ ವಿಪರೀತ ಮಂಜು, ಬಿಸಿಲಿನ ಝಳ ಹಾಗೂ ಅಕಾಲಿಕ ಮಳೆ ಕಾರಣ ಅಲ್ಪಸ್ವಲ್ಪ ಹೂವು ಮತ್ತು ಮಿಡಿಕಾಯಿಗಳೂ ಉದುರಿ ಹೋಗುತ್ತಿವೆ’ ಎಂದು ಹಾನಗಲ್‌ ತಾಲ್ಲೂಕು ಮಾಕೊಪ್ಪ ಗ್ರಾಮದ ಮಾವು ಬೆಳೆಗಾರ ರಮೇಶ ವಾಲೀಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾವಿನ ಬೆಳೆ ಇದೆ. ಹಾನಗಲ್‌ ತಾಲ್ಲೂಕಿನಲ್ಲಿ ಬೆಳೆಗಾರರ ಸಂಖ್ಯೆ ಹೆಚ್ಚಿದೆ.

ಆಪೂಸ್‌, ಕಲ್ಮಿ, ಕೇಸರ್‌, ಮಲಗೋವಾ, ಅಪ್ಪೆ ಮಿಡಿ, ತೋತಾಪುರಿ, ಬಾದಾಮಿ, ಸಿಂಧೂರ, ರಸಪೂರಿ ಹಾಗೂ ನಾಟಿ ಮಾವಿನ ಹಣ್ಣು
ಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇಳುವರಿ ಕುಸಿತದ ಕಾರಣ ‘ಹಣ್ಣುಗಳ ರಾಜ’ನ ಬೆಳೆಗಾರರಿಗೂ ನಷ್ಟದ ಭಯ ಉಂಟಾಗಿದೆ.

‘10 ಎಕರೆ ತೋಟದಲ್ಲಿ 8 ವರ್ಷದ ಮಾವಿನ ಗಿಡಗಳಿದ್ದು, ಎರಡು ವರ್ಷಗಳ ಹಿಂದೆ ಉತ್ತಮ ಇಳುವರಿ ಹಾಗೂ ಬೆಲೆ ಸಿಕ್ಕಿತ್ತು. ಕಳೆದ ಬಾರಿ ನಷ್ಟ ಅನುಭವಿಸಿದೆವು. ಈ ವರ್ಷವೂ ಅದೇ ಭಯ ಕಾಡುತ್ತಿದೆ’ ಎಂದು ಹಾನಗಲ್‌ ತಾಲ್ಲೂಕು ಹನುಮಾಪುರ ಗ್ರಾಮದ ಮಾವು ಬೆಳೆಗಾರ ರಾಜಣ್ಣ ಗೌಳಿ ತಿಳಿಸಿದರು.

‘ಈ ಬಾರಿ ಅಲ್ಲೊಂದು ಇಲ್ಲೊಂದು ಗಿಡಗಳಲ್ಲಿ ಮಾತ್ರ ಮಿಡಿಕಾಯಿಗಳು ಕಾಣುತ್ತಿವೆ. ವಿಪರೀತ ಮಂಜಿಗೆ 10 ವರ್ಷ ಮೇಲ್ಪಟ್ಟ ಶೇ 95 ರಷ್ಟು ಗಿಡಗಳಲ್ಲಿನ ಹೂವು ಹಾಗೂ ಮಿಡಿಕಾಯಿ ಉದುರಿ ಹೋಗಿವೆ. 5ರಿಂದ 10 ವರ್ಷಗಳ ಒಳಗಿನ ಗಿಡಗಳು ಮಂಜು ಬೀಳುವ ಮೊದಲೇ ಕಾಯಿ ಕಟ್ಟಿದ್ದು, ಮಿಡಿಕಾಯಿಗಳು ಉಳಿದುಕೊಂಡಿವೆ. ನಮ್ಮ ತೋಟವನ್ನು ₹4.5 ಲಕ್ಷಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರ ಮುಂಗಡವಾಗಿ ₹ 1ಲಕ್ಷ ಕೊಟ್ಟಿದ್ದನು. ಫಸಲು ಇಲ್ಲದ ಕಾರಣಕ್ಕೆ ನಷ್ಟ ಹೆಚ್ಚಾಗುವ ಭಯದಿಂದ ಬಂದೇ ಇಲ್ಲ’ ಎಂದು ಬೆಳೆಗಾರರೊಬ್ಬರು ತಿಳಿಸಿದರು.

‘ವಿಪರೀತ ಮಂಜಿಗೆ ಶೇ 60ರಷ್ಟು ಮಾವಿನ ಹೂವು ಉದುರಿ ಹೋಯಿತು. ಉಳಿದ ಅಲ್ಪ ಸ್ವಲ್ಪ ಹೂವು ಮಿಡಿಕಾಯಿಯಾಗಿದ್ದು, ವಾರದಿಂದ ಈಚೆಗೆ ಬೀಳುತ್ತಿರುವ ಅಕಾಲಿಕ ಮಳೆ, ಗಾಳಿಗೆ ಉದುರಿ ಹೋಗುತ್ತಿವೆ’ ಎಂದು ಹಾನಗಲ್‌ ತಾಲ್ಲೂಕು ನಾಲ್ಕರ ಕ್ರಾಸ್‌ ಬಳಿಯ ರೈತ ಪರಮೇಶ್ವರಪ್ಪ ಕೆ. ನಾಯ್ಕ್‌ ತಿಳಿಸಿದರು.

ಹಾನಿ ತಡೆಯಲು ಪರಿಹಾರ: ‘ಮಿಡಿಕಾಯಿಗಳ ಮೇಲೆ ಬಿದ್ದ ಮಂಜು ಬಿಸಿಲಿಗೆ ಗಟ್ಟಿಯಾಗುವ ಮೊದಲೇ ಔಷಧಿ ಹೊಡೆಯುವ ಎಣ್ಣೆ ಕ್ಯಾನ್‌ಗಳ ಮೂಲಕ ನೀರು ಹೊಡೆಯಬೇಕು. ಆಗ ಮಂಜು ಗಟ್ಟಿಯಾಗದೇ ತೊಳೆದು ಹೋಗುತ್ತದೆ. ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ’ ಎಂದು ತೋಟ
ಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬರೇಗಾರ ತಿಳಿಸಿದರು.
**
25 ವರ್ಷದ ಒಟ್ಟು 100 ಗಿಡಗಳಿದ್ದು, ಆರಂಭದಲ್ಲಿ 25ರಿಂದ 30 ಟನ್‌ ಇಳುವರಿ ಬರುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಕೇವಲ 15ರಿಂದ 18 ಟನ್‌ ಇಳುವರಿ ಬರುತ್ತಿದೆ.

–ರಮೇಶ ವಾಲೀಕಾರ, ಮಾವು ಬೆಳೆಗಾರ, ಮಾಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT